ಶಿಕ್ಷಕರು, ಬೋಧಕೇತರ ಸಿಬ್ಬಂದಿಯ ಕೋವಿಡ್ ಪರಿಹಾರ ನಿಧಿಗೆ ಕನ್ನ

Update: 2022-07-20 02:47 GMT

ಬೆಂಗಳೂರು: ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿಸಲು ರಾಜ್ಯ ಸರಕಾರವು ಇದೀಗ ರಾಜ್ಯದ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯ ಕೋವಿಡ್-19 ವಿಶೇಷ ಪ್ಯಾಕೇಜ್ ಪರಿಹಾರ ಧನದ ನಿಧಿಗೆ ಕೈ ಹಾಕಿದೆ.

ಕೋವಿಡ್ ವಿಶೇಷ ಪ್ಯಾಕೇಜ್ ಪರಿಹಾರ ನಿಧಿಗೆ ಬಿಡುಗಡೆಯಾಗಿದ್ದ ಒಟ್ಟು 103.47 ಕೋಟಿ ರೂ. ಪೈಕಿ ಉಳಿಕೆಯಾಗಿರುವ 31.14 ಕೋಟಿ ರೂ.ಗಳನ್ನು ರಾಜ್ಯ ಸರಕಾರವು  ಮಾರ್ಗಪಲ್ಲಟಗೊಳಿಸುವ ಮೂಲಕ ಖಾಸಗಿ ಶಾಲೆಗಳಿಗೆ ಮರುಪಾವತಿಸಲು 2022ರ ಜು. 13ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು 'the-file.in'ಗೆ ಲಭ್ಯವಾಗಿದೆ.

2021-22ನೇ ಸಾಲಿನ ಆಯವ್ಯಯದಲ್ಲಿ ಸರಕಾರೇತರ ಪ್ರಾಥಮಿಕ ಶಾಲೆಗಳಿಗೆ ಸಹಾಯ-ಆರ್‌ಟಿಇ ಅಡಿಯ ಖಾಸಗಿ ಶಾಲೆಗಳ ಶುಲ್ಕ ಮರುಪಾವತಿ ಕಾರ್ಯಕ್ರಮದ ಅನುಷ್ಠಾನಕ್ಕಾಗಿ (ಲೆಕ್ಕ ಶೀರ್ಷಿಕೆ: 2202-01-102-0-05) ಅಡಿ 700 ಕೋಟಿ ರೂ. ನಿಗದಿಪಡಿಸಿತ್ತು. ಈ ಪೈಕಿ 103.47 ಕೋಟಿ ರೂ. ಅನುದಾನವನ್ನು ಕೋವಿಡ್ ವಿಶೇಷ ಪರಿಹಾರ ಧನ ಪ್ಯಾಕೇಜ್ ನಿಧಿಗೆ ನೀಡಿತ್ತು. ಆದರೆ, ಈ ನಿಧಿಯನ್ನು ಬಳಸಿಕೊಂಡು ಪೂರ್ಣ ಪ್ರಮಾಣದಲ್ಲಿ ಅನುದಾನರಹಿತ ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿಗೆ ನೀಡಿಲ್ಲ ಎಂಬ ಆರೋಪಗಳೂ ಇವೆ.

ಈ ನಿಧಿಯಲ್ಲಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಅನುದಾನ ರಹಿತ ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿಗೆ ಪರಿಹಾರ ನೀಡದೆಯೇ ಒದಗಿಸಿದ್ದ ಅನುದಾನದಲ್ಲಿಯೇ ಉಳಿಕೆಯಾಗಿದೆ ಎಂಬ ನೆಪವನ್ನು ಮುಂದಿರಿಸಿ 31.14 ಕೋಟಿ ರೂ.ಗಳನ್ನು ಮತ್ತೆ ಆರ್‌ಟಿಇ ಅಡಿಯ ಖಾಸಗಿ ಶಾಲೆಗಳ ಶುಲ್ಕ ಮರುಪಾವತಿ ಕಾರ್ಯಕ್ರಮಕ್ಕೆ ಮರಳಿಸಿರುವುದು ಆದೇಶದಿಂದ ತಿಳಿದು ಬಂದಿದೆ.

ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿಸಲು ಪ್ರಸಕ್ತ ಆರ್ಥಿಕ ಸಾಲಿಗೆ (2022-23) 500 ಕೋಟಿ ರೂ. ಅನುದಾನ ಲಭ್ಯವಾಗಿಸಿಕೊಂಡಿದೆ. ಆದರೂ ಸಹ ಇದೇ ನಿಧಿಯಲ್ಲಿ ಉಳಿಕೆಯಾಗಿದೆ ಎಂಬುದನ್ನು ಮುಂದಿರಿಸಿಕೊಂಡು ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿಸಲು ಹೊರಡಿಸಿರುವ ಆದೇಶವು  ಚರ್ಚೆಗೆ ಗ್ರಾಸವಾಗಿದೆ. ‘ಕೋವಿಡ್-19 ವಿಶೇಷ ಪರಿಹಾರ ಧನವನ್ನು ವಿತರಿಸಲು ಗುರುತಿಸಲಾದ ಎಲ್ಲ ಅರ್ಜಿ ಫಲಾನುಭವಿಗಳ ಖಾತೆಗೆ 5 ಸಾವಿರ ರೂ. ಜಮೆ ಆಗಿರುವ ಕುರಿತು ಮತ್ತೊಮ್ಮೆ ಖಾತ್ರಿ ಪಡಿಸಿಕೊಳ್ಳಬೇಕು. ಈ ಉದ್ದೇಶಕ್ಕೆ ಮತ್ತೊಮ್ಮೆ ಹೆಚ್ಚುವರಿ ಅನುದಾನ ಒದಗಿಸುವಂತೆ ಯಾವುದೇ ಕಾರಣಕ್ಕೂ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಕೂಡದು’ ಎಂದು ಆದೇಶದಲ್ಲಿ ಹೇಳಲಾಗಿದೆ.

ವಿದ್ಯಾ ವಿಕಾಸ (ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಬೈಸಿಕಲ್ ವಿತರಣೆ) 363.27 ಕೋಟಿ ರೂ., ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಶುಲ್ಕ ಮರುಪಾವತಿಸಲು 500 ಕೋಟಿ ರೂ., ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳಿಗೆ ಮೂಲಭೂತ ಸೌಕರ್ಯಕ್ಕೆ 895.84 ಕೋಟಿ ರೂ., ಮಧ್ಯಾಹ್ನ ಉಪಹಾರ ಮತ್ತು ಕ್ಷೀರಭಾಗ್ಯ ಯೋಜನೆಗೆ 2,251.40 ಕೋಟಿ ರೂ., ಸಮಗ್ರ ಶಿಕ್ಷಣ ಕರ್ನಾಟಕಕ್ಕೆ 278.23 ಕೋಟಿ ರೂ., ಶಿಕ್ಷಣ ಗುಣಮಟ್ಟ ಸುಧಾರಣೆ, ವಿದ್ಯಾರ್ಥಿ ಪ್ರೇರಣಾ ಹಾಗೂ ಗುಣಮಟ್ಟ ಭರವಸೆ ಕಾರ್ಯಕ್ರಮಕ್ಕೆ 15 ಕೋಟಿ ರೂ., ಸೈನಿಕ ಶಾಲೆಗಳಿಗೆ 20.18 ಕೋಟಿ ರೂ. ಸೇರಿ ಒಟ್ಟು 4,323.92 ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ಒದಗಿಸಿರುವುದನ್ನು ಸ್ಮರಿಸಬಹುದು.

103.47 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು

2020-21ನೇ ಸಾಲಿಗೆ ರಾಜ್ಯದ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ತಲಾ 5 ಸಾವಿರ ರೂ.ನಂತೆ ಪರಿಹಾರ ಧನ ಒದಗಿಸಲು 2021-22ನೇ ಸಾಲಿನ ಆಯವ್ಯಯದಲ್ಲಿ ಒಟ್ಟಾರೆಯಾಗಿ 103.47 ಕೋಟಿ ರೂ.ಗಳ ಅನುದಾನವನ್ನು  ಕೋವಿಡ್-19 ವಿಶೇಷ ಪ್ಯಾಕೇಜ್ ಪರಿಹಾರ ಧನವಾಗಿ ಬಿಡುಗಡೆ ಮಾಡಿತ್ತು. ಈ ಅನುದಾನದಲ್ಲಿ ಲಭ್ಯವಿದ್ದ ಪರಿಹಾರ ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡದ ಕಾರಣ ಒಟ್ಟು ಅನುದಾನದ  ಪೈಕಿ 31.64 ಕೋಟಿ ರೂ. ಅನುದಾನ ಉಳಿತಾಯವಾಗಿತ್ತು. ಉಳಿಕೆಯಾಗಿರುವ ಈ ಮೊತ್ತದಲ್ಲಿ 50 ಲಕ್ಷ ರೂ.ಗಳ ಅನುದಾನವನ್ನು  ಕೋವಿಡ್ ವಿಶೇಷ ಪರಿಹಾರ ಧನ ಒದಗಿಸಲು ಉಳಿಸಿಕೊಂಡು ಉಳಿಕೆ 31.14 ಕೋಟಿ ರೂ. ಅನುದಾನವನ್ನು ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳ ಶುಲ್ಕ ಮರುಪಾವತಿಗಾಗಿ ಉಪಯೋಗಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಕೋರಿದ್ದರು ಎಂಬುದು ಆದೇಶದಿಂದ ತಿಳಿದು ಬಂದಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News