ಪರಿಶಿಷ್ಟ ಪಂಗಡದ ತರಬೇತುದಾರರಿಗೆ ಟೂಲ್‌ಕಿಟ್ ಖರೀದಿ ಸಂಬಂಧ ಕರಾರು ಪತ್ರಕ್ಕೆ ತಡವಾಗಿ ಸಹಿ!
ಬೆಂಗಳೂರು: ರಾಜ್ಯದ ಕೈಗಾರಿಕೆ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತರಬೇತುದಾರರಿಗೆ ಟೂಲ್‌ಕಿಟ್ ಖರೀದಿ ಸಂಬಂಧ ಮಾಡಿಕೊಂಡಿದ್ದ ಕರಾರು ಪತ್ರಕ್ಕೆ ತಡವಾಗಿ ಸಹಿ ಹಾಕಿದ್ದರು ಎಂಬುದು ಇದೀಗ ಬಹಿರಂಗವಾಗಿದೆ. ಕರಾರು ಪತ್ರಕ್ಕೆ ತಡವಾಗಿ ಸಹಿ ಹಾಕಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಟೂಲ್ ಕಿಟ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಜನರನ್ನು ಸಚಿವ ಅಶ್ವತ್ಥನಾರಾಯಣ್ ವಂಚಿಸುತ್ತಿದ್ದಾರೆ ಎಂಬ ಆರೋಪ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಿಸಲು ಕರೆದಿದ್ದ ಟೆಂಡರ್‌ನಲ್ಲಿ ತಮ್ಮ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ಸಚಿವ ಅಶ್ವತ್ಥನಾರಾಯಣ್ ಅವರು ನಿರಾಕರಿಸಿರುವ ಬೆನ್ನಲ್ಲೇ ಕರಾರು ಪತ್ರಕ್ಕೆ ತಡವಾಗಿ ಸಹಿ ಹಾಕಿರುವುದು ಮುನ್ನೆಲೆಗೆ ಬಂದಿದೆ. ಈ ಸಂಬಂಧ ಟಿಪ್ಪಣಿ ಹಾಳೆಗಳು ‘the-file.in'ಗೆ ಲಭ್ಯವಾಗಿವೆ.
ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾರ್ಯಕ್ರಮದಡಿ ಉಚಿತವಾಗಿ ವಿತರಿಸುವ ಕಾರ್ಯಕ್ರಮದಡಿ 2021-22ರಲ್ಲಿ ಹಂಚಿಕೆಯಾಗಿದ್ದ 16.67 ಕೋಟಿ ರೂ.ಗಳನ್ನು ಮೇ 2022ರೊಳಗೇ ವೆಚ್ಚ ಮಾಡಬೇಕು ಎಂಬ ಸೂಚನೆಯನ್ನು ಇಲಾಖೆಯು ಪಾಲಿಸಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಟೂಲ್‌ಕಿಟ್ ಮತ್ತು ಲೇಖನ ಸಾಮಗ್ರಿಗಳು ನಿಗದಿತ ಅವಧಿಯಲ್ಲಿ ಸರಬರಾಜಾಗದೇ ವಿಳಂಬವಾಗಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
‘ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯವರು ಪ್ರಸ್ತಾಪಿತ ಲೆಕ್ಕ ಶೀರ್ಷಿಕೆಯಡಿ ಹಂಚಿಕೆಯಾಗಿದ್ದ 16.67 ಕೋಟಿ ರೂ. ಮೊತ್ತವನ್ನು ತಮ್ಮ ಉಳಿತಾಯಖಾತೆಗೆ ಜಮೆ ಮಾಡಿಕೊಂಡಿರುತ್ತಾರೆ. ಆದರೆ ಟೂಲ್ ಕಿಟ್ ಖರೀದಿಗೆ ಸಂಬಂಧ ಆಯುಕ್ತರು ತಡವಾಗಿ ಅಂದರೆ ದಿನಾಂಕ 27.06.2022ರಂದು ಕರಾರುಪತ್ರಕ್ಕೆ ಸಹಿ ಹಾಕಿದ್ದು, ಇಷ್ಟು ವಿಳಂಬವಾಗಿ ಕರಾರಿಗೆ ಸಹಿ ಹಾಕಲು ಕಾರಣ ವೇನೆಂಬುದರ ಬಗ್ಗೆ ಮಾಹಿತಿ ನೀಡಿರುವುದಿಲ್ಲ. ಬದಲಾಗಿ ತಮ್ಮ ಖಾತೆಗೆ ಜಮಾ ಮಾಡಿಕೊಂಡಿರುವ ಮೊತ್ತವನ್ನು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದವರೆಗೂ ಅವಧಿ ವಿಸ್ತರಣೆಗೆ ಮಾಡುವಂತೆ ಕೋರಿರುತ್ತಾರೆ,’ ಎಂದು ಇಲಾಖೆ ಅಧಿಕಾರಿಗಳು ಟಿಪ್ಪಣಿ ಹಾಳೆಯಲ್ಲಿ ನಮೂದಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾರ್ಯಕ್ರಮದಡಿ ಉಚಿತ ವಿತರಿಸಸುವ ಕಾರ್ಯಕ್ರಮವು 2021-22ನೇ ಸಾಲಿಗೆ ಸಂಬಂಧಿಸಿದ್ದಾಗಿದೆ. ಅಲ್ಲದೆ ಈಗಾಗಲೇ ವಿಳಂಬವೂ ಆಗಿದೆ. ಆದರೆ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಆಯುಕ್ತರು ಕೋರಿರುವಂತೆ ಪ್ರಸ್ತುತ ಆರ್ಥಿಕ ವರ್ಷದ ಅಂತ್ಯದವರೆಗೆ ಅವಕಾಶ ನೀಡುವುದು ಸೂಕ್ತವಲ್ಲ. ಆದ್ದರಿಂದ 2021-22ನೇ ಸಾಲಿನಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಹಂಚಿಕೆಯಾಗಿದ್ದ ಹಾಗೂ ಪ್ರಸ್ತುತ ಆಯುಕ್ತರ ಉಳಿತಾಯ ಖಾತೆಗೆ ಜಮೆ ಮಾಡಿರುವ 16.67 ಕೋಟಿ ರೂ. ಮೊತ್ತವನ್ನು ವೆಚ್ಚ ಮಾಡುವ ಅವಧಿಯನ್ನು 2022ರ ಆಗಸ್ಟ್ ಅಂತ್ಯದವರೆಗೆ ವಿಸ್ತರಿ ಸುವಂತೆ ಆರ್ಥಿಕ ಇಲಾಖೆಯನ್ನು ಕೋರಬಹುದು ಎಂದೂ ಇಲಾಖಾಧಿಕಾರಿಗಳು ಅಭಿಪ್ರಾಯ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಟೂಲ್‌ಕಿಟ್ ಖರೀದಿಗೆ ಸಂಬಂಧಿಸಿದಂತೆ ಇಂಟೆಲಿಕ್ ಸಿಸ್ಟಂನೊಂದಿಗೆ 2022ರ ಜೂ.27ರಂದು ಕರಾರುಪತ್ರವನ್ನು ಸಹಿ ಮಾಡಿ ಸರಬರಾಜುದಾರರಿಗೆ ನೀಡಲಾಗಿತ್ತು. 2022ರ ಜೂ.29ರಂದು ಆಟೊಮೊಬೈಲ್ ಮತ್ತು ಇಲೆಕ್ಟ್ರಾನಿಕ್ ಮೆಕಾನಿಕ್ ಸೆಕ್ಟರ್‌ಗಳ ಪೂರ್ವ ರವಾನೆ ಪರಿಶೀಲನೆ ಮಾಡಲಾಗಿತ್ತು. ಉಳಿದ ಸೆಕ್ಟರ್‌ಗಳ ಪರಿಶೀಲನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ 2022ರ ಜುಲೈ ಮೊದಲ ವಾರದಲ್ಲಿ ಟೂಲ್‌ಕಿಟ್‌ಗಳನ್ನು ಎಲ್ಲ ನೋಡಲ್ ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗಳಿಗೆ ಸರಬರಾಜು ಮಾಡಲಾಗುವುದು ಎಂದು ಕಂಪೆನಿಯು 2022ರ ಮೇ 30ರಂದು ಬರೆದಿದ್ದ ಪತ್ರದಲ್ಲಿ ತಿಳಿಸಿತ್ತು.
ಟೂಲ್‌ಕಿಟ್ ಮತ್ತು ಲೇಖನ ಸಾಮಗ್ರಿ ಗಳ ಖರೀದಿಸಿ ಉಚಿತವಾಗಿ ವಿತರಿಸುವ ಉದ್ದೇಶದಿಂದ ಕರೆದಿದ್ದ ಟೆಂಡರ್ ಬಗ್ಗೆ ದೂರು ಸ್ವೀಕೃತವಾಗಿತ್ತು. ಹೀಗಾಗಿ ಅದನ್ನು ರದ್ದುಪಡಿಸಿ ಮರು ಟೆಂಡರ್ ಕರೆಯಲಾಗಿತ್ತು. ಹೀಗಾಗಿ ಇದನ್ನು ಇತ್ಯರ್ಥಪಡಿಸಲು ಸಾಕಷ್ಟು ಸಮಯ ವ್ಯರ್ಥವಾಗಿತ್ತು.
ಇದಾದ ನಂತರ ಯಶಸ್ವಿ ಬಿಡ್‌ದಾರರು ಟೂಲ್‌ಕಿಟ್‌ಗಳನ್ನು ಸರಬರಾಜು ಮಾಡಲು ಹಾಗೂ ಬಿಲ್‌ಗಳನ್ನು ಪರಿಶೀಲಿಸಿ ಸರಬರಾಜುದಾರರಿಗೆ ಮೊತ್ತ ಪಾವತಿಸಲು ಸಾಕಷ್ಟು ಸಮಯಾವಕಾಶ ಅಗತ್ಯವಿತ್ತು. ಹೀಗಾಗಿ 2022ರ ಮೇ ಅಂತ್ಯದೊಖಗೆ ವೆಚ್ಚ ಮಾಡಲು ಆರ್ಥಿಕ ಇಲಾಖೆ ಸಹಮತ ಕೋರಿತ್ತು. ಇದಕ್ಕೆ ಆರ್ಥಿಕ ಇಲಾಖೆಯು 2022ರ ಮಾರ್ಚ್ 10ರಂದು ಸಹಮತ ವ್ಯಕ್ತಪಡಿಸಿತ್ತು ಎಂಬ ಅಂಶ ಟಿಪ್ಪಣಿ ಹಾಳೆಯಲ್ಲಿ ನಮೂದಿಸಲಾಗಿದೆ.