ಚಳವಳಿಗಾರ ಮಾವಳ್ಳಿ ಶಂಕರ್‌ಗೆ 60
ಮಾವಳ್ಳಿ ಶಂಕರ್ ಕರ್ನಾಟಕದ ಚಳವಳಿಗಳ ವಲಯದಲ್ಲಿ ಕಳೆದ ಮೂರು ದಶಕಗಳಿಂದ ನಮ್ಮೆಲ್ಲರಲ್ಲೂ ಪ್ರೀತಿ, ಸ್ಫೂರ್ತಿ, ನಿಷ್ಠೆ, ಪ್ರೇರಣೆಗಳನ್ನು ಉಕ್ಕಿಸುವ ಹೆಸರು. ಶಂಕರ್ ಅವರನ್ನು ನೆನೆಯುವ ಗೆಳೆಯರೆದುರು ತಕ್ಷಣ ಕಣ್ಮುಂದೆ ಬರುವ ಚಿತ್ರ ಅವರ ನಗೆಮೊಗ. ಆದ್ದರಿಂದಲೇ ನಾನು ಅವರನ್ನು ‘ನಗುಮೊಗದ ನಾಯಕ’ ಎಂದು ಕರೆದ ತಕ್ಷಣ ಇಲ್ಲವೆನ್ನುವವರು ಯಾರೂ ಸಿಗಲಿಲ್ಲ! ಹೈಸ್ಕೂಲು ಸೇರುವ ಹೊತ್ತಿಗಾಗಲೇ ಸಿದ್ಧಲಿಂಗಯ್ಯನವರ ನಾಯಕತ್ವದಲ್ಲಿ ಮಾವಳ್ಳಿ ಮುನಿಯೆಲ್ಲಪ್ಪನವರು ಮಾವಳ್ಳಿಯಲ್ಲಿ ನಡೆಸುತ್ತಿದ್ದ ನೈಟ್ ಸ್ಕೂಲಿನಲ್ಲಿ ಶಂಕರ್‌ಗೆ ಪ್ರಗತಿಪರ ಚಿಂತನೆಗಳ ಸ್ಪರ್ಶವಾಯಿತು. ಎಂಟನೆಯ ತರಗತಿ ತಲುಪುವಷ್ಟರಲ್ಲಿ ‘ದಲಿತ್ ಆ್ಯಕ್ಷನ್ ಕಮಿಟಿ’ಯ ಸಂಪರ್ಕವಾಗತೊಡಗಿತ್ತು. ಅಷ್ಟೊತ್ತಿಗಾಗಲೇ ಮಾರ್ಕ್ಸ್ ವಾದಿ ಚಿಂತಕ ಎಂ.ಕೆ. ಭಟ್ ಅವರ ತರಗತಿಗಳ ಮೂಲಕ ಮಾರ್ಕ್ಸ್‌ವಾದದ ಪರಿಚಯ ಕೂಡ ಆಗತೊಡಗಿತ್ತು. ಆಗ ಕರ್ನಾಟಕದ ಹಲವು ಚಳವಳಿಗಾರರ ಗುರುವಾಗಿದ್ದ ಒ.ಶ್ರೀಧರನ್ ಮಾವಳ್ಳಿಯವರ ಮೂಲ ಗುರುವೂ ಆದದ್ದು ಸಹಜವಾಗಿತ್ತು. 1978ರಲ್ಲಿ ಶ್ರೀರಾಂಪುರದ ಗಾಂಧಿ ಹಾಸ್ಟೆಲ್‌ನಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ಸಭೆಯಲ್ಲಿ ಶಂಕರ್‌ಗೆ ದಲಿತ ಚಳವಳಿಯ ಮೊದಲ ನೇರ ಸಂಪರ್ಕ ಶುರುವಾಯಿತು.
ವಿದ್ಯಾರ್ಥಿ ದೆಸೆಯಿಂದಲೇ ಮಾರ್ಕ್ಸ್‌ವಾದಿ ಚಿಂತನೆ, ದಲಿತ ಚಳವಳಿ ಹಾಗೂ ಪ್ರಗತಿಪರ ಚಳವಳಿಗಳ ಸಂಗದಲ್ಲಿ ರೂಪುಗೊಂಡ ಶಂಕರ್ (ಹುಟ್ಟು: 22 ಜುಲೈ 1962) ಬೆಂಗಳೂರಿನ ಮಾವಳ್ಳಿಯವರು. ಮಾವಳ್ಳಿಯಲ್ಲಿ ಹೈಸ್ಕೂಲ್ ಮುಗಿಸಿ ಪಿ.ಯು.ಸಿ.ಯಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿ ಹಾಸ್ಟೆಲ್ ಸೇರಿದ ಮಾವಳ್ಳಿಯವರ ಕತೆ ಎಪ್ಪತ್ತರ ದಶಕದಲ್ಲಿ ಮೈದಳೆದ ಕರ್ನಾಟಕದ ಚಳವಳಿಗಾರರ ಪ್ರಾತಿನಿಧಿಕ ಕತೆಯೇ. ಶಂಕರ್ ‘ಸಮುದಾಯ’ ವೇದಿಕೆಯ ಬೀದಿ ನಾಟಕ ತಂಡದ ಭಾಗವಾದರು. ಸಿ.ಜಿ.ಕೆ. ಬರೆದು ಆಡಿಸಿದ ‘ಬೆಲ್ಚಿ’ ನಾಟಕದಲ್ಲಿ ನಟಿಸಿದರು. ಆಮೇಲೆ ‘ಪತ್ರೆ ಸಂಗಪ್ಪನ ಕಗ್ಗೊಲೆ’ಯಲ್ಲಿ ಪತ್ರೆ ಸಂಗಪ್ಪನಾದರು; ‘ಶೇಷಗಿರಿಯಪ್ಪನ ಕೊಲೆ’ ಬೀದಿ ನಾಟಕದಲ್ಲೂ ನಟಿಸಿದರು. ನಂತರ ಶಂಕರ್ ದಸಂಸವನ್ನು ಪ್ರವೇಶಿಸಿದ್ದೇ ಹೋರಾಟದ ಹಾಡುಗಳ ಹಾಡುಗಾರರಾಗಿ. ಬರಗೂರು ರಾಮಚಂದ್ರಪ್ಪನವರ ಬಂಡಾಯ ಚಿಂತನೆಯೂ ಅವರನ್ನು ರೂಪಿಸಿತು. ದಸಂಸ, ಬಂಡಾಯ ಚಳವಳಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸಿಸ್ಟ್)ಗಳು ಒಟ್ಟೊಟ್ಟಿಗೇ ನಡೆಯುತ್ತಿದ್ದ ಕರ್ನಾಟಕದ ಪ್ರಗತಿಪರ ಚಿಂತನೆಗಳ ಆದರ್ಶ ಐಕ್ಯತೆಯ ಕಾಲ ಅದು. ನಟ, ಹಾಡುಗಾರ, ಹೋರಾಟಗಾರ- ಈ ಮೂರೂ ಅಂಶಗಳು ಬೆರೆತು ನಾಯಕ ಮಾವಳ್ಳಿ ಶಂಕರ್ ರೂಪುಗೊಂಡಿದ್ದು ಕರ್ನಾಟಕದ ಇಂತಹ ವೈಚಾರಿಕ ಐಕ್ಯತೆಯ ಕಾಲದಲ್ಲಿ.
ಹೀಗೆ ಚಳವಳಿಗಳ ಜೊತೆ ಸೇರಿ ಬೌದ್ಧಿಕವಾಗಿಯೂ ಬೆಳೆಯತೊಡಗಿದ ಶಂಕರ್, ನಿರಂಜನರ ‘ಚಿರಸ್ಮರಣೆ’, ‘ಮೃತ್ಯುಂಜಯ’; ಗೋದಾವರಿ ಪರುಳೇಕರ್ ಬರೆದ ‘ಮಾನವ ಎಚ್ಚೆತ್ತಾಗ’, ರಾಹುಲ್ ಸಾಂಕೃತಾಯನರ ‘ವೋಲ್ಗಾ ಗಂಗಾ’ ಹಾಗೂ ದೇವಿಪ್ರಸಾದ್ ಚಟ್ಟೋಪಾಧ್ಯಾಯರ ವೈಚಾರಿಕ ಕೃತಿಗಳನ್ನು ಮತ್ತೆ ಮತ್ತೆ ಓದತೊಡಗಿದರು. ಲೋಹಿಯಾರ ಜಾತಿಪದ್ಧತಿಯ ವಿಶ್ಲೇಷಣೆ, ‘ಪಂಚಮ’ ಪತ್ರಿಕೆಯಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ದೇವನೂರ ಮಹಾದೇವರ ‘ದೇಮ ಬರೆದ ಬರಹ’ಗಳು, ಸಿದ್ಧಲಿಂಗಯ್ಯನವರ ಸಿಟ್ಟಿನ ಕವಿತೆಗಳು ಹಾಗೂ ನಿತ್ಯ ಒಡನಾಟ ಅವರನ್ನು ದಲಿತ ಕೇಂದ್ರಿತ ಚಿಂತನೆಗಳ ದಿಕ್ಕಿಗೆ ಖಚಿತವಾಗಿ ಹೊರಳಿಸಿದವು. ನಿಧಾನವಾಗಿ ಪೆರಿಯಾರ್, ಅಂಬೇಡ್ಕರ್ ಚಿಂತನೆಗಳು ಮಾವಳ್ಳಿಯವರ ಪ್ರಜ್ಞೆಯನ್ನು ರೂಪಿಸತೊಡಗಿದವು. ಅಂಬೇಡ್ಕರ್ ಚಿಂತನೆಗಳನ್ನು ಓದುತ್ತಾ ಓದುತ್ತಾ ಅವರ ವೈಚಾರಿಕ ನೋಟಗಳು ಇನ್ನಷ್ಟು ಸ್ಪಷ್ಟವಾದವು; ಗಟ್ಟಿಯಾದವು. ಬಿ.ಕೃಷ್ಣಪ್ಪನವರ ನಾಯಕತ್ವ ಹಾಗೂ ಚಿಂತನೆಗಳು ಶಂಕರ್ ವ್ಯಕ್ತಿತ್ವದ ಬೆಳವಣಿಗೆಗೆ ಕಾರಣವಾದಂತೆಯೇ ರಂಜಾನ್ ದರ್ಗಾರ ಒಡನಾಟ, ಸಂಗ ಕೂಡ ಅವರ ಪ್ರಜ್ಞೆಯನ್ನು ತಿದ್ದಿತು.
ಮುಂದೆ ಬಿ.ಎಸ್ಸಿ. ಮುಗಿಸಿ ಎಲ್.ಎಲ್.ಬಿ. ಓದಲು ಶುರುಮಾಡಿದ ಮಾವಳ್ಳಿ ಶಂಕರ್, ಲಾ ಪದವಿಯನ್ನು ಅರ್ಧಕ್ಕೇ ಬಿಟ್ಟು ಪೂರ್ಣ ಪ್ರಮಾಣದಲ್ಲಿ ದಲಿತ ಚಳವಳಿಗೆ ಧುಮುಕಿದರು. ದಲಿತ ಚಳವಳಿಯ ರೂವಾರಿ ಪ್ರೊ. ಬಿ. ಕೃಷ್ಣಪ್ಪನವರ ಗರಡಿಯಲ್ಲಿ ತಯಾರಾದ ಅವರು ದಲಿತ ವಿದ್ಯಾರ್ಥಿ ಒಕ್ಕೂಟದ ಮುಂಚೂಣಿಯಲ್ಲಿದ್ದರು. 2002ರವರೆಗೂ ದಲಿತ ಸಂಘರ್ಷ ಸಮಿತಿಯ ಭಾಗವಾಗಿದ್ದ ಶಂಕರ್, ನಂತರ 2002ರಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಸಂಘಟಿಸಿ, ರಾಜ್ಯದ ವಿಶಿಷ್ಟ ಸಾಮಾಜಿಕ ನಾಯಕರಾಗಿ ಬೆಳೆದರು. ದಲಿತ ಚಳವಳಿಯಲ್ಲಿ ತಾತ್ವಿಕ ಗೊಂದಲಗಳು ಮೂಡಿದಾಗಲೆಲ್ಲ ಅಂಬೇಡ್ಕರ್ ಚಿಂತನೆ, ಬುದ್ಧ ಮಾರ್ಗ ಹಾಗೂ ವೈಚಾರಿಕ ನೋಟಗಳ ಮೂಲಕ ಖಚಿತ ಗುರಿ, ದಾರಿಗಳನ್ನು ಕಂಡುಕೊಂಡರು. ನಗುಮೊಗದ ನಾಯಕ ಶಂಕರ್ ದಲಿತರ ಹಿತಾಸಕ್ತಿಯ ಪ್ರಶ್ನೆಗಳು ಬಂದಾಗ ದಿಟ್ಟ ಪ್ರತಿಭಟನೆ ಹಾಗೂ ಖಚಿತ ವಿಶ್ಲೇಷಣೆಗಳ ಮೂಲಕ ಚಳವಳಿಯನ್ನು ಮುನ್ನಡೆಸಿದ್ದಾರೆ. ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಸುವ ಚಳವಳಿಯಲ್ಲಿ ಅವರೊಡನೆ ಕೆಲಸ ಮಾಡಿದ ನನಗೆ ಅವರ ಅನನ್ಯ ಬದ್ಧತೆ ತೀರಾ ಹತ್ತಿರದಿಂದ ಪರಿಚಯವಾಯಿತು.
ಆಗ ಕೆಲವು ಭಾಷಾ ಕಟ್ಟಾಳುಗಳು ನನ್ನ ಬೆನ್ನು ಹತ್ತಿ ತಿವಿಯುತ್ತಿದ್ದ ಗಳಿಗೆಗಳಲ್ಲಿ ಎಲ್ಲೋ ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರರು ಜೊತೆಗಿದ್ದಾರೆ ಎನ್ನುವುದು ನನಗೆ ಧೈರ್ಯ ಕೊಡುತ್ತಿತ್ತು. ಇವತ್ತಿಗೂ ಜನತಾ ಚಳವಳಿಗಳ ಬೆಳಕು ನನ್ನಂಥವರಿಗೆ ಹಾದಿ ತೋರುತ್ತಿರುವುದರಲ್ಲಿ ಮಾವಳ್ಳಿಯವರ ಗೆಳೆತನ ಹಾಗೂ ದಸಂಸ ಸಂಘಟನೆಯ ಪಾಲೂ ಮುಖ್ಯವಾಗಿದೆ. ಪ್ರೊ. ಬಿ. ಕೃಷ್ಣಪ್ಪನವರು ತಮ್ಮ ನಂತರದ ತಲೆಮಾರಿನಲ್ಲಿ ದಲಿತ ಚಳವಳಿಯನ್ನು ಕೊಂಡೊಯ್ಯಬಲ್ಲ ಹೊಸ ತಲೆಮಾರಿನ ಸಮರ್ಥ ನಾಯಕರೆಂದು ಗುರುತಿಸಿದವರಲ್ಲಿ ಮಾವಳ್ಳಿ ಶಂಕರ್ ಕೂಡ ಮುಖ್ಯರು. ಪ್ರೊ. ಬಿ.ಕೆ.ಯವರ ನಂಬಿಕೆಗೆ ಇಂಬು ಕೊಟ್ಟಂತೆ ಸದಾ ದಲಿತ ಚಳವಳಿಗೆ ಬೆಸೆದುಕೊಂಡಿರುವ ಶಂಕರ್, ಬಾಬಾಸಾಹೇಬ್ ಅಂಬೇಡ್ಕರ್ ಚಿಂತನೆಗಳನ್ನು ಕರ್ನಾಟಕದುದ್ದಕ್ಕೂ ಬಿತ್ತಿ, ಬೆಳೆದು ಹಬ್ಬಿಸಿದವರು. ದಲಿತರ ಭೂಮಿಯ ಪ್ರಶ್ನೆಗಳು, ವಸತಿ ಶಾಲೆ, ಶಿಕ್ಷಣ, ಹಾಸ್ಟೆಲ್, ವಿದ್ಯಾರ್ಥಿಗಳ ಮೂಲ ಸೌಲಭ್ಯಗಳ ಹೋರಾಟಗಳನ್ನು ಮುನ್ನಡೆಸಿದವರು. ದಲಿತರ ವಿರುದ್ಧ ನಡೆದ ದೌರ್ಜನ್ಯಗಳ ವಿರುದ್ಧ ಸಂಘಟನಾತ್ಮಕ ಹೋರಾಟಗಳನ್ನು ಕಟ್ಟಿದವರು.
ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಗಾಗಿ ರಾಜ್ಯಾದ್ಯಂತ ರೂಪುಗೊಂಡ ಜನಪರ ಚಳವಳಿಯ ಮುಂಚೂಣಿಯಲ್ಲಿದ್ದ ಶಂಕರ್, ಕೋಮುವಾದದ ವಿರುದ್ಧ ಗಟ್ಟಿ ದನಿಯೆತ್ತಿ ಜಾತ್ಯತೀತ ಕರ್ನಾಟಕವನ್ನು ರೂಪಿಸಲು ಕೆಲಸ ಮಾಡುತ್ತಲೇ ಇರುವವರು. ಬೌದ್ಧ ಚಿಂತನೆಗಳನ್ನು ನಿರಂತರವಾಗಿ ಬಿತ್ತುತ್ತಾ ದಲಿತ ಚಳವಳಿಗೆ ಸ್ಪಷ್ಟ ವೈಚಾರಿಕ ನಿಲುವುಗಳನ್ನು ರೂಪಿಸಿದವರು. ಶಂಕರ್ ಇಪ್ಪತ್ತು ವರ್ಷಗಳ ಕೆಳಗೆ ರಾಜ್ಯ ಬಜೆಟ್‌ನಲ್ಲಿ ದಲಿತರ ಹಕ್ಕಿನ ಪಾಲನ್ನು ಕುರಿತು ಆರಂಭಿಸಿದ ಆರ್ಥಿಕ ಚರ್ಚೆ; ಆನಂತರ ಎಸ್.ಸಿ.ಎಸ್.ಪಿ./ ಟಿ.ಎಸ್.ಪಿ. (ಶೆಡ್ಯೂಲ್ ಕ್ಯಾಸ್ಟ್ ಸಬ್ ಪ್ಲ್ಯಾನ್/ ಟ್ರೈಬಲ್ ಸಬ್ ಪ್ಲ್ಯಾನ್: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದ ಸಂಪನ್ಮೂಲ ಹಂಚಿಕೆ) ಕಾಯ್ದೆಯ ಜಾರಿಗಾಗಿ ಅವರು ಇತರ ದಲಿತ ಸಂಘಟನೆಗಳ ಜೊತೆಜೊತೆಗೇ ನಡೆಸಿದ ಸಂಘಟನಾತ್ಮಕ ಹೋರಾಟಗಳು ದಲಿತ ಚಳವಳಿಯ ಮೈಲುಗಲ್ಲುಗಳಾಗಿವೆ. ದಶಕಗಳ ಕೆಳಗೆ ಸಂವಿಧಾನ ಸಂಕಲ್ಪ ದಿನವನ್ನು ಸಂಘಟನೆಯ ಕಾರ್ಯಕ್ರಮಗಳ ಭಾಗವಾಗಿಸಿದ್ದ ಶಂಕರ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಸಂಘಟನೆಯ ರಾಜ್ಯ ಸಂಚಾಲಕರಾಗಿ ಚಳವಳಿಯನ್ನು ಗಟ್ಟಿಯಾಗಿಸುತ್ತಾ ಬಂದಿದ್ದಾರೆ. ಅಂಬೇಡ್ಕರ್‌ವಾದ ಪತ್ರಿಕೆಯನ್ನೂ ರೂಪಿಸುತ್ತಿದ್ದಾರೆ. ಇವತ್ತಿಗೂ ವೈಚಾರಿಕ ಬರಹಗಳು, ಪುಸ್ತಕಗಳನ್ನು ಓದುತ್ತಾ ಹೊಸ ಪುಸ್ತಕಗಳ ಬಗ್ಗೆ ಅತ್ಯಂತ ಅಪ್‌ಡೇಟ್ ಆಗಿರುವ ಚಳವಳಿಗಾರ ನಾಯಕ ಮಾವಳ್ಳಿ ಶಂಕರ್ ಈ ಬರಹಗಳಿಂದ ಪಡೆದ ಜ್ಞಾನವನ್ನು ನಿತ್ಯ ಗೆಳೆಯರಲ್ಲಿ ಕಾರ್ಯಕರ್ತರಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಈ ನಡುವೆ ಚಳವಳಿಯ ಕಹಿಗಳಿಗೂ, ಆತಂಕಗಳಿಗೂ ಶಂಕರ್ ಮೈಯೊಡ್ಡಿದ್ದಾರೆ. ಎಲ್ಲೆಡೆಯಿಂದ ಸಮಸ್ಯೆಗಳನ್ನು ನಿತ್ಯ ಹೊತ್ತು ಬರುವ ದಲಿತ ಜನಸ್ತೋಮ, ವ್ಯಕ್ತಿಗಳು ಎಲ್ಲರ ಜೊತೆಗೂ ಶಂಕರ್ ಹೆಜ್ಜೆ ಹಾಕಿದ್ದಾರೆ. ಮೆಟ್ರೋ ರೈಲು ಶುರುವಾದ ಸಂದರ್ಭದಲ್ಲಿ ವಿಧಾನಸೌಧದ ಎದುರು ನಿಂತಿರುವ ಅಂಬೇಡ್ಕರ್ ಪ್ರತಿಮೆಯ ಸ್ಥಳಾಂತರದ ಹುನ್ನಾರ ನಡೆದಾಗ ಶಂಕರ್ ಪ್ರತಿಮೆಯ ಸ್ಥಳಾಂತರದ ಬಗ್ಗೆ ಅರ್ಧ ರಾತ್ರಿಯ ಕರೆಗಳು ಬಂದಾಗ ರಾತ್ರೋರಾತ್ರಿ ಅಲ್ಲಿಗೆ ಧಾವಿಸಿದ್ದಾರೆ. ಸಂಘಟನೆಯ ಕಾರ್ಯಕರ್ತರ ಸಾವು, ನೋವುಗಳಲ್ಲಿ ನಿತ್ಯ ಭಾಗಿಯಾಗುತ್ತಲೇ ಇದ್ದಾರೆ. ಸಾರ್ವಜನಿಕ ವೇದಿಕೆಗಳಲ್ಲಿ ಸ್ಪಷ್ಟವಾಗಿ ಎಲ್ಲರನ್ನೂ ಸರಳವಾಗಿ ತಲುಪುವಂತೆ ಶಂಕರ್ ಬಳಸುವ ವೈಚಾರಿಕ ನುಡಿಗಟ್ಟು ಹಾಗೂ ಗಂಭೀರ ಕನ್ನಡ ಭಾಷೆಯ ಬಳಕೆ ಕೂಡ ಅತ್ಯಂತ ಪರಿಣಾಮಕಾರಿಯಾದವು. ಸ್ಪಷ್ಟ ಆಲೋಚನೆಯ ಶಂಕರ್ ದಿಟ್ಟ ಹಾಗೂ ನಿಷ್ಠುರ ಭಾಷಣಗಳು, ಧರಣಿ, ಪ್ರತಿಭಟನೆಗಳ ಮೂಲಕ ವ್ಯವಸ್ಥೆಯನ್ನು ನೇರವಾಗಿ ಎದುರಿಸುತ್ತಾ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸುತ್ತಾ ಜನರಿಗೆ ನೆರವಾಗುತ್ತಾ ಬಂದಿದ್ದಾರೆ.
ಗೆಳೆಯರು, ಚಳವಳಿಯ ಕಾರ್ಯಕರ್ತರು, ವಿವಿಧ ಚಳವಳಿಗಳ ನಾಯಕರು, ನೊಂದವರು, ಪ್ರಗತಿಪರರ ಜೊತೆ ಸಹಜ ಪ್ರೀತಿಯಿಂದ ಬೆರೆಯುವ, ಒಡನಾಡುವ, ಸ್ಪಷ್ಟ ವೈಚಾರಿಕ ನಿಲುವುಗಳ ಗೆಳೆಯ ಮಾವಳ್ಳಿ ಶಂಕರ್ ಅವರಿಗೆ ವೈಚಾರಿಕ ಕರ್ನಾಟಕದ ಆತ್ಮೀಯ ಅಭಿನಂದನೆ.