ದಿಲ್ಲಿ ಪೊಲೀಸರ ಎಫ್‌ಐಆರ್‌ನಲ್ಲಿ ಪತ್ರಕರ್ತೆ ಸಬಾ ನಕ್ವಿ ಹೆಸರು:ದಿಲ್ಲಿ ಪತ್ರಕರ್ತರ ಒಕ್ಕೂಟ ಖಂಡನೆ

Update: 2022-06-13 16:25 GMT
PHOTO COURTESY: TWITTER/@_sabanaqvi

ಹೊಸದಿಲ್ಲಿ,ಜೂ.13: ಪ್ರವಾದಿ ಮುಹಮ್ಮದ್‌ರ ಕುರಿತು ಬಿಜೆಪಿ ನಾಯಕಿ ನೂಪುರ್ ಶರ್ಮಾ ನಿಂದನಾತ್ಮಕ ಹೇಳಿಕೆಗಳ ಬಳಿಕ ದಿಲ್ಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳಲ್ಲಿ ಪತ್ರಕರ್ತೆ ಸಬಾ ನಕ್ವಿ ಅವರನ್ನು ಹೆಸರಿಸಿರುವುದನ್ನು ದಿಲ್ಲಿ ಪತ್ರಕರ್ತರ ಒಕ್ಕೂಟ (ಡಿಯುಜೆ)ವು ಸೋಮವಾರ ಹೇಳಿಕೆಯೊಂದರಲ್ಲಿ ಖಂಡಿಸಿದೆ.

‘ಜನರನ್ನು ಪ್ರಚೋದಿಸುವ’ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ನಕ್ವಿ ಅವರದ್ದೂ ಸೇರಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಭೂತಪೂರ್ವ ರಾಜತಾಂತ್ರಿಕ ಹಿನ್ನಡೆಯ ಬಳಿಕ ಬಿಜೆಪಿ ನೂಪುರ್ ಶರ್ಮಾರನ್ನು ವಕ್ತಾರ ಹುದ್ದೆಯಿಂದ ಅಮಾನತುಗೊಳಿಸಿದ ಮತ್ತು ತನ್ನ ದಿಲ್ಲಿ ಮಾಧ್ಯಮ ಘಟಕದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್‌ರನ್ನು ಪಕ್ಷದಿಂದ ಉಚ್ಚಾಟಿಸಿದ ಮೂರು ದಿನಗಳ ನಂತರ ಜ.8ರಂದು ದಿಲ್ಲಿ ಪೊಲೀಸರು ದಾಖಲಿಸಿರುವ ಎರಡು ಎಫ್‌ಐಆರ್‌ಗಳ ಪೈಕಿ ಒಂದರಲ್ಲಿ ಹೆಸರಿಸಲಾಗಿರುವ 31ಕ್ಕೂ ಅಧಿಕ ವ್ಯಕ್ತಿಗಳಲ್ಲಿ ನಕ್ವಿ ಕೂಡ ಸೇರಿದ್ದಾರೆ.

ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಟ್ವೀಟಿಸಿರುವ ಪೊಲೀಸರು, ‘ಸಾಮಾಜಿಕ ನೆಮ್ಮದಿಯನ್ನು ಕೆಡಿಸಲು ಪ್ರಯತ್ನಿಸುತ್ತಿರುವ ಮತ್ತು ಜನರನ್ನು ಪ್ರಚೋದಿಸುತ್ತಿರುವ ’ವ್ಯಕ್ತಿಗಳಿಂದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಉಲ್ಲೇಖಿಸಿದ್ದಾರೆ.

ಎಫ್‌ಐಆರ್ ಬೆಳಕಿಗೆ ಬಂದ ಬಳಿಕ ಸುದ್ದಿ ಜಾಲತಾಣ ದಿ ವೈರ್‌ಗೆ ನೀಡಿದ್ದ ಹೇಳಿಕೆಯಲ್ಲಿ ನಕ್ವಿ,‘ಐಪಿಸಿಯ ವಿವಿಧ ಕಲಮ್‌ಗಳಡಿ ದಿಲ್ಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ನನ್ನ ಹೆಸರನ್ನು ಸೇರಿಸಲಾಗಿದೆ ಎನ್ನುವುದನ್ನು ತಿಳಿದು ನನಗೆ ಆಘಾತವಾಗಿದೆ. ನಾನೋರ್ವ ಪತ್ರಕರ್ತೆಯಾಗಿದ್ದೇನೆ ಮತ್ತು ಅಧಿಕಾರಕ್ಕೆ ಸತ್ಯವನ್ನು ತಿಳಿಸುವ ಹೊಣೆಯನ್ನು ಹೊಂದಿದ್ದೇನೆ. ವಾಟ್ಸ್‌ಆ್ಯಪ್ ಫಾರ್ವರ್ಡ್ ಒಂದನ್ನು ನಾನು ಶೇರ್ ಮಾಡಿಕೊಂಡಿದ್ದಕ್ಕಾಗಿ ಎಫ್‌ಐಆರ್‌ನ್ನು ದಾಖಲಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳು ಮತ್ತು ಸುದ್ದಿ ಜಾಲತಾಣಗಳು ಸೂಚಿಸುತ್ತಿವೆ,ಆದರೆ ಕೆಲವೇ ಗಂಟೆಗಳ ಬಳಿಕ ವಾಟ್ಸ್‌ಆ್ಯಪ್ ಫಾರ್ವರ್ಡ್‌ನ್ನು ನಾನು ಅಳಿಸಿದ್ದೆ. ಇದೇ ಚಿತ್ರವನ್ನು ಇತರ ಹಲವರೂ ಶೇರ್ ಮಾಡಿಕೊಂಡಿದ್ದರು,ಆದಾಗ್ಯೂ ಎಫ್‌ಐಆರ್‌ನಲ್ಲಿ ನನ್ನನ್ನು ಆಯ್ದು ಗುರಿಯಾಗಿಸಿಕೊಳ್ಳಲಾಗಿದೆ ’ ಎಂದು ತಿಳಿಸಿದ್ದರು.

‘ನಾನು ಭಾರತದ ಜಾತ್ಯತೀತ ಮತ್ತು ಉದಾರವಾದಿ ನೀತಿಗಳಿಗೆ ಬದ್ಧಳಾಗಿದ್ದೇನೆ ಹಾಗೂ ಯಾವುದೇ ಮೂಲಭೂತವಾದ,ದ್ವೇಷ ಭಾಷಣ ಮತ್ತು ಅನ್ಯಾಯಕ್ಕೆ ವಿರುದ್ಧವಾಗಿದ್ದೇನೆ. ಪ್ರಸ್ತುತ ನಾನು ಭಾರತದಿಂದ ಹೊರಗಿದ್ದೇನೆ ಮತ್ತು ಜುಲೈ ಮಧ್ಯಭಾಗದಲ್ಲಿ ಮರಳಿದ ಬಳಿಕ ಸೂಕ್ತ ಪ್ರಕ್ರಿಯೆಯನ್ನು ಪಾಲಿಸುತ್ತೇನೆ ’ಎಂದೂ ಅವರು ತಿಳಿಸಿದ್ದರು.

ಡಿಯುಜೆ ಅಧ್ಯಕ್ಷ ಎಸ್.ಕೆ.ಪಾಂಡೆ ಮತ್ತು ಪ್ರಧಾನ ಕಾರ್ಯದರ್ಶಿ ಸುಜಾತಾ ಮಧೋಕ್ ಅವರ ಸಹಿಗಳನ್ನು ಹೊಂದಿರುವ ಹೇಳಿಕೆಯು,ನಕ್ವಿಯವರನ್ನು ‘ಟಿವಿ ಚರ್ಚೆಗಳಲ್ಲಿ ಮತ್ತು ತನ್ನ ಬರಹಗಳಲ್ಲಿ ವ್ಯಕ್ತಪಡಿಸಿರುವ ಪ್ರಬುದ್ಧ ಮತ್ತು ಸಮತೋಲಿತ ಅಭಿಪ್ರಾಯಗಳಿಗಾಗಿ ಹೆಸರುವಾಸಿಯಾಗಿರುವ ಹಿರಿಯ ಪತ್ರಕರ್ತೆ ’ಎಂದು ಬಣ್ಣಿಸಿದೆ.

ಅದರಂತೆ,ಮೆಮೆಯೊಂದನ್ನು ಮರು ಟ್ವೀಟ್ ಮಾಡಿದ್ದಕ್ಕಾಗಿ ನಕ್ವಿಯವರ ವಿರುದ್ಧ ಐಪಿಸಿಯ 153 (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು),295 (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಉದ್ದೇಶಪೂರ್ವಕ ಕೃತ್ಯಗಳು) ಮತ್ತು 505 (ಸರಕಾರ ಅಥವಾ ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧವೆಸಗುವಂತೆ ಪ್ರೇರೇಪಿಸುವುದು) ಕಲಮ್‌ಗಳಡಿ ನಕ್ವಿಯವರ ವಿರುದ್ಧ ಆರೋಪಗಳನ್ನು ಹೊರಿಸಿರುವುದನ್ನು ಡಿಯುಜೆ ಪ್ರಶ್ನಿಸಿದೆ.

ಯಾವ ನಿರ್ದಿಷ್ಟ ಪೋಸ್ಟ್‌ಗಾಗಿ ನಕ್ವಿಯವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಉಲ್ಲೇಖಿಸಿಲ್ಲವಾದರೂ, ಅಸಂಖ್ಯಾತ ಗುಂಪುಗಳಲ್ಲಿ ಹಲವಾರು ಜನರು ಮರು ಟ್ವೀಟಿಸಿದ್ದ ಮತ್ತು ಹಂಚಿಕೊಂಡಿದ್ದ ಟ್ವೀಟ್ ಪೊಲೀಸರ ಕ್ರಮಕ್ಕೆ ಕಾರಣ ಎಂದು ಡಿಯುಜೆ ಹೇಳಿಕೆಯಲ್ಲಿ ತಿಳಿಸಿದೆ.

ಎಫ್‌ಐಆರ್‌ನಲ್ಲಿ ಪೂಜಾ ಶಕುನ್ ಪಾಂಡೆ ಮತ್ತು ಮೌಲಾನಾ ಮುಫ್ತಿ ನದೀಮ್‌ರಂತಹ ವ್ಯಕ್ತಿಗಳ ಜೊತೆ ನಕ್ವಿಯವರನ್ನು ಹೆಸರಿಸಿರುವುದನ್ನು ಡಿಯುಜೆ ‘ಅವಿವರಣೀಯ’ಎಂದು ಬಣ್ಣಿಸಿದೆ.

ಅನ್ನಪೂರ್ಣಾ ಮಾ ಎಂದೂ ಕರೆಯಲ್ಪಡುವ ಪಾಂಡೆ ಹಿಂದು ಮಹಾಸಭಾದ ಪದಾಧಿಕಾರಿಯಾಗಿದ್ದು,ಮಹಾತ್ಮಾ ಗಾಂಧಿಯವರ ಚಿತ್ರಕ್ಕೆ ಗುಂಡಿಕ್ಕುವ ಭಂಗಿಯಲ್ಲಿ ಒಮ್ಮೆ ಕಾಣಿಸಿಕೊಂಡಿದ್ದರು ಎಂದು ಡಿಯುಜೆ ಬೆಟ್ಟು ಮಾಡಿದೆ. ಮುಸ್ಲಿಮರ ನರಮೇಧಕ್ಕೆ ಬಹಿರಂಗ ಕರೆಗಳನ್ನು ನೀಡಲಾಗಿದ್ದ ಹರಿದ್ವಾರ ಧರ್ಮಸಂಸದ್‌ನಲ್ಲಿ ಭಾಷಣಕಾರರೂ ಆಗಿದ್ದರು. ಟಿವಿ ಸುದ್ದಿವಾಹಿನಿಯೊಂದರಲ್ಲಿ ಮುಸ್ಲಿಮರ ಶುಕ್ರವಾರದ ಪ್ರಾರ್ಥನೆಗಳನ್ನು ಹಿಂದು ವಿರೋಧಿ ಸಭೆ ಎಂದು ಇತ್ತೀಚಿಗೆ ಬಣ್ಣಿಸಿದ್ದಕ್ಕಾಗಿ ಪಾಂಡೆ ವಿರುದ್ಧ ಉ.ಪ್ರದೇಶ ಪೊಲೀಸರು ಇತ್ತೀಚಿಗೆ ಇನ್ನೊಂದು ಎಫ್‌ಐಆರ್ ದಾಖಲಿಸಿದ್ದರು. ನದೀಮ್ ಇತ್ತೀಚಿಗೆ ವೈರಲ್ ಆಗಿದ್ದ ವೀಡಿಯೊವೊಂದರಲ್ಲಿ ಪ್ರವಾದಿಯವರ ವಿರುದ್ಧ ಮಾತನಾಡುವವರ ಕೈಗಳನ್ನು ತುಂಡರಿಸುವುದಾಗಿ ಬೆದರಿಕೆ ಹಾಕಿದ್ದರು.

ನೂಪುರ ಶರ್ಮಾ,ನವೀನ ಜಿಂದಾಲ್,ಯತಿ ನರಸಿಂಹಾನಂದ, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರೂ ಎಫ್‌ಐಆರ್‌ನಲ್ಲಿ ಹೆಸರಿಸಲ್ಪಟ್ಟವರಲ್ಲಿ ಸೇರಿದ್ದಾರೆ.

ರಿಟ್ವೀಟ್‌ಗಾಗಿ ಇದು ನಕ್ವಿ ವಿರುದ್ಧ ದಾಖಲಾಗಿರುವ ಎರಡನೇ ಎಫ್‌ಐಆರ್ ಎಂದು ಡಿಯುಜೆ ಹೇಳಿಕೆಯಲ್ಲಿ ಬೆಟ್ಟು ಮಾಡಿದೆ.

ಪ್ರತಿಷ್ಠಿತ ಮುಸ್ಲಿಂ ಮಹಿಳಾ ಪತ್ರಕರ್ತೆಯಾಗಿರುವ ನಕ್ವಿ ಪದೇಪದೇ ಟ್ರೋಲ್‌ಗಳು ಮತ್ತು ಕಿಡಿಗೇಡಿಗಳ ಕೋಪವನ್ನು ಎದುರಿಸುತ್ತಿದ್ದಾರೆ ಎಂದು ಹೇಳಿರುವ ಡಿಯುಜೆ,ನಕ್ವಿ ವಿರುದ್ಧದ ಆರೋಪಗಳನ್ನು ಮತ್ತು ಪೊಲೀಸ್ ಕ್ರಮವನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News