ತುರ್ತು ಪರಿಸ್ಥಿತಿ ಸರ್ವಕಾಲಿಕ ಅಮಾನವೀಯ ಕೃತ್ಯ: ಕುಯಿಲಾಡಿ

Update: 2022-06-25 12:48 GMT

ಉಡುಪಿ : ಅಂದು ದೇಶದಲ್ಲಿ ಯಾವುದೇ ಅರಾಜಕತೆ, ಯುದ್ಧ, ನೆರೆ ಹಾವಳಿ ಅಥವಾ ಬರ ಪರಿಸ್ಥಿತಿ ಇಲ್ಲದೆ ಇದ್ದರೂ ಇಂದಿರಾ ಗಾಂಧಿ ಕೇವಲ ರಾಜಕೀಯ ಲಾಭಕ್ಕಾಗಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿಕೆ ಮಾಡಿರುವುದು ಸರ್ವಕಾಲಿಕ ಅಮಾನವೀಯ ಕೃತ್ಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಟೀಕಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಶನಿವಾರ ನಡೆದ ‘ಕಾಂಗ್ರೆಸ್ ಸರ್ವಾಧಿಕಾರ ಹೇರಿದ ತುರ್ತುಪರಿಸ್ಥಿತಿಯ ಕರಾಳ ದಿನಕ್ಕೆ ೪೫ ವರ್ಷಗಳು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ೧೯೪೭ರಲ್ಲಿ ಹೋರಾಟಗಳ ಮೂಲಕ ಪಡೆದ ಸ್ವಾತಂತ್ರ್ಯವನ್ನು ೧೯೭೫ರಲ್ಲಿ ಇಂದಿರಾ ಗಾಂಧಿಯವರು ತಮ್ಮ ರಾಜಕೀಯ ದುರಾಸೆಗೋಸ್ಕರ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ದೇಶವಾಸಿಗಳ ಬದುಕನ್ನು ದುಸ್ತರಗೊಳಿಸಿ ವ್ಯಕ್ಯಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಿದರು ಎಂದು ದೂರಿದರು.

ತುರ್ತು ಪರಿಸ್ಥಿತಿಯ ಹೋರಾಟಗಳಲ್ಲಿ ಭಾಗವಹಿಸಿದ್ದ ಪ್ರಸಕ್ತ ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ರಮಾಕಾಂತ್ ದೇವಾಡಿಗ ಅವರನ್ನು ಸನ್ಮಾನಿಸ ಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಎಸ್.ಕಲ್ಮಾಡಿ, ಸದಾನಂದ ಉಪ್ಪಿನಕುದ್ರು ಹಾಗೂ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲಗಳ ಪದಾಧಿ ಕಾರಿಗಳು, ನಗರಸಭಾ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಜಿಲ್ಲಾ ಸಂಚಾಲಕಿ ರೇಶ್ಮಾ ಉದಯ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಸಹ ಸಂಚಾಲಕ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News