ಇಂಗಾಲದ ಡೈಆಕ್ಸೈಡ್ ಮಟ್ಟ ಗರಿಷ್ಟ ಮಟ್ಟಕ್ಕೇರಿಕೆ: ವರದಿ

Update: 2022-06-04 18:12 GMT

ನ್ಯೂಯಾರ್ಕ್, ಜೂ.4: ಭೂಮಿಯ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಮಟ್ಟವು ಈ ವರ್ಷದ ಮೇ ತಿಂಗಳಲ್ಲಿ ದಾಖಲೆ ಮಟ್ಟವನ್ನು ತಲುಪಿದ್ದು ಏರುಗತಿಯನ್ನು ಕಾಯ್ದುಗೊಂಡಿದೆ. ಇಂಗಾಲದ ಡೈಆಕ್ಸೈಡ್‌ನ ಮಟ್ಟವು ಕೈಗಾರಿಕಾ ಕ್ರಾಂತಿಗೂ ಮೊದಲು ಇದ್ದುದಕ್ಕಿಂತ 50%ಕ್ಕೂ ಅಧಿಕವಾಗಿದೆ ಎಂದು ನ್ಯಾಷನಲ್ ಓಶಿಯಾನಿಕ್ ಆ್ಯಂಡ್ ಅಟೊಮೊಸ್ಫೆರಿಕ್ ಅಡ್ಮಿನಿಸ್ಟ್ರೇಷನ್(ಎನ್‌ಒಎಎ) ಇತ್ತೀಚೆಗೆ ಬಿಡುಗಡೆಗೊಳಿಸಿದ ವರದಿ ಹೇಳಿದೆ.

  ಮೇ ತಿಂಗಳಿನಲ್ಲಿ ಹವಾಯಿಯ ಮೌನಾ ಲೋವ ಜ್ವಾಲಾಮುಖಿಯ ಸಂದರ್ಭ ಇಂಗಾಲದ ಡೈಆಕ್ಸೈಡ್ ಮಟ್ಟ ಮಿಲಿಯನ್‌ಗೆ 421 ಭಾಗಗಳಾಗಿತ್ತು. ಇದು ಕೈಗಾರಿಕಾ ಕ್ರಾಂತಿಯ ಮೊದಲಿನ ಅವಧಿಗಿಂತ ಬಹುಪಟ್ಟು ಅಧಿಕವಾಗಿದೆ. ವಿಶ್ವದಾದ್ಯಂತ ಇಂಧನ ಘಟಕಗಳು, ವಾಹನ ಉತ್ಪಾದಿಸುವ ಕಾರ್ಖಾನೆಗಳಿಂದ ಭಾರೀ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗುತ್ತಿದ್ದು ಅನಿಲದ ಸಾಂದ್ರತೆ 4 ಮಿಲಿಯನ್ ವರ್ಷಗಳಲ್ಲೇ ಅತ್ಯಧಿಕವಾಗಿದೆ. 2021ರಲ್ಲಿ ಇಂಗಾಲ ಹೊರಸೂಸುವಿಕೆ ಪ್ರಮಾಣ 36.3 ಬಿಲಿಯನ್ ಟನ್‌ಗಳಷ್ಟು ಆಗಿತ್ತು, ಇದು ಮನುಕುಲದ ಇತಿಹಾಸದಲ್ಲೇ ಗರಿಷ್ಟವಾಗಿದೆ ಎಂದು ವರದಿ ಹೇಳಿದೆ.

 ನಮ್ಮ ಆರ್ಥಿಕತೆ ಮತ್ತು ಮೂಲಸೌಕರ್ಯಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಮಾನವರು ಹವಾಮಾನವನ್ನು ಬದಲಾಯಿಸುತ್ತಿದ್ದಾರೆ. ಹವಾಮಾನ ಬದಲಾವಣೆಯ ಪರಿಣಾಮವನ್ನು ನಮ್ಮ ಸುತ್ತಮುತ್ತ ಪ್ರತೀ ದಿನ ನಾವು ಕಾಣಬಹುದು. ಇಂಗಾಲದ ಡೈಆಕ್ಸೈಡ್ ಪ್ರಮಾಣದ ನಿರಂತರ ಏರಿಕೆಯು ಹವಾಮಾನ ಸಿದ್ಧ ದೇಶವಾಗಲು ತುರ್ತು, ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕೆಂಬ ಕಠಿಣ ಜ್ಞಾಪನೆಯಾಗಿದೆ ಎಂದು ಎನ್‌ಒಎಎ ವ್ಯವಸ್ಥಾಪಕ ರಿಕ್ ಸ್ಪಿನ್ರಾಡ್ ಹೇಳಿದ್ದಾರೆ. ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಿದರೆ ಭೂಮಿ ಬಿಸಿಯಾಗುತ್ತದೆ. ಇದರಿಂದ ಹೆಚ್ಚಿನ ಪ್ರವಾಹ, ಉಷ್ಣತೆ, ಬರಗಾಲ, ಕಾಡ್ಗಿಚ್ಚಿನ ಹೆಚ್ಚಳದ ಸಮಸ್ಯೆ ಬಿಗಡಾಯಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News