ಸಲಿಂಗಕಾಮದ ವಿರುದ್ಧ ಸೌದಿ ಕ್ರಮ: ಕಾಮನಬಿಲ್ಲಿನ ಬಣ್ಣದ ಆಟಿಕೆಗಳ ಜಪ್ತಿ
ರಿಯಾದ್, ಜೂ.16: ಸಲಿಂಗ ಕಾಮದ ವಿರುದ್ಧ ಬಿಗಿನಿಲುವು ತಳೆದಿರುವ ಸೌದಿ ಅರೆಬಿಯಾದ ಅಧಿಕಾರಿಗಳು, ಕಾಮನಬಿಲ್ಲಿನ ಬಣ್ಣದಲ್ಲಿರುವ ಮಕ್ಕಳ ಆಟಿಕೆ ಹಾಗೂ ಬಟ್ಟೆಗಳನ್ನು ಅಂಗಡಿಗಳಿಂದ ಜಫ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಇಂತಹ ವಸ್ತುಗಳು ಸಲಿಂಗಕಾಮಕ್ಕೆ ಉತ್ತೇಜನ ನೀಡುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೌದಿ ಅರೆಬಿಯಾದ ವಾಣಿಜ್ಯ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. ವಶಪಡಿಸಿಕೊಂಡಿರುವ ವಸ್ತುಗಳು ಇಸ್ಲಾಮಿಕ್ ನಂಬಿಕೆ ಮತ್ತು ಸಾರ್ವಜನಿಕ ನೈತಿಕತೆಗೆ ವಿರುದ್ಧವಾಗಿದೆ ಮತ್ತು ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡು ಸಲಿಂಗಕಾಮಿ ಬಣ್ಣಗಳನ್ನು ಉತ್ತೇಜಿಸುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜಧಾನಿ ರಿಯಾದ್ ನ ಅಂಗಡಿಯಿಂದ ಅಧಿಕಾರಿಗಳು ಆಟಿಕೆ, ತಲೆಕೂದಲ ಕ್ಲಿಪ್‌ಗಳು, ಟಿ-ಶರ್ಟ್‌ಗಳು, ಪೆನ್ಸಿಲ್ ಬಾಕ್ಸ್‌ಗಳನ್ನು ತೆರವುಗೊಳಿಸುತ್ತಿರುವ ವೀಡಿಯೊವನ್ನು ಸರಕಾರಿ ಸ್ವಾಮ್ಯದ ಟಿವಿ ಚಾನೆಲ್ ಪ್ರಸಾರ ಮಾಡಿದೆ. ವಿಚಲನ(ವಿಷಯಾಂತರಕ್ಕೆ) ಪ್ರೇರಣೆ ನೀಡುವ ಮತ್ತು ಸಾಮಾನ್ಯಜ್ಞಾನಕ್ಕೆ ವಿರುದ್ಧವಾದ ಚಿಹ್ನೆ ಹಾಗೂ ಸಂಕೇತವನ್ನು ಒಳಗೊಂಡಿರುವ ಉತ್ಪನ್ನಗಳನ್ನು ಅಧಿಕಾರಿಗಳು ಜಫ್ತಿ ಮಾಡಿಕೊಳ್ಳುತ್ತಿದ್ದಾರೆ. ಇಂತಹ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳಿಗೆ ದಂಡ ವಿಧಿಸಲಾಗುವುದು ಎಂದು ಸಚಿವಾಲಯ ಟ್ವೀಟ್ ಮಾಡಿದೆ.
ಸೌದಿ ಅರೆಬಿಯಾದಲ್ಲಿ ಸಲಿಂಗಕಾಮಕ್ಕೆ ಮರಣದಂಡನೆ ಅಥವಾ ಛಡಿ ಏಟಿನ ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ ಪುರುಷರು ಮಹಿಳೆಯರ ಬಟ್ಟೆ ಧರಿಸುವುದು ಅಥವಾ ಮಹಿಳೆಯರಂತೆ ವರ್ತಿಸುವುದನ್ನೂ ನಿಷೇಧಿಸಲಾಗಿದೆ.