ಝುಬೈರ್ ಬಿಡುಗಡೆ: ನ್ಯಾಯವೋ? ಅದೃಷ್ಟವೋ?

Update: 2022-07-22 04:26 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದ ದಂಡ ಸಂಹಿತೆಯ ದೃಷ್ಟಿಯಿಂದ ಯಾವ ತಪ್ಪನ್ನು ಮಾಡದಿದ್ದರೂ, ಆಳುವ ಸರಕಾರದ ಮತ್ತು ಪಕ್ಷಪರಿವಾರದ ಸುಳ್ಳುಗಳನ್ನು ಬಯಲು ಮಾಡಿದ ಏಕೈಕ ತಪ್ಪಿಗೆ 23 ದಿನಗಳ ಜೈಲುಶಿಕ್ಷೆ ಅನುಭವಿಸಿದ ಮುಹಮ್ಮದ್ ಝುಬೈರ್ ಮೊನ್ನೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರನ್ನು ಇಷ್ಟು ದಿನಗಳ ಕಾಲ ವಿನಾಕಾರಣ ಶಿಕ್ಷೆ ಅನುಭವಿಸುವಂತೆ ಮಾಡಿದ ವ್ಯವಸ್ಥೆಯ ಬಗ್ಗೆ ಅಸಮಾಧಾನ ಮತ್ತು ಪ್ರಶ್ನೆಗಳು ಹುಟ್ಟುವ ಬದಲು ಹೇಗೋ ಜಾಮೀನು ಸಿಕ್ಕಿತಲ್ಲ ಎಂಬ ಸಮಾಧಾನ ಪಡುವಂತಾಗಿರುವುದು ಇಂದಿನ ನ್ಯಾಯವ್ಯವಸ್ಥೆಯ ವಿಷಾದನೀಯ ವ್ಯಾಖ್ಯಾನವಾಗಿದೆ.

ಝುಬೈರ್ ಮೇಲೆ ಉತ್ತರಪ್ರದೇಶದ ಹಾಥರಸ್‌ನಿಂದ ಹಿಡಿದು ಸೀತಾಪುರ್, ಮುಝಫ್ಫರಾಬಾದ್‌ವರೆಗೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಹಾಕಲಾಗಿದ್ದ ಆರೂ ಪ್ರಕರಣಗಳು ಒಂದೇ ಬಗೆಯ ಆರೋಪಕ್ಕೆ ಸಂಬಂಧಿಸಿರುವುದರಿಂದ ಅವೆಲ್ಲವನ್ನೂ ಸುಪ್ರಿಂಕೋರ್ಟಿನ ನ್ಯಾಯಮೂರ್ತಿ ಚಂದ್ರಚೂಡ ನೇತೃತ್ವದ ತ್ರಿಸದಸ್ಯ ಪೀಠ ದಿಲ್ಲಿಯ ಕೋರ್ಟಿಗೆ ವರ್ಗಾಯಿಸಿರುವುದಲ್ಲದೆ, ಅವೆಲ್ಲಕ್ಕೂ ಅನ್ವಯಿಸುವಂತೆ ಜಾಮೀನು ಮಂಜೂರು ಮಾಡಿದೆ. ಅಷ್ಟು ಮಾತ್ರವಲ್ಲದೆ, ಮುಂದೆಯೂ ಇದೇ ಆರೋಪವನ್ನು ಆಧರಿಸಿ ಹಾಕಬಹುದಾದ ಪ್ರಕರಣಗಳಿಗೂ ಈ ಜಾಮೀನು ಅನ್ವಯವಾಗುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅಷ್ಟು ಮಾತ್ರವಲ್ಲದೆ, ಜಾಮೀನಿನ ಅವಧಿಯಲ್ಲೂ ಒಬ್ಬ ಪತ್ರಕರ್ತನಾಗಿ ಟ್ವೀಟ್ ಮಾಡುವ ಅವರ ಹಕ್ಕನ್ನು ಕೋರ್ಟು ಎತ್ತಿಹಿಡಿದಿದೆ. ಇವೆಲ್ಲವೂ ಅತ್ಯಂತ ತುರ್ತಾಗಿ ಹಾಗೂ ಅತ್ಯಗತ್ಯವಾಗಿ ಝುಬೈರ್ ಅವರಿಗೂ ನೀಡಲೇಬೇಕಾಗಿದ್ದ ಪರಿಹಾರಗಳು. ಏಕೆಂದರೆ ಇಲ್ಲಿ ಬಂಧಿಸಲ್ಪಟ್ಟಿದ್ದು ಒಬ್ಬ ಝುಬೈರ್ ಎಂಬ ವ್ಯಕ್ತಿ ಮಾತ್ರವಲ್ಲ, ಬದಲಿಗೆ ಈ ದೇಶದ ಸಂವಿಧಾನ ಒದಗಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿತ್ತು.

ಇವತ್ತಿನ ಸಂದರ್ಭದಲ್ಲಿ ಅಪರೂಪದಲ್ಲಿ ಅಪರೂಪವಾಗಿ ಈ ದೇಶದ ಅಧಿಕಾರಸ್ಥರನ್ನು ದಿಟ್ಟವಾಗಿ ಪ್ರಶ್ನಿಸುತ್ತಿದ್ದ ಈ ದೇಶದ ಪ್ರಜಾತಂತ್ರದ ನಾಲ್ಕನೇ ಸ್ತಂಭವೇ ಬಂಧನಕ್ಕೊಳಗಾಗಿತ್ತು. ಆದರೆ ಒಂದು ದಿನವೂ ಒಬ್ಬ ನಿರಪರಾಧಿ ಜೈಲಿನಲ್ಲಿರಬಾರದು ಎಂದು ನಮ್ಮ ಉನ್ನತ ನ್ಯಾಯಾಲಯಗಳು ಘೋಷಿಸುತ್ತಿರುತ್ತವೆ. ಮುಖ್ಯನ್ಯಾಯಮೂರ್ತಿ ಎನ್.ವಿ. ರಮಣ ಅವರೂ ಅತ್ಯಂತ ಗಂಭೀರ ಹಾಗೂ ಅನಿವಾರ್ಯತೆಗಳು ಮಾತ್ರ ಬಂಧನಕ್ಕೆ ಕಾರಣವಾಗಬೇಕೇ ವಿನಾ ಮಿಕ್ಕಂತೆ ಜಾಮೀನೇ ನಿಯಮವಾಗಬೇಕು ಎಂದು ಹೇಳುತ್ತಲೇ ಇರುತ್ತಾರೆ. ಆದರೂ ಝುಬೈರ್ ಅವರನ್ನು 2018ರಲ್ಲಿ ಮಾಡಿದ ಒಂದು ಅತ್ಯಂತ ನಿರುಪದ್ರವಿ ಟ್ವೀಟ್‌ಗಾಗಿ ಪೊಲೀಸರು ಬಂಧಿಸಿದರೆ ಕೆಳ ನ್ಯಾಯಾಲಯಗಳು ಅವರನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಕಳಿಸುತ್ತವೆ. ಒಂದೇ ಆರೋಪವನ್ನು ತೋರಿದರೂ ಉ. ಪ್ರದೇಶದ ಜಿಲ್ಲಾ ನ್ಯಾಯಾಲಯಗಳು ಪೊಲೀಸ್ ಹೇಳಿಕೆಗಳನ್ನೇ ಪರಮಸತ್ಯವೆಂದು ಪರಿಭಾವಿಸಿ ಒಂದಾದ ನಂತರ ಒಂದರಂತೆ ಅವರಿಗೆ ಜಾಮೀನು ನಿರಾಕರಿಸಿದ್ದು ಮಾತ್ರವಲ್ಲದೆ ಈ ಸಂಶೋಧಕ ಪತ್ರಕರ್ತನ ವೃತ್ತಿ ಆಸ್ತಿಯಾಗಿರುವ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳ ಜಪ್ತಿಗೆ ಪರವಾನಿಗೆ ಕೊಡುತ್ತವೆ. ಝುಬೈರ್ ಪ್ರಕರಣ ಒಂದು ಅಪವಾದವೇನಲ್ಲ. ವಾಸ್ತವವಾಗಿ ಒಂದು ಅಂದಾಜಿನ ಪ್ರಕಾರ 2016-20ರ ನಡುವೆ ಝುಬೈರ್‌ರಂತೆ ಈಗಲೂ ದೇಶದ ಹಲವಾರು ಜೈಲುಗಳಲ್ಲಿ 52ಕ್ಕೂ ಹೆಚ್ಚು ಪತ್ರಕರ್ತರು ಬಂಧನಕ್ಕೊಳಗಾಗಿ ತಿಂಗಳುಗಳ ಕಾಲ ಜೈಲುಪಾಲಾಗಿದ್ದಾರೆ. ಇದರಲ್ಲಿ ಹಾಥರಸ್‌ನಲ್ಲಿ ನಡೆದ ದಲಿತ ಮಹಿಳೆಯ ಅತ್ಯಾಚಾರ ಮತ್ತು ಕೊಲೆಯ ವರದಿ ಮಾಡಲು ಹೋಗಿದ್ದ ಪತ್ರಕರ್ತ ಕಪ್ಪನ್ ಜೈಲಿನಲ್ಲಿ 1,000 ದಿನಗಳನ್ನು ಕಳೆದಿದ್ದಾರೆ. ಇನ್ನೂ ಜಾಮೀನು ಸಿಗುವ ನಿರೀಕ್ಷೆಯಿಲ್ಲ. ಹಾಗೆಯೇ ಕಾಶ್ಮೀರದ ಪತ್ರಕರ್ತ ಫಹದ್‌ರನ್ನು ಕಳೆದ ಫೆಬ್ರವರಿಯಿಂದ ಇಂಥದ್ದೇ ಕ್ಷುಲ್ಲಕ ಕಾರಣಗಳಿಗಾಗಿ ಸಿಲುಕಿಸಿದ ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕರೆ ಮತ್ತೊಂದು ಪ್ರಕರಣದಲ್ಲಿ ಬಂಧಿಸುತ್ತಾ ಇಡೀ ಸ್ವತಂತ್ರ ಪತ್ರಿಕೋದ್ಯಮಕ್ಕೆ ಪ್ರಭುತ್ವ ಎಚ್ಚರಿಕೆ ನೀಡುತ್ತಿದೆ. ಇದರಿಂದಾಗಿ ಪತ್ರಿಕಾ ಸ್ವಾತಂತ್ರ್ಯದ ವಿಷಯದಲ್ಲಿ ಭಾರತದ ಸ್ಥಾನ ಕಳೆದ ಎರಡು ವರ್ಷಗಳಲ್ಲಿ 142ನೇ ಸ್ಥಾನದಿಂದ 150ನೇ ಸ್ಥ್ಥಾನಕ್ಕೆ ಕುಸಿದಿದೆ.

ಝುಬೈರ್ ಪ್ರಕರಣದ ಸುಖಾಂತ್ಯ (?)ದ ನಡುವೆಯೂ ಪತ್ರಕರ್ತರನ್ನು ಸದೆಬಡಿಯುವ ವಿಷಯದಲ್ಲಿ ಭಾರತವು ಜಗತ್ತಿನ ಅತ್ಯಂತ ಕುಖ್ಯಾತ ಸರ್ವಾಧಿಕಾರಿ ದೇಶಗಳ ಜೊತೆ ಸ್ಪರ್ಧಿಸುತ್ತಿದೆ. ಇವೆಲ್ಲದಕ್ಕೂ ಪ್ರಮುಖ ಕಾರಣ ನ್ಯಾಯಾಂಗವು ಅಪರೂಪಕ್ಕೊಮ್ಮೆ ಝುಬೈರ್‌ರಂತಹ ಪ್ರಕರಣದಲ್ಲಿ ಸಕ್ರಿಯವಾಗಿ ಅಭಿವ್ಯಕ್ತಿಯ ಪರವಾಗಿ ಎದ್ದು ನಿಲ್ಲುತ್ತದೆ. ಆರೋಪ ಸಾಬೀತಾಗುವ ತನಕ ಕೋರ್ಟ್ ಆರೋಪಿಯನ್ನು ನಿರಪರಾಧಿ ಎಂದೇ ಪರಿಗಣಿಸಬೇಕೆಂಬ ಹಾಗೂ ಜಾಮೀನೇ ಸರ್ವಮಾನ್ಯ, ಜೈಲು ಅಸಾಮಾನ್ಯ ಎಂಬ ಸಹಜ ನ್ಯಾಯದ ಸಂಹಿತೆಯನ್ನು ಪಾಲಿಸಬೇಕೆಂಬ ನೀತಿಗಳನ್ನು ನ್ಯಾಯಾಂಗ ಮೋದಿ ಕಾಲದಲ್ಲಿ ಗಾಳಿಗೆ ತೂರಿದೆ. ಪೊಲೀಸ್ ಹೇಳಿಕೆಗಳನ್ನೇ ಪರಮಸತ್ಯವೆಂದು ಆರೋಪಿಯನ್ನು ಅಪರಾಧ ಸಾಬೀತಾಗುವ ಮುನ್ನವೇ ಅಪರಾಧಿಯೆಂದು ಅನುಮಾನಿಸುವ ಧೋರಣೆಗೆ ಉನ್ನತ ನ್ಯಾಯಾಂಗವೇ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಖನ್ವಿಲ್ಕರ್ ನೇತೃತ್ವದ ನ್ಯಾಯಪೀಠವಂತೂ 2019ರಲ್ಲಿ ಯುಎಪಿಎ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ದಾಖಲಾದ ನಂತರವೂ ಆರೋಪಿಗೆ ಜಾಮೀನು ಕೊಡುವುದು ಕಡ್ಡಾಯವೇನಲ್ಲ ಎಂಬ ತೀರ್ಪನ್ನಿತ್ತಿದೆ.

ಚಾರ್ಜ್ ಶೀಟ್ ದಾಖಲಾದ ನಂತರವೂ ಒಂದು ವೇಳೆ ನ್ಯಾಯಾಧೀಶರಿಗೆ ಯಾವುದೇ ವಿಚಾರಣೆ ಪ್ರಾರಂಭಿಸುವ ಮುನ್ನ ಕೇವಲ ಪೊಲೀಸ್ ವರದಿಗಳನ್ನು ಮಾತ್ರ ಪರಿಶೀಲಿಸಿ ಮೇಲ್ನೋಟಕ್ಕೆ ಆರೋಪಿ ಅಪರಾಧದಲ್ಲಿ ಭಾಗಿಯಾಗಿರಬಹುದು ಎಂದು ಅನಿಸಿದಲ್ಲಿ ವಿಚಾರಣೆಯು ಮುಗಿಯುವ ತನಕ ಜಾಮೀನು ನಿರಾಕರಿಸಬಹುದೆಂಬ ಸುಪ್ರೀಂಕೋರ್ಟ್‌ನ ಪೀಠವೊಂದರ ತೀರ್ಪಿನಿಂದ ಇಂದು ಯುಎಪಿಎ ಪ್ರಕರಣಗಳಲ್ಲಿ ದೇಶಾದ್ಯಂತ 23,000ಕ್ಕೂ ಹೆಚ್ಚು ಆರೋಪಿಗಳು ಜಾಮೀನು ಸಿಗದೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರಲ್ಲಿ ಮೊನ್ನೆ ನಿರಪರಾಧಿಗಳೆಂದು ಬಿಡುಗಡೆಯಾದ ಛತ್ತೀಸ್‌ಗಡದ 121 ಅಮಾಯಕ ಆದಿವಾಸಿಗಳನ್ನು ಒಳಗೊಂಡಂತೆ ಅಮಾಯಕ ಆದಿವಾಸಿಗಳು, ದಲಿತರು ಮತ್ತು ಮುಸ್ಲಿಮರೇ ಇದ್ದಾರೆ. ಕೆಲವರಂತೂ ಐದಾರು ವರ್ಷಗಳಿಂದ ವಿಚಾರಣೆಯೂ ಇಲ್ಲದೆ ಕೊಳೆಯುತ್ತಿದ್ದಾರೆ. ಇವರ ಜೊತೆಗೆ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಈ ದೇಶದ ಜನತೆಯ ಅಮೂಲ್ಯ ಧ್ವನಿಗಳಿದ್ದಾರೆ. ಅವರಲ್ಲಿ 84 ವಯಸ್ಸಿನ ಸಂತಪಾದ್ರಿ ಸ್ಟಾನ್‌ಸ್ವಾಮಿ ಜಾಮೀನು ಸಿಗದೆ ಜೈಲಿನಲ್ಲಿ ಪ್ರಾಣ ಬಿಟ್ಟರೆ, 83 ವಯಸ್ಸಿನ ಕವಿ ವರವರರಾವ್ ಅವರ ಮೆಡಿಕಲ್ ಜಾಮೀನಿನ ಅರ್ಜಿ ಕೋರ್ಟಿನ ಅಂಗಣದಲ್ಲಿದೆ. ಉಳಿದಂತೆ ಚಿಂತಕ ಆನಂದ್ ತೇಲ್ತುಂಬ್ಡೆ, ಕಾರ್ಯಕರ್ತ ಗೋನ್ಸಾಲ್ವಿಸ್ ಆದಿಯಾಗಿ ಇನ್ನುಳಿದ ಎಲ್ಲಾ ಭೀಮಾ ಕೋರೆಗಾಂವ್ ಕೈದಿಗಳು ಚಾರ್ಜ್‌ಶೀಟ್ ದಾಖಲಾದ ನಂತರವೂ ಕಳೆದ ಎರಡು-ಮೂರು ವರ್ಷಗಳಿಂದ ಜೈಲಿನಲ್ಲಿ ತಾವು ಮಾಡದ ತಪ್ಪಿಗೆ, ಆಳುವ ಸರಕಾರ ಮತ್ತದರ ಸಿದ್ಧಾಂತಗಳನ್ನು ಪ್ರಶ್ನಿಸಿದ ಕಾರಣಕ್ಕೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಹೀಗಾಗಿ ಸ್ವತಂತ್ರ ನ್ಯಾಯಾಂಗ, ಜಾಮೀನೇ ಕಾನೂನು ಎಂಬ ಸಂಹಿತೆ ಹಾಗೂ ಯುಎಪಿಎ ರೀತಿಯ ಅನಾಗರಿಕ ಕಾನೂನುಗಳು ಅಸಿಂಧುವಾಗದಿದ್ದರೆ ಝುಬೈರ್‌ರಂತಹ ನಿರಪರಾಧಿಗೆ ಜಾಮೀನು ಸಿಗುವುದು ಆಕಸ್ಮಿಕ ಅದೃಷ್ಟದ ವಿಷಯವಾಗುತ್ತದೆಯೇ ವಿನಾ ನಮ್ಮ ನ್ಯಾಯಾಂಗದ ಸಂಹಿತೆಯಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News