ʼಯುಎಇ ಅಧ್ಯಕ್ಷರನ್ನು ಭೇಟಿಯಾಗಿ ಭಾವುಕನಾದೆʼ: ಅರೇಬಿಕ್‌ ನಲ್ಲಿ ಟ್ವೀಟ್‌ ಮಾಡಿದ ಪ್ರಧಾನಿ ನರೇಂದ್ರ ಮೋದಿ

Update: 2022-06-28 17:37 GMT

ಅಬುಧಾಬಿ,ಜೂ.28: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರನ್ನು ಅಬುದಾಭಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು ಹಾಗೂ ಇತ್ತೀಚೆಗೆ ನಿಧನರಾದ ಯುಎಇನ ನಿಕಟಪೂರ್ವ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸಿದರು.

ವಿಶಿಷ್ಟ ನಡೆಯೆಂಬಂತೆ, ಶೇಖ್ಮೊಹಮ್ಮದ್ ರಾಜಕುಟುಂಬದ ಹಿರಿಯ ಸದಸ್ಯರೊಂದಿಗೆ ಅಬುದಾಭಿಯ ಅಧ್ಯಕ್ಷೀಯ ವಿಮಾನನಿಲ್ದಾಣಕ್ಕೆ ಆಗಮಿಸಿ ಪ್ರಧಾನಿ ಮೋದಿಯವರನ್ನು ಬರಮಾಡಿಕೊಂಡರು.

‘‘ ನನ್ನನ್ನು ಸ್ವಾಗತಿಸಲು ಅಬುದಾಭಿ ವಿಮಾನನಿಲ್ದಾಣಕ್ಕಾಗಿ ಖುದ್ದಾಗಿ ಆಗಮಿಸುವ ಮೂಲಕ ನನ್ನ ಸೋದರ, ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ವಿಶೇಷ ಆದರಾತಿಥ್ಯದಿಂದ ನಾನು ಭಾವುಕನಾಗಿದ್ದೇನೆ. ಅವರಿಗೆ ನನ್ನ ಕೃತಜ್ಞತೆಗಳು’ ಎಂದು ಮೋದಿ ಆರೇಬಿಕ್ ಹಾಗೂ ಇಂಗ್ಲೀಷ್ನಲ್ಲಿ ಟ್ವೀಟ್ ಮಾಡಿದ್ದಾರೆ.

ಯುಎಇ ನೂತನ ಅಧ್ಯಕ್ಷರಾಗಿ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಕಳೆದ ತಿಂಗಳು ಆಯ್ಕೆಯಾದ ಬಳಿಕ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿರುವುದು ಇದೇ ಮೊದಲ ಸಲವಾಗಿದೆ.

ಝಾಯೆದ್ ಅವರೊಂದಿಗಿನ ಮಾತುಕತೆಯ ವೇಳೆ ಮೋದಿ ಅವರು ಶೇಖ್ ಖಲೀಫಾ ಅವರ ಸಾಧನೆಗಳನ್ನು ಸ್ಮರಿಸಿದರು ಹಾಗೂ ಅವರೊಬ್ಬ ಮಹಾನ್ ಮುತ್ಸದ್ಧಿ ಹಾಗೂ ದೂರದರ್ಶಿತ್ವವುಳ್ಳ ನಾಯಕರಾಗಿದ್ದರು ಎಂದರು. ಶೇಖ್ ಖಲೀಫಾ ಆಡಳಿತದಲ್ಲಿ ಭಾರತ-ಯುಎಇ ಬಾಂಧವ್ಯ ಪ್ರಗತಿ ಸಾಧಿಸಿತ್ತೆಂದು ಪ್ರಧಾನಿ ಹೇಳಿರು.

ಶೇಖ್ ಖಲೀಫಾ ಅವರು ಯುಎಇ ಅಧ್ಯಕ್ಷರಾಗಿ ಹಾಗೂ ಅಬುದಾಭಿಯ ಆಡಳಿತಗಾರನಾಗಿ ನವೆಂಬರ್ 3, 2004ರಿಂದ ಸೇವೆ ಸಲ್ಲಿಸಿದ್ದರು. ದೀರ್ಘಕಾಲದ ಅಸ್ವಸ್ಥದಿಂದ ಬಳಲುತ್ತಿದ್ದ ಅವರು ಮೇ 13ರಂದು ತನ್ನ 73ನೇ ವಯಸ್ಸಿನಲ್ಲಿ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News