ಒಳಗಿನ ಭಿನ್ನಮತಗಳನ್ನು ಕಾಂಗ್ರೆಸ್ ಗೆಲ್ಲುತ್ತದೆಯೆ?

Update: 2022-07-27 03:10 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಚುನಾವಣೆ ಘೋಷಣೆಗೆ ಮುನ್ನವೇ ಕಾಂಗ್ರೆಸ್‌ನೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿರುಸಿನ ಸ್ಪರ್ಧೆ ನಡೆಯುತ್ತಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ನೇರ ಹಣಾಹಣಿ ನಡೆಯುತ್ತಿದೆ. ಈ ಸ್ಪರ್ಧೆ ಇನ್ನಷ್ಟು ತಾರಕಕ್ಕೆ ಏರಿದರೆ, ಕಾಂಗ್ರೆಸ್ ಪಕ್ಷ ಕಳೆದ ಬಾರಿ ಪಡೆದಷ್ಟು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವುದೂ ಕಷ್ಟ. ತಳಸ್ತರದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ ಚುನಾವಣೆಗೆ ಸಿದ್ಧತೆ ನಡೆಸಬೇಕಾಗಿದ್ದ ನಾಯಕರು, ಅದಾಗಲೇ ಚುನಾವಣೆಯನ್ನು ಗೆದ್ದವರಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಚ್ಚೆ ಹಿಡಿಯುತ್ತಿರುವುದು ಕಾಂಗ್ರೆಸ್‌ನೊಳಗಿನ ಇರುವ ಕಾರ್ಯಕರ್ತರನ್ನ್ನೂ ಇಬ್ಭಾಗಗೊಳಿಸುವುದರಲ್ಲಿ ಅನುಮಾನವಿಲ್ಲ. ಬಹುಶಃ ಮೊತ್ತ ಮೊದಲು ಕಾಂಗ್ರೆಸ್ ತನ್ನೊಳಗಿನ ಭಿನ್ನಮತಗಳನ್ನು ಗೆಲ್ಲದೆ ಚುನಾವಣೆಯನ್ನು ಗೆಲ್ಲುವುದು ಅಸಾಧ್ಯವಾಗಿ ಕಾಣುತ್ತದೆ.

ಇತ್ತೀಚೆಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ, 'ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದಕ್ಕಿದ ಸೋಲಿಗಾಗಿ ನನಗೆ ಮತದಾರರ ಮೇಲೆ ಸಿಟ್ಟಿಲ್ಲ. ಆದರೆ ಕಾರ್ಯಕರ್ತರ ಮೇಲೆ ಸಿಟ್ಟಿದೆ' ಎಂಬಂತಹ ಹೇಳಿಕೆಯನ್ನು ನೀಡಿದ್ದರು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅತ್ಯುತ್ತಮ ಜನಪರ ಕೆಲಸಗಳನ್ನು ಮಾಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದ್ದರೆ ಅದರಿಂದ ಆ ಕ್ಷೇತ್ರಕ್ಕೆ ಹೆಚ್ಚು ಒಳಿತಾಗುತ್ತಿತ್ತು ಎನ್ನುವುದರಲ್ಲೂ ಸತ್ಯವಿದೆ. ಆದರೆ, ಚುನಾವಣೆಯಲ್ಲಿ ಗೆಲ್ಲಲು ಅದಷ್ಟೇ ಸಾಕಾಗುವುದಿಲ್ಲ ಎನ್ನುವುದು ಈಗಾಗಲೇ ರಾಜಕೀಯದಲ್ಲಿ ಮುಳುಗೆದ್ದಿರುವ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದ ವಾಸ್ತವವೇನೂ ಅಲ್ಲ. 'ಕಾರ್ಯಕರ್ತರ ಮೇಲೆ ಸಿಟ್ಟಾಗಲು' ಸಿದ್ದರಾಮಯ್ಯ ಅವರಿಗೆ ಯಾವ ನೈತಿಕತೆಯೂ ಇಲ್ಲ. ಬೆರಳು ತೋರಿಸಿದಾಕ್ಷಣ ಬೀದಿಗಿಳಿದು ದುಡಿಯುವುದಕ್ಕೆ ಕಾರ್ಯಕರ್ತರೇನೂ ಜೀತದಾಳುಗಳಲ್ಲ. ಕ್ಷೇತ್ರದ ಬೀದಿ ಬೀದಿ ಅಲೆದಾಡಿ, ಕಾರ್ಯಕರ್ತರನ್ನು ಸಂಘಟಿಸಿ ಅವರನ್ನು ಪ್ರೋತ್ಸಾಹಿಸುವುದು ನಾಯಕನಾದವನ ಕರ್ತವ್ಯ.

ಕನಿಷ್ಠ, ವರುಣಾ ಕ್ಷೇತ್ರದಲ್ಲಿ ತನ್ನ ಪುತ್ರನಿಗೆ ಟಿಕೆಟ್‌ಗಾಗಿ ಹಾಕಿದ ಶ್ರಮವನ್ನಾದರೂ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಸಂಘಟಿಸಲು ಹಾಕಬೇಕಾಗಿತ್ತು. ಇಂದು ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಸಂಘಟಿಸುವುದಕ್ಕೆ, ಅವರನ್ನು ಹುರಿದುಂಬಿಸುವುದಕ್ಕೆ ಬೇರೆ ಬೇರೆ ಸಂಘಟನೆಗಳೇ ಇವೆ. ಆರೆಸ್ಸೆಸ್ ಮತ್ತು ಸಂಘಪರಿವಾರಗಳು ಚುನಾವಣೆ ಇದ್ದರೂ, ಇಲ್ಲದಿದ್ದರೂ ಸದಾ ಸಕ್ರಿಯವಾಗಿರುತ್ತವೆ. ಕಾಂಗ್ರೆಸ್ ಪಕ್ಷ ಚುನಾವಣೆ ಘೋಷಣೆಯಾದ ಬಳಿಕ ಕಾರ್ಯಕರ್ತರನ್ನು ಗುರುತಿಸುವ, ಅವರನ್ನು ಸಂಘಟಿಸುವ ಕೆಲಸಕ್ಕಿಳಿಯುತ್ತದೆ. ಚಾಮುಂಡೇಶ್ವರಿಯ ಸೋಲು ಸಿದ್ದರಾಮಯ್ಯ ಅವರನ್ನು ಮತ್ತೆ ಕಾಡಬಾರದು ಎಂದರೆ, ಅವರು ಅದಕ್ಕೆ ಮಾಡಬೇಕಾದ ಮೊದಲ ಕೆಲಸ, ತಮ್ಮ ಕಾರ್ಯಕರ್ತರಿಗೆ ಮೊರೆ ಹೋಗುವುದು. ಆ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡದೇ ಇರುವುದು. ಇದನ್ನು ಹೊರತು ಪಡಿಸಿ, ಕಾರ್ಯಕರ್ತರೊಂದಿಗೆ ಸಿಟ್ಟಾದರೆ ಅದರಿಂದ ಕಳೆದುಕೊಳ್ಳುವುದು ಮತ್ತೆ ಸಿದ್ದರಾಮಯ್ಯ ಅವರೇ ಆಗಿದ್ದಾರೆ. ಹಾಗೆಯೇ, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದಕ್ಕಾಗಿ ಪಕ್ಷದೊಳಗಿರುವ ನಾಯಕರೇ ದುಡ್ಡು ಸುರಿದಿದ್ದಾರೆ ಎನ್ನುವ ಆರೋಪಗಳಿವೆ.

ಕಾಂಗ್ರೆಸ್ ಬಹುಮತ ಪಡೆದರೆ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ ಮತ್ತು ಇದು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಇನ್ನಷ್ಟು ಆಳವಾಗಿ ಬೇರಿಳಿಸುವುದಕ್ಕೆ ಕಾರಣವಾಗುತ್ತದೆ ಎನ್ನುವ ಭಯದಿಂದ ಪಕ್ಷದ ಇತರ ನಾಯಕರು ಒಳಗೊಳಗೆ ಸಿದ್ದರಾಮಯ್ಯ ವಿರುದ್ಧ ಕತ್ತಿ ಮಸೆದರು. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್‌ನೊಳಗೆ ಈ ಪರಸ್ಪರ ಕಾಲೆಳೆಯುವ ರಾಜಕೀಯ ಮುಂದುವರಿಯುವ ಸಾಧ್ಯತೆಗಳು ಕಾಣುತ್ತಿವೆ. ಇದು ಮುಂದುವರಿದದ್ದೇ ಆದರೆ, ಬಿಜೆಪಿ ಸಲೀಸಾಗಿ ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರವನ್ನು ತನ್ನದಾಗಿಸಲಿದೆ. ಚುನಾವಣೆ ಘೋಷಣೆಗೆ ಮುನ್ನವೇ ಪಕ್ಷದ ನಾಯಕರು ಪರಸ್ಪರ ಹೇಳಿಕೆಗಳನ್ನು ನೀಡುತ್ತಾ ಹೋದರೆ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯವನ್ನು ನೀಡುವವರು ಯಾರು? ಮೊತ್ತ ಮೊದಲು ಪಕ್ಷದ ನಾಯಕರೆನಿಸಿಕೊಂಡವರು ತಮ್ಮನ್ನು ತಾವು ಸರಿಪಡಿಸಿಕೊಳ್ಳಬೇಕಾಗಿದೆ. ಬಳಿಕವಷ್ಟೇ ಕಾರ್ಯಕರ್ತರಿಗೆ ಬುದ್ಧಿ ಹೇಳಬೇಕು.

ಕಾರ್ಯಕರ್ತರ ಮೇಲೆ ಸಿದ್ದರಾಮಯ್ಯ ಸಿಟ್ಟಾಗುವುದು ಪಕ್ಕಕ್ಕಿರಲಿ, ಕನಿಷ್ಠ ಕಾರ್ಯಕರ್ತರು ತನ್ನ ಮೇಲೆ ಸಿಟ್ಟಾಗದಂತೆ ಜಾಗರೂಕತೆ ವಹಿಸುವುದು ಸಿದ್ದರಾಮಯ್ಯ ಅವರ ಮುಂದಿರುವ ಬಹುದೊಡ್ಡ ಹೊಣೆಗಾರಿಕೆಯಾಗಿದೆ. ಇದೇ ಸಂದರ್ಭದಲ್ಲಿ 'ಮುಸ್ಲಿಮ್ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿಯಾಗಬೇಕು' ಎಂಬ ಝಮೀರ್ ಮಾತನ್ನು ಕಾಂಗ್ರೆಸ್ ಪಕ್ಷ ಗೌರವದಿಂದ ಕಾಣಬೇಕು. ಕರ್ನಾಟಕದಲ್ಲಿ ಮುಸ್ಲಿಮ್ ಸಮುದಾಯ ಇಂದಿಗೂ ಶೋಷಿತ ಸಮುದಾಯವಾಗಿಯೇ ಉಳಿದಿದ್ದರೆ ಅದಕ್ಕೆ ಕಾಂಗ್ರೆಸ್‌ನ ಕೊಡುಗೆಯೇನೂ ಸಣ್ಣದಿಲ್ಲ. ತಲೆತಲಾಂತರದಿಂದ ಕಾಂಗ್ರೆಸನ್ನು ನಂಬಿ ಅದಕ್ಕೆ ಮತ ಹಾಕುತ್ತಾ ಬಂದವರು ಮುಸ್ಲಿಮರು. ಈಗಲೂ ಕರ್ನಾಟಕದ ಮುಸ್ಲಿಮ್ ಸಮುದಾಯದ ಮತಗಳು ತಮ್ಮ ಹಕ್ಕು ಎಂಬಂತೆಯೇ ಕಾಂಗ್ರೆಸ್ ವರ್ತಿಸುತ್ತಿದೆ. ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಸಂದರ್ಭದಲ್ಲಿ 'ಮುಸ್ಲಿಮರಿಗೆ ಟಿಕೆಟ್ ನೀಡಿದರೆ ಅವರು ಗೆಲ್ಲುವುದಿಲ್ಲ' ಎನ್ನುವ ಮನಸ್ಥಿತಿ ಕಾಂಗ್ರೆಸ್‌ನಲ್ಲಿ ಅತಿಯಾಗುತ್ತಿದೆ.

ಒಂದು ಕಾಲದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ನಾಯಕರು ಕಾಂಗ್ರೆಸ್‌ನೊಳಗಿದ್ದರು. ಅವರೆಲ್ಲರೂ ವಯಸ್ಸಾಗಿ ಬದಿಗೆ ಸರಿಯುತ್ತಿದ್ದಂತೆಯೇ ಅವರ ಸ್ಥಾನವನ್ನು ತುಂಬುವ ಹೊಸ ನಾಯಕರ ಸೃಷ್ಟಿಯಾಗುತ್ತಿಲ್ಲ. ಶೋಷಿತ ಸಮುದಾಯದ ಅಭಿವೃದ್ಧಿಯಾಗಬೇಕಾದರೆ ಆ ಸಮುದಾಯವನ್ನು ಪ್ರತಿನಿಧಿಸುವ ರಾಜಕೀಯ ನಾಯಕರ ಸಂಖ್ಯೆಯೂ ಹೆಚ್ಚಾಗಬೇಕು. ಬದಲಿಗೆ, ಕಾಂಗ್ರೆಸ್‌ನಲ್ಲಿ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ಶಾಸಕರು, ಸಂಸದರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದೆ. ಕಾಂಗ್ರೆಸ್‌ನೊಳಗೆ ಬೇರೆ ಬೇರೆ ಪ್ರಬಲ ಜಾತಿಗಳನ್ನು ಓಲೈಸಲಾಗುತ್ತದೆಯಾದರೂ, ಮುಸ್ಲಿಮ್ ಸಮುದಾಯದ ವಿಷಯ ಬಂದಾಗ ಕಾಂಗ್ರೆಸ್ ನಾಯಕರು ದ್ವಂದ್ವ ನೀತಿಯನ್ನು ಅನುಸರಿಸುತ್ತಾರೆ. ಈ ಕಾರಣದಿಂದಲೇ, ಕಾಂಗ್ರೆಸ್‌ನೊಳಗಿರುವ ದಲಿತರು, ಮುಸ್ಲಿಮರು ಕೂಡ ತಮ್ಮ ಕೀಳರಿಮೆಯನ್ನು ಬಿಟ್ಟು ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧೆಗಿಳಿಯಬೇಕು. ಆಗ ಕನಿಷ್ಠ ಉಪ ಮುಖ್ಯಮಂತ್ರಿ ಸ್ಥಾನವಾದರೂ ಸಿಕ್ಕೀತು. ಬಿಜೆಪಿ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಲು ಸಂಪೂರ್ಣ ವಿಫಲವಾಗಿದೆ.

ರಾಜ್ಯ ಭ್ರಷ್ಟಾಚಾರದ ಕೊಂಪೆಯಾಗಿದೆ. ಹಾಗೆಂದು ಅದರ ಪರಿಣಾಮ ಚುನಾವಣೆಯ ಫಲಿತಾಂಶದ ಮೇಲೆ ಬೀರಬಹುದು ಎಂದು ಕನಸು ಕಾಣುತ್ತಾ ಕೂತರೆ ಕಾಂಗ್ರೆಸ್‌ಗೆ ನಿರಾಶೆ ಕಾದಿದೆ. ಯಾಕೆಂದರೆ, ಚುನಾವಣೆಯಲ್ಲಿ ಬಿಜೆಪಿ ಯಾವತ್ತೂ ಅಭಿವೃದ್ಧಿಯ ಹೆಸರಿನಲ್ಲಿ ಗೆಲ್ಲುತ್ತಾ ಬಂದಿಲ್ಲ. ಅದು ಬೇರೆ ಬೇರೆ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಜನರನ್ನು ವಿಸ್ಮತಿಗೆ ತಳ್ಳಿ ಚುನಾವಣೆಯಲ್ಲಿ ಗೆಲ್ಲುತ್ತಾ ಬಂದಿದೆ. ಹಾಗೆಯೇ ಮಾಧ್ಯಮಗಳನ್ನು ಕೊಂಡುಕೊಳ್ಳುವುದರಲ್ಲಿ ಬಿಜೆಪಿ ಈಗಾಗಲೇ ಯಶಸ್ವಿಯಾಗಿರುವುದರಿಂದ, ಬಿಜೆಪಿಯ ವೈಫಲ್ಯವನ್ನು ಜನರ ಮುಂದಿಡಲು ಮಾಧ್ಯಮಗಳು ಹಿಂದೇಟು ಹಾಕುತ್ತಿವೆ. ಇಂತಹ ಸಂದರ್ಭದಲ್ಲಿ ಬಿಜೆಪಿಯ ವೈಫಲ್ಯಗಳನ್ನು ಜನರ ಬಳಿಗೆ ತಲುಪಿಸುವ ಕೆಲಸವನ್ನು ಕಾಂಗ್ರೆಸ್ ತನ್ನ ಕಾರ್ಯಕರ್ತರ ಮೂಲಕ ಮಾಡಬೇಕು. ಆದರೆ ಅದು ಸಾಧ್ಯವಾಗಬೇಕಾದರೆ ಕಾಂಗ್ರೆಸ್ ಮೊದಲು, ತನ್ನ ವಿರುದ್ಧವೇ ಹೋರಾಡಿ ಗೆಲ್ಲಬೇಕಾಗಿದೆ. ತನ್ನೊಳಗಿನ ಸ್ಪರ್ಧೆಯನ್ನು ಗೆಲ್ಲದೆ ಮುಂದಿನ ಚುನಾವಣೆಯನ್ನು ಗೆಲ್ಲುವುದು ಸಾಧ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News