ದ್ವಿತೀಯ ಪಿಯುಸಿ ಇತಿಹಾಸ: ಪ್ರಾಚೀನ ಯುಗದ ವೈದಿಕ ಸಂಸ್ಕೃತಿ ಅಧ್ಯಾಯ ಸಂಪೂರ್ಣ ಪರಿಷ್ಕರಣೆಗೆ ಚಕ್ರತೀರ್ಥ ಸಮಿತಿ ವರದಿ
ಬೆಂಗಳೂರು, ಜೂ.22: ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದ ಅಧ್ಯಾಯ 4ರಲ್ಲಿನ ಪ್ರಾಚೀನ ಯುಗದ ವೈದಿಕ ಸಂಸ್ಕೃತಿ ಅಧ್ಯಾಯವು ಪೂರ್ವಗ್ರಹ, ತಪ್ಪುಕಲ್ಪನೆ, ಸಮಾಜದ ಬಗ್ಗೆ ತಪ್ಪು ಮಾಹಿತಿ, ನಿರ್ದಿಷ್ಟ ಸಮುದಾಯಗಳ ಮೇಲೆ ದ್ವೇಷ ಭಾವನೆಯನ್ನು ವಿದ್ಯಾರ್ಥಿಗಳಲ್ಲಿ ತುಂಬಲು ಸಹಕಾರಿಯಾಗುವಂತಿರುವ ಕಾರಣ ಈ ಅಧ್ಯಾಯವನ್ನು ಸಂಪೂರ್ಣ ಪರಿಷ್ಕರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಪ್ರಾಥಮಿಕ, ಪ್ರೌಢ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸರಕಾರಕ್ಕೆ ವರದಿ ನೀಡಿದ್ದರು.
ದ್ವಿತೀಯ ಪಿಯು ಪಠ್ಯ ಪರಿಷ್ಕರಣೆಯೂ ಇಲ್ಲ ಮತ್ತು ಚಕ್ರತೀರ್ಥ ಸಮಿತಿಗೆ ನೀಡಿದ್ದ ಜವಾಬ್ದಾರಿಯನ್ನೂ ಹಿಂಪಡೆದಿದೆ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿಕೆ ನೀಡಿದ ಬೆನ್ನಲ್ಲೇ ಚಕ್ರತೀರ್ಥ ಸಮಿತಿಯು ಪರಿಷ್ಕರಿಸಲು ಉದ್ಧೇಶಿಸಿದ್ದ ಅಂಶಗಳು ಬಹಿರಂಗವಾಗಿದೆ. ಈ ವರದಿಯ ಪ್ರತಿಯು the-file.in ಗೆ ಲಭ್ಯವಾಗಿದೆ.
ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಗಾಯತ್ರಿದೇವಿ ಎ.ಎಚ್. ಅಧ್ಯಕ್ಷತೆಯ ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಯು ರಚಿಸಿದ್ದ ಭಾರತದ ಇತಿಹಾಸ (ಕರ್ನಾಟಕದ ಉಲ್ಲೇಖದೊಂದಿಗೆ)ದ ಅಧ್ಯಾಯಗಳ ಕುರಿತು ರೋಹಿತ್ ಚಕ್ರತೀರ್ಥ ಸಮಿತಿಯು ಹಲವು ಆಕ್ಷೇಪಗಳನ್ನು ವ್ಯಕ್ತಪಡಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಪ್ರಮುಖವಾಗಿ ದ್ರಾವಿಡರು ದಕ್ಷಿಣಕ್ಕೆ ವಲಸೆ ಹೋದರು, ಆರ್ಯರು (ಭಾರತದ) ಸ್ಥಳೀಯರಿಂದ ಪ್ರಬಲ ವಿರೋಧ ಎದುರಿಸಿದರು, ಹುಲ್ಲುಗಾವಲು ಹುಡುಕಿಕೊಂಡು ವಲಸೆ ಹೊರಟು ಭಾರತದ ಉಪಖಂಡವನ್ನು ಪ್ರವೇಶಿಸಿದರು, ಶುಭ್ರವರ್ಣದ ಸದೃಢ ಮೈಕಟ್ಟಿನವರಾಗಿದ್ದರು, ನಾಲ್ಕು ವೇದಗಳನ್ನು ರಚಿಸಿದರು, ಸಾಮ್ರಾಜ್ಯಶಾಹಿತ್ವದ ಪರಿಣಾಮವಾಗಿ ಅರಸರಲ್ಲಿ ಶ್ರೇಣಿಕ್ರಮ ಅಸ್ತಿತ್ವಕ್ಕೆ ಬಂತು, ಮಹಿಳೆಯರ ಸ್ಥಾನ ಕ್ಷೀಣಿಸಿತು, ಉನ್ನತ ವರ್ಗದ ಮಹಿಳೆಯರು ಮಾತ್ರ ಉಚ್ಛ ಶಿಕ್ಷಣ ಪಡೆಯುತ್ತಿದ್ದರು ಎಂಬ ಸಾಲುಗಳ ಕುರಿತು ಪಠ್ಯಪುಸ್ತಕ ರಚನೆಕಾರರು ಸೂಕ್ತ ಆಧಾರಗಳನ್ನು ಒದಗಿಸಿದ್ದಾರೆಯೇ, ಈ ಆಧಾರಗಳು ವೈಜ್ಞಾನಿಕವಾಗಿ ಸಾಧುವೇ, ಅಥವಾ ಇವೆಲ್ಲ ಕೇವಲ ಊಹಾಪೋಹ ಹೇಳಿಕೆಗಳೇ ಎಂದು ವರದಿಯಲ್ಲಿ ಪ್ರಶ್ನಿಸಿದ್ದಾರೆ.
‘ಇಡೀ ಅಧ್ಯಾಯವು ಅಸತ್ಯ, ಅರ್ಧಸತ್ಯ, ಉತ್ಪ್ರೇಕ್ಷೆಗಳ ಹಲವು ವಾಕ್ಯಗಳನ್ನು ತುಂಬಿಕೊಂಡಿದ್ದು ಒಟ್ಟಾರೆಯಾಗಿ ವಿದ್ಯಾರ್ಥಿಗಳಿಗೆ ತಪ್ಪುಮಾಹಿತಿ ರವಾನಿಸುವಂತಿದೆ. ಅಲ್ಲದೆ ಪಠ್ಯದಲ್ಲಿ ವಿರೋಧಾಭಾಸದ ಹೇಳಿಕೆಗಳು ಬಹಳಷ್ಟು ಕಂಡು ಬರುತ್ತವೆ. ಆರ್ಯರನ್ನು ಅಲೆಮಾರಿ ದನಗಾಹಿಗಳು (ಪುಟ 27) ಎಂದು ಹೇಳಿ ಪುಟ 28ರಲ್ಲಿ ಆರ್ಯ ಎಂದರೆ ಕೃಷಿ ಅವಲಂಬಿತ ವ್ಯಕ್ತಿ ಎಂದು ಹೇಳಲಾಗಿದೆ. ಇದು ವಿದ್ಯಾರ್ಥಿಗಳನ್ನು ಉದ್ದೇಶಪೂರ್ವ ಗೊಂದಲದಲ್ಲಿ ಕೆಡುವ ಪ್ರಯತ್ನ. ಆರ್ಯ ಎಂಬ ಶಬ್ದಕ್ಕೆ ಕೃಷಿ ಅವಲಂಬಿತ ವ್ಯಕ್ತಿ ಎಂಬ ಅರ್ಥವು ಯಾವ ಸಾಹಿತ್ಯದಲ್ಲಿ ಸಿಗುತ್ತದೆ ಎಂದು ಪಠ್ಯಪುಸ್ತಕ ರಚನಾಕಾರರೇ ಹೇಳಬೇಕು ಎಂದು ಹೇಳಿರುವುದು ವರದಿಯಿಂದ ಗೊತ್ತಾಗಿದೆ.
ಈ ಅಧ್ಯಾಯದಲ್ಲಿ ಸ್ತ್ರೀಯರ ಬಗ್ಗೆ, ಪುರೋಹಿತರ ಬಗ್ಗೆ ಆಕ್ಷೇಪಾರ್ಹ ಭಾಗಗಳಿವೆ ಎಂದು ಪ್ರಸ್ತಾಪಿಸಿರುವ ಚಕ್ರತೀರ್ಥ ಸಮಿತಿಯು ಯಜ್ಞ, ಹೋಮ ಇತ್ಯಾದಿಗಳ ಬಗ್ಗೆ ಕೀಳು ಅಭಿಪ್ರಾಯವು ಬರುವಂತೆ ಅಧ್ಯಾಯವನ್ನು ಬರೆಯಲಾಗಿದೆ. ಸಂಸ್ಕೃತ ಶಬ್ದಗಳನ್ನು ಬಹಳಷ್ಟು ಕಡೆಗಳಲ್ಲಿ (ದಾಸ್ಯೂ ಪುಟ 27) ತಪ್ಪುತಪ್ಪಾಗಿ ಬರೆಯಲಾಗಿದೆ ಎಂದು ಹೇಳಿರುವುದು ವರದಿಯಿಂದ ತಿಳಿದು ಬಂದಿದೆ.
ವರ್ಣಗಳ ಬಗ್ಗೆ ತಪ್ಪು ಮಾಹಿತಿಯನ್ನು ತುಂಬಲಾಗಿದೆ.
ಮನುಷ್ಯನ ಜೀವನದ ನಾಲ್ಕು ಆಶ್ರಮಗಳನ್ನು, ಅವು ಸಾಮಾಜಿಕವಾಗಿ ಕಡ್ಢಾಯವಾಗಿ ಆಚರಿಸಬೇಕಾದ ನಾಲ್ಕು ಹಂತಗಳು ಎಂಬಂತೆ ಬರೆಯಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ರೋಹಿತ್ ಚಕ್ರತೀರ್ಥ ಒಟ್ಟಾರೆಯಾಗಿ ಈ ಅಧ್ಯಾಯವು ಪೂರ್ವಗ್ರಹಗಳಿಂದ ಬರೆಯಲ್ಪಟ್ಟಿದೆ. ತಪ್ಪು ಕಲ್ಪನೆ, ಸಮಾಜದ ಬಗ್ಗೆ ತಪ್ಪು ಮಾಹಿತಿ, ನಿರ್ದಿಷ್ಟ ಸಮುದಾಯಗಳ ಮೇಲೆ ದ್ವೇಷ ಭಾವನೆ ಮುಂತಾದವನ್ನು ವಿದ್ಯಾರ್ಥಿಗಳಲ್ಲಿ ತುಂಬಲು ಸಹಕಾರಿಯಾಗುವಂತಿದೆ. ಈ ಅಧ್ಯಾಯವನ್ನು ಸಂಪೂರ್ಣ ಪರಿಷ್ಕರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ವರದಿಯಲ್ಲಿ ಶಿಫಾರಸು ಮಾಡ
ಲಾಗಿದೆ.
ಪಠ್ಯಪುಸ್ತಕದ 4.1 ಅಧ್ಯಾಯದಲ್ಲೇನಿದೆ?
ಆರ್ಯರ ಮೂಲಸ್ಥಳದ ಬಗ್ಗೆ ಒಮ್ಮತಾಭಿಪ್ರಾಯವಿಲ್ಲ. ಆರ್ಯರು ಮೂಲತಃ ಮಧ್ಯ ಏಶ್ಯಾದ ಕ್ಯಾಸ್ಪಿಯನ್ ಸಮುದ್ರ ಪ್ರದೇಶದ ಹಳ್ಳಿಗಾಡಿನ ಅಲೆಮಾರಿ ದನಗಾಹಿಗಳಾಗಿದ್ದರೆಂದು ನಂಬಲಾಗಿದೆ. ಅವರು ಹುಲ್ಲುಗಾವಲು ಹುಡುಕಿಕೊಂಡು ವಲಸೆ ಹೊರಟು ಭಾರತದ ಉಪಖಂಡವನ್ನು ಪ್ರವೇಶಿಸಿದರು. ಇಲ್ಲಿನ ಸ್ಥಳೀಯರ ಪ್ರಬಲ ವಿರೋಧ ಎದುರಿಸಿದರು ಮತ್ತು ಅವರನ್ನು ದಾಸ್ಯೂಗಳೆಂದು ಕರೆದರು. ಆದಾಗ್ಯೂ ಅವರ ಪ್ರತಿರೋಧವನ್ನು ಎದುರಿಸಿ ಸಿಂಧೂನದಿಯ ತೀರದಲ್ಲಿ (ಸಪ್ತಸಿಂಧೂ ಪ್ರದೇಶ) ನೆಲೆಸಿದರು. ಉತ್ತರ ಭಾರತದ ಬಹುಭಾಗವನ್ನಾವರಿಸಿದ ಆರ್ಯಾವರ್ತವನ್ನು (ಆರ್ಯರ ನಾಡು) ಇವರು ಆಕ್ರಮಿಸಿಕೊಂಡಿದ್ದರಿಂದ ಸೋತ ದ್ರಾವಿಡರು ದಕ್ಷಿಣಕ್ಕೆ ವಲಸೆ ಹೋದರು.
ಆರ್ಯ ಅಂದರೆ ಕುಲೀನ ಅಥವಾ ಒಡೆಯ ಅಥವಾ ಕೃಷಿ ಅವಲಂಬಿತ ವ್ಯಕ್ತಿ ಎಂದರ್ಥ. ಆರ್ಯರು ದ್ರಾವಿಡರಿಗಿಂತ ಸಾಕಷ್ಟು ಭಿನ್ನರಾಗಿದ್ದರು. ಅವರು ಶುಭ್ರವರ್ಣದ ಸದೃಢ ಮೈಕಟ್ಟಿನವರಾಗಿದ್ದರು. ವೈದಿಕ ಸಂಸ್ಕೃತಿಯನ್ನು ಅಭ್ಯಸಿಸಲು ಆರ್ಯರ ಪವಿತ್ರ ಗ್ರಂಥಗಳಾದ ವೇದಗಳು ಪ್ರಮುಖ ಮೂಲಾಧಾರಗಳಾಗಿವೆ. ವೇದ ಎಂಬ ಶಬ್ದವನ್ನು ಸಂಸ್ಕೃತ ಮೂಲದ ವಿದ ಎಂಬುದರಿಂದ ಪಡೆಯಲಾಗಿದೆ. ‘ವಿದ ’ ಎಂದರೆ ಜ್ಞಾನ ಎಂದರ್ಥ. ಅವರು ನಾಲ್ಕು ವೇದಗಳನ್ನು ರಚಿಸಿದರು. ಅವುಗಳೆಂದರೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದ. ಋಗ್ವೇದವನ್ನು ಮೊದಲು ರಚಿಸಲಾಯಿತು. ಈ ಅವಧಿಯನ್ನು ಪೂರ್ವ ವೇದಕಾಲ ಅಥವಾ ಋಗ್ವೇದ ಕಾಲವೆಂದು ಕರೆಯಲಾಗಿದೆ. ಉಳಿದ ಮೂರು ವೇದಗಳಾದ ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದಗಳು ನಂತರ ರಚನೆಯಾದವು. ಇದನ್ನು ಉತ್ತರ ವೇದಗಳ ಕಾಲ ಎಂದು ಕರೆಯಲಾಗಿದೆ.
ಇದೇ ಅಧ್ಯಾಯದಲ್ಲಿ ಅರ್ಯರ ಮೂಲದ ಬಗ್ಗೆ ಸ್ವಾಮಿ ದಯಾನಂದ ಸರಸ್ವತಿ, ಬಾಲಗಂಗಾಧರ್ ತಿಲಕ್, ಮ್ಯಾಕ್ಸ್ ಮುಲ್ಲರ್, ಪ್ರೊಫೆಸರ್ ಮ್ಯಾಕ್‌ಡೊನೆಲ್, ಡಾ.ಎ . ಸಿ. ದಾಸ್, ರಾಜಬಲಿ ಪಾಂಡೆ, ಪಂಡಿತ್ ಲಕ್ಷೀಧರ ಶಾಸ್ತ್ರಿ, ಎಲ್.ಡಿ. ಕಾಲಾ ವಿದ್ವಾಂಸರು ನೀಡಿರುವ ಸ್ಥಳ ಮತ್ತು ವಿವರಗಳನ್ನು ಪಠ್ಯಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಹಿಂದಿನ ವರ್ಷಗಳಲ್ಲಿ ಭಾರತದ ಇತಿಹಾಸ ಹಾಗೂ ಕರ್ನಾಟಕದ ಇತಿಹಾಸವನ್ನು ಬೇರೆಬೇರೆಯಾಗಿ 180 ಘಂಟೆಗಳ ಅವಧಿಯಲ್ಲಿ ಅಭ್ಯಾಸ ಮಾಡಲಾಗುತ್ತಿತ್ತು.
ಅದರೆ ಇವರೆಡನ್ನೂ ಒಗ್ಗೂಡಿಸಿ 120 ಗಂಟೆಗಳ ಪರಿಮಿತಿಯೊಳಗೆ ತರಲಾಗಿತ್ತು. ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ.ಗಾಯತ್ರಿದೇವಿ ಎ.ಎಚ್ ಅಧ್ಯಕ್ಷತೆಯಲ್ಲಿ ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕ ಅಭಿವೃದ್ಧಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯಲ್ಲಿ 12 ಮಂದಿ ಸದಸ್ಯರಿದ್ದರು.
ಈ ಸಮಿತಿಯು ರಚಿಸಿದ್ದ ಪಠ್ಯಕ್ರಮವನ್ನು ಹೊನ್ನಾವರ ತಾಲೂಕಿನ ಕವಲಕ್ಕಿಯ ಸುಬ್ರಹ್ಮಣ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಜಿ. ಭಟ್, ಕಲಬುರುಗಿಯ ಸರಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್.ಬಿ. ಸಂಭಾ, ಬೆಳಗಾವಿಯ ಸರಕಾರಿ ಸರ್ದಾರ್ಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಿ.ಜಿ. ಮಠಪತಿ ನೇತೃತ್ವದ ಸಮಿತಿಯು ಪರಿಶೀಲಿಸಿತ್ತು.