ಮತಗಳಿಕೆಗಾಗಿ ಬಿಜೆಪಿಯಿಂದ ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ: ಉಡುಪಿ ಜಿಲ್ಲಾ ಕಾಂಗ್ರೆಸ್
ಉಡುಪಿ : ಭ್ರಷ್ಟಾಚಾರವನ್ನು ರಾಜಧರ್ಮವನ್ನಾಗಿಸಿಕೊಂಡ ಬಿಜೆಪಿ ಯ ಅಸ್ವಸ್ಥ ಮನಸ್ಸಿಗೆ ಕಾಂಗ್ರೆಸ್ ಪ್ರತಿಪಾದಿಸಿಕೊಂಡು ಬಂದ ಸಾಮಾಜಿಕ ಸ್ವಾಸ್ಥ್ಯದ ಅರ್ಥ ಆಗಲು ಸಾಧ್ಯವಿಲ್ಲ. ಇದಕ್ಕಾಗಿ ಬಿಜೆಪಿ ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಇತ್ತೀಚೆಗೆ ಜಿಲ್ಲಾ ಬಿಜೆಪಿ ನೀಡಿದ ಪತ್ರಿಕಾ ಹೇಳಿಕೆಗೆ ಪ್ರತಿಕ್ರಿಯಿಸಿದೆ.
ದೇಶದ ಜನತೆ ಇಂದು ನಿರುದ್ಯೋಗ, ಭ್ರಷ್ಟಾಚಾರ, ಬೆಲೆ ಏರಿಕೆ, ತೆರಿಗೆ ಹೇರಿಕೆಗಳಿಂದ ಹೈರಾಣರಾಗಿದ್ದಾರೆ. ಆದರೆ ಬಿಜೆಪಿ ಮತಗಳಿಕೆಯ ಉದ್ದೇಶ ದಿಂದ ಹಿಜಾಬ್, ಹಲಾಲ್,ಆಝಾನ್, ಅನ್ಯಮತೀಯ ಬೀದಿಬದಿ ವ್ಯಾಪಾರ ನಿಷೇಧದ ಮೂಲಕ ಈವರೆಗೂ ಇದ್ದ ಈ ನಾಡಿನ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿರುವುದು ದುರ್ಧೈವ. ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಈ ನಾಡಿನ ಸಂಸ್ಕೃತಿ, ಸಂಸ್ಕಾರ, ಪರಂಪರೆಗೆ ವಿಷಹಾಕಿದವರು ಯಾರು ಎನ್ನುವ ಸತ್ಯ ಜನರಿಗೆ ಮನವರಿಕೆಯಾಗಿದೆ ಎಂದು ಹೇಳಿಕೆ ತಿಳಿಸಿದೆ.
ನಾಡು, ನುಡಿ, ಸಂಸ್ಕೃತಿಯ ಗಂಧಗಾಳಿ ಅರಿಯದ ಮುಗ್ದ ಮಕ್ಕಳ ಮನಸ್ಸಿ ನೊಳಗೆ, ತಿರುಚಿದ ಇತಿಹಾಸ, ಸಾಹಿತ್ಯ, ಸಾಮಾಜಿಕ ಚಿಂತನೆಗಳನ್ನು ಬಿತ್ತಿ ಎಲ್ಲೆಲ್ಲೂ ಗೊಂದಲವನ್ನು ಸೃಷ್ಟಿಸಲಾಗುತ್ತಿದೆ. ಕಳೆದ ೭೦ ವರ್ಷಗಳ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಾಡಿದ ಅಭಿವೃದ್ಧಿ ಸಾಧನೆಯ ಸಂಪತ್ತುಗಳನ್ನು ಮಾರಿಕೊಂಡು ದೇಶವನ್ನು ನಿರುದ್ಯೋಗ, ಬಡತನದ ಪ್ರಪಾತಕ್ಕೆ ತಳ್ಳಿದ ಬಿಜೆಪಿಗೆ ಕಾಂಗ್ರೆಸ್ ಪಕ್ಷಕ್ಕಿರುವ ಆಂತರೀಕ ಸ್ವಾಯತ್ತತೆ, ಸಾಂವಿಧಾನಿಕ ಬದ್ಧತೆ, ರಾಷ್ಟ್ರೀಯತಾ ಪ್ರಜ್ಞೆ, ಸಾಧನೆಯ ಇಚ್ಛಾಶಕ್ತಿಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.