ಒಮಾನ್ : ಬ್ಯಾರಿ ವಿಂಗ್ ಅಸ್ತಿತ್ವಕ್ಕೆ

Update: 2022-06-25 10:49 GMT

ಮಸ್ಕತ್ : ಇಂಡಿಯನ್ ಸೋಶಿಯಲ್ ಕ್ಲಬ್ ಒಮಾನ್ ಇದರ ಅಧೀನದಲ್ಲಿ 28ನೇ ಭಾಷಾವಾರು ವಿಂಗ್ ಆಗಿ ಬ್ಯಾರಿ ವಿಂಗ್ ಅಧಿಕೃತವಾಗಿ ಅಸ್ತಿತ್ವಕ್ಕೆ ತರಲಾಯಿತು.

ಜೂನ್ 17ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಇಂಡಿಯನ್ ಸೋಶಿಯಲ್ ಕ್ಲಬ್ ಒಮಾನ್ ವೈಸ್ ಚೆಯರ್ ಮೆನ್ ಕರಂಜೀತ್ ಸಿಂಗ್ ಮಥಾರೂ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಇಂಡಿಯನ್ ಸೋಶಿಯಲ್ ಕ್ಲಬ್ ಅನಿವಾಸಿ ಭಾರತೀಯರ ವೇದಿಕೆ ಆಗಿದ್ದು ಈಗಾಗಲೇ 27 ವಿವಿಧ ಭಾಷಾವಾರು ವಿಂಗ್ ಗಳಿವೆ. ಈ ಸಾಲಿಗೆ 28ನೇ ವಿಂಗ್ ಆಗಿ ಬ್ಯಾರಿ ಭಾಷೆಯು ಸೇರ್ಪಡೆಗೊಂಡಿರುವುದು ಸಂಭ್ರಮದ ಕ್ಷಣ. ಒಮಾನ್ ನಲ್ಲಿ ಭಾರತೀಯ ಕಲೆ, ಸಂಸ್ಕೃತಿ, ಸಾಮಾಜಿಕ ಸೇವೆಯನ್ನು ಪ್ರತಿನಿಧಿಸುತ್ತಿರುವ ಇಂಡಿಯನ್ ಸೋಶಿಯಲ್ ಕ್ಲಬ್ ಗೆ ವಿವಿಧ ಭಾಷಾವಾರು ವಿಂಗ್ ಗಳು ರೆಕ್ಕೆಪುಕ್ಕ ಇದ್ದಂತೆ. ಈ ನಿಟ್ಟಿನಲ್ಲಿ ಬ್ಯಾರಿ ಭಾಷೆಯು ಕ್ಲಬ್ ಗೆ ಇನ್ನಷ್ಟು ಬಲ ನೀಡಲಿದೆ ಎಂಬ ನಿರೀಕ್ಷೆ ಇದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರಿ ವಿಂಗ್ ಕನ್ವೀನರ್ ಫಯಾಝ್ ಹಸೈನಾರ್ ಮಾತನಾಡಿ, ಬ್ಯಾರಿ ಸಮುದಾಯವು  ತನ್ನದೇ ಆದ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಆಹಾರ, ಉಡುಗೆ ತೊಡುಗೆ ಹೊಂದಿದ್ದು ಇಂದು  ದೇಶ ವಿದೇಶಗಳಲ್ಲಿ  ಬ್ಯಾರಿಗರು ತಮ್ಮ ಕೀರ್ತಿಯನ್ನು ಹಬ್ಬಿಸಿದ್ದಾರೆ. ಇದೀಗ ಒಮಾನ್ ನಲ್ಲೂ ಬ್ಯಾರಿ ವಿಂಗ್ ಅಸ್ತಿತ್ವಕ್ಕೆ ಬಂದಿದ್ದು, ವಿವಿಧತೆಯಲ್ಲಿ ಏಕತೆಯ ಭಾಗವಾಗಿ ಇಂಡಿಯನ್ ಸೋಶಿಯಲ್ ಕ್ಲಬ್ ಜೊತೆಗೂಡಿ ಕಾರ್ಯಾಚರಿಸಲಿದೆ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಇಂಡಿಯನ್ ಸೋಶಿಯಲ್ ಕ್ಲಬ್ ಬೋರ್ಡ್ ಪದಾಧಿಕಾರಿಗಳಾದ ಶಕೀಲ್, ಸುಹೇಲ್ ಖಾನ್, ಸಂಜಿತ್ ಕನೋಜಿಯ, ಬ್ಯಾರಿ ವಿಂಗ್ ಪದಾಧಿಕಾರಿ ಸಹಾಬ್ ಇಸ್ಮಾಯಿಲ್ ಹಾಗೂ ಹಿರಿಯ ಬ್ಯಾರಿ ಸಾಮಾಜಿಕ ಮುಖಂಡ ಮೋನಬ್ಬ ಅಬ್ದುರ್ರಹ್ಮಾನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಬ್ಯಾರಿ ಸಾಧಕರಾದ ಅಬ್ದುಲ್ ಹಮೀದ್ ಕನ್ನಂಗಾರ್, ಅಬ್ಬಾಸ್ ಪೊಕೇರ್ ಉಚ್ಚಿಲ, ಡಾ.ಅಸೈನಾ ಬ್ಯಾರಿ ಮತ್ತು   ಕವಿ ಅನ್ಸಾರ್ ಕಾಟಿಪಳ್ಳ ಇವರನ್ನು ಸನ್ಮಾನಿಸಲಾಯಿತು.

ಬಾರಿಕ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸಂಶೀರ್ ಸ್ವಾಗತಿಸಿದರು. ಸಹಾಬ್ ಇಸ್ಮಾಯಿಲ್ ಧನ್ಯವಾದ ಸಲ್ಲಿಸಿದರು. ಬ್ಯಾರಿ ವಿಂಗ್ ನ ಅಬ್ದುರ್ರಹ್ಮಾನ್ ನಿಟ್ಟೆ ಮತ್ತು ಅನ್ಸಾರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಸಮಾರಂಭದ ಅಂಗವಾಗಿ ಆಕರ್ಷಕ ದಫ್, ಮಕ್ಕಳ ಒಪ್ಪಣ ಪಾಟ್ ನೃತ್ಯ, ಬ್ಯಾರಿ ವಿನೋದ ರಸಪ್ರಶ್ನೆಗಳು ಹಾಗೂ ಬಗೆಬಗೆಯ ಬ್ಯಾರಿ ಖಾದ್ಯ ತಿಂಡಿಗಳ ಸ್ಟಾಲ್ ಗಳನ್ನು ಆಯೋಜಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ  ಅನಿವಾಸಿ ಬ್ಯಾರಿಗರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News