ಸಚಿವ ಉಮೇಶ್ ಕತ್ತಿ ಇಲಾಖೆಯಲ್ಲಿ ಧೂಳು ತಿನ್ನುತ್ತಿರುವ 4,199 ಕಡತಗಳು!
ಬೆಂಗಳೂರು, ಜು.8: ಪ್ರತ್ಯೇಕ ರಾಜ್ಯದ ಬಗ್ಗೆ ಆಗಾಗ ಹೂಂಕರಿಸುವ ಸಚಿವ ಉಮೇಶ್ ವಿ. ಕತ್ತಿ ಅವರು ನಿಭಾಯಿಸುತ್ತಿರುವ ಅರಣ್ಯ ಇಲಾಖೆಯಲ್ಲಿ ಕಡತಗಳು ವಿಲೇವಾರಿಯಾಗದೆ ಧೂಳುಹಿಡಿದು ಕೂತಿವೆ. ಸಚಿವಾಲಯ ವಾಹಿನಿ, ಇ-ಆಫೀಸ್ ಸೇರಿ ಒಟ್ಟು 4,199 ಕಡತಗಳು ವಿಲೇವಾರಿಯಾಗದೆ ಬಾಕಿ ಇರುವುದು ಇದೀಗ ಬಹಿರಂಗವಾಗಿದೆ.
ಅರಣ್ಯ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2022ರ ಜೂನ್ 23ರಂದು ನಡೆದ ಸಭೆಯಲ್ಲಿ ಕಡತಗಳು ವಿಲೇವಾರಿಯಾಗದೆ ಇರುವ ಕುರಿತು ಚರ್ಚೆಯಾಗಿದೆ. ಅದರಲ್ಲೂ ತುಂಬಾ ಮುಖ್ಯವಾಗಿ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಲೇವಾರಿಯಾಗದೆ ಇರುವ ಕಡತಗಳ ಸಂಖ್ಯೆಯೂ ಹೆಚ್ಚಿನ ಸಂಖ್ಯೆಯಲ್ಲಿವೆ. ಸಭೆ ನಡಾವಳಿಗಳ ಪ್ರತಿಯು the-file.in ಗೆ ಲಭ್ಯವಾಗಿದೆ.
ಕಡತ ವಿಲೇವಾರಿ ಕುರಿತು ಸಚಿವ ಉಮೇಶ್ ಕತ್ತಿ ಅವರು ನಿಯಮಿತವಾಗಿ ಸಭೆ ನಡೆಸದಿರುವುದೇ 4,199 ಕಡತಗಳು ಬಾಕಿ ಇರುವುದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪ್ರತೀ ತಿಂಗಳು ನಡೆಯುವ ಕೆಡಿಪಿ ಸಭೆಯಲ್ಲಿಯೂ ಎಲ್ಲಾ ಇಲಾಖೆಗಳ ಕಡತಗಳ ವಿಲೇವಾರಿ ಕುರಿತು ಚರ್ಚೆ ನಡೆಯುತ್ತದೆಯಾದರೂ ಅರಣ್ಯ ಇಲಾಖೆಯಲ್ಲಿ ಮಾತ್ರ ವಿಲೇವಾರಿಯಾಗದ ಕಡತಗಳು ಬೆಟ್ಟದಂತೆ ಏರುತ್ತಿವೆ.
2022ರ ಮೇ 16ರಿಂದ ಜೂನ್ 15ರವರೆಗಿನ ಅಂಕಿ ಅಂಶಗಳ ಪ್ರಕಾರ ಸಚಿವಾಲಯ ವಾಹಿನಿಯಲ್ಲಿ 2,399 ಮತ್ತು ಇ-ಆಫೀಸ್‌ನಲ್ಲಿ 1,800 ಕಡತಗಳು ಸೇರಿ ಒಟ್ಟು 4,199 ಕಡತಗಳು ಬಾಕಿ ಇವೆ. ಈ ಪೈಕಿ 3 ವರ್ಷಗಳಿಗಿಂತ ಹಳೆಯದಾದ ಕಡತಗಳ ಸಂಖ್ಯೆ 1,069ರಷ್ಟಿದೆ. ಇದರಲ್ಲಿ ನ್ಯಾಯಾಲಯ, ಲೋಕಾಯುಕ್ತ, ಕರ್ನಾಟಕ ಆಡಳಿತ ನ್ಯಾಯಮಂಡಳಿ, ಇಲಾಖೆ ವಿಚಾರಣೆ, ಅರಣ್ಯ ವಿಮೋಚನಾ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳೇ ಹೆಚ್ಚಿರುವುದು ನಡಾವಳಿಯಿಂದ ತಿಳಿದು ಬಂದಿದೆ.
ಕರ್ತವ್ಯಲೋಪ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಹಣಕಾಸು ದುರುಪಯೋಗ ಸೇರಿದಂತೆ ಇನ್ನಿತರ ಲೋಪಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ವಿಚಾರಣೆಗೆ ಗುರಿಯಾಗಿರುವ ಅಧಿಕಾರಿ, ನೌಕರರ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಭಾಗದಲ್ಲಿ ಇದುವರೆಗೆ ಒಟ್ಟು 25 ಕಡತಗಳು ಬಾಕಿ ಇವೆ. ಕಾರಣ ಕೇಳುವ ನೋಟಿಸ್‌ಗೆ
ಆಪಾದಿತರೆಂದು ಹೇಳಲಾಗಿರುವ ಬಹುತೇಕ ಅಧಿಕಾರಿಗಳಿಂದ ಇಲಾಖೆಗೆ ಉತ್ತರ ಬಂದಿಲ್ಲ ಎಂದು ಗೊತ್ತಾಗಿದೆ.
ಇನ್ನು ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯಲ್ಲಿ ನ್ಯಾಯಾಲಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 797 ಪ್ರಕರಣಗಳು ಚಾಲ್ತಿಯಲ್ಲಿವೆ. ಈ ಪೈಕಿ ಸರ್ವೋಚ್ಚ ನ್ಯಾಯಾಲಯದಲ್ಲಿ 70, ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ 493, ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ 138, ಇತರ ನ್ಯಾಯಾಲಯಗಳಲ್ಲಿ 96 ಪ್ರಕರಣಗಳು ಬಾಕಿ ಇವೆ.
ಅರಣ್ಯ ಇಲಾಖೆಯಲ್ಲಿ ಕಡತ ವಿಲೇವಾರಿ ಮತ್ತು ವಿವಿಧ ಪ್ರಕರಣಗಳು ಬಾಕಿ ಇದ್ದರೂ ಸಚಿವ ಉಮೇಶ್ ಕತ್ತಿ ಅವರು ನಿಯಮಿತವಾಗಿ ಸಭೆ ನಡೆಸುತ್ತಿಲ್ಲ.
ಬದಲಿಗೆ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇರಿಸುವುದರಲ್ಲಿಯೇ ಕಾಲಹರಣ ಮಾಡುತ್ತಿರುವ ಕಾರಣ ಅಧಿಕಾರಿಶಾಹಿಯೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.