ಕೃಷಿ ಉತ್ಪನ್ನಗಳ ಮಾರುಕಟ್ಟೆ ಕೇಂದ್ರದಿಂದ ಹಣಕಾಸು ನೆರವು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Update: 2022-06-28 13:04 GMT

ಬ್ರಹ್ಮಾವರ: ನಮ್ಮಲ್ಲಿನ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ, ರಫ್ತು ಮಾಡುವ ಹಾಗೂ ಆಹಾರ ಪರಿಷ್ಕರಿಸುವ ಬಗ್ಗೆ ಯೋಚನೆ ಮಾಡಬೇಕಾಗಿದೆ. ಇದಕ್ಕೆ ಕೇಂದ್ರ ಸರಕಾರ ಎಲ್ಲ ರೀತಿಯ ಹಣಕಾಸು ನೆರವು ನೀಡಲು ಸಿದ್ಧವಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 2022-23ನೇ ಸಾಲಿನಲ್ಲಿ ರಾಜ್ಯದ 20ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿರುವ ಯಾಂತ್ರೀಕೃತ ಭತ್ತ ಬೇಸಾಯ(ಯಂತ್ರಶ್ರೀ) ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆಗಳಿಗೆ ಮಂಗಳವಾರ ಬಾರಕೂರು ಕೂಡ್ಲಿಯಲ್ಲಿ ವಿದ್ಯುಕ್ತ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಭಾರತ ಇಂದು ಎಲ್ಲ ಸರಕಾರಗಳ ಪ್ರಯತ್ನದಿಂದ ಹೆಚ್ಚುವರಿ ಆಹಾರವನ್ನು ಉತ್ಪಾದಿಸುತ್ತಿದೆ. ಕಳೆದ ಕೊರೋನ ಸಮಯ ಎರಡು ವರ್ಷಗಳಲ್ಲಿ ಭಾರತವು 364ಮಿಲಿಯನ್ ಮೆಟ್ರಿಕ್ ಟನ್ ತರಕಾರಿ, ಹಣ್ಣು ಮತ್ತು 314 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ಬೆಳೆಸಿದೆ. ಕೃಷಿ ಮಾರುಕಟ್ಟೆ, ವ್ಯಾಪಾರದ ಬಗ್ಗೆ ಕೇಂದ್ರ ಸರಕಾರ ವಿಶೇಷ ಒತ್ತು ನೀಡುತ್ತಿದೆ. ಕೇಂದ್ರ ಸರಕಾರ ಕೃಷಿ ಮೂಲ ಸೌಕರ್ಯ ನಿಧಿಯಲ್ಲಿ ಒಂದು ಲಕ್ಷ ಕೋಟಿ ರೂ. ಹಣ ತೆಗೆದಿರಿಸಿದೆ ಎಂದರು.

ತೆಂಗಿನ ಹಾಲಿನ ಪುಡಿ, ಕೊಬ್ಬರಿ ಎಣ್ಣೆ, ನಾರಿನ ಪುಡಿ, ಚಿಪ್ಪುಗಳಿಗೆ ವಿದೇಶ ಗಳಿಗೆ ಹೆಚ್ಚಿನ ಬೇಡಿಕೆಗಳಿವೆ. ಇವುಗಳನ್ನು ರಫ್ತು ಮಾಡುವಲ್ಲಿ ತಮಿಳುನಾಡು, ಕೇರ ರಾಜ್ಯಗಳು ಮುಂಚೂಣಿಯಲ್ಲಿವೆ. ಕರ್ನಾಟಕ ರಾಜ್ಯ ಈ ಬಗ್ಗೆ ಯೋಚನೆ ಮಾಡಬೇಕು. ತೆಂಗಿಗೆ ವ್ಯಾಪಾರ ಬರಬೇಕಾದರೆ ಮಾರುಕಟ್ಟೆ ಸೃಷ್ಠಿ ಮಾಡಬೇಕು ಮತ್ತು ಹೆಚ್ಚು ಉತ್ಪನ್ನಗಳನ್ನು ರಫ್ತು ಮಾಡಬೇಕು ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಯಾವುದೇ ಕೆಲಸದಲ್ಲಿ ಮನುಷ್ಯನ ಶ್ರಮಕ್ಕೆ ದೈವಾನುಗ್ರಹ ಇದ್ದರೆ ಮಾತ್ರ ಬೆಲೆ ಬರಲು ಸಾಧ್ಯ. ದೇವರ ಭಕ್ತಿ, ಕಠಿಣ ಪರಿಶ್ರಮದ ಜೊತೆ ಮಾರ್ಗದರ್ಶನ ಕೂಡ ಮುಖ್ಯ. ಯೋಜನೆ ಮಾಡಬೇಕಾದರೆ ಯೋಚನಾ ಶಕ್ತಿ ಅತಿ ಅಗತ್ಯ. ವಿಶೇಷ ಶ್ರಮ ಪಟ್ಟು ಸಾಧನೆ ಮಾಡುವ ಹುಮ್ಮಸ್ಸು ಹುಟ್ಟಿಸುವುದೇ ಈ ಯೋಜನೆ ಉದ್ದೇಶವಾಗಿದೆ ಎಂದರು.

ಕೃಷಿಗೆ ಸಂಬಂಧಿಸಿದಂತೆ ಸರಕಾರದ ಹಲವು ಯೋಜನೆಗಳಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕೃಷಿ ಭೂಮಿಯನ್ನು ಉಳುಮೆ ಮಾಡದೆ ಖಾಲಿ ಬಿಡುವುದು ಒಳ್ಳೆಯದಲ್ಲ. ಭೂಮಿ ತಾಯಿಯನ್ನು ಪೋಷಿಸಿ, ರಕ್ಷಿಸದಿ ರುವವರಿಗೆ ಭವಿಷ್ಯ ಇರುವುದಿಲ್ಲ. ಇಂದು ನಾವು ಭತ್ತದ ಕೃಷಿ ಲಾಭಾದಾಯಕ ಅಲ್ಲ ಎಂಬ ಹಂತಕ್ಕೆ ಹೋಗಿದ್ದೇವೆ. ಆದರೆ ಯಾಂತಿಕೃತ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಯಿಂದ ಕೃಷಿ ಲಾಭದಾಯಕ ಎಂಬುದನ್ನು ತೋರಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.

ಸಮಾಜ ಕಲ್ಯಾಣ ಹಾಗೂ ಹಿಂದುಳಿದವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ರೈತರಿಗೆ ನರ್ಸರಿ ಟ್ರೀ ವಿತರಿಸಿದರು. ಈ ಸಂದರ್ಭದಲ್ಲಿ ಹಡಿಲು ಭೂಮಿ ಅಭಿವೃದ್ಧಿ ಪಡಿಸಿದ ಸಾಧಕ ರೈತರನ್ನು ಸನ್ಮಾನಿಸಲಾಯಿತು. ಯಂತಶ್ರೀ ಮಾಹಿತಿ ಪತ್ರವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಬಿಡುಗಡೆ ಗೊಳಿಸಿದರು.

ಬೈಂದೂರು ಭತ್ತ ಬೆಳೆಗಾರರ ಒಕ್ಕೂಟಕ್ಕೆ ಅನುದಾನ ಪತ್ರವನ್ನು ಮಾಜಿ ಸಚಿವ ವಿನಯ ಕುಮಾರ್ ವಿತರಿಸಿದರು. ಭತ್ತ ನರ್ಸರಿ ಮಾಡಿದ ರೈತರನ್ನು ಉಡುಪಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ.ಎಚ್.ಕೆಂಪೇಗೌಡ ಸನ್ಮಾನಿಸಿದರು.

ಯಡ್ತಾಡಿ ಗ್ರಾಪಂ ಅಧ್ಯಕ್ಷೆ ಸವಿತಾ ದೇವಾಡಿಗ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೃಷಿಕ ಬಿ.ಶಾಂತಾರಾಮ ಶೆಟ್ಟಿ, ಬಾರಕೂರು ಕೂಡ್ಲಿ ಶ್ರೀಜನಾರ್ದನ ದೇವ ಸ್ಥಾನದ ಆಡಳಿತ ಮೊಕ್ತೇಸರ ಡಾ.ಕೆ.ವೆಂಕಟರಮಣ ಉಡುಪ, ಮಾಜಿ ಶಾಸಕ ಅಣ್ಣಪ್ಪ ಹೆಗ್ಡೆ, ಉದ್ಯಮಿಗಳಾದ ಶ್ರೀನಿವಾಸ ಶೆಟ್ಟಿಗಾರ್, ಆನಂದ ಸಿ.ಕುಂದರ್, ನವೀನ್ ಅಮೀನ್ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಶೆಟ್ಟಿಗಾರ್ ವಂದಿಸಿದರು. ಸುಂದರ್ ಜೈನ್ ಹಾಗೂ ದಿನೇಶ್ ಎ. ಕಾರ್ಯಕ್ರಮ ನಿರೂಪಿಸಿದರು.

ದುಬೈ ಗೋಡೌನ್‌ನಲ್ಲಿ ರಾಜ್ಯದ ಪಡಿತರ ಅಕ್ಕಿ!

ದುಬೈ ಗೋಡೌನ್‌ನಲ್ಲಿ ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯಗಳ ಪಡಿತರ ಅಕ್ಕಿಗಳಿವೆ. ಇಲ್ಲಿನ ಅಕ್ಕಿಯನ್ನು ರೀ ಫಾಲೀಶ್ ಮಾಡಿ ದುಬೈಗೆ ಸಾಗಾಟ ಮಾಡುವ ಮಾಫಿಯಾ ನಡೆಯುತ್ತಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ನಾನು ದುಬೈಗೆ ಹೋಗಿದ್ದಾಗ ಅಲ್ಲಿನ ವ್ಯಕ್ತಿಯೊಬ್ಬರು ನನ್ನನ್ನು ಖುದ್ಧು ಗೋಡೌನ್‌ಗೆ ಕರೆದುಕೊಂಡು ಹೋಗಿ ತೋರಿಸಿದ್ದಾರೆ. ಇದಕ್ಕೆ ಕಾರಣ ನಾವು ಪಡಿತರದಲ್ಲಿ ಸಿಗುವ ಅಕ್ಕಿಯನ್ನು ತಿನ್ನದೇ ಇರುವುದು. ಆದುದರಿಂದ ಕರಾವಳಿ ಜಿಲ್ಲೆಗಳಿಗೆ ಪಡಿತರದಲ್ಲಿ ಕುಚ್ಚಲಕ್ಕಿ ಅಕ್ಕಿ ನೀಡುವಂತೆ ಕೇಂದ್ರಕ್ಕೆ ಮತ್ತೊಮ್ಮೆ ಪ್ರಸ್ತಾವ ಕಳುಹಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News