ಉಡುಪಿ: ರೈಲ್ವೆ ನಿಲ್ದಾಣದಲ್ಲಿ ವ್ಯಕಿಯನ್ನು ಅಪಾಯದಿಂದ ಪಾರು ಮಾಡಿದ ರೈಲ್ವೆ ಸಿಬ್ಬಂದಿ

Update: 2022-05-25 16:29 GMT

ಉಡುಪಿ : ಚಲಿಸುತ್ತಿರುವ ರೈಲಿನಿಂದ ಇಳಿಯುವ ವೇಳೆ ಕಾಲು ಜಾರಿ ಬಿದ್ದು, ರೈಲಿನ ಹಿಡಿಯನ್ನು ಬಿಡಲಾಗದೇ ರೈಲಿನೊಂದಿಗೆ ಎಳೆದೊಯ್ದ ಹಿರಿಯ ವ್ಯಕ್ತಿಯನ್ನು ಅಲ್ಲಿದ್ದ ರೈಲ್ವೆ ಪೊಲೀಸ್ ಪಡೆಯ ಸಿಬ್ಬಂದಿ ರಕ್ಷಿಸಿದ ಘಟನೆ ಇಂದು ಅಪರಾಹ್ನ ಉಡುಪಿಯ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ವರದಿಯಾಗಿದೆ.

ಪ್ಲಾಟ್‌ಫಾರಂ ನಂ.೧ರಲ್ಲಿ ರೈಲು ನಂ.೧೨೬೨೦ ಚಲಿಸಲಾರಂಭಿಸಿದಾಗ ಹಿರಿಯ ವ್ಯಕ್ತಿಯೊಬ್ಬರು ರೈಲಿನಿಂದ ಇಳಿಯಲು ಪ್ರಯತ್ನಿಸಿದ್ದು, ಕಾಲು ಜಾರಿ ಅವರು ಬಿದ್ದರೂ ರೈಲಿನ ಹ್ಯಾಂಡಲ್‌ನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದರು. ಇದರಿಂದ ರೈಲು ಒಂದಷ್ಟು ದೂರು ಅವರನ್ನು ಎಳೆದುಕೊಂಡು ಹೋಗಿತ್ತು.

ಆಗ ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಸಜೀರ್ ತಕ್ಷಣ ಧಾವಿಸಿ ಬಂದು ಅವರನ್ನು ರಕ್ಷಿಸಿ ಜೀವವನ್ನು ಕಾಪಾಡಿದರು. ಗಾಯಗೊಂಡಿದ್ದ ಅವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿದ್ದು ವ್ಯಕ್ತಿಯ ಸಂಬಂಧಿಗಳು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

ವಿಚಾರಣೆಯ ವೇಳೆ ವ್ಯಕ್ತಿ 70 ವರ್ಷ ಪ್ರಾಯದ ಕುಟ್ಟಿ ಕುಂದನ್ ಎಂದು ಗೊತ್ತಾಗಿದ್ದು ಅವರು ಪೆರ್ಡೂರು ನಿವಾಸಿ ಎಂದು ತಿಳಿದುಬಂತು. ೧೨೬೨೦ ರೈಲಿನಲ್ಲಿ ತೆರಳುವ ತನ್ನ ಮಗಳನ್ನು ಬೀಳ್ಕೊಡಲು ಅವರು ನಿಲ್ದಾಣಕ್ಕೆ ಬಂದಿದ್ದು, ರೈಲು ಚಲಿಸತೊಡಗಿದಾಗ ಇಳಿಯುವ ಗಡಿಬಿಡಿಯಲ್ಲಿ ಈ ಘಟನೆ ನಡೆದಿತ್ತು.   ಕುಟ್ಟಿ ಕುಂದನ್ ಅವರನ್ನು ರಕ್ಷಿಸಿದ್ದಕ್ಕಾಗಿ ಕುಟುಂಬಿಕರು ಸುಜೀರ್ ಅವರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News