ಗ್ರಾಮೀಣ ಭಾಗದ ಜನರ ಸಮಸ್ಯೆ ಬಗೆಹರಿಸಲು ಹಳ್ಳಿಗೆ ಭೇಟಿ : ಜಿಲ್ಲಾಧಿಕಾರಿ ಕೂರ್ಮರಾವ್
ಉಡುಪಿ : ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಉದ್ದೇಶದಿಂದ ಜಿಲ್ಲಾಡಳಿತವು ಹಳ್ಳಿಗೆ ಭೇಟಿ ನೀಡಿದೆ. ಇದರ ಲಾಭವನ್ನು ಸ್ಥಳೀಯ ಗ್ರಾಮಸ್ಥರೆಲ್ಲರೂ ಪಡೆದು ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದ್ದಾರೆ.
ಶುಕ್ರವಾರ ಹೆಬ್ರಿ ತಾಲೂಕಿನ ವರಂಗ ಗ್ರಾಮ ವ್ಯಾಪ್ತಿಯ ಮುನಿಯಾಲಿನ ವೆಂಕಟರಮಣ ದೇವಸ್ಥಾನದ ಆವರಣ ದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸರಕಾರ ದೂರದ ಗ್ರಾಮೀಣ ಪ್ರದೇಶದ ಜನರಿಗೆ ತಾವಿದ್ದ ಸ್ಥಳಕ್ಕೆ ಅಧಿಕಾರಿ ಗಳು ಬಂದು ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಿ, ಸ್ಪಂದಿಸಬೇಕೆಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ವನ್ನು ಆಯೋಜಿಸಿದೆ ಎಂದವರು ಹೇಳಿದರು.
ಸಮುದಾಯಗಳ ಸಮಸ್ಯೆ ಹಾಗೂ ವೈಯಕ್ತಿಕ ಸಮಸ್ಯೆಗಳು ಸೇರಿದಂತೆ ಒಟ್ಟು ೧೪೫ ಅರ್ಜಿಗಳು ಬಂದಿವೆ. ಇವುಗಳಲ್ಲಿ ಹೆಚ್ಚಿನವು ನಿವೇಶನ ನೀಡುವ ಬಗ್ಗೆ, ಸ್ಮಶಾನಕ್ಕೆ ಜಾಗ ಕಾಯ್ದಿರಿಸುವುದು, ವಿದ್ಯುತ್ ಕಲ್ಪಿಸುವುದು, ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಕೋರಿರುವುದು ಕಂಡುಬಂದಿವೆ. ಇವುಗಳನ್ನು ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ, ಕಾನೂನಿನ ವ್ಯಾಪ್ತಿಯಲ್ಲಿ ಇಂದೇ ಬಗೆಹರಿಸಲಾಗು ವುದು ಎಂದರು.
ಮಳೆಗಾಲದ ಕಾರ, ಮಳೆಯ ನೀರು ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿಯಿಂದ ಕೀಟ ಜನ್ಯ ರೋಗಗಳೂ ಸೇರಿದಂತೆ ಡೆಂಗಿ ಪ್ರಕರಣಗಳು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ಪಚ್ಛವಾಗಿಟ್ಟುಕೊಳ್ಳಬೇಕು. ಜೊತೆಗೆ, ಮಳೆಯ ನೀರು ನಿಲ್ಲದಂತೆ ನೋಡಿಕೊಂಡು ರೋಗಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ಇಂದು ಎಲ್ಲಾ ಇಲಾಖಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧೀನ ಕಚೇರಿಗಳಾದ ಶಾಲೆ, ಅಂಗನ ವಾಡಿ, ವಸತಿ ನಿಲಯ, ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಕಚೇರಿಗಳಿಗೆ ತಪ್ಪದೇ ಭೇಟಿ ನೀಡಿ, ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ, ಏನೇ ಸಮಸ್ಯೆಗಳಿದ್ದಲ್ಲಿ ಬಗೆಹರಿಸಬೇಕೆಂದು ಸೂಚನೆ ನೀಡಿದರು.
ಸಾರ್ವಜನಿಕ ಉಪಯೋಗಕ್ಕೆ ಅವಶ್ಯಕವಿರುವ ಅಭಿವೃದ್ಧಿ ಕಾರ್ಯಗಳನ್ನು ಇಲಾಖಾ ಅಧಿಕಾರಿಗಳು ಆದ್ಯತೆಯ ಮೇಲೆ ಕೈಗೊಂಡು ಶೀಘ್ರದಲ್ಲಿಯೇ ಪೂರ್ಣ ಗೊಳಿಸಬೇಕೆಂದು ಸೂಚಿಸಿದ ಅವರು, ಶಾಲೆಗಳ ದುರಸ್ಥಿ, ಕಾಂಪೌಂಡ್ ನಿರ್ಮಾಣ, ಮೈದಾನ ಸೇರಿದಂತೆ ಇತರ ಕಾಮಗಾರಿಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಬೇಕು ಎಂದರು.
ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಕಳೆದ ಕೊರೋನಾ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದವರು ಗ್ರಾಮ ಗಳಿಗೆ ಹಿಂದಿರುಗಿ ವರ್ಕ್ ಫ್ರಂ ಹೋಮ್ ಕಾರ್ಯಗಳನ್ನು ಮಾಡಲು ಹಾಗೂ ಶಾಲಾ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಲು ನೆಟ್‌ವರ್ಕ್ ಅಲಭ್ಯತೆಯಿಂದ ಅನಾನುಕೂಲ ಉಂಟಾಗಿದ್ದವು. ಈ ಸಮಸ್ಯೆ ಬಗೆ ಹರಿಸಲು ಹೆಚ್ಚಿನ ಒತ್ತು ಕೊಡಬೇಕು ಎಂದು ಮೆಸ್ಕಾಂ ನಿರ್ದೇಶಕ ದಿನೇಶ್ ಪೈ ಹೇಳಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ೧, ಭೂ ಮಾಪನಾ ಇಲಾಖೆಯ ೩, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ೩, ಆಹಾರ ಇಲಾಖೆಯ ೩, ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ೩, ಪಂಚಾಯತ್ ರಾಜ್ ಇಲಾಖೆಯ ೪೮, ಶಿಕ್ಷಣ ಇಲಾಖೆ ೫, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ೨, ಪೊಲೀಸ್ ಇಲಾಖೆಯ ೫, ಕಂದಾಯ ಇಲಾಖೆಯ ೫೧, ಅರಣ್ಯ ಇಲಾಖೆಯ ೫, ಲೋಕೋಪಯೋಗಿ ಇಲಾಖೆಯ ೨, ಸಣ್ಣ ನೀರಾವರಿ ಇಲಾಖೆಯ ೨ ಹಾಗೂ ಮೆಸ್ಕಾಂನ ೭, ಗಿರಿಜನ ಸಮಗ್ರ ಅಭಿವೃದ್ಧಿ ಇಲಾಖೆ ೩, ಕೆಎಸ್ಸಾರ್ಟಿಸಿಯ ೨ ಅರ್ಜಿಗಳು ಸೇರಿದಂತೆ ಒಟ್ಟು ೧೪೫ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪುರಂದರ ಕೆ, ಕುದುರೆಮುಖ ಡಿಎಫ್‌ಒ ಗಣಪತಿ, ಎಸಿಎಫ್ ಕಾಜಲ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಕುಂದಾಪುರ ಡಿಎಫ್‌ಒ ಆಶೀಶ್ ರೆಡ್ಡಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್ ಮತ್ತಿತರರು ಉಪಸ್ಥಿತರಿದ್ದರು.