ಶೈಕ್ಷಣಿಕ ದೌರ್ಜನ್ಯ

Update: 2022-06-05 08:35 GMT

ನಾವಿರುವ ಮನೆ ಮತ್ತು ಜಗತ್ತು ಮಕ್ಕಳದು. ನಾವು ಅವರೊಡನಿರುತ್ತೇವೆ, ಅವರಿಗಾಗಿ. ಮಕ್ಕಳೇ ಮನೆಯ, ಜಗದ ಮತ್ತು ಜನರ ಒಡೆಯರು. ಕುಟುಂಬ, ಸಮಾಜ, ವ್ಯವಸ್ಥೆ ಎಲ್ಲರೂ ಮಕ್ಕಳಿಗಾಗಿ ಕೆಲಸ ಮಾಡುವುದರಿಂದ ಅವರೇ ಒಡೆಯರು ಎನ್ನುವುದು ತಾತ್ವಿಕ ರೂಪ. ಆ ಮನೆಯೊಡೆಯರ ಮೇಲೆ ದಬ್ಬಾಳಿಕೆಯನ್ನು ಮಾಡುವ ಯಾರೇ ಆಗಲಿ ಅವರು ತಮ್ಮ ಕರ್ತವ್ಯದಿಂದ ಚ್ಯುತರಾಗಿರುತ್ತಾರೆ. 

ಮಕ್ಕಳಿಗೆ ಲೈಂಗಿಕವಾಗಿ ಕಿರುಕುಳ ಕೊಟ್ಟು, ಸಿಗರೇಟಿನಿಂದ ಸುಟ್ಟು, ಬೆಲ್ಟ್‌ನಿಂದ ಬರೆ ಬೀಳುವಂತೆ ಬಾರಿಸಿ, ಮೈ ಮೇಲೆ ಗಾಯಗಳಾದರೆ ಮಾತ್ರ ಚೈಲ್ಡ್ ಅಬ್ಯೂಸ್ ಅಂದುಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಬರಿಯ ಕೆಟ್ಟ, ಕ್ರೂರ ವ್ಯಕ್ತಿಗಳು ಮಾತ್ರ ಮಕ್ಕಳಿಗೆ ಕಿರುಕುಳ ಕೊಡುತ್ತಾರೆಂದುಕೊಳ್ಳಲೂ ಸಾಧ್ಯವಿಲ್ಲ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳೆಂದು ಕರೆಯಿಸಿಕೊಳ್ಳುವವರಿಂದಲೂ, ಮಾತ, ಪಿತ, ಗುರು, ಅತಿಥಿಗಳಂತಹ ಯಾವುದೇ ದೈವಗಳಿಂದಲೂ ಚೈಲ್ಡ್ ಅಬ್ಯೂಸ್ ಆಗುತ್ತಿರುತ್ತದೆ. 

ಮಕ್ಕಳ ಮೇಲಿನ ದೌರ್ಜನ್ಯ ಅಥವಾ ಕಿರುಕುಳವು ಕ್ರೌರ್ಯದಿಂದ ಕೂಡಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ಹಾಗೇನಿಲ್ಲ. ದೈಹಿಕವಾಗಿ ನಡೆಸುವ ಹಲ್ಲೆ ಅಥವಾ ದೌರ್ಜನ್ಯ ಕೂಡ ಒಂದು ಬಗೆ ಮಾತ್ರ. ಮಕ್ಕಳನ್ನು ತಿರಸ್ಕರಿಸುವ ಮತ್ತು ಭಾವನಾತ್ಮಕವಾಗಿ ಅಥವಾ ಮಾನಸಿಕವಾಗಿ ಕಿರುಕುಳ ಕೊಡುವವರೂ ಇದ್ದು, ಅದು ಹೊರನೋಟಕ್ಕೆ ಕ್ರೌರ್ಯ ಅನ್ನಿಸದೇ ಹೋದರೂ ಅವು ಆಳವಾದ ಗಾಯಗಳನ್ನು ಉಂಟುಮಾಡುತ್ತದೆ.

ಕೆಟ್ಟವರು ಅಥವಾ ಸ್ಯಾಡಿಸ್ಟ್ ಮನೋಭಾವದ ವ್ಯಕ್ತಿಗಳಿಂದ ದೌರ್ಜನ್ಯಗಳು ಉಂಟಾಗುತ್ತವೆ ಅಂದುಕೊಳ್ಳುತ್ತಾರೆ. ಇದೊಂದು ತಪ್ಪುಗ್ರಹಿಕೆ. ತಾವು ಮಕ್ಕಳಿಗೆ ಕಿರುಕುಳ ಕೊಡುತ್ತಿದ್ದೇವೆಂಬ ಅರಿವೇ ಇಲ್ಲದೆ, ತಮ್ಮ ಅಜ್ಞಾನದಿಂದಾಗಿ, ಮಕ್ಕಳ ಮನಸ್ಸಿನ ಸೂಕ್ಷ್ಮತೆಯ ತಿಳುವಳಿಕೆ ಇಲ್ಲದೇ ಸಾಮಾನ್ಯರೂ ವಿಪರೀತವಾಗಿ ಮಕ್ಕಳಿಗೆ ಕಿರುಕುಳ ಕೊಡುತ್ತಾರೆ.

ಮಕ್ಕಳ ಪ್ರಪಂಚವು ಅನಿರೀಕ್ಷಿತವಾಗಿರುವ ರೀತಿಯಲ್ಲಿ ನಿರ್ಮಾಣವಾಗುತ್ತಿರುತ್ತದೆ. ಅವರು ಹಿರಿಯರ ಊಹೆಗೆ ಮೀರಿದ ಸೃಜನಶೀಲತೆಯನ್ನೂ ಮತ್ತು ಪ್ರಯೋಗಶೀಲತೆಯನ್ನೂ ಅಲ್ಲಿಂದಲ್ಲೇ ಪಡೆಯುತ್ತಿರುತ್ತಾರೆ. ಮಕ್ಕಳ ಮನಸ್ಸು ಫಲವತ್ತು. ಆದರೆ ವಿವೇಚನೆ ಮಾಡಲು, ವಿಶ್ಲೇಷಿಸಲು ಬಾರದಷ್ಟು ಪಶುತನದ ಮುಗ್ಧತೆ. ಪಳಗಿಸಿದಂತೆ ರೂಪುಗೊಳ್ಳುತ್ತದೆ. ಅಂತಹ ಮಕ್ಕಳಿಗೆ ಕೊಡಬೇಕಾಗಿರುವುದೇ ಮನಸ್ಥಿತಿಯನ್ನು ಮತ್ತು ವ್ಯಕ್ತಿತ್ವವನ್ನು ರೂಪಿಸುವಂತಹ ಸಂಸ್ಕಾರ. ಅವರಲ್ಲಿ ಈಗಾಗಲೇ ನೈಸರ್ಗಿಕವಾಗಿರುವ ಪಶುತ್ವದ ಸಹಜತೆಯಿಂದ ಮನುಷ್ಯತ್ವದ ತರಬೇತಿಗೆ ಸಂಸ್ಕಾರ ಕೊಡುವಂತಹ ಶಿಕ್ಷಣ ನೀಡುವುದು ಕುಟುಂಬದ ಮತ್ತು ಸಾಮಾಜಿಕ ವ್ಯವಸ್ಥೆಯ ಪ್ರಾಥಮಿಕ ಕರ್ತವ್ಯ. ಅವರನ್ನು ಅಂತಹ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದು ಒಂದು ಬಗೆಯ ಕರ್ತವ್ಯ ಲೋಪವಾದರೆ, ತಪ್ಪಾದ ಮತ್ತು ವಿನಾಶಕಾರಿ ಮತ್ತು ಅವರಲ್ಲಿ ಇರುವಂತಹ ಪಶುತ್ವವನ್ನೇ ಮತ್ತಷ್ಟು ಬಲಪಡಿಸುವಂತಹ ಶಿಕ್ಷಣವನ್ನು ಕೊಡುವುದೂ ಕೂಡಾ ಮನುಷ್ಯತ್ವದ ವಿಷಯದಲ್ಲಿ ಮಹಾದೋಷವಾಗುತ್ತದೆ. ಉದಾಹರಣೆಗೆ; ಟೆರ್ರಿಟೋರಿಯಲ್ ಇಂಪರೇಟಿವ್ ಅಥವಾ ಸುಪ್ತ ಸೀಮಾಧಿಕಾರ ಅನ್ನುವಂತಹ ಪ್ರಾಣಿಗಳ ಗುಣವೊಂದಿದೆ. ಪ್ರಾಣಿಗಳು ತಮ್ಮತಮ್ಮಲ್ಲಿ ಎಲ್ಲೆಗಳನ್ನು ಗುರುತಿಸಿಕೊಂಡಿರುತ್ತವೆ. ಅದನ್ನು ತಮ್ಮದೆಂಬ ಸ್ವಾಭಾವಿಕ ಪ್ರವೃತ್ತಿ ಅವುಗಳಿಗಿದ್ದು ಅದನ್ನು ನಾನಾರೀತಿಯಲ್ಲಿ ಗುರುತಿಸಿಕೊಂಡಿರುತ್ತವೆ. ಸಾಧಾರಣವಾಗಿ ನಾಯಿಗಳಲ್ಲಿ ನೀವು ಗುರುತಿಸಿರಬಹುದು. 

ಅಲ್ಲಲ್ಲಿ ಮೂಸುತ್ತಾ, ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಉಚ್ಚೆ ಹೊಯ್ಯುತ್ತಾ ಗಡಿಗಳನ್ನು ಗುರುತು ಮಾಡಿರುತ್ತವೆ. ಇತರ ನಾಯಿಗಳು ಅದನ್ನು ಮೂಸಿದಾಗ ಅದಕ್ಕೆ ಇನ್ಯಾವುದೋ ಒಂದರ ಸೀಮೆ ಇದು ಎಂದು ಗೊತ್ತಾದರೂ, ಅದರ ಮೇಲೆ ತನ್ನ ಉಚ್ಚೆ ಹೊಯ್ದು ಮೊದಲು ಹೊಯ್ದಿರುವ ಪ್ರಾಣಿಯ ಅಧಿಕಾರವನ್ನು ಧಿಕ್ಕರಿಸುವುದೇ ಅಲ್ಲದೇ ತನ್ನ ಸೀಮಾಧಿಕಾರವನ್ನು ಸ್ಥಾಪಿಸುತ್ತದೆ. ನೈಸರ್ಗಿಕವಾಗಿ ಬಿಟ್ಟಿರುವಂತಹ ನಾಯಿಗಳು ಇದೇ ಕಾರಣಕ್ಕೆ ಇನ್ನೊಂದನ್ನು ಕಂಡ ತಕ್ಷಣ ದಾಳಿ ಮಾಡುವುದು, ಆರ್ಭಟಿಸಿ ಓಡಿಸುವುದು ಮತ್ತು ದಬ್ಬಾಳಿಕೆ ಮಾಡುವುದು. ಆದರೆ ಒಂದು ಕೂಡು ಬಾಳುವೆಯ ಪರಿಸರದಲ್ಲಿ ಪಳಗಿರುವ ಸಾಕುನಾಯಿಗಳು ಆ ರೀತಿಯ ವರ್ತನೆಗಳನ್ನು ತೋರುವುದಿಲ್ಲ. ಅವುಗಳೆಲ್ಲವೂ ತಮ್ಮ ಸಾಮೂಹಿಕ ಬದುಕಿನ ಕಟ್ಟುಪಾಡಿಗೆ ಬದ್ದವಾಗಿರುತ್ತವೆ.

 ವಯಸ್ಕ ಮನುಷ್ಯರ ಪ್ರಾಥಮಿಕ ಸ್ವರೂಪವಾದ ಮಗುತನದಲ್ಲಿ ಇಂತಹ ಕೂಡುಬಾಳುವೆಯ ತರಬೇತಿ; ನೇರವಾಗಿ ಹೇಳುವುದಾದರೆ ಪಳಗಿಸುವಿಕೆ ಬೇಕು. ಸುಪ್ತ ಸೀಮಾಧಿಕಾರದ ಮನಸ್ಸಿಗೆ ಕೂಡುಬಾಳುವಿಕೆಯ ಸಂಸ್ಕಾರ ಬೇಕು. ಅದಕ್ಕೆ ಪೂರಕವಾದಂತಹ ಶಿಕ್ಷಣವನ್ನೇ ಕುಟುಂಬದಲ್ಲಿಯೂ, ಸಾಮಾಜಿಕ ಸಂಸ್ಥೆಗಳಲ್ಲಿಯೂ ಕೊಡಬೇಕು. ಜಾತಿ, ಧರ್ಮ, ಸಿದ್ಧಾಂತಗಳ ಶ್ರೇಷ್ಠತೆಯ ವ್ಯಸನವನ್ನು ಉಂಟುಮಾಡುವಂತಹ ಸೀಮಾಧಿಕಾರವನ್ನು ಶಿಕ್ಷಣದ ಮೂಲಕ ಮಗುವಿನ ಫಲವತ್ತಾದ ಮನೋಭೂಮಿಯಲ್ಲಿ ರೂಢಿಸಿದರೆ ಮುಂದೆ ಅವರು ಒಟ್ಟು ಬಾಳ್ವಿಕೆ ಮಾಡಬೇಕಾದ ಸಮಾಜದಲ್ಲಿ ಅಹಮಿಕೆಯನ್ನು ಸ್ಥಾಪಿಸುವ ದೌರ್ಜನ್ಯವನ್ನು ಮಾಡುತ್ತಿರುತ್ತಾರೆ. ದೌರ್ಜನ್ಯವೆಂದರೆ ಅದು ರಕ್ತಸಿಕ್ತವೇ ಆಗಿರಬೇಕೆಂದೇನಿಲ್ಲ. ಇದೇ ಬಗೆಯ ಬೇಕಾದಷ್ಟು ವಿಷಯಗಳಿವೆ. ಮಕ್ಕಳ ಬಾಲ್ಯದಲ್ಲಿ ಇವೇನೂ ಅಂತಹ ಗಂಭೀರವಾದ ವಿಷಯಗಳು ಅಂತ ಅನ್ನಿಸದೇ ಇರಬಹುದು. ಆದರೆ ಅವರು ಬೆಳೆದಂತೆ, ಬೆಳವಣಿಗೆಯ ವಿವಿಧ ಮಜಲುಗಳನ್ನು ಕಾಣುತ್ತಾ ಹೋದಂತೆ, ಬಾಲ್ಯದಲ್ಲಿ ನೀಡದೇ ಹೋದ ಪ್ರಾಥಮಿಕ ಆದ್ಯತೆಗಳೆಲ್ಲಾ ನಂತರ ದೊಡ್ಡ ತೊಡಕುಗಳಾಗಿ ಪ್ರತಿಫಲಿಸುತ್ತವೆ.

ಹಕ್ಕಿನ ವಿಷಯದಲ್ಲಿ ಯಾರಿಗೂ ಸೇರದ, ಕರ್ತವ್ಯದ ವಿಷಯದಲ್ಲಿ ಎಲ್ಲರಿಗೂ ಸಲ್ಲುವ ಮಕ್ಕಳನ್ನು ಸಮಾಜದಲ್ಲಿ ಪೋಷಿಸುವ ಹೊಣೆಗಾರಿಕೆ ಎಲ್ಲರ ಸಾಮಾಜಿಕ ಕರ್ತವ್ಯ. ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ನೀಡುವ ಮೂಲಕ ಅದನ್ನು ಪಾಲಿಸುವ ಬಗೆಯನ್ನು ನಾವು ಕಂಡುಕೊಳ್ಳೋಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News