ಇಸ್ರೇಲ್‌ನೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಅರಬ್ ದೇಶ ʼಯುಎಇʼ
ಜೆರುಸಲೇಂ, ಮೇ 31: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಇಸ್ರೇಲ್ ಮತ್ತು ಯುಎಇ ಮಂಗಳವಾರ ಸಹಿ ಹಾಕಿದ್ದು, ಅರಬ್ ದೇಶವೊಂದರ ಜತೆ ಇಸ್ರೇಲ್ ಸಹಿ ಹಾಕಿರುವ ಪ್ರಪ್ರಥಮ ಮುಕ್ತ ವ್ಯಾಪಾರ ಒಪ್ಪಂದ ಇದಾಗಿದೆ.
2020ರಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಇಸ್ರೇಲ್‌ನೊಂದಿಗಿನ ಸಂಬಂಧವನ್ನು ಸಹಜ ಸ್ಥಿತಿಗೆ ತರಲು ಯುಎಇ ಸಹಮತ ವ್ಯಕ್ತಪಡಿಸಿತ್ತು. ಅಬ್ರಹಾಂ ಒಪ್ಪಂದ ಎಂದು ಹೆಸರಿಸಲಾದ ಈ ಒಪ್ಪಂದ ಬಳಿಕ 4 ಅರಬ್ ದೇಶಗಳಿಗೂ ವಿಸ್ತರಣೆಗೊಂಡಿತ್ತು. ಅಂದಿನಿಂದ ಇಸ್ರೇಲ್-ಯುಎಇ ದೇಶಗಳು ಹಲವಾರು ಆರ್ಥಿಕ ವಲಯಗಳಲ್ಲಿ ಸಹಕಾರವನ್ನು ಹೆಚ್ಚಿಸಿವೆ.
ಇಸ್ರೇಲ್ ಮತ್ತು ಯುಎಇ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಟ್ವೀಟ್ ಮಾಡಿದ್ದಾರೆ. ಇದೊಂದು ಅಸಾಮಾನ್ಯ ಸಾಧನೆಯಾಗಿದೆ. ವ್ಯಾಪಾರವನ್ನು ಹೆಚ್ಚಿಸಲು, ಉದ್ಯೋಗ ಸೃಷ್ಟಿಸಲು, ಹೊಸ ಕೌಶಲ್ಯಗಳನ್ನು ಉತ್ತೇಜಿಸಲು ಮತ್ತು ಸಹಕಾರ ಗಾಢವಾಗಿಸಲು ನಮ್ಮ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವುದರಿಂದ ಎರಡೂ ದೇಶಗಳಿಗೆ ಹೆಚ್ಚಿನ ಪ್ರಯೋಜವಾಗಲಿದೆ ಎಂದು ಇಸ್ರೇಲ್‌ಗೆ ಯುಎಇ ರಾಯಭಾರಿ ಮುಹಮ್ಮದ್ ಅಲ್ ಖಾಜ ಪ್ರತಿಕ್ರಿಯಿಸಿದ್ದಾರೆ.
ದ್ವಿಪಕ್ಷೀಯ ವ್ಯಾಪಾರ ಈ ವರ್ಷ 2 ಬಿಲಿಯನ್ ಡಾಲರ್ಗೂ ಅಧಿಕವಾಗಲಿದೆ ಎಂದು ಯುಇಎ-ಇಸ್ರೇಲ್ ವ್ಯಾಪಾರ ಸಮಿತಿಯ ಅಧ್ಯಕ್ಷ ಡೊರಿಯನ್ ಬರಾಕ್ ಅಂದಾಜು ಮಾಡಿದ್ದಾರೆ. ಈ ವರ್ಷಾಂತ್ಯದ ವೇಳೆ ಯುಎಇಯಲ್ಲಿ ಸುಮಾರು 1000 ಇಸ್ರೇಲ್ ಸಂಸ್ಥೆಗಳು ಕಾರ್ಯ ನಿರ್ವಹಿಸಲಿದ್ದು ಇದು ಅಭೂತಪೂರ್ವವಾಗಿದೆ. ದಶಕದ ಹಿಂದೆಯೇ ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿರುವ ನೆರೆದೇಶಗಳಾದ ಜೋರ್ಡಾನ್ ಮತ್ತು ಈಜಿಪ್ಟ್‌ಗಳ ಜತೆ ಇಸ್ರೇಲ್ ಸೀಮಿತ ವಾಣಿಜ್ಯ ಸಂಬಂಧ ಹೊಂದಿದೆ. ಅಬ್ರಹಾಂ ಒಪ್ಪಂದಕ್ಕೆ ಸಹಿ ಬೀಳುವುದಕ್ಕೂ ಮೊದಲೇ ಇಸ್ರೇಲ್ ದೇಶ ಯುಎಇ ಮತ್ತಿತರ ಗಲ್ಫ್ ದೇಶಗಳ ಜತೆ ಕ್ರಮೇಣ ಸಹಕಾರ ಸಂಬಂಧ ಹೆಚ್ಚಿಸಿಕೊಂಡಿದೆ ಎಂದವರು ಹೇಳಿದ್ದಾರೆ.ಇದು ಮಧ್ಯಪ್ರಾಚ್ಯ ರಾಜತಾಂತ್ರಿಕತೆಯ ಐತಿಹಾಸಿಕ ಪ್ರಗತಿ ಎಂದು ಒಪ್ಪಂದದ ಬೆಂಬಲಿಗರು ಬಣ್ಣಿಸಿದ್ದಾರೆ. ಆದರೆ ತಮ್ಮ ಉದ್ದೇಶಕ್ಕೆ ಬಗೆದಿರುವ ದ್ರೋಹ ಇದಾಗಿದೆ ಎಂದು ಪೆಲೆಸ್ತೀನ್ ಈ ಒಪ್ಪಂದವನ್ನು ತಿರಸ್ಕರಿಸಿದೆ.