"ಮನೆಯಲ್ಲಿ ಅಡುಗೆ ಮಾಡಿಕೊಂಡಿರಿ": ಸಂಸದೆ ಸುಪ್ರಿಯಾ ಸುಳೆ ಕುರಿತು ಮಹಾರಾಷ್ಟ್ರ ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

Update: 2022-05-26 09:18 GMT
Photo: PTI

ಹೊಸದಿಲ್ಲಿ: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ  ಚಂದ್ರಕಾಂತ್ ಪಾಟೀಲ್ ಬುಧವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕಿ ಸುಪ್ರಿಯಾ ಸುಳೆ ಅವರನ್ನು ಗುರಿಯಾಗಿಸಿಕೊಂಡು   ವಿವಾದಾತ್ಮಕ ಹೇಳಿಕೆ ನೀಡಿದ್ದು ಇದು ಭಾರೀ  ಆಕ್ರೋಶಕ್ಕೆ ಕಾರಣವಾಗಿದೆ.

 “ರಾಜಕೀಯ ಅರ್ಥವಾಗದಿದ್ದರೆ ಮನೆಗೆ ಹೋಗಿ ಅಡುಗೆ ಮಾಡಿಕೊಂಡಿರಿ’’ ಎಂದು ಪ್ರತಿಭಟನೆ ವೇಳೆ ಸಂಸದೆಗೆ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಒಬಿಸಿ (ಇತರ ಹಿಂದುಳಿದ ವರ್ಗ) ಮೀಸಲಾತಿಗೆ ಸಂಬಂಧಿಸಿದಂತೆ ಎರಡು ಪಕ್ಷಗಳು ಜಟಾಪಟಿ ನಡೆಸುವ ವೇಳೆ ಈ ಹೇಳಿಕೆ ನೀಡಲಾಗಿದೆ.

ಒಬಿಸಿ ಕೋಟಾಕ್ಕಾಗಿ ಮಹಾರಾಷ್ಟ್ರದ ಹೋರಾಟವನ್ನು ಮಧ್ಯಪ್ರದೇಶದೊಂದಿಗೆ ಹೋಲಿಸಿದ ಸುಪ್ರಿಯಾ ಸುಳೆಗೆ ಬಿಜೆಪಿ ನಾಯಕ ಪಾಟೀಲ್  ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯವು ಸ್ಥಳೀಯ ಚುನಾವಣೆಗಳಲ್ಲಿ ಕೋಟಾಕ್ಕೆ ಸುಪ್ರೀಂ ಕೋರ್ಟ್‌ನಿಂದ ಹೇಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ ಎಂದು ಸುಳೆ ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್‌ನೊಂದಿಗೆ ಅಧಿಕಾರವನ್ನು ಹಂಚಿಕೊಂಡಿರುವ ಎನ್ ಸಿಪಿ ನಾಯಕಿ ಸುಳೆ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ದಿಲ್ಲಿ ಭೇಟಿಯ ಸಮಯದಲ್ಲಿ ತಾನು  ಅವರನ್ನು ಸಂಪರ್ಕಿಸಿದ್ದೆ. ಆದರೆ ಅವರು ಸಮಸ್ಯೆ ಬಗೆಹರಿಸಿಕೊಳ್ಳಲು  ಏನು ಮಾಡಿದರು ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ ಎಂದರು.

"ಮಧ್ಯಪ್ರದೇಶದ ಮುಖ್ಯಮಂತ್ರಿ ದಿಲ್ಲಿಗೆ ಬಂದು 'ಯಾರನ್ನೋ' ಭೇಟಿಯಾದರು ... ಮುಂದಿನ ಎರಡು ದಿನಗಳಲ್ಲಿ ಇದ್ದಕ್ಕಿದ್ದಂತೆ ಏನಾಯಿತು ಎಂದು ನನಗೆ ತಿಳಿದಿಲ್ಲ. ಅವರು ಒಬಿಸಿ ಮೀಸಲಾತಿಗೆ ಮುಂದಾದರು" ಎಂದು ಸುಳೆ  ಅವರು ಪಕ್ಷದ ಸಭೆಯಲ್ಲಿ ಹೇಳಿದರು.

"ನೀವು ರಾಜಕೀಯದಲ್ಲಿ ಏಕೆ ಇದ್ದೀರಿ? ಮನೆಗೆ ಹೋಗಿ ಅಡುಗೆ ಮಾಡಿ. ದಿಲ್ಲಿಗೆ ಅಥವಾ ಸ್ಮಶಾನಕ್ಕೆ ಹೋಗಿ, ಆದರೆ ನಮಗೆ ಒಬಿಸಿ ಕೋಟಾವನ್ನು ತಂದುಕೊಡಿ. ಲೋಕಸಭಾ ಸದಸ್ಯೆಯಾಗಿದ್ದರೂ ಕೂಡ ಮುಖ್ಯಮಂತ್ರಿಯೊಂದಿಗೆ ಅಪಾಯಿಂಟ್‌ಮೆಂಟ್ ಪಡೆಯುವುದು ಹೇಗೆ ಎಂದು ನಿಮಗೆ ತಿಳಿದಿಲ್ಲದಿದ್ದರೆ ಹೇಗೆ? ಎಂದು ಪಾಟೀಲ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News