ದ್ರೌಪದಿ ಮುರ್ಮು ಮುಂದಿರುವ ಸವಾಲು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನಿರೀಕ್ಷೆಯಂತೆಯೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಭಾರೀ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ದೇಶದ ಅತ್ಯುನ್ನತ ಸ್ಥಾನವೊಂದಕ್ಕೆ ಈ ದೇಶದ ಆದಿವಾಸಿ ಮಹಿಳೆಯೊಬ್ಬರು ಪ್ರಪ್ರಥಮವಾಗಿ ನೇಮಕಗೊಳ್ಳುತ್ತಿರುವುದು ದೇಶದ ಪ್ರಜಾಸತ್ತೆಗೆ ಸಂದಿರುವ ಅತಿ ದೊಡ್ಡ ಗೌರವವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ, '130 ಕೋಟಿ ಭಾರತೀಯರು ಸ್ವಾತಂತ್ರದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ ಈಶಾನ್ಯ ಭಾರತದ ಕುಗ್ರಾಮದಲ್ಲಿ ಜನಿಸಿದ್ದ ಆದಿವಾಸಿ ಸಮುದಾಯದ ಮಹಿಳೆಯೊಬ್ಬರು ದೇಶದ ಅತ್ಯುನ್ನತ ಸ್ಥಾನವಾಗಿರುವ ರಾಷ್ಟ್ರಪತಿ ಹುದ್ದೆಯನ್ನೇರುತ್ತಿರುವುದು ದೇಶವಾಸಿಗಳಿಗೆ ಬಹುದೊಡ್ಡ ಸ್ಫೂರ್ತಿ'ಯಾಗಿದೆ. ಸ್ವಾತಂತ್ರದ ಅಮೃತ ಗಳಿಗೆಯನ್ನು ಅರ್ಥಪೂರ್ಣಗೊಳಿಸಬಹುದಾದ ಘಟನೆ ಇದು.
ಇದೇ ಸಂದರ್ಭದಲ್ಲಿ ದೇಶದ ಅತ್ಯಂತ ಸಂಕಟದ ಕಾಲದಲ್ಲಿ, ಮುರ್ಮು ಅವರು ರಾಷ್ಟ್ರಪತಿ ಹುದ್ದೆಯ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿದ್ದಾರೆ. ದೇಶ ಆರ್ಥಿಕವಾಗಿ ಹಿಂದೆಂದು ಕಂಡರಿಯದ ಹಿಂಜರಿತದಲ್ಲಿದೆ. ಅಷ್ಟೇ ಅಲ್ಲ ದೇಶಾದ್ಯಂತ ಸಂವಿಧಾನ ವಿರೋಧಿ ಧ್ವನಿಗಳು ಬಲ ಪಡೆಯುತ್ತಿವೆ ಮತ್ತು ಈ ಧ್ವನಿಗಳು ಆಳುವ ಸರಕಾರದೊಳಗೇ ಸೇರಿಕೊಂಡಿವೆ. ದೇಶ ಸ್ವಾತಂತ್ರದ ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ, ಈ ದೇಶದ ಸಂವಿಧಾನ ಮತ್ತು ಪ್ರಜಾಸತ್ತೆಯ ಕುರಿತಂತೆ ಅಸಹನೆಯನ್ನು ಹೊಂದಿರುವ ಶಕ್ತಿಗಳು ಸರಕಾರವನ್ನು ನಿಯಂತ್ರಿಸುತ್ತಿರುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. 'ಪ್ರಜಾಸತ್ತೆ ದುರ್ಬಲಗೊಂಡಿವೆ ಮತ್ತು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ' ಎನ್ನುವುದು ಕೇವಲ ಟೀಕೆ, ಆರೋಪಗಳಾಗಿ ಮಾತ್ರ ಉಳಿದಿಲ್ಲ. ದಲಿತರು, ಆದಿವಾಸಿಗಳು, ಬಡವರು, ಕಾರ್ಮಿಕರ ಪರವಾಗಿ ಮಾತನಾಡುತ್ತಿರುವ, ಅವರ ಹಕ್ಕುಗಳಿಗಾಗಿ ಹೋರಾಡುತ್ತಿರುವ ನೂರಾರು ಸಾಮಾಜಿಕ ಕಾರ್ಯಕರ್ತರು ಜೈಲು ಪಾಲಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಪತ್ರಕರ್ತರ ಹಕ್ಕುಗಳು ದಮನಕ್ಕೊಳಗಾಗುತ್ತಿವೆ. ಸರಕಾರವನ್ನು ಪ್ರಶ್ನಿಸಿದ ಪತ್ರಕರ್ತರು ದೇಶದ್ರೋಹದ ಆರೋಪದಲ್ಲಿ ಜೈಲು ಪಾಲಾಗುತ್ತಿದ್ದಾರೆ. ಅತ್ಯಾಚಾರ ಆರೋಪಿಗಳು ಬಹಿರಂಗವಾಗಿ ನಿರ್ಭೀತಿಯಿಂದ ಓಡಾಡುತ್ತಿದ್ದರೆ, ಅದನ್ನು ವರದಿ ಮಾಡಲು ತೆರಳಿದ ಪತ್ರಕರ್ತ ಜಾಮೀನಿಲ್ಲದೆ ಜೈಲಿನಲ್ಲಿ ಕೊಳೆಯಬೇಕಾದ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ.
ದೇಶದ ಸಂವಿಧಾನ ಮತ್ತು ಪ್ರಜಾಸತ್ತೆ ಇಷ್ಟೊಂದು ಅಭದ್ರತೆಯನ್ನು ಹಿಂದೆಂದೂ ಅನುಭವಿಸಿಲ್ಲ. ಇಂತಹ ಹೊತ್ತಿನಲ್ಲಿ ರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೆಗೆ ಮಹಿಳೆ ಅದರಲ್ಲೂ ಶೋಷಿತ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬಳು ನೇಮಕವಾಗುವಾಗ ಅವರಿಂದ ದೇಶ ಬಹಳಷ್ಟನ್ನು ನಿರೀಕ್ಷಿಸುತ್ತದೆ. ತಮ್ಮ ಮುಂದಿರುವ ಸವಾಲನ್ನು ಎದುರಿಸುವ ಶಕ್ತಿ ದ್ರೌಪದಿ ಮುರ್ಮು ಅವರಿಗಿದೆಯೆ? ಎನ್ನುವ ಪ್ರಶ್ನೆ ದೇಶದ ಬಹುಸಂಖ್ಯಾತ ಜನರನ್ನು ಕಾಡುತ್ತಿವೆ. ಈ ಋಣಾತ್ಮಕ ಪ್ರತಿಕ್ರಿಯೆಗೆ ಕಾರಣಗಳಿಲ್ಲದೇ ಇಲ್ಲ. ರಾಷ್ಟ್ರಪತಿ ಹುದ್ದೆಗೆ ಯಾರು ಆಯ್ಕೆಯಾಗಿದ್ದಾರೆ ಎನ್ನುವಷ್ಟೇ ಮುಖ್ಯವಾಗಿದೆ, ಅವರು ಯಾರಿಂದ ಆಯ್ಕೆಯಾಗಿದ್ದಾರೆ ಎನ್ನುವುದು. ಇಂದು ಈ ದೇಶ, ಸಂವಿಧಾನ ಯಾರಿಂದ ಆತಂಕಗಳನ್ನು ಎದುರಿಸುತ್ತಿದೆಯೋ ಅವರೂ ಈ ಆಯ್ಕೆಯ ಹಿಂದಿದ್ದಾರೆ ಎನ್ನುವುದು ನಿರ್ಲಕ್ಷಿಸುವ ವಿಷಯವಲ್ಲ. ಯಾರ ಮೂಲಕ ಆಯ್ಕೆಯಾಗಿದ್ದೇನೆಯೋ ಅವರಿಗೆ ಋಣಿಯಾಗುವುದು ತನ್ನ ಕರ್ತವ್ಯ ಎನ್ನುವ ಅಘೋಷಿತ ನಿಯಮವೊಂದಕ್ಕೆ ಈ ಹಿಂದಿನ ಎಲ್ಲ ರಾಷ್ಟ್ರಪತಿಗಳೂ ತಲೆಬಾಗಿಸಿಕೊಂಡು ಬಂದಿರುವುದರಿಂದಲೇ, ಮುರ್ಮು ಆಯ್ಕೆಯ ಬಗ್ಗೆ ದೇಶ ನಿರಾಶೆಯ ಮಾತುಗಳನ್ನಾಡುತ್ತಿದೆ. ಮುರ್ಮು ಆ ಅಘೋಷಿತ ನಿಯಮವನ್ನು ಮುರಿಯುವುದಕ್ಕೆ ಯಶಸ್ವಿಯಾದಾಗ ಮಾತ್ರ, ರಾಷ್ಟ್ರಪತಿ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯ. ರಾಷ್ಟ್ರಪತಿ ಹುದ್ದೆಯನ್ನು 'ರಬ್ಬರ್ ಸ್ಟಾಂಪ್' ಎಂದು ವ್ಯಂಗ್ಯ ಮಾಡುವವರಿದ್ದಾರೆ. ಆದರೆ, ಯಾವುದೇ ಹುದ್ದೆ ಅದರ ದೌರ್ಬಲ್ಯಗಳ ಜೊತೆಗೆ ತನ್ನದೇ ಆಗಿರುವ ಘನತೆ , ಸಾಮರ್ಥ್ಯವನ್ನೂ ಹೊಂದಿರುತ್ತದೆ ಎನ್ನುವುದನ್ನು ಮರೆಯಬಾರದು.
ಆ ಸ್ಥಾನವನ್ನು ವಹಿಸಿಕೊಂಡಾತನ ವೈಯಕ್ತಿಕ ಮುತ್ಸದ್ದಿತನ, ದಿಟ್ಟತನವೇ ಅಂತಿಮವಾಗಿ ಆ ಸ್ಥಾನದ ಯೋಗ್ಯತೆಯನ್ನು ನಿರ್ಧರಿಸುತ್ತದೆ. ಈ ದೇಶದಲ್ಲಿ ಚುನಾವಣಾ ಆಯೋಗವೆನ್ನುವುದು ಅಸ್ತಿತ್ವದಲ್ಲಿದೆ ಎಂದು ದೇಶಕ್ಕೆ ಮನವರಿಕೆಯಾಗಿದ್ದು, ಟಿ. ಎನ್. ಶೇಷನ್ ಅದರ ನೇತೃತ್ವವನ್ನು ವಹಿಸಿಕೊಂಡ ಬಳಿಕ. ಹಲ್ಲಿಲ್ಲದ ಹಾವಿನಂತಾಡುತ್ತಿದ್ದ ರಾಜ್ಯದ ಲೋಕಾಯುಕ್ತ ಏಕಾಏಕಿ ಸುದ್ದಿಯಾಗತೊಡಗಿದ್ದು ಅದರ ನೇತೃತ್ವವನ್ನು ವೆಂಕಟಾಚಲ, ಸಂತೋಷ್ ಹೆಗ್ಡೆಯಂತಹ ಮುತ್ಸದ್ದಿಗಳು ವಹಿಸಿದಾಗ. ಲೋಕಾಯುಕ್ತರೊಬ್ಬರು ಹಗರಣದ ತನಿಖೆ ನಡೆಸಿ ಮುಖ್ಯಮಂತ್ರಿಯೊಬ್ಬರನ್ನು ಅಧಿಕಾರದಿಂದ ಕೆಳಗಿಳಿಸಬಲ್ಲರಾದರೆ, ರಾಷ್ಟ್ರಪತಿಯಂತಹ ಅತ್ಯುನ್ನತ ಸ್ಥಾನದಲ್ಲಿ ಕುಳಿತವರು ತನ್ನ ಮಿತಿಯೊಳಗೇ ಅಧಿಕಾರವನ್ನು ಬಳಸಿಕೊಂಡು, ದಾರಿ ತಪ್ಪಿದ ಸರಕಾರವನ್ನು ತಿದ್ದಬಹುದು, ತಿದ್ದಬೇಕು ಕೂಡ. ರಾಷ್ಟ್ರಪತಿಯಾಗಿ ಆಯ್ಕೆಗೊಂಡಿರುವ ಮುರ್ಮು ಅವರು ಒಂದನ್ನು ತನಗೆ ತಾನೆ ಸ್ಪಷ್ಟಪಡಿಸಿಕೊಳ್ಳಬೇಕು. ತನ್ನನ್ನು ಆಯ್ಕೆ ಮಾಡಿರುವುದು ಬಿಜೆಪಿಯ ನಾಯಕರೋ ಅಥವಾ ಸಂವಿಧಾನವೋ? ಈ ಪ್ರಶ್ನೆಗೆ ಅವರು ಕಂಡುಕೊಳ್ಳುವ ಉತ್ತರವೇ ಅವರ ಮುಂದಿನ ನಡೆಯನ್ನು ಸ್ಪಷ್ಟ ಪಡಿಸುತ್ತದೆ.
ಈ ದೇಶದಲ್ಲಿ ಒಂದು ಕಾಲವಿತ್ತು. ದಲಿತರು, ಶೂದ್ರರು ಅಕ್ಷರ ಕಲಿಯುವುದಕ್ಕೂ ಆಗ ನಿಷೇಧವಿತ್ತು. ಈ ದೇಶದ ಆದಿವಾಸಿಗಳ ಸ್ಥಿತಿ ಇದಕ್ಕಿಂತಲೂ ಚಿಂತಾಜನಕವಾಗಿತ್ತು. ಆದರೆ ದೇಶದ ಸಂವಿಧಾನ, ಅಕ್ಷರ ವಂಚಿತ ದಲಿತರು, ಆದಿವಾಸಿಗಳಿಗೆ ಅವರ ಹಕ್ಕುಗಳನ್ನು ನೀಡಿತು. ಈ ಸಂವಿಧಾನ ದಲಿತರು, ಮಹಿಳೆಯರಿಗೆ ಅವರ ಹಕ್ಕುಗಳನ್ನು ನೀಡಿದಾಗ ಆಕ್ಷೇಪಿಸಿದವರು, ಅದನ್ನು ತಡೆಯಲು ಪ್ರಯತ್ನಿಸಿದವರು ಯಾರು ಎನ್ನುವುದರ ಅರಿವು ಮುರ್ಮು ಅವರಿಗೆ ಇರಬಹುದು ಎಂಬುದು ದೇಶದ ಅಳಿದುಳಿದ ಭರವಸೆಯಾಗಿದೆ. ಮುರ್ಮು ಅವರನ್ನು ಈ ದೇಶದ ಅತ್ಯುನ್ನತ ಸ್ಥಾನಕ್ಕೇರಿಸಿರುವುದು ಯಾವುದೇ ಒಂದು ಪಕ್ಷ ಅಥವಾ ಆ ಪಕ್ಷದ ನಾಯಕರಲ್ಲ. ಬದಲಿಗೆ ಈ ದೇಶದ ಸಂವಿಧಾನ. ಆದುದರಿಂದ, ಸಂವಿಧಾನದ ಯೋಗಕ್ಷೇಮದ ಕುರಿತಂತೆ ಮುರ್ಮು ಅವರು ಹೆಚ್ಚು ಕಾಳಜಿಯನ್ನು ವಹಿಸಿ ತಮ್ಮ ಸ್ಥಾನವನ್ನು ನಿರ್ವಹಿಸಬೇಕಾಗಿದೆ. ದಲಿತ ಸಮುದಾಯದಿಂದ ಬಂದ ಕೆ.ಆರ್.ನಾರಾಯಣ್‌ರಂತಹ ನಾಯಕರು ಈ ನಿಟ್ಟಿನಲ್ಲಿ ಮುರ್ಮು ಅವರಿಗೆ ಮಾದರಿಯಾಗಬೇಕಾಗಿದೆ. ಸಂವಿಧಾನ ವಿರೋಧಿ ಶಕ್ತಿಗಳು ಅನಿವಾರ್ಯವೆನ್ನುವ ಕಾರಣಕ್ಕಾಗಿ ಶೋಷಿತ ಸಮುದಾಯದಿಂದ ಬಂದ ನಾಯಕರನ್ನೇ ಮುಂದಿಟ್ಟುಕೊಂಡು ಶೋಷಿತರ ವಿರುದ್ಧ, ಸಂವಿಧಾನದ ವಿರುದ್ಧ ತಮ್ಮ ದಾಳಿಗಳನ್ನು ನಡೆಸುತ್ತಾ ಬಂದಿವೆ. ಮುರ್ಮು ಅವರ ಆಯ್ಕೆ ಅದರ ಮುಂದುವರಿದ ಭಾಗವಾಗಬಾರದು. ತನ್ನ ವೈಯಕ್ತಿಕ ಲಾಭವನ್ನು ಮುರ್ಮು ಅವರು ಈ ದೇಶದ ಸರ್ವ ಶೋಷಿತರ ಲಾಭವಾಗಿ ಹೇಗೆ ಪರಿವರ್ತಿಸುತ್ತಾರೆ ಎನ್ನುವುದರಲ್ಲೇ ಅವರ ಯಶಸ್ವಿ ನಿಂತಿದೆ.
ಆದಿವಾಸಿ ಸಮುದಾಯದಿಂದ ಬಂದ ಮುರ್ಮು ಅವರು ಕನಿಷ್ಠ ತನ್ನದೇ ಸಮುದಾಯ ದೇಶದಲ್ಲಿ ಎಂತಹ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಎನ್ನುವುದರ ಕಡೆಗೆ ಗಮನ ಹರಿಸ ಬೇಕು. ಆದಿವಾಸಿಗಳು ತಮ್ಮ ಭೂಮಿಯ ಹಕ್ಕುಗಳ ಬಗ್ಗೆ, ತಮ್ಮ ಬದುಕುವ ಹಕ್ಕಿನ ಬಗ್ಗೆ ಮಾತನಾಡಿದರೆ ಅವರನ್ನು ನಕ್ಸಲೈಟ್ ಎಂದು ಕರೆದು ಎನ್‌ಕೌಂಟರ್‌ನಲ್ಲಿ ಕೊಂದು ಹಾಕುವ ವಾತಾವರಣವಿದೆ. ದೇಶದ ತುಂಬೆಲ್ಲ ಕೌರವರು ಮೆರೆಯುತ್ತಿರುವಾಗ ದ್ರೌಪದಿ ಎನ್ನುವ ಹೆಸರೊಂದು ಮುನ್ನೆಲೆಗೆ ಬಂದಿರುವುದು ಅರ್ಥಪೂರ್ಣ ರೂಪಕವಾಗಿದೆ. ದ್ರೌಪದಿಯನ್ನು ಅಗ್ನಿಕನ್ಯೆ ಎಂದು ಪುರಾಣ ಕರೆಯುತ್ತದೆ. ಶೋಷಣೆ, ನೋವು ಸಂಕಟಗಳ ಅಗ್ನಿಯಿಂದ ಎದ್ದು ಬಂದ ದ್ರೌಪದಿ ಮುರ್ಮು ಅವರು, ಆ ಹೆಸರಿಗೆ ಹೇಗೆ ನ್ಯಾಯ ಸಲ್ಲಿಸಲಿದ್ದಾರೆ ಎನ್ನುವುದನ್ನು ದೇಶ ಕುತೂಹಲದಿಂದ ಎದುರು ನೋಡುತ್ತಿದೆ.