ನಾವುಂದ: ಮನೆಗೆ ನುಗ್ಗಿ 30 ಸಾವಿರ ರೂ. ಮೌಲ್ಯದ ನಗ-ನಗದು ಕಳವು
Update: 2022-05-14 07:44 GMT
ಬೈಂದೂರು, ಮೇ 14: ನಾವುಂದ ಗ್ರಾಮದ ಬಡಾಕೆರೆ ಎಂಬಲ್ಲಿ ಗುರುವಾರ ರಾತ್ರಿ ಮನೆಗೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ನಗ-ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಇಲ್ಲಿನ ನಿವಾಸಿ ಬಿ.ಎಂ.ಯೂಸುಫ್ ಎಂಬವರು ಮೇ 11ರಂದು ಕುಟುಂಬದವರೊಂದಿಗೆ ಮೈಸೂರಿಗೆ ತೆರಳಿದ್ದರು. ಈ ವೇಳೆ ಮನೆಯ ಮುಖ್ಯದ್ವಾರದ ಬಾಗಿಲನ್ನು ತೆರೆದು ಮನೆಯ ಒಳಗೆ ನುಗ್ಗಿದ ಕಳ್ಳರು, ಬೆಡ್ ರೂಮಿನಲ್ಲಿದ್ದ ಕಪಾಟಿನ ಬಾಗಿಲನ್ನು ಒಡೆದು ಎರಡು ಚಿನ್ನದ ಉಂಗುರ ಹಾಗೂ 5 ಸಾವಿರ ನಗದು ಕಳುವು ಮಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಅವುಗಳ ಒಟ್ಟು ಮೌಲ್ಯ 30,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.