ಕಾಡು ಪ್ರಾಣಿಗಳಿಗೆ ನಾವು ಬದಲಿ ವಿಳಾಸ ನೀಡುವಂತಿಲ್ಲ..!
ರಾಜ್ಯದಲ್ಲಿ ಮಾನವ ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಆನೆ ಕಾರಿಡಾರ್ ನಿರ್ಮಾಣದಿಂದ ಮಾನವ ವನ್ಯಜೀವಿ ಸಂಘರ್ಷದಿಂದ ಒಂದು ತಾರ್ಕಿಕ ಅಂತ್ಯ ಹಾಡಬಹುದಾಗಿದೆ ಎನ್ನುವುದು ಬಲ್ಲವರ ಅನಿಸಿಕೆ. ಈ ವಿಚಾರದಲ್ಲಿ ಇನ್ನೂ ಕೆಲವರ ಅಭಿಪ್ರಾಯವೇನೆಂದರೆ ಕಾಡಾನೆಗಳನ್ನು ನಿಯಂತ್ರಿಸಲು ಮತ್ತು ಪರಿಹಾರ ವಿಚಾರದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮಾನದಂಡಗಳ ಬದಲಾಗಿ ಹೊಸ ಮಾನದಂಡಗಳನ್ನು ಸರಕಾರ ರೂಪಿಸಬೇಕಾಗಿದೆ. ಇತ್ತೀಚಿನ ಸರಕಾರಿ ದಾಖಲೆಗಳ ಪ್ರಕಾರ ರಾಜ್ಯದಲ್ಲಿ ಸರಿ ಸುಮಾರು 620 ಕಿಲೋಮೀಟರ್ ಉದ್ದದ ಆನೆ ಕಾರಿಡಾರ್ ಮಾಡಬೇಕಾಗುತ್ತದೆ. ಇದು ಮೂರು ರಾಜ್ಯಗಳನ್ನು ಹಾದು ಹೋಗುತ್ತದೆ. ಆದರೆ ಇದುವರೆಗೆ ಕೇವಲ ರಾಜ್ಯದಲ್ಲಿ 180 ಕಿಲೋಮೀಟರ್ ಉದ್ದದ ಆನೆ ಕಾರಿಡಾರ್ ಮಾಡಲಾಗಿದೆ. ಇನ್ನೂ ಹೆಚ್ಚು ಕಡಿಮೆ 500 ಕಿಲೋಮೀಟರ್ ಉದ್ದದ ಆನೆಗಳ ಕಾರಿಡಾರನ್ನು ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಮಾಡಬೇಕಾಗುತ್ತದೆ. ಸದ್ಯಕ್ಕೆ ಅನುದಾನದ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ. ಇನ್ನ್ನು ಕೆಲವರ ಪ್ರಕಾರ ಕಾರಿಡಾರ್ ಎಂದರೆ ಪ್ರಾಣಿಗಳಿಗೆ ಹೊಸ ವಿಳಾಸ ನೀಡಿದಂತೆ.
ರಾಜ್ಯದಲ್ಲಿ ಆನೆ ಕಾರಿಡಾರ್ ನಿರ್ಮಾಣದ ಕುರಿತಾಗಿ ಕಳೆದ ಒಂದು ವರ್ಷದಿಂದ ರಾಜ್ಯ ವಿಧಾನಸಭೆಯಲ್ಲಿ ಕಾಡಾನೆಗಳ ಕಾಟ ಕುರಿತು ಬಹಳಷ್ಟು ಚರ್ಚೆಗಳು, ವಿವಾದಗಳು ನಡೆಯುತ್ತಿವೆ. ರೈತರ ಒತ್ತಡ ಮತ್ತು ಜನಪ್ರತಿನಿಧಿಗಳ ಆಗ್ರಹದಿಂದ ಆನೆ ಕಾರಿಡಾರ್ ನಿರ್ಮಾಣಕ್ಕೆ ಇತ್ತೀಚೆಗೆ ಸ್ವಲ್ಪಮಟ್ಟಿಗೆ ಚುರುಕು ಬಂದಂತೆ ಕಾಣುತ್ತದೆ. ತಜ್ಞರ ಪ್ರಕಾರ ರಾಜ್ಯದಲ್ಲಿ ಆನೆ ಕಾರಿಡಾರ್ ನಿರ್ಮಾಣ ಮಾಡಲು ಕಾಡಿನಲ್ಲಿ ಸುಮಾರು 20ರಿಂದ 25 ಸಾವಿರ ಎಕರೆ ಜಮೀನು ಬೇಕಾಗುತ್ತದೆ. ಅಷ್ಟು ಪ್ರಮಾಣದ ಜಮೀನು ಈಗ ಸರಕಾರದ ಬಳಿ ಲಭ್ಯವಿದೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಕೆಲವು ಕಡೆ ಜಮೀನು ಸರಕಾರದ ಬಳಿ ಇದ್ದರೆ ಕಾಡಿನ ಭಾಗದಲ್ಲಿ ಹೆಚ್ಚಿನ ಜಮೀನುಗಳು ರೈತರ ವಶದಲ್ಲಿದೆ. ಡೀಮ್ಡ್ ಅರಣ್ಯ ವಿಚಾರ ಪುನಃ ನನೆಗುದಿಗೆ ಬಿದ್ದಂತಿದೆ. ಅದಲ್ಲದೆ ರಕ್ಷಿತ ಅಭಯಾರಣ್ಯಗಳಲ್ಲಿ ಆನೆ ಕಾರಿಡಾರ್ ರಚನೆಗೆ ಕೇಂದ್ರದ ಅವಶ್ಯಕವಿದ್ದರೆ, ಸುಪ್ರೀಂ ಕೋರ್ಟ್‌ನ ಹಸಿರು ಪೀಠದ ಅನುಮತಿ ಕಡ್ಡಾಯವಾಗಿ ಬೇಕಾಗುತ್ತದೆ. ಹಾಗಾಗಿ ರಾಜ್ಯ ಸರಕಾರವು ಸ್ವಲ್ಪ ಗೊಂದಲದಲ್ಲಿದೆ ಎನಿಸುತ್ತದೆ. ಕೆಲ ವರ್ಷಗಳ ಹಿಂದೆ ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚುಕಮ್ಮಿ ರೂ.350 ಕೋಟಿ ವೆಚ್ಚ ಕುರಿತು ಅಂದಾಜಿಸಲಾಗಿತ್ತು. ಆದರೆ ಸರಕಾರಿ ವ್ಯವಸ್ಥೆಯಲ್ಲಿ ಆಗುವ ವಿಳಂಬ ಗತಿಯ ಸಮಸ್ಯೆಯಿಂದ ಈಗ ಅದರ ವೆಚ್ಚ ಸುಮಾರು ಎರಡರಷ್ಟು ಆಗಿದೆ ಎನ್ನುವುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ. ಇತ್ತೀಚಿನ ಇನ್ನೊಂದು ಬೆಳವಣಿಗೆಯ ಪ್ರಕಾರ ಅಶಕ್ತ ಮತ್ತು ಪುಂಡಾನೆಗಳನ್ನು ಸಾಕಲು ಹೊಸ ಶಿಬಿರಗಳ ಸ್ಥಾಪನೆ. ಈಗ ತಿಳಿದುಬಂದ ಮಾಹಿತಿ ಏನೆಂದರೆ ಬಂಡೀಪುರದಲ್ಲಿ ಮತ್ತೊಂದು ಆನೆ ಸಾಕಣೆ ಶಿಬಿರವನ್ನು ಆರಂಭಿಸುವ ಕುರಿತು ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿನ ಮುಖ್ಯ ಸಮಸ್ಯೆ ಎಂದರೆ ನಿರಂತರವಾಗಿ ರೈತರ ಮತ್ತು ಕೃಷಿ ಬೆಳೆಗಳ ಮೇಲೆ ಹಾನಿ ಮಾಡುವ ಕಾಡಾನೆಗಳನ್ನು ಗುರುತಿಸಿ ಅವುಗಳನ್ನು ಹಿಡಿದ ನಂತರ ಅವುಗಳನ್ನು ಪುನಃ ಕಾಡಿಗೆ ಬಿಡಬೇಕಾಗುತ್ತದೆ ಅಥವಾ ಸಾಕಾನೆಗಳ ಜೊತೆ ಅವುಗಳನ್ನು ಪಳಗಿಸುವುದು ಮತ್ತು ಮುಂದೆ ಅರಣ್ಯ ಇಲಾಖೆ ಅವುಗಳ ಯೋಗಕ್ಷೇಮ ವಿಚಾರಿಸಿಕೊಳ್ಳಬೇಕಾಗುತ್ತದೆ. ಇದರ ಇನ್ನೊಂದು ಮುಖ್ಯ ಸಮಸ್ಯೆಯೆಂದರೆ ಇತ್ತೀಚೆಗೆ ಸಾಕಾನೆಗಳ ಶಿಬಿರಗಳಿಗೆ ಹೆಚ್ಚುಹೆಚ್ಚಾಗಿ ಆನೆಗಳು ಹೊಸದಾಗಿ ಬರುತ್ತಿದ್ದು ಅವುಗಳನ್ನು ಸಾಕುವುದೇ ಇಲಾಖೆಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಅನುದಾನ ಕಡಿಮೆಯಾಗಿದೆ. ಇಲಾಖೆ ಕಣ್ಣು ಬಾಯಿ ಬಿಡುವಂತಾಗಿದೆ.
ಈ ಹಿನ್ನೆಲೆಯಲ್ಲಿ ಬಂಡೀಪುರದಂತಹ ಆಹಾರ ದೊರಕುವ ಮತ್ತು ಪಕ್ಕದಲ್ಲಿ ನದಿ ಹರಿಯುವಂತಹ ಸ್ಥಳದಲ್ಲಿ ಸಾಕಾನೆಗಳನ್ನು ಸ್ಥಾಪಿಸುವ ಕುರಿತಾಗಿ ಸರಕಾರವು ಒಲವು ಹೊಂದಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಕೆಲವೊಮ್ಮೆ ಸಾಕಾನೆ ಶಿಬಿರವು ಆಹಾರದ ಕೊರತೆಯಿಂದ ಸರಕಾರಿ ಹಣ ಖರ್ಚು ಮಾಡಿ ಬೇರೆ ಆಹಾರ ನೀಡಬೇಕಾಗುತ್ತದೆ. ಈ ರೀತಿಯ ಸಾಧನೆಗಳಿಂದ ಅರಣ್ಯ ಇಲಾಖೆಗೆ ಬಹಳಷ್ಟು ಅನುದಾನದ ಕೊರತೆ ಉಂಟಾಗುತ್ತಿದೆ. ಕೆಲವು ಅಧಿಕಾರಿಗಳ ಪ್ರಕಾರ ಆನೆಗಳನ್ನು ಪ್ರತ್ಯೇಕವಾಗಿ ಸಾಕುವ ಮಠ-ಮಂದಿರಗಳಿಗೆ ಮತ್ತು ಅಕ್ಕ-ಪಕ್ಕದ ರಾಜ್ಯಗಳಿಗೆ ದತ್ತು ನೀಡುವ ಪ್ರಕ್ರಿಯೆಯು ಸಹ ಚಾಲ್ತಿಯಲ್ಲಿದೆ ಎನ್ನುವ ಅಂಶ ತಿಳಿದುಬಂದಿದೆ. ಇತ್ತೀಚೆಗೆ ಉತ್ತರ ಛತ್ತಿಸ್‌ಗಡ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಸುಮಾರು ಹತ್ತು ಆನೆಗಳನ್ನು ಕೊಡುಗೆಯಾಗಿ ನೀಡಲಾಗಿದೆ. ರಾಜ್ಯದ ಅರಣ್ಯ ಇಲಾಖೆ ಹಾಗೂ ಮಾವುತರಿಂದ ಬೇರೆ ರಾಜ್ಯಗಳ ಮಾವುತರಿಗೆ ಮತ್ತು ಅಧಿಕಾರಿಗಳಿಗೆ ತರಬೇತಿಯನ್ನು ಸಹ ಹಮ್ಮಿಕೊಳ್ಳಲಾಗಿದೆ. ಸಾಕಾನೆಗಳನ್ನು ಕೆಲವು ಧಾರ್ಮಿಕ ಕಾರ್ಯಕ್ರಮದಲ್ಲಿ ಬಳಸಿಕೊಳ್ಳುತ್ತಾರೆ. ಕೆಲವೊಮ್ಮೆ ದಾಳಿ ಮಾಡುವ ಹುಲಿಗಳನ್ನು ಸೆರೆ ಹಿಡಿಯಲು ಸಹಾಯವಾಗುತ್ತದೆ. ಇತ್ತೀಚಿನ ಇನ್ನೂ ಕೆಲವು ಬೆಳವಣಿಗೆಗಳ ಪ್ರಕಾರ ಆನೆಗಳನ್ನು ಖಾಸಗಿಯಾಗಿ ಸಾಕುತ್ತಿದ್ದವರು, ಮಠ ಮಂದಿರಗಳು ಕೊನೆಗೆ ಅವರ ಕೈಯಲ್ಲಿ ಸಾಕಲು ಆಗದೆ ಅರಣ್ಯ ಇಲಾಖೆಗೆ ಅಂತಹ ಆನೆಗಳನ್ನು ನೀಡುತ್ತಿರುವ ಬೆಳವಣಿಗೆ ಸಹ ನಡೆಯುತ್ತಿದ್ದು ಇದರಿಂದ ಶಿಬಿರಗಳಲ್ಲಿ ಆನೆಗಳ ಸಂತತಿ ಹೆಚ್ಚಾಗುತ್ತಿದೆ ಎನ್ನುವ ಅಂಶ ತಿಳಿದುಬಂದಿದೆ. ಕೆಲವು ಅಧಿಕಾರಿಗಳ ಪ್ರಕಾರ ಸಾಕಾನೆ ಶಿಬಿರದಲ್ಲಿ ಆನೆಗಳನ್ನು ಪ್ರವಾಸೋದ್ಯಮದ ಭಾಗವಾಗಿ ಬಳಸುವ ಅವಕಾಶಗಳ ಕುರಿತು ಚಿಂತಿಸಲಾಗುತ್ತಿದೆ. ಸಾಕಾನೆಗಳ ಸಂಖ್ಯೆ ಹೆಚ್ಚಾದಂತೆ ಶಿಬಿರಗಳ ಸಾಮರ್ಥ್ಯವನ್ನು ಸಹ ಹೆಚ್ಚು ಮಾಡಲೇಬೇಕಾಗುತ್ತದೆ ಮತ್ತು ಹೊಸ ಶಿಬಿರದಲ್ಲಿ ಎಲ್ಲಾ ಸೌಕರ್ಯಗಳು ಒದಗಿಸಿದ ನಂತರವೇ ಆನೆಗಳನ್ನು ಅಲ್ಲಿಗೆ ಸ್ಥಳಾಂತರಿಸಬೇಕಾಗುತ್ತದೆ. ಇನ್ನು ಕೆಲವು ಪ್ರಾಣಿಪ್ರಿಯರ ಪ್ರಕಾರ ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡುವ ಆನೆಗಳನ್ನು ಸೆರೆಹಿಡಿದು ಶಿಬಿರಕ್ಕೆ ತಂದರೆ ಅಲ್ಲಿ ಆನೆಗಳು ಮಾನಸಿಕವಾಗಿ ಕುಸಿದು ಹೋಗುತ್ತವೆ ಮತ್ತು ಚಟುವಟಿಕೆರಹಿತವಾಗುತ್ತವೆ ಎನ್ನುವ ವಾದವು ಸಹ ಇದೆ.
ಇತ್ತೀಚಿನ ವರದಿಗಳ ಪ್ರಕಾರ ಕಾಡಾನೆಗಳು ಕೇವಲ ಕೃಷಿ ಬೆಳೆ ಅಥವಾ ರೈತರ ಮೇಲೆ ಅಥವಾ ಕಾಡಂಚಿನ ಜನರ ಮೇಲೆ ದಾಳಿ ಮಾಡುತ್ತಿಲ್ಲ. ಬದಲಾಗಿ ಕಾಡಿನ ಮೂಲಕ ಹಾದು ಹೋಗುವ ವಾಹನಗಳ ಮೇಲೆ ಹಠಾತ್ತನೆ ದಾಳಿ ಮಾಡಿ ಹಾನಿ ಮಾಡುತ್ತಿರುವುದು ವರದಿಯಾಗಿದೆ. ಇದರಿಂದ ವಾಹನ ಸವಾರರ ಪ್ರಾಣಕ್ಕೂ ಅಪಾಯ ಉಂಟು ಮಾಡುತ್ತಿದೆ. ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಬೆಳಗ್ಗೆದ್ದು ಮನೆ ಮುಂದೆ ನಿಂತಿರುವ ವಾಹನ ತೆಗೆಯಲು ಮುಂದಾದಾಗ ಆನೆ ಬಂದು ಅದರ ಮೇಲೆ ಆಕ್ರಮಣ ಮಾಡಿ ಸಂಪೂರ್ಣ ವಾಹನವನ್ನು ಜಖಂಗೊಳಿಸಿರುವ ಉದಾಹರಣೆ ವರದಿಯಾಗಿದೆ. ಅಷ್ಟೇ ಅಲ್ಲದೆ ಕಾಡಿನ ಮಧ್ಯೆ ಹಾದು ಹೋಗುವ ವಾಹನಗಳಿಗೆ ಅಡ್ಡ ನಿಂತು ಗಂಟೆಗಟ್ಟಲೆ ಸವಾರರಲ್ಲಿ ಭಯ ಉಂಟುಮಾಡಿರುವ ಘಟನೆಗಳು ದಿನನಿತ್ಯ ಕೊಡಗಿನ ಕೆಲವು ಕಡೆ ನಡೆಯುತ್ತಿದೆ. ಇದನ್ನು ತಪ್ಪಿಸಲು ಕೆಲವರು ವಾಹನಗಳ ಶಬ್ದವನ್ನು ಅತಿಯಾಗಿ ಮಾಡುವುದು ಅಥವಾ ದಾರಿಮಧ್ಯೆ ಪಟಾಕಿ ಹೊಡೆದು ಪ್ರಾಣಿಗಳನ್ನು ಓಡಿಸುವ ಕೆಲಸ ನಡೆಯುತ್ತಿದೆ. ಇದನ್ನು ತಪ್ಪಿಸಲು ಮತ್ಯಾವುದೋ ದಾರಿಯನ್ನು ಬಳಸಿಕೊಳ್ಳಬೇಕಾದ ಅನಿವಾರ್ಯ ಇಲ್ಲಿನವರಿಗೆ ಬಂದೊದಗಿದೆ. ಅದೇ ರೀತಿ ವಾಹನಗಳಿಗೆ ಬಲಿಯಾಗುತ್ತಿರುವ ಮುಗ್ಧ ಪ್ರಾಣಿಗಳ ಸಂಖ್ಯೆಯೂ ಕಡಿಮೆಯಿಲ್ಲ.
ಈಗ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವ ಸಂರಕ್ಷಿತ ಪ್ರದೇಶ ಕೇವಲ 4 ಪ್ರತಿಶತದಷ್ಟು ಉಳಿದಿದೆ ಎನ್ನುತ್ತಾರೆ ತಜ್ಞರು. ಆದರೆ ಇಂದು ಯಾವುದೇ ಅಂತಹ ಸಂರಕ್ಷಿತ ಪ್ರದೇಶಗಳು ರಸ್ತೆಗಳು, ಅಣೆಕಟ್ಟುಗಳು, ರೈಲು ಮಾರ್ಗ, ಹೈಟೆನ್ಷನ್ ವೈರ್‌ಗಳು ಅಥವಾ ಇನ್ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವ ರಾಜ್ಯದ ಮೇಕೆದಾಟು ಯೋಜನೆಗೆ ಹಸಿರು ನಿಶಾನೆ ತೋರುವುದರಿಂದ ಅರಣ್ಯ ನಷ್ಟವನ್ನು ಸರಿದೂಗಿಸಲು ಬೇರೆಡೆ ಮರಗಳನ್ನು ನೆಟ್ಟರೂ ಖಂಡಿತವಾಗಿ ಪ್ರಯೋಜನವಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಮೇಕೆದಾಟು ಯೋಜನೆಯಿಂದ ಸಸ್ಯ ಮತ್ತು ಪ್ರಾಣಿಗಳು ನಾಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ರೀತಿ ಕುಡಿಯುವ ನೀರು ಯೋಜನೆಗೆ ಏನು ಮಾಡಬೇಕು ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಅರಣ್ಯಗಳನ್ನು ಬೆಳೆಸಲು ಪರ್ಯಾಯ ಸ್ಥಳ ನೀಡುವ ಯೋಜನೆಯು ಯಾವುದೇ ರೀತಿಯಲ್ಲೂ ಸಹಾಯ ಮಾಡುವುದಿಲ್ಲ. ನಾವು ಕಳೆದುಕೊಳ್ಳುವ ಅಮೂಲ್ಯವಾದ ಜೀವವೈವಿಧ್ಯವನ್ನು ಮರುಸೃಷ್ಟಿಸಲು ಸಾಧ್ಯವಿಲ್ಲ. ಪ್ರಸ್ತುತ ದಿನೇದಿನೇ ಹೆಚ್ಚಾಗುತ್ತಿರುವ ಈ ಪರಿಸರ ಸಂಘರ್ಷಕ್ಕೆ ಇದು ವೈಜ್ಞಾನಿಕ ಪರಿಹಾರವಲ್ಲ. ಯಾವುದೇ ಕಾರಣಕ್ಕೂ ನಾವು ಕಾಡು ಪ್ರಾಣಿಗಳಿಗೆ ವಿಳಾಸ ಬದಲಾವಣೆ ನೀಡುವಂತಿಲ್ಲ! ಹೊಸ ಮರಗಳನ್ನು ನೆಡುವುದರಿಂದ ಎಂದಿಗೂ ವೈವಿಧ್ಯಮಯ ಅರಣ್ಯವಾಗುವುದಿಲ್ಲ. ನಾವು ಅರಣ್ಯ ವಿಘಟನೆಯನ್ನು ಮೊದಲು ತಪ್ಪಿಸಬೇಕು. ಅರಣ್ಯದ ನಿರಂತರತೆಯನ್ನು ಕಾಪಾಡಬೇಕು.
ವಿವಿಧ ರೀತಿಗಳ ಚರ್ಚೆಯ ಅನುಸಾರ ವನ್ಯಜೀವಿಗಳ ಸಂರಕ್ಷಣೆ ಅವುಗಳ ಆವಾಸಸ್ಥಾನದಲ್ಲಿ ಹೆಚ್ಚಾಗಿ ನಡೆಯಬೇಕಾಗುತ್ತದೆ. ಅಂದ ಮಾತ್ರಕ್ಕೆ ಎಲ್ಲಾ ಪ್ರಯತ್ನಗಳಿಗೆ ಒಂದು ಅರ್ಥ ಬರಲು ಸಾಧ್ಯ. ಈ ನೆಲೆಯಲ್ಲಿ ಕಾಡಿನ ವಿಚಾರದಲ್ಲಿ ಮಾನವನ ಪ್ರತ್ಯಕ್ಷ ಮತ್ತು ಪರೋಕ್ಷ ಕೈವಾಡ ಎಂದರೆ ಪ್ರಾಣಿಗಳ ನೈಸರ್ಗಿಕ ವಾಸಸ್ಥಾನಕ್ಕೆ ಸಮಸ್ಯೆ ಉಂಟು ಮಾಡುವ ಎಲ್ಲ ಅಭಿವೃದ್ಧಿ ಕ್ರಮಗಳನ್ನು ಆದಷ್ಟು ಶೀಘ್ರವಾಗಿ ನಿರ್ಬಂಧಿಸಬೇಕು ಮತ್ತು ತೀರಾ ಅತ್ಯಂತ ತುರ್ತು ಅವಶ್ಯಕತೆ ಇರುವ ಕಡೆ ನಾಜೂಕಾಗಿ ಮತ್ತು ವೈಜ್ಞಾನಿಕವಾಗಿ ನಿರ್ವಹಿಸಬೇಕಾಗುತ್ತದೆ. ಇಂದು ಕೆಲವೊಂದು ಸೂಕ್ಷ್ಮ ಪ್ರಾಣಿಗಳ ಮಾಂಸಕ್ಕೆ ಮತ್ತು ಸಸ್ಯಗಳಿಗೆ ಔಷಧಿಯ ಲೋಕದಲ್ಲಿ ಬಹಳಷ್ಟು ಬೇಡಿಕೆಯಿದ್ದು ಅಂತಹ ಪ್ರಾಣಿಗಳನ್ನು ಬೇಟೆಯಾಡುವುದು ಮತ್ತು ಔಷಧಿ ಸಸ್ಯಗಳನ್ನು ಕಳ್ಳಸಾಗಣೆ ಮಾಡುವುದು ಹೆಚ್ಚಾಗಿದೆ. ಹಾಗಾಗಿ ಇಂದು ಪ್ರಾಣಿಗಳನ್ನು ಕಳ್ಳ ಮಾರ್ಗದಲ್ಲಿ ಬೇಟೆಯಾಡುವ ಗುಂಪು ಸಹ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಕೆಲವೊಂದು ಸಂದರ್ಭಗಳಲ್ಲಿ ಹಣಕಾಸು ಮತ್ತು ಮಾನವ ಸಂಪನ್ಮೂಲ ಕೊರತೆಯಿಂದ ಅರಣ್ಯ ಇಲಾಖೆಯು ಎಡವಿದೆ ಎನ್ನಬಹುದು. ವನ್ಯಜೀವಿ ಸಂರಕ್ಷಣೆಯಲ್ಲಿ ದೇಶದಲ್ಲಿ ಬಹಳಷ್ಟು ಕಾನೂನುಗಳು ಜಾರಿಯಲ್ಲಿದ್ದರೂ ಹೆಚ್ಚಾಗಿ ಕಾನೂನುಗಳು ಕೇವಲ ಹಾಳೆಗಳಿಗೆ ಮಾತ್ರ ಸೀಮಿತವಾಗಿವೆ. ಮಾನವ ಸಂರಕ್ಷಣೆಗಳ ಕಾನೂನಿಗೆ ದೇಶದಲ್ಲಿ ಕೆಲವೊಮ್ಮೆ ಬೆಲೆ ಇರುವುದಿಲ್ಲ. ಇನ್ನು ಪ್ರಾಣಿ ಸಂರಕ್ಷಣೆಗೆ ಕಾನೂನಿನಲ್ಲಿ ಬೆಲೆ ಇರುತ್ತದೆಯೇ ಎನ್ನುವುದು ಈ ಸಂಘರ್ಷದ ಸಂತ್ರಸ್ತರ ಪ್ರಶ್ನೆಯಾಗಿದೆ.