ಯುಎಇಯಲ್ಲಿ ಭೀಕರ ಮರಳಿನ ಬಿರುಗಾಳಿ: ಧೂಳಿನ ಪದರದ ಹಿಂದೆ ಮರೆಯಾದ ಬುರ್ಜ್‌ ಖಲೀಫಾ !

Update: 2022-05-18 15:30 GMT
Photo: Twitter

ದುಬೈ: ಮಧ್ಯಪ್ರಾಚ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಗೆ ಮರಳಿನ ಬಿರುಗಾಳಿ ಅಪ್ಪಳಿಸಿದ್ದರಿಂದ ವಿಶ್ವದ ಅತಿ ಎತ್ತರದ ಕಟ್ಟಡವು ಇಂದು ಧೂಳಿನ ಬೂದು ಪದರದ ಹಿಂದೆ ಮರೆಯಾಗಿದೆ. 

ಸಾಮಾನ್ಯವಾಗಿ,  828-ಮೀಟರ್ ಎತ್ತರದ ಬುರ್ಜ್ ಖಲೀಫಾ ಕಟ್ಟಡವು ದುಬೈನ ಎಲ್ಲಿಂದಲಾದರೂ ಗೋಚರಿಸುತ್ತದೆ. ಆದರೆ, ಮರಳಿನ ಬಿರುಗಾಳಿಯಿಂದಾಗಿ ಬುರ್ಜ್ ಖಲೀಫಾ ಧೂಳಿನಲ್ಲಿ ಮಾಯವಾದಂತಾಗಿತ್ತು. ಆ ಮಟ್ಟಿಗೆ ದುಬೈನಲ್ಲಿ ಮರಳು ಬಿರುಗಾಳಿಯ ತೀವ್ರತೆ ಹೆಚ್ಚಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿ, ಮರಳು ಬಿರುಗಾಳಿಗಳು ಆಗಾಗ್ಗೆ ಬೀಸುತ್ತಿದೆ. ಇತ್ತೀಚೆಗೆ ಅದು ಮತ್ತಷ್ಟು ತೀವ್ರಗೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಇರಾಕ್, ಕುವೈತ್, ಸೌದಿ ಅರೇಬಿಯಾ, ಇರಾನ್ ಮತ್ತು ಇತರ ದೇಶಗಳಲ್ಲಿ ಭಾರೀ ಮರಳಿನ ಬಿರುಗಾಳಿಗಳು ಅಪ್ಪಳಿಸಿದೆ.  ಮರಳು ಮಾರುತದಿಂದಾಗಿ ವಿಮಾನ ನಿಲ್ದಾಣಗಳು ಮತ್ತು ಶಾಲೆಗಳನ್ನು ಮುಚ್ಚಲಾಗಿದ್ದು, ಸಾವಿರಾರು ಜನರು ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಧೂಳಿನ ಬಿರುಗಾಳಿಗಳು ಹವಾಮಾನದ ನೈಸರ್ಗಿಕ ವಿದ್ಯಮಾನವಾಗಿ ಮಾರ್ಪಟ್ಟಿವೆ, ಅತಿಯಾದ ಮೇಯಿಸುವಿಕೆ ಮತ್ತು ಅರಣ್ಯನಾಶ ಮತ್ತು ನದಿ ನೀರಿನ ಅತಿಯಾದ ಬಳಕೆಯೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಗಾಳಿ ಮತ್ತು ಮರಳಿನ ಬಿರುಗಾಳಿಯಿಂದ ಗೋಚರತೆ ಕಡಿಮೆಯಾಗುವ ಅಪಾಯವಿದ್ದು, ವಾಹನ ಚಾಲಕರು ಜಾಗರೂಕರಾಗಿರಲು ಯುಎಇ ಸರ್ಕಾರ ಸಲಹೆ ನೀಡಿದೆ.

ಮರಳಿನ ಬಿರುಗಾಳಿದಿಂದಾಗಿ ಯುಎಇಯ ಬಹುತೇಕ ಎಲ್ಲಾ ಭಾಗಗಳು ಮರಳಿನಿಂದ ಆವೃತವಾಗಿವೆ. ಗಂಟೆಗೆ 40 ಕಿಲೋಮೀಟರ್ (25 ಮೈಲಿ) ವೇಗದಲ್ಲಿ ಮರಳು ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಭಾನುವಾರದ ವೇಳೆಗೆ ಯುಎಇಯಲ್ಲಿ ಮತ್ತೊಂದು ಮರಳಿನ ಬಿರುಗಾಳಿ ಅಪ್ಪಳಿಸುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News