ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಮೃತ್ಯು ?
ಗಾಝಾ : ಗಾಝಾದಲ್ಲಿ ಇಸ್ರೇಲ್ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ನ ಕನಿಷ್ಟ ಮೂವರು ಸದಸ್ಯರು ಸಾವನ್ನಪ್ಪಿದ್ದು ಅವರಲ್ಲಿ ಒಬ್ಬರು ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಆಗಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.
ಆದರೆ ಸಿನ್ವರ್ ಮೃತಪಟ್ಟಿರುವುದನ್ನು ಇಸ್ರೇಲ್ ದೃಢಪಡಿಸಿಲ್ಲ. ಆದರೆ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇಸ್ರೇಲ್ ಸೇನೆ ಮೃತದೇಹದ ಡಿಎನ್ಎ ಪರೀಕ್ಷೆಯನ್ನು ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಗಾಝಾದ ಕಟ್ಟಡವೊಂದಕ್ಕೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಹಮಾಸ್ನ ಮೂವರು ಸದಸ್ಯರನ್ನು ಹತ್ಯೆ ಮಾಡಲಾಗಿದೆ. ಆದರೆ ಕಟ್ಟಡದಲ್ಲಿ ಒತ್ತೆಯಾಳುಗಳು ಇರಲಿಲ್ಲ. ಹಮಾಸ್ನ ಪ್ರತಿಯೊಬ್ಬ ಸದಸ್ಯನನ್ನೂ ನಾವು ತಲುಪಲಿದ್ದೇವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಹೇಳಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ಭದ್ರತಾ ಪಡೆಯ ಕಾರ್ಯಾಚರಣೆಯಲ್ಲಿ ಮೂವರು ಹಮಾಸ್ ಸದಸ್ಯರು ಸಾವನ್ನಪ್ಪಿದ್ದಾರೆ. ಇವರಲ್ಲಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಸೇರಿರುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಈ ಹಂತದಲ್ಲಿ ಮೃತರ ಗುರುತು ಪತ್ತೆಹಚ್ಚಲಾಗಿಲ್ಲ ಎಂದು ಇಸ್ರೇಲ್ ರಕ್ಷಣಾ ಇಲಾಖೆ ಹೇಳಿದೆ.