ಕಾಣೆಯಾದ ಸಾರನಾಥ ಸಿಂಹಗಳು!

Update: 2022-07-14 04:01 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನೂತನ ಸಂಸತ್ ಭವನ ತನ್ನ ನಿರ್ಮಾಣ ಹಂತದಲ್ಲೇ ಹತ್ತು ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿತ್ತು. ಇದೀಗ ಅಲ್ಲಿ ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನವೂ ಆ ವಿವಾದಗಳ ಸಾಲಿಗೆ ಸೇರಿಕೊಂಡಿರುವುದು ವಿಪರ್ಯಾಸವಾಗಿದೆ. ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನ ಎರಡು ಕಾರಣಗಳಿಗಾಗಿ ತೀವ್ರ ಟೀಕೆಗೆ ಒಳಗಾಗಿದೆ. ಮೊದಲನೆಯದು, ರಾಷ್ಟ್ರೀಯ ಲಾಂಛನವನ್ನು ಪ್ರಧಾನಿಯೊಬ್ಬರೇ ಅನಾವರಣಗೊಳಿಸಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆಯನ್ನು ವಿರೋಧ ಪಕ್ಷಗಳು ಮುಂದಿಟ್ಟಿವೆ. ಅನಾವರಣ ಸಂದರ್ಭದಲ್ಲಿ ವಿರೋಧ ಪಕ್ಷಗಳನ್ನು ಮತ್ತು ಪ್ರಜಾಪ್ರಭುತ್ವದ ಇತರ ಅಂಗಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಮೂರು ಅಂಗಗಳ ಸಮನ್ವಯ ಇಲ್ಲಿ ಬುಡಮೇಲಾಗಿದೆ. ಸರಕಾರದ ಮುಖ್ಯಸ್ಥರಾಗಿ ಪ್ರಧಾನಿಯವರು ಈ ಲಾಂಛನವನ್ನು ಅನಾವರಣಗೊಳಿಸಬಾರದಿತ್ತು, ಕನಿಷ್ಠ ವಿರೋಧ ಪಕ್ಷಗಳ ನಾಯಕರನ್ನಾದರೂ ಈ ಅನಾವರಣ ಕಾರ್ಯಕ್ರಮದಲ್ಲಿ ಒಳಗೊಳ್ಳುವಂತೆ ಮಾಡಬೇಕಾಗಿತ್ತು ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಮುಖ ಆರೋಪವಾಗಿದೆ.

ಪ್ರಜಾಪ್ರಭುತ್ವದ ಅಂತಸ್ಸತ್ವವಾಗಿರುವ ಬಹುತ್ವ ಹಂತಹಂತವಾಗಿ ದೇಶದಲ್ಲಿ ನಾಶವಾಗುತ್ತಿದೆ ಎನ್ನುವ ಆತಂಕದ ಹಿನ್ನೆಲೆಯಲ್ಲಿ ಮೇಲಿನ ಆರೋಪಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಕೇಂದ್ರ ಸರಕಾರದೊಳಗಿರುವ ಗೃಹ, ರಕ್ಷಣಾ, ವಿದೇಶಾಂಗ ಖಾತೆಗಳೂ ತಮ್ಮ ಸ್ವಂತಿಕೆಯನ್ನು ಕಳೆದುಕೊಂಡಿದ್ದು, ಎಲ್ಲೆಲ್ಲೂ ಮೋದಿಯವರ ಹೆಸರೇ ರಾರಾಜಿಸುತ್ತಿದೆ ಅಥವಾ ಮೋದಿಯವರ ಹೆಸರಿನಲ್ಲಿ ಸ್ಥಾಪಿತ ಹಿತಾಸಕ್ತಿಗಳು ಅಧಿಕಾರಿಗಳ ಮೂಲಕ ಸರಕಾರವನ್ನು ಮುನ್ನಡೆಸುತ್ತಿವೆ. ಆ ಕಾರಣಕ್ಕೆ, ಪ್ರಧಾನಿಯವರು ಅನಾವರಣ ಮಾಡಿರುವ ಸಿಂಹಗಳು ಯಾವ ಕಾರಣಕ್ಕೂ ದೇಶದ ಪ್ರಜಾಸತ್ತೆಯನ್ನು ಬಲಿತೆಗೆದುಕೊಳ್ಳುವ ಹಸಿವಿನಿಂದ ಘರ್ಜಿಸುತ್ತಿರುವ ಸಿಂಹಗಳಾಗದೆ ಇರಲಿ ಎನ್ನುವುದು ದೇಶದ ಹಿರಿಯರ ಕಾಳಜಿಯಾಗಿದೆ. ನೂತನ ಸಂಸತ್ ಭವನದ ಮೇಲಿನ ರಾಷ್ಟ್ರೀಯ ಲಾಂಛನವನ್ನು ತಿರುಚಿ ನಿರ್ಮಿಸಲಾಗಿದೆ ಎನ್ನುವುದು ಟೀಕೆಗಳಿಗೆ ಇನ್ನೊಂದು ಕಾರಣ. ವೌರ್ಯವಂಶದ ಚಕ್ರವರ್ತಿ ಸಾಮ್ರಾಟ ಅಶೋಕ, ವಾರಣಾಸಿಯ ಸಾರನಾಥದಲ್ಲಿ ಸ್ಥಾಪಿಸಿದ ಸ್ತಂಭದಲ್ಲಿ ಈ ನಾಲ್ಕು ಸಿಂಹಗಳಿರುವ ಲಾಂಛನವಿದೆ. ಈ ಲಾಂಛನವನ್ನು ಆಯ್ದುಕೊಳ್ಳಲು ಹಲವು ಕಾರಣಗಳಿದ್ದವು. ಸ್ವದೇಶಿ ಅರಸನಾಗಿ ಇಡೀ ಭಾರತವನ್ನು ಆಳಿದ ಹೆಗ್ಗಳಿಕೆ ಸಾಮ್ರಾಟ ಅಶೋಕನಿಗೆ ಸೇರುತ್ತದೆ. ಶೌರ್ಯ ಮತ್ತು ಅಹಿಂಸೆ ಎರಡಕ್ಕೂ ಅವನೂ ಸಂಕೇತವಾಗಿದ್ದಾನೆ. ಸರ್ವ ಯುದ್ಧದಲ್ಲಿ ಗೆದ್ದ ಬಳಿಕವೂ, ಯುದ್ಧದಿಂದಾದ ಸಾವು ನೋವುಗಳಿಗೆ ವಿಷಾದಿಸಿ ಬೌದ್ಧ ಧರ್ಮಕ್ಕೆ, ಅದರ ಅಹಿಂಸಾತತ್ವಕ್ಕೆ ಶರಣಾದ ಶ್ರೇಷ್ಠ ಚಕ್ರವರ್ತಿ ಆತ. ಭಾರತದಲ್ಲಿ ಬೌದ್ಧ ಧರ್ಮದ ಏಳಿಗೆಗೆ ಬಹುದೊಡ್ಡ ಕೊಡುಗೆಗಳನ್ನು ನೀಡಿದಾತ. ಆದುದರಿಂದಲೇ, ಸಾರನಾಥದ ಸಿಂಹಗಳ ಗಾಂಭೀರ್ಯವನ್ನು, ಸೊಬಗನ್ನು ಸ್ವತಂತ್ರ ಭಾರತ ತನ್ನ ಲಾಂಛನವಾಗಿಸಿತು. ಆದರೆ ಈಗ ಅನಾವರಣಗೊಳಿಸಿರುವ ಸಿಂಹಗಳು ಸಾರನಾಥದಲ್ಲಿರುವ ಸಿಂಹಗಳಲ್ಲ ಎನ್ನುವುದು ವಿರೋಧ ಪಕ್ಷಗಳ ಆರೋಪ. ಇಲ್ಲಿ ಸಿಂಹಗಳು ಆಕ್ರಮಣಕಾರಿ ರೂಪದಲ್ಲಿ ನಿಂತಿವೆ.

ಸಾರನಾಥ ಸ್ತಂಭದ ಸಿಂಹಗಳಲ್ಲಿರುವ ಗಾಂಭೀರ್ಯ, ಮೋಹಕತೆ ಇಲ್ಲಿಲ್ಲ. ಸಿಂಹಗಳ ಮುಖದಲ್ಲಿ ಕ್ರೌರ್ಯವನ್ನು ಪ್ರತಿಷ್ಠಾಪಿಸಿ, ಅದೇ ಕ್ರೌರ್ಯವನ್ನು ನೂತನ ರಾಷ್ಟ್ರದ ವೌಲ್ಯವಾಗಿಸಲು ಸರಕಾರ ಹೊರಟಿದೆಯೇ ಎನ್ನುವ ಪ್ರಶ್ನೆಯೊಂದು ಜನರಲ್ಲಿ ಎದ್ದಿದೆ. ‘ಈ ಸಿಂಹಗಳು ಘರ್ಜಿಸುತ್ತಿವೆ’ ಎಂದು ಕೆಲವು ಮೋದಿಯವರ ಕಟ್ಟಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಹೌದು. ಇಲ್ಲಿ ಕಾಣುತ್ತಿರುವುದು ಹಸಿದಿರುವ ಸಿಂಹಗಳು. ಹಸಿವಿನ ಕಾರಣದಿಂದ ಸಹಜವಾಗಿಯೇ ಕೆರಳಿವೆ. ಇದು ಭಾರತದ ಒಡಲಾಳವನ್ನು ಪ್ರತಿನಿಧಿಸುತ್ತಿದೆಯೆಂದಾದರೆ ಅದನ್ನು ಒಪ್ಪಬಹುದಿತ್ತು. ಕಳೆದ ನಾಲ್ಕು ವರ್ಷಗಳಿಂದ ದೇಶದಲ್ಲಿ ನಿರುದ್ಯೋಗ, ಬಡತನ ಹೆಚ್ಚಾಗಿವೆ. ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ. ಏರುತ್ತಿರುವ ತೈಲ ಬೆಲೆ, ಸಿಲಿಂಡರ್ ಬೆಲೆಗಳಿಂದ ಜನರು ಕಂಗಾಲಾಗಿದ್ದಾರೆ. ಪ್ರಧಾನಿಯವರ ಬಣ್ಣದ ಮಾತುಗಳನ್ನು ನಂಬಿ ಸೋತ ಜನರು ಇದೀಗ ಹಸಿವಿನಿಂದ ಕೆರಳಿ ನಿಂತಿದ್ದಾರೆ. ಅವರ ಸಿಟ್ಟು, ಆಕ್ರೋಶವನ್ನು ಸಿಂಹಗಳ ಮುಖದಲ್ಲಿ ಪ್ರತಿಷ್ಠಾಪಿಸಲಾಗಿದೆಯೇ ಎಂದು ಪ್ರಜ್ಞಾವಂತರು ಸರಕಾರವನ್ನು ಕೇಳುತ್ತಿದ್ದಾರೆ. ಕೋರೆಹಲ್ಲುಗಳನ್ನು ಪ್ರದರ್ಶಿಸುತ್ತಿರುವ ಸಿಂಹಗಳು, ಗುಜರಾತ್ ಹತ್ಯಾಕಾಂಡವನ್ನು, ಪ್ರತಿಭಟನೆ ನಡೆಸಿ ಬೀದಿಯಲ್ಲೇ ಪ್ರಾಣ ಅರ್ಪಿಸಿದ ರೈತರನ್ನು, ಲಾಕ್‌ಡೌನ್ ಸಂದರ್ಭದಲ್ಲಿ ಹಸಿವಿನಿಂದ ಮೃತಪಟ್ಟ ವಲಸೆ ಕಾರ್ಮಿಕರನ್ನು ನೆನಪಿಸುವಂತಾಗಬಾರದು.

ಸಾರನಾಥದಲ್ಲಿರುವ ಅಶೋಕ ಚಕ್ರವರ್ತಿಯ ವೈಭವದ ದಿನಗಳನ್ನು ಹೇಳುವ ರಾಜಗಂಭೀರ ಸಿಂಹಗಳು ಕೋರೆ ಹಲ್ಲುಗಳನ್ನು ಪ್ರದರ್ಶಿಸುವುದಿಲ್ಲ. ಈಗ ಕಾಣುತ್ತಿರುವುದು ಈ ದೇಶದ ಬಡವರ ಮೇಲೆಯೇ ದಾಳಿ ನಡೆಸುವುದಕ್ಕಾಗಿ ಕಾರ್ಪೊರೇಟ್ ಕುಳಗಳು ಸಾಕಿದ ಸಿಂಹಗಳಾಗಿರುವ ಸಾಧ್ಯತೆಗಳಿವೆ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಒಂದು ರಾಷ್ಟ್ರೀಯ ಲಾಂಛನವನ್ನು ತಮಗೆ ಬೇಕಾದಂತೆ ತಿರುಚುವ ಅಧಿಕಾರ ಸರಕಾರಕ್ಕಿದೆಯೇ? ಅದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೆ? ಈ ಪ್ರಶ್ನೆಗೂ ಸರಕಾರದ ವತಿಯಿಂದ ಸ್ಪಷ್ಟೀಕರಣದ ಅಗತ್ಯವಿದೆ. ‘ಲಾಂಛನಕ್ಕೆ ಸಾರನಾಥ ಸಿಂಹಗಳೇ ಮಾದರಿ’ ಎಂಬ ಹೇಳಿಕೆ ಈಗಾಗಲೇ ಬಂದಿದೆಯಾದರೂ, ಇದನ್ನು ಸರಕಾರದ ವತಿಯಿಂದ ಪೂರ್ಣ ಪ್ರಮಾಣದ ಸ್ಪಷ್ಟೀಕರಣವೆಂದು ಭಾವಿಸಲು ಸಾಧ್ಯವಿಲ್ಲ. ಈವರೆಗೆ ನಗುಮುಖದಲ್ಲಿದ್ದ ಸಿಂಹಗಳು ಏಕಾಏಕಿ ತಮ್ಮ ಕೋರೆ ಹಲ್ಲುಗಳನ್ನು ಪ್ರದರ್ಶಿಸುತ್ತಾ, ಘರ್ಜಿಸುವ ರೂಪದಲ್ಲಿದ್ದರೆ ಅದರಿಂದ ಭಾರತದ ಹಿರಿಮೆ ಹೆಚ್ಚಾಗುವುದಿಲ್ಲ. ಈ ಸಿಂಹಗಳ ಮೂಲಕ ಪಕ್ಕದ ಚೀನಾವನ್ನು ನಾವು ಹೆದರಿಸಲು ಆಗುವುದಿಲ್ಲ. ಇಷ್ಟಕ್ಕೂ ಕೇವಲ ಲಾಂಛನಗಳ ಬದಲಾವಣೆಗಳಿಂದ ಈ ದೇಶದ ಆರ್ಥಿಕ, ಸಾಮಾಜಿಕ, ಆರೋಗ್ಯ, ಶಿಕ್ಷಣ ಕ್ಷೇತ್ರಗಳನ್ನು ಬದಲಿಸಲು ಸಾಧ್ಯವಿಲ್ಲ ಎನ್ನುವ ಕಟುವಾಸ್ತವವನ್ನು ನಾವು ಒಪ್ಪಿಕೊಳ್ಳಲೇಬೇಕಾಗಿದೆ.

ಈ ಎಲ್ಲ ಕ್ಷೇತ್ರಗಳಲ್ಲಿ ಆಗಿರುವ ವೈಫಲ್ಯಗಳನ್ನು ಮುಚ್ಚಿ ಹಾಕುವುದಕ್ಕಾಗಿಯೇ ಇಂತಹ ‘ಗಿಮಿಕ್’ಗಳನ್ನು ಮಾಡುವುದಕ್ಕೆ ಸರಕಾರ ಮುಂದಾಗಿದೆಯೇ? ಭಾರತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡುತ್ತಾ, ಇಲ್ಲಿರುವ ಜನಸಂಖ್ಯೆಯನ್ನು ಸಂಪನ್ಮೂಲವಾಗಿ ಪರಿವರ್ತಿಸಿ ಅವರಿಗೆ ಉದ್ಯೋಗ ಭದ್ರತೆಯನ್ನು ನೀಡಿದರೆ ಸಾಕು, ಭಾರತವೆನ್ನುವ ಸಿಂಹಕ್ಕೆ ವಿಶ್ವ ಮಂಡಿಯೂರುತ್ತದೆ. ನಿರುದ್ಯೋಗ, ಬಡತನ, ಪೆಟ್ರೋಲ್, ಸಿಲಿಂಡರ್ ಬೆಲೆಯೇರಿಕೆಗಳ ಕುರಿತಂತೆ ಜನರು ಚರ್ಚೆಗಳನ್ನು ಮಾಡುವುದು ನಮ್ಮ ಸರಕಾರಕ್ಕೆ ಬೇಕಾಗಿಲ್ಲ. ಆದುದರಿಂದ ನಮ್ಮ ಚರ್ಚೆಯ ದಿಕ್ಕು ತಪ್ಪಿಸುವುದಕ್ಕಾಗಿಯೇ ಪ್ರತಿಮೆ, ಲಾಂಛನ ಮೊದಲಾದವುಗಳನ್ನು ನೆಚ್ಚಿಕೊಂಡಿದೆ. ಸಿಂಹಗಳ ಮುಖಗಳನ್ನು ಬದಲಿಸುವ ಮೂಲಕ, ತನ್ನ ಮುಖ ಉಳಿಸಿಕೊಳ್ಳುವುದು ಸಾಧ್ಯವಿಲ್ಲ. ಜನರನ್ನು ಬಹುಕಾಲ ಧರ್ಮ, ರಾಷ್ಟ್ರೀಯತೆ ಮೊದಲಾದ ವಿಸ್ಮತಿಗೆ ತಳ್ಳುವುದಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಸರಕಾರ ಶ್ರೀಲಂಕಾದ ಇಂದಿನ ಸ್ಥಿತಿಯನ್ನು ನೋಡಿಯಾದರೂ ಅರ್ಥ ಮಾಡಿಕೊಳ್ಳಬೇಕು. ತನ್ನನ್ನು ತಾನು ‘ಸಿಂಹಳ’ ಎಂದೇ ಕರೆದುಕೊಂಡರೂ ಶ್ರೀಲಂಕಾಕ್ಕೆ ಸಿಂಹವಾಗಿ ಬಾಳುವುದಕ್ಕೆ ಸಾಧ್ಯವಾಗಲಿಲ್ಲ. ಇಂದು ಅದರ ಅಧ್ಯಕ್ಷರು ನರಿಯಂತೆ ಪಲಾಯನ ಮಾಡುತ್ತಿದ್ದಾರೆ. ಇದರಿಂದ ಭಾರತ ಕಲಿಯಬೇಕಾದುದು ಬಹಳಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News