ಎ.ಜಿ.ಕೊಡ್ಗಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

Update: 2022-06-13 14:15 GMT
ಎ.ಜಿ.ಕೊಡ್ಗಿ

ಬೆಂಗಳೂರು : ಬಿಜೆಪಿ ಹಿರಿಯ ನಾಯಕ, ರಾಜ್ಯ ಮೂರನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ.ಕೊಡ್ಗಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಲೂಕು ಬೋರ್ಡ್ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದ ಕೊಡ್ಗಿ, ಬೈಂದೂರು ಶಾಸಕರಾಗಿ ನಂತರ ಹಣಕಾಸು ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ ಅನನ್ಯವಾದುದು. ಅವರ ರಾಜಕೀಯ ಜೀವನವೂ ಇತರರಿಗೆ ಮಾದರಿಯಾಗಿತ್ತು. ಪಕ್ಷದಲ್ಲಿ ಕರಾವಳಿ ಭಾಗದಲ್ಲಿ ಹಲವು ಯುವ ನಾಯಕರನ್ನು ಪ್ರೋತ್ಸಾಹಿಸಿ ಬೆಳೆಸಿದ ಶ್ರೇಯ ಇವರದು ಎಂದು ಮುಖ್ಯಮಂತ್ರಿ ಸ್ಮರಿಸಿದ್ದಾರೆ.

ಅವರ ನಿಧನದಿಂದ ಒಬ್ಬ ಸರಳ, ಸಜ್ಜನ ಹಿರಿಯ ರಾಜಕಾರಣಿಯನ್ನು ಕಳೆದು ಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಅಂಗಾರ ಸಂತಾಪ: ಕರಾವಳಿ ಕರ್ನಾಟಕದ ರಾಜಕೀಯ ಭೀಷ್ಮರೆನಿಸಿದ್ದ ಎ.ಜಿ.ಕೊಡ್ಗಿ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸಂತಾಪ ವ್ಯಕ್ತಪಡಿಸಿದ್ದಾರೆ.ಕೊಡ್ಗಿ ಕ್ರಾಂತಿಕಾರಿ ಕೃಷಿಕರಾಗಿದ್ದರು. ಅವರ ನೇತೃತ್ವದಲ್ಲಿ ಅಮಾಸೆಬೈಲು ಕರ್ನಾಟಕದ ಮೊದಲ ಸೌರಶಕ್ತಿ ಚಾಲಿತ ಗ್ರಾಮಪಂಚಾಯತಿ ಯಾಗಿದೆ.ಕೊಡ್ಗಿ ಅವರು ಸಮಾಜ ಸೇವೆ ಹಾಗೂ ಜನಪರ ಕಾಳಜಿಯುಳ್ಳ ಆದರ್ಶ ವ್ಯಕ್ತಿಯಾಗಿದ್ದರು ಎಂದವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. 

ಪೇಜಾವರ ಶ್ರೀ ಸಂತಾಪ: ಎ.ಜಿ.ಕೊಡ್ಗಿ ಅವರ ನಿಧನಕ್ಕೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರ ಸಂತಾಪ ವ್ಯಕತಿಪಡಿಸಿದ್ದಾರೆ. ಹಿರಿಯ ಕೃಷಿ ಸಾಧಕರೂ, ಮಾಜಿ ಶಾಸಕರೂ ಆದ ಎ.ಜಿ.ಕೊಡ್ಗಿ ಅವರ ನಿಧನದ ವಾರ್ತೆ ತಿಳಿದು ತೀವ್ರ ವಿಷಾಧವಾಗಿದೆ. ಕೃಷಿಯಿಂದ ಅಗಾಧ ಸಾಧನೆ ಮಾಡಲು ಸಾಧ್ಯವಿದೆ ಎಂಬುದಕ್ಕೆ ಎ.ಜಿ.ಕೊಡ್ಗಿ ನಿದರ್ಶನವಾಗಿದ್ದು ಕೃಷಿ ಋಷಿಯೇ ಆಗಿದ್ದರು ಗ್ರಾಮ ಸ್ವರಾಜ್ಯದ ಬಗ್ಗೆ ಅವರಿಗಿದ್ದ ಅಪರಿಮಿತ ಜ್ಞಾನ ಮತುತಿ ಅಮಾಸೆಬೈಲು ಗ್ರಾಮದ ಏಳಿಗೆಗಾಗಿ ಅವರು ಕೈಗೊಂಡ ಕಾರ್ಯಕ್ರಮಗಳು ಮಾದರಿ ಎನಿಸಿದ್ದವು ಎಂದವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಕೊಡ್ಗಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮುಖಂಡರಾದ ಕೆ.ಉದಯಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯಕುಮಾರ್ ಸೊರಕೆ, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Koo App
ಕರ್ನಾಟಕ ಕರಾವಳಿ ಭಾಗದ ನಮ್ಮ ಪಕ್ಷದ ಹಿರಿಯ ನಾಯಕರು, ಮಾಜಿ ಶಾಸಕರು, ರಾಜ್ಯ ಮೂರನೇಯ ಹಣಕಾಸು ಆಯೋಗದ ಮಾಜಿ ಅಧ್ಯಕ್ಷರಾದ ಶ್ರೀ ಎ.ಜಿ. ಕೊಡ್ಗಿ ಅವರು ನಿಧನರಾದ ಸುದ್ದಿ ತಿಳಿದು ತುಂಬಾ ದುಃಖಿತನಾಗಿದ್ದೇನೆ‌. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಿ, ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ‌. ಓಂ ಶಾಂತಿಃ - Basavaraj Bommai (@bsbommai) 13 June 2022

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News