ಅಮೆರಿಕನ್ ಕೈದಿಗಳ ಬಿಡುಗಡೆಗೆ ರಶ್ಯಕ್ಕೆ ಗಣನೀಯ ಪ್ರಸ್ತಾಪ: ಅಮೆರಿಕ

Update: 2022-07-28 16:39 GMT

ವಾಷಿಂಗ್ಟನ್,  ಜು.28: ಬಾಸ್ಕೆಟ್ಬಾಲ್ ಆಟಗಾರ ಬ್ರಿಟ್ನಿ ಗ್ರಿನರ್ ಸೇರಿದಂತೆ ರಶ್ಯ ಬಂಧಿಸಿರುವ ಅಮೆರಿಕದ ಪ್ರಜೆಗಳ ಬಿಡುಗಡೆಗೆ ರಶ್ಯಕ್ಕೆ ಗಣನೀಯ ಪ್ರಸ್ತಾಪ ಮುಂದುವರಿಸಲಾಗಿದೆ. ಈ ಬಗ್ಗೆ ರಶ್ಯದ ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಸುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಬುಧವಾರ ಹೇಳಿದ್ದಾರೆ.

ರಶ್ಯದಲ್ಲಿ ಬಂಧಿಯಾಗಿರುವ ಮೆರೈನ್ ಕಾರ್ಪ್ಸ್ (ಭೂಸೇನೆ ಮತ್ತು ನೌಕಾಸೇನೆ ಎರಡರ ಜತೆಗೂ ಕೆಲಸ ಮಾಡುವ ಅಮೆರಿಕದ ಸೇನಾ ತುಕಡಿ)ನ ಮಾಜಿ ಅಧಿಕಾರಿ ಪೌಲ್ ವೆಲಾನ್ ಹಾಗೂ ಬ್ರಿಟ್ನಿ ಗ್ರಿನರ್ರ ಬಿಡುಗಡೆಯ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.

ಇಬ್ಬರ ಬಂಧನವೂ ತಪ್ಪುತಿಳುವಳಿಕೆಯಿಂದ ನಡೆದಿದ್ದು ಅವರಿಗೆ ಸ್ವದೇಶಕ್ಕೆ ಮರಳಲು ಅವಕಾಶ ನೀಡಬೇಕಾಗಿದೆ. ಆದ್ದರಿಂದ ಇವರಿಬ್ಬರ ಬಿಡುಗಡೆಗಾಗಿ ಒಂದು ವಾರದ ಹಿಂದೆ ಗಣನೀಯ ಪ್ರಸ್ತಾಪವನ್ನು ರಶ್ಯದ ಮುಂದೆ ಇರಿಸಲಾಗಿದೆ. ಈ ಪ್ರಸ್ತಾಪದ ಬಗ್ಗೆ ನಮ್ಮ ಸರಕಾರ ನೇರವಾಗಿ ಮತ್ತು ನಿರಂತರವಾಗಿ ಸಂವಹನ ನಡೆಸಿದ್ದು ಈ ಸಂವಹನದ ಬಗ್ಗೆ ವೈಯಕ್ತಿಕವಾಗಿ ಗಮನ ಹರಿಸುವುದಾಗಿ ಬ್ಲಿಂಕೆನ್ ಹೇಳಿದ್ದಾರೆ. ಇದಕ್ಕೂ ಮುನ್ನ ರಶ್ಯದ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದ ಗ್ರಿನರ್, ತಾನು ನಿಷೇಧಿತ ಮಾದಕ ಪದಾರ್ಥಗಳನ್ನು ಉದ್ದೇಶಪೂರ್ವಕವಾಗಿ ತಂದಿರಲಿಕ್ಕ ಎಂದಿದ್ದರು.

ಇವರಿಬ್ಬರ ಬಿಡುಗಡೆಗೆ ಪ್ರತಿಯಾಗಿ ಅಮೆರಿಕದಲ್ಲಿ ಬಂಧನದಲ್ಲಿರುವ ರಶ್ಯದ ಶಸ್ತ್ರಾಸ್ತ್ರ ಕಳ್ಳಸಾಗಣೆದಾರ ವಿಕ್ಟರ್ ಬೌಟ್ರ ಬಿಡುಗಡೆಗೆ ಪ್ರಸ್ತಾಪಿಸಲಾಗಿದೆ ಎಂಬ ವರದಿಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಬ್ಲಿಂಕೆನ್, ಸೂಕ್ಷ್ಮ ವಿಷಯಗಳ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ಸಾಧ್ಯವಿಲ್ಲ ಎಂದರು.

ಉಕ್ರೇನ್ ಯುದ್ಧದ ನಡುವೆಯೇ ರಶ್ಯ-ಅಮೆರಿಕ ನಡುವೆ ಒಂದು ಸುತ್ತಿನ ಕೈದಿಗಳ ವಿನಿಮಯ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಡಿ ಎಪ್ರಿಲ್ನಲ್ಲಿ ಅಮೆರಿಕದ ಮರೈನ್ ಕಾರ್ಪ್ಸ್ n ಮಾಜಿ ಅಧಿಕಾರಿ ಟ್ರೆವರ್ ರೀಡ್ ಹಾಗೂ ರಶ್ಯದ ಮಾದಕವಸ್ತು ಕಳ್ಳಸಾಗಣೆದಾರ ಕೊನ್ಸ್ಟಾಂಟಿನ್ ಯರೊಶೆಂಕೊ ಬಿಡುಗಡೆಗೊಂಡಿದ್ದರು. ಮಾದಕ ವಸ್ತು ಕಳ್ಳಸಾಗಣೆಯ ಅಪರಾಧಕ್ಕೆ ಗ್ರೀನರ್ಗೆ 10 ವರ್ಷ ಜೈಲುಶಿಕ್ಷೆ ಮತ್ತು ಗೂಢಚಾರಿಕೆ ಅಪರಾಧಕ್ಕೆ ವೆಲಾನ್ಗೆ 16 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News