ಮಾನವೀಯತೆ ಜಾಗೃತಗೊಳಿಸಿದ ಶರಣ ಹಡಪದ ಅಪ್ಪಣ್ಣ: ರೇಖಾ ಬನ್ನಾಡಿ
ಉಡುಪಿ, ಜು.14: ತಳಮೂಲದಿಂದ ಬಂದ ವಚನಕಾರರಾಗಿ ತನ್ನ ವೃತ್ತಿ ಭಾಷೆಯ ಮೂಲಕವೇ ಅನುಭಾವ, ಸಾಮಾಜಿಕ ಕಳಕಳಿ, ಮಾನವೀಯತೆ ನೆಲೆಯಲ್ಲಿ ವಚನ ರಚನೆ ಮಾಡಿದ ಶರಣ ಹಡಪದ ಅಣ್ಣಪ್ಪ ಎಂದು ಕನ್ನಡದ ನಿವೃತ್ತ ಪ್ರಾಧ್ಯಾಪಕಿ ಹಾಗೂ ಲೇಖಕಿ ಕುಂದಾಪುರದ ಡಾ.ರೇಖಾ ವಿ.ಬನ್ನಾಡಿ ಹೇಳಿದ್ದಾರೆ.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬುಧವಾರ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಿವಶರಣ ಹಡಪದ ಅಪ್ಪಣ್ಣರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.
ಬಸವಣ್ಣನ ಸಮಕಾಲೀನರೂ, ಆಪ್ತ ಒಡನಾಡಿಯೂ ಆಗಿದ್ದ ಹಡಪದ ಅಪ್ಪಣ್ಣ, ಜಾತಿ ವ್ಯವಸ್ಥೆ, ವೌಢ್ಯತೆ ಮುಂತಾದ ಸಾಮಾಜಿಕ ನ್ಯೂನತೆಗಳನ್ನು ಹೋಗಲಾಡಿಸುವ ವಚನಗಳ ಮೂಲಕ ಮಾನವೀಯತೆಯನ್ನು ಜಾಗೃತಗೊಳಿಸಿ ದವರು ಎಂದರು.
ಹಡಪದ ಅಪ್ಪಣ್ಣ ಅನುಭವ ಮಂಟಪದ ಒಬ್ಬ ಸಕ್ರೀಯ ಸದಸ್ಯರಾಗಿದ್ದು, ಬಸವಣ್ಣನ ನಿಕಟವರ್ತಿಯಾಗಿದ್ದರು. ಪತ್ನಿ ಲಿಂಗಮ್ಮ ಶಿವಶರಣೆ ಹಾಗೂ ವಚನ ಕಾರ್ತಿಯಾಗಿದ್ದರು.1160 ಅಪ್ಪಣ್ಣನ ಕಾಲ ಎಂದು ತಿಳಿದು ಬರುತ್ತದೆ ಹಾಗೂ ಅವರ 246 ವಚನಗಳು ಲಭ್ಯದ್ದು, ಹಡಪದ ವೃತ್ತಿಯನ್ನು ಮಾಡಿಕೊಂಡು ಬಂದ ಇವರು ತಮ್ಮ ಕಾಯಕ, ಜೀವನ ಹಾಗೂ ಸೇವಾ ನಿಷ್ಠೆಗೆ ಹೆಸರಾಗಿದ್ದರು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ,ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ್ ರೈ ಮಾತನಾಡಿ, ಹಡಪದ ಅಪ್ಪಣ್ಣರಂಥ ಶಿವಶರಣರ ಬಗ್ಗೆ ಹಾಗೂ ಅವರ ವಚನಗಳ ಕುರಿತು ಎಲ್ಲರಲ್ಲಿಯೂ ಅರಿವು ಮೂಡಿಸುವ ಕೆಲಸ ಸ್ವಾಗತಾರ್ಹ ಎಂದರು.
ಕಾಲೇಜಿನ ಗ್ರಂಥಪಾಲಕ ಪ್ರೊ.ಕೃಷ್ಣ ವಚನ ಗಾಯನ ನಡೆಸಿಕೊಟ್ಟರು. ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಡಾ.ಮೇವಿ ಮಿರಾಂಡ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರೆ, ಕನ್ನಡ ಸಹ ಪ್ರಾಧ್ಯಾಪಕ ಡಾ. ವೆಂಕಟೇಶ್ ಹೆಚ್.ಕೆ. ಕಾರ್ಯಕ್ರಮ ನಿರೂಪಿಸಿದರು. ಸಂಖ್ಯಾ ಶಾಸ್ತ್ರ ವಿಭಾಗ ಮುಖ್ಯಸ್ಥ ಉಮೇಶ್ ಪೈ ವಂದಿಸಿದರು.