ಉಡುಪಿ: ನಾಲ್ಕು ತಿಂಗಳ ಬಳಿಕ ಎರಡಂಕಿ ತಲುಪಿದ ಕೋವಿಡ್ ಪ್ರಕರಣ
ಉಡುಪಿ, ಜೂ. 28: ಜಿಲ್ಲೆಯಲ್ಲಿ ಕಳೆದ ಫೆ.25ರ ಬಳಿಕ ಮೊದಲ ಬಾರಿ ದಿನವೊಂದರಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಎರಡಂಕಿ ತಲುಪಿದೆ. ಇಂದು ಜಿಲ್ಲೆಯಲ್ಲಿ ಒಟ್ಟು 17 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 26ಕ್ಕೇರಿದೆ.
ದಿನದಲ್ಲಿ 14 ಮಂದಿ ಪುರುಷರು ಹಾಗೂ ಮೂವರು ಮಹಿಳೆಯರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಇವರಲ್ಲಿ 13 ಮಂದಿ ಉಡುಪಿ ತಾಲೂಕಿ ನವರಾದರೆ ಒಬ್ಬರು ಕುಂದಾಪುರ ತಾಲೂಕಿನವರು ಹಾಗೂ ಮೂವರು ಕಾರ್ಕಳ ತಾಲೂಕಿನವರು. ಇವರಲ್ಲಿ ಒಬ್ಬರು ಕೋವಿಡ್ ಆಸ್ಪತ್ರೆ, ಒಬ್ಬರು ಕೋವಿಡ್ ಕೇಂದ್ರದಲ್ಲಿ ಹಾಗು ಉಳಿದ 15 ಮಂದಿ ತಮ್ಮ ಮನೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಐವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರಲಿ ಇಬ್ಬರು ಐಸಿಯುನಲ್ಲಿದ್ದಾರೆ.
ಜಿಲ್ಲೆಯಲ್ಲಿ ಇಂದು ಒಟ್ಟು 669 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದ್ದು, ಉಡುಪಿ ತಾಲೂಕಿನ 379 ಮಂದಿಯಲ್ಲಿ 13 ಮಂದಿ ಪಾಸಿಟಿವ್ ಬಂದಿದ್ದರೆ, ಕುಂದಾಪುರ ತಾಲೂಕಿನ 156 ಮಂದಿಯಲ್ಲಿ ಒಬ್ಬರು ಹಾಗೂ ಕಾರ್ಕಳ ತಾಲೂಕಿನ 134 ಮಂದಿಯಲ್ಲಿ ಮೂವರಲ್ಲಿ ಸೋಂಕು ಪತ್ತೆಯಾಗಿದೆ.