ತೈವಾನ್ ವಿಚಾರದಲ್ಲಿ ಹಸ್ತಕ್ಷೇಪ ಬೇಡ: ಭಾರತಕ್ಕೆ ಚೀನಾ ತಾಕೀತು

Update: 2024-10-18 03:02 GMT

 ಮಾವೋ ನಿಂಗ್ PC: x.com/Echinanews

ಹೊಸದಿಲ್ಲಿ: ಭಾರತ- ಚೀನಾ ಸಂಬಂಧಕ್ಕೆ ಧಕ್ಕೆ ಬಾರದ ರೀತಿಯಲ್ಲಿ ತೈವಾನ್ ವಿಷಯವನ್ನು ವಿವೇಕಯುಕ್ತವಾಗಿ ನಿಭಾಯಿಸಿ ಎಂದು ಭಾರತವನ್ನು ಚೀನಾ ಆಗ್ರಹಿಸಿದೆ. ಮುಂಬೈನಲ್ಲಿ ತೈವಾನ್ ಕಾನ್ಸುಲೇಟ್ ಆರಂಭದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿರುವ ಚೀನಾ, ತೈವಾನ್ ವಿಚಾರದಲ್ಲಿ ಯಾವುದೇ ಬಗೆಯ ಹಸ್ತಕ್ಷೇಪ ಮಾಡದಂತೆ ಭಾರತಕ್ಕೆ ತಾಕೀತು ಮಾಡಿದೆ. ತೈವಾನ್ ಈಗಾಗಲೇ ಹೊಸದಿಲ್ಲಿ ಹಾಗೂ ಚೆನ್ನೈನಲ್ಲಿ ರಾಯಭಾರ ಕಚೇರಿಗಳನ್ನು ಹೊಂದಿದೆ.

ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರೆ ಮಾವೋ ನಿಂಗ್ ಈ ಬಗ್ಗೆ ಹೇಳಿಕೆ ನೀಡಿ, ಚೀನಾದ ಜತೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಯಾವುದೇ ದೇಶ ತೈವಾನ್ ಜತೆಗೆ ಅಧಿಕೃತ ಸಂಪರ್ಕ ಹೊಂದುವುದನ್ನು ಚೀನಾ ವಿರೋಧಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಹಿಮಾಲಯನ್ ಗಡಿಯಲ್ಲಿ ಸುದೀರ್ಘ ಕಾಲದಿಂದ ಇರುವ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಪ್ರಯತ್ನಗಳನ್ನು ನಡೆಸುತ್ತಿರುವ ನಡುವೆಯೇ ತೈವಾನ್ ಹೊಸ ಕಾನ್ಸುಲೇಟ್ ಕಚೇರಿಯನ್ನು ಮುಂಬೈನಲ್ಲಿ ಆರಂಭಿಸಿರುವುದು ಚೀನಾದ ಕೆಂಗಣ್ಣಿಗೆ ಕಾರಣವಾಗಿದೆ.

ತೈವಾನ್ ದೇಶವನ್ನು ತನ್ನ ಭೂಭಾಗ ಎಂದು ಚೀನಾ ಪರಿಗಣಿಸಿದ್ದು, ದ್ವೀಪರಾಷ್ಟ್ರದ ಸುತ್ತಮುತ್ತಲ ಪ್ರದೇಶಗಳಲ್ಲಿ ಇತ್ತೀಚೆಗೆ ಮಿಲಿಟರಿ ತಾಲೀಮು ನಡೆಸಿತ್ತು. ಚೀನಾ ಪ್ರತಿಪಾದನೆಯನ್ನು ತೈವಾನ್ ಅಲ್ಲಗಳೆದಿದ್ದು, ತಾನು ಸಾರ್ವಭೌಮ ಸ್ವತಂತ್ರ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ಬಿಂಬಿಸಿಕೊಳ್ಳುವ ಹಕ್ಕು ತನಗಿದೆ ಎಂದು ಹೇಳಿಕೊಂಡಿದೆ.

"ತೈವಾನ್ ವಿಚಾರದಲ್ಲಿ ಚೀನಾ ತನ್ನ ಮನವಿಯನ್ನು ಭಾರತಕ್ಕೆ ಸಲ್ಲಿಸಿದೆ." ಎಂದು  ಹೇಳಿರುವ ಮಾವೊ ನಿಂಗ್, "ಒಂದೇ ಚೀನಾ ತತ್ವವು ಭಾರತದ ಗಂಭೀರ ರಾಜಕೀಯ ಬದ್ಧತೆಯಾಗಿದ್ದು, ಇದು ಚೀನಾ- ಭಾರತ ಸಂಬಂಧಗಳ ರಾಜಕೀಯ ಅಡಿಪಾಯ. ಈ ಬದ್ಧತೆಗೆ ಭಾರತ ಬದ್ಧವಾಗಿರಬೇಕು ಮತ್ತು ತೈವಾನ್ ಸಂಬಂಧಿತ ವಿಚಾರಗಳನ್ನು ವಿವೇಕಯುಕ್ತವಾಗಿ ಹಾಗೂ ಸಮರ್ಪಕವಾಗಿ ನಿಭಾಯಿಸಬೇಕು. ತೈವಾನ್ ಜತೆಗೆ ಯಾವುದೇ ಅಧಿಕೃತ ವಿನಿಮಯವನ್ನು ಮಾಡಿಕೊಳ್ಳಬಾರದು” ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News