ʼಮಣಿಪಾಲ ಇನ್‌ʼನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನ

Update: 2022-06-20 07:39 GMT

ಉಡುಪಿ: ಮಣಿಪಾಲ ಇನ್ ಹೊಟೇಲ್ ಮತ್ತು ಕನ್ವೆನ್ಷನ್ ಸೆಂಟರ್ ವತಿಯಿಂದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ರವಿವಾರ ಹೊಟೇಲಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಉಡುಪಿ ಜಿಲ್ಲೆಯು ಶಿಕ್ಷಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲು ಇಲ್ಲಿನ ಶಿಕ್ಷಕರ ಬದ್ಧತೆಯೇ ಕಾರಣ. ಶಿಕ್ಷಕ ವೃತ್ತಿಗಿಂತ ಸೇವೆ ಎಂಬ ಭಾವನೆಯಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣದಲ್ಲಿ ಖಾಸಗಿ ಶಾಲೆಗಿಂತ ಮುಂದುವರಿಯುವಂತಾಗಿದೆ ಎಂದು ಹೇಳಿದರು.

ಮಂಗಳೂರು ಶಾಸಕ ಯು.ಟಿ.ಖಾದರ್ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳು ಕೇವಲ ತಮ್ಮ ತಂದೆತಾಯಿರ ಆಸ್ತಿಯಾಗಿರದೆ ದೇಶದ ಸಂಪತ್ತು ಆಗಬೇಕು. ಆ ನಿಟ್ಟಿನಲ್ಲಿ ಉನ್ನತ ಸ್ಥಾನಕ್ಕೆ ಹೋಗಿ ಜನರ ಪ್ರೀತಿಯನ್ನು ಗಳಿಸಿಕೊಳ್ಳಬೇಕು. ಎಲ್ಲ ಧರ್ಮಗಳ ಸಾರ ಒಂದೇ ಆಗಿದ್ದು, ಪ್ರೀತಿ, ವಿಶ್ವಾಸ, ಸಹೋದರತ್ವವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದು ತಿಳಿಸಿದರು.

ಈ ಸಂದರ್ಭ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಾದ ಪುನೀತ್ ನಾಯಕ್, ಆಯೇಷಾ ಅಜ್ವಾ, ನೇಹಾ ನೆಲರಿಯ ಕೋತ ಮತ್ತು ನೇತ್ರ ವಿಜ್ಞಾನ ಕ್ಷೇತ್ರದ ಸಾಧಕ ಡಾ.ರೋಹಿತ್ ಶೆಟ್ಟಿ ಹಾಗೂ ಮಣಿಪಾಲ ಕೆಎಂಸಿಯಲ್ಲಿ 2019ರ ಚಿನ್ನದ ಪದಕ ವಿಜೇತ ಡಾ. ಸೂಫಿಯನ್ ಇಬ್ರಾಹಿಂ ಅವರನ್ನು ಸನ್ಮಾನಿಸಲಾಯಿತು.

ಅದೇ ರೀತಿ ಮಣಿಪಾಲ ಕೆಎಂಸಿಯ ಡೀನ್ ಡಾ.ಶರತ್ ರಾವ್, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಹೊಟೇಲಿನ ಜನರಲ್ ಮೆನೇಜರ್ ಡಾ.ರಾಮದಾಸ್ ಪ್ರಭು, ವಿದ್ಯಾರ್ಥಿನಿ ಪ್ರಜ್ಞಾ ಪ್ರಶಾಂತ್ ಅವರನ್ನು ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿದರು. ಮಣಿಪಾಲ ಇನ್ ಇದರ ಆಡಳಿತ ನಿರ್ದೇಶಕ ಇಬ್ರಾಹಿಂ ಮೌಲಾನ ಸ್ವಾಗತಿಸಿದರು. ಮಾರುಕಟ್ಟೆ ವಿಭಾಗದ ಇಲ್ಯಾಸ್ ಕಾಪು ವಂದಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News