ಮಹಾರಾಷ್ಟ್ರ ಬಿಕ್ಕಟ್ಟು: ಏಕನಾಥ್ ಶಿಂಧೆ ಸಹಿತ 46 ಭಿನ್ನಮತೀಯ ಶಾಸಕರು ಗುವಾಹಟಿಗೆ ಸ್ಥಳಾಂತರ

Update: 2022-06-22 06:25 GMT

ಗುವಹಾಟಿ: ಬಂಡಾಯವೆದ್ದಿರುವ ಶಿವಸೇನೆ ನಾಯಕ ಏಕನಾಥ್‌ ಶಿಂಧೆ ಇಂದು ಬೆಳಿಗ್ಗೆ  ಬಿಜೆಪಿ ಆಡಳಿತದ ಅಸ್ಸಾಂನ ರಾಜಧಾನಿ ಗುವಹಾಟಿಗೆ ಬಂದಿಳಿದಿದ್ದಾರೆ. ತಮಗೆ 40 ಶಿವಸೇನೆ ಶಾಸಕರು ಮತ್ತು 6 ಪಕ್ಷೇತರರ ಬೆಂಬಲವಿದೆ ಎಂದು ಅವರು ಹೇಳಿಕೊಂಡಿದ್ದಾರೆ. ತಾವು ಪಕ್ಷ ಬದಲಿಸುವ ಯೋಚನೆ ಹೊಂದಿಲ್ಲ ಎಂದು ಹೇಳಿದ ಅವರು ತಾವು ಶಿವಸೇನೆಯಿಂದ ಹೊರಗೆ ಬರುವುದಿಲ್ಲ ಬದಲು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ.

"ನಾವು ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆ ತೊರೆದಿಲ್ಲ ಹಾಗೂ ತೊರೆಯುವುದೂ ಇಲ್ಲ. ನಾವು ಹಿಂದುತ್ವದ ಮೇಲೆ ನಂಬಿಕೆಯಿರಿಸಿದ್ದೇವೆ" ಎಂದು ಅವರು ಹೇಳಿದರು.

ಶಿಂಧೆ ಮತ್ತು ಅವರ ಬೆಂಬಲಿಗ ಶಾಸಕರನ್ನು ಗುವಾಹಟಿ ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕರಾದ ಪಲ್ಲಬ್ ಲೋಚನ್ ದಾಸ್ ಮತ್ತು ಸುಶಾಂತ ಬೊರ್ಗೊಯೆನ್ ಶಿಂಧೆ ಬರಮಾಡಿಕೊಂಡರು. ಶಾಸಕರುಗಳಿಗೆ ಉಳಿಯಲು ಏರ್ಪಾಟು ಮಾಡಲಾಗಿದ್ದ ಪಂಚತಾರ ಹೋಟೆಲ್ ನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಕಾಣಿಸಿಕೊಂಡಿದ್ದಾರೆ.

ಅಸ್ಸಾಂಗೆ ತೆರಳುವ ಮುನ್ನ ಏಕನಾಥ್ ಶಿಂಧೆ ಮತ್ತವರ ಬೆಂಬಲಿಗ ಶಾಸಕರು ಬಿಜೆಪಿ ಆಡಳಿತದ ಗುಜರಾತ್‌ನ ಸೂರತ್‌ ನಗರದ ಹೋಟೆಲ್‌ ಒಂದರಲ್ಲಿದ್ದರು.

ಶಿಂಧೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ ಕೆಲವೇ ಕ್ಷಣಗಳಲ್ಲಿ ಶಾಸಕರನ್ನು ಅಸ್ಸಾಂಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಶಿವಸೇನೆಯು ಬಿಜೆಪಿ ಜತೆಗಿನ ಮೈತ್ರಿಯನ್ನು ಮರುಸ್ಥಾಪಿಸಿ ಮತ್ತೆ ಮಹಾರಾಷ್ಟ್ರವನ್ನು ಬಿಜೆಪಿ ಜೊತೆಗೆ ಆಳಬೇಕು ಎಂಬ ಬೇಡಿಕೆಯನ್ನು ಶಿಂಧೆ ಮುಂದಿಟ್ಟಿದ್ದಾರೆನ್ನಲಾಗಿದೆ.

ಮತ್ತೆ ಈ ಭಿನ್ನಮತೀಯ ಶಾಸಕರು ಶಿವಸೇನೆ ನಾಯಕತ್ವದೊಂದಿಗೆ ಸಂಪರ್ಕ ಸಾಧಿಸುವುದು ಬೇಡವೆಂದು ಅವರನ್ನು ವಿಶೇಷ ವಿಮಾನದಲ್ಲಿ ಅಸ್ಸಾಂಗೆ ಸಾಗಿಸಲಾಯಿತೆಂದು ತಿಳಿದು ಬಂದಿದೆ.

ಶಿವಸೇನೆ ತನ್ನ ಉಳಿದ ಶಾಸಕರನ್ನು ಮುಂಬೈಯ ವಿವಿಧ ಹೋಟೆಲ್‌ಗಳಲ್ಲಿರಿಸಿದೆ. ಶಿಂಧೆ ಅವರನ್ನು ಪಕ್ಷದ ಮುಖ್ಯ ಸಚೇತಕ ಹುದ್ದೆಯಿಂದ ಮಂಗಳವಾರ ಪಕ್ಷ ಕಿತ್ತೊಗೆದ ಬೆನ್ನಲ್ಲೇ ಅವರು ತಮ್ಮ ಟ್ವಿಟ್ಟರ್‌ ಬಯೋದಿಂದ ಶಿವಸೇನೆ ಹೆಸರು ತೆಗೆದುಹಾಕಿದ್ದಾರೆ. ಶಿವಸೇನೆ ಶಾಸಕರ ಬಂಡಾಯದ ಹಿಂದ ಬಿಜೆಪಿ ಕೈವಾಡವಿದೆ ಎಂದು ಶಿವಸೇನೆಯ  ನಾಯಕ ಸಂಜಯ್‌ ರಾವತ್‌ ಆರೋಪಿಸಿದ್ದು ಬಿಜೆಪಿ ಈಗಾಗಲೇ ಅದನ್ನು ನಿರಾಕರಿಸಿದೆ.

ಆದರೆ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಅವರು  ಪ್ರತಿಕ್ರಿಯಿಸಿ ಏಕನಾಥ್‌ ಶಿಂಧೆ ಅವರಿಂದ ಪ್ರಸ್ತಾವನೆ ಬಂದರೆ ಪರ್ಯಾಯ ಸರಕಾರ ರಚಿಸುವ ಕುರಿತು ಬಿಜೆಪಿ ಖಂಡಿತವಾಗಿ ಪರಿಗಣಿಸಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News