ಅಭ್ಯರ್ಥಿಗಳ ಬಗ್ಗೆ ಶೀಘ್ರವೇ ಅಂತಿಮ ತೀರ್ಮಾನ : ಡಿ.ಕೆ.ಶಿವಕುಮಾರ್
ಉಡುಪಿ : ಮುಂದಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಆಯಾ ಜಿಲ್ಲೆಯ ಮುಖಂಡರ ಅಭಿಪ್ರಾಯ ಪಡೆದು ವರಿಷ್ಠರೊಂದಿಗೆ ಚರ್ಚಿಸಿ ಶೀಘ್ರವೇ ಅಂತಿಮ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಿರಿಮಂಜೇಶ್ವರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಹರಕೆ ಚಂಡಿಯಾಗ ಮುಗಿಸಿ, ಉಡುಪಿ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ಪಕ್ಷದ ಕೆಲವು ವಿಚಾರ ಮತ್ತು ಅಭ್ಯರ್ಥಿಗಳ ತೀರ್ಮಾನ ಮಾಡುವ ದೃಷ್ಟಿಯಿಂದ ವರಿಷ್ಠರ ಕರೆಯಂತೆ ನಾನು ಮತ್ತು ಸಿದ್ದರಾಮಯ್ಯ ಇಂದು ದೆಹಲಿಗೆ ಹೋಗುತ್ತಿದ್ದೇವೆ ಎಂದರು.
ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ
ಕರಾವಳಿಯ ಮೂರು ಜಿಲ್ಲೆಗಳಿಗೆ ಕಾಂಗ್ರೆಸ್ ಪಕ್ಷದಿಂದ ಪ್ರತ್ಯೇಕ ಪ್ರಣಾಳಿಕೆಯನ್ನು ರಚಿಸಿ ಬಿಡುಗಡೆ ಮಾಡಲಾಗುವುದು. ಅದರಲ್ಲಿ ಯುವಕರು ಹೊರ ರಾಜ್ಯ ಹಾಗೂ ದೇಶಗಳಿಗೆ ಹೋಗದಂತೆ ಇಲ್ಲಿಯೇ ಉದ್ಯೋಗ ಸೃಷ್ಟಿ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು. ಪ್ರಣಾಳಿಕೆ ಯಲ್ಲಿ ನುಡಿದಂತೆ ನಡೆಯುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ರಾಜಸ್ತಾನದ ಉದಯಪುರದಲ್ಲಿ ನಡೆದ ಪಕ್ಷದ ಚಿಂತನಾ ಶಿಬಿರದಲ್ಲಿ ತೆಗೆದು ಕೊಂಡ ತೀರ್ಮಾನವನ್ನು ಅನುಷ್ಠಾನಗೊಳಿಸಲು ಸಮಿತಿ ರಚನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಟಿಪ್ಪು ಕುರಿತ ಸಂಸದ ಪ್ರತಾಪ್ ಸಿಂಹ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಸದರು ರಾಜ್ಯದ ಅಸೆಂಬ್ಲಿಯಲ್ಲಿ ರಾಷ್ಟ್ರಪತಿ ಮಾಡಿರುವ ಭಾಷಣದ ಪ್ರತಿ ತೆಗೆದು ಓದುವ ಕೆಲಸ ಮಾಡಲಿ ಎಂದರು.
ಪ್ರಮೋದ್‌ನಿಂದ ಪಶ್ಚಾತ್ತಾಪ
ಪ್ರಮೋದ್ ಮಧ್ವರಾಜ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ದೊಡ್ಡ ತಪ್ಪು ಮಾಡಿರುವುದಾಗಿ ಸದ್ಯದಲ್ಲೇ ಪಶ್ಚಾತ್ತಾಪ ಪಡಲಿದ್ದಾರೆ. ಪ್ರಮೋದ್ ಮಧ್ವ ರಾಜ್ ಪಕ್ಷ ಬಿಟ್ಟು ಬಿಜೆಪಿಗೆ ಹೋದರೂ ಕ್ಷೇತ್ರ ಯಾವುದೇ ಒಬ್ಬ ಕಾರ್ಯಕರ್ತ ಕೂಡ ಜಗ್ಗಿಲ್ಲ. ಎಲ್ಲರು ಪಕ್ಷದಲ್ಲೇ ಉಳಿದುಕೊಂಡಿದ್ದಾರೆ. ಅವರೆಲ್ಲರನ್ನು ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದರು.
ಪ್ರಮೋದ್ ಮಧ್ವರಾಜ್‌ಗೆ ಕಾಂಗ್ರೆಸ್‌ನಲ್ಲಿ ಉಸಿರುಗಟ್ಟುವ ವಾತಾವರಣ ಇದ್ದರೆ ಬಿಜೆಪಿಯಲ್ಲಿ ಹೋಗಿ ಫ್ರೆಶ್ ಏರ್ ತೆಗೆದುಕೊಳ್ಳಲಿ. ಉಡುಪಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದ ಜವಾಬ್ದಾರಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕೆಪಿಸಿಸಿ ಉಪಾಧ್ಯಕ್ಷ ಅಭಯ್ ಚಂದ್ರ ಜೈನ್ ಅವರಿಗೆ ವಹಿಸಿಕೊಡಲಾಗಿದೆ. ಅವರು ಕಳುಹಿಸುವ ಪ್ರಸ್ತಾವದ ಬಗ್ಗೆ ವರಿಷ್ಠರು ಕುಳಿತು ಚರ್ಚಿಸಿ ಆದಷ್ಠು ಬೇಗ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.
ಸದಸ್ಯತ್ವ ಅಭಿಯಾನ ಪುನಾರಂಭ
ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಅನೇಕ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುವ ಉತ್ಸಾಹದಲ್ಲಿ ದ್ದಾರೆ. ಅದಕ್ಕಾಗಿ ಜಿಲ್ಲೆಯಲ್ಲಿ ಮತ್ತೆ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಯಾರ ಇಲ್ಲದಿದ್ದರೂ ನಡೆಯುತ್ತದೆ. ಬ್ಲಾಕ್‌ಮೇಲ್ ಮಾಡುವವರು ಅವರವರ ದಾರಿಯಲ್ಲಿ ಹೋಗಲಿ. ಯಾರಿಗೂ ಬಲವಂತ ಮಾಡುವುದಿಲ್ಲ. ನಮ್ಮ ಪಕ್ಷದ ನಾಯಕತ್ವ ಹಾಗೂ ಕಾರ್ಯಕ್ರಮದಲ್ಲಿ ನಂಬಿಕೆ ಇರುವವರು ಇರಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಯು.ಆರ್.ಸಭಾ ಪತಿ, ಕುಶಲ್ ಶೆಟ್ಟಿ, ಕಿಶನ್ ಕೊಳ್ಕೆಬೈಲು, ನರಸಿಂಹ ಮೂರ್ತಿ, ಕೃಷ್ಣಮೂರ್ತಿ ಆಚಾರ್ಯ, ಭಾಸ್ಕರ್‌ರಾವ್ ಕಿದಿಯೂರು, ಅಣ್ಣಯ್ಯ ಶೇರಿಗಾರ್ ಹಾಜರಿದ್ದರು.
‘ತಪ್ಪು ಮಾಡಿದರೆ ಕತ್ತು ಕೊಡಲು ಸಿದ್ಧ’
ಪಾವಗಡ ಸೋಲಾರ್ ಹಗರಣದ ಕುರಿತು ನನಗೆ ಏನು ಗೊತ್ತಿಲ್ಲ. ಸಚಿವರು ಆರೋಪ ಏನು ಮಾಡಿದ್ದಾರೆ ಎಂಬುದು ಕಾದು ನೋಡೊಣ. ಯಾವ ತನಿಖೆ ಬೇಕಾದರೂ ಮಾಡಲಿ. ನಾನು ಒಂದು ಚೂರು ತಪ್ಪು ಮಾಡಿದ್ದರೆ ನನ್ನ ಕತ್ತು ಕೊಡಲು ಸಿದ್ಧನಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಹೇಗೆ ಇತ್ತು. ಈಗ ಹೇಗೆ ಆಗಿದೆ. ನಮ್ಮ ಸರಕಾರ ಇದ್ದಾಗ ಎಷ್ಟು ವಿದ್ಯುತ್ ಉತ್ಪಾದನೆ ಮಾಡಿದ್ದೇವೆ ಎಂಬುದರ ಬಗ್ಗೆ ಎಲ್ಲ ದಾಖಲೆಗಳಿವೆ. ಏನು ಬೇಕಾದರೂ ತನಿಖೆ ಮಾಡಲಿ ಎಂದು ಅವರು ಸವಾಲು ಹಾಕಿದರು.