ನಾಝಿ ಸರ್ವಾಧಿಕಾರಿ ಹಿಟ್ಲರ್ ನ ವಾಚ್ 1.1 ಮಿಲಿಯ ಡಾಲರ್ ಗೆ ಹರಾಜು
ವಾಶಿಂಗ್ಟನ್,ಜು.30: ಅಮೆರಿಕದಲ್ಲಿ ನಡೆದ ಹರಾಜೊಂದಲ್ಲಿ ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ಗೆ ಸೇರಿದ್ದೆನ್ನಲಾದ ವಾಚೊಂದು ಬರೋಬ್ಬರಿ 1.1 ದಶಲಕ್ಷ ಡಾಲರ್ (ಅಂದಾಜು 8.71 ಕೋಟಿ ರೂ.)ಗೆ ಮಾರಾಟವಾಗಿದೆ. ಸಾವಿರಾರು ಯಹೂದಿಗಳ ನರಮೇಧಕ್ಕೆ ಕಾರಣನಾದ ಹಿಟ್ಲರ್ ಗೆ ಸೇರಿದ ವಸ್ತುಗಳನ್ನು ಹರಾಜಿಗಿಡುವ ಬಗ್ಗೆ ಯಹೂದಿ ಸಮುದಾಯ ತೀವ್ರ ವಿರೋದ ವ್ಯಕ್ತಪಡಿಸಿದ್ದ ಹೊರತಾಗಿಯೂ, ನಾಝಿ ನಾಯಕನ ವಾಚು ದಾಖಲೆ ಬೆಲೆಗೆ ಮಾರಾಟವಾಗಿದೆ.
ಈ ವಾಚನ್ನು ಜರ್ಮನಿಯ ವಾಚ್ ತಯಾರಿಕಾ ಸಂಸ್ತೆ ಹುಬೆರ್ ನಿರ್ಮಿಸಿತ್ತು, ಅದರಲ್ಲಿ ನಾಝಿ ಲಾಂಛನವಾದ ಸ್ವಸ್ತಿಕಾ ಹಾಗೂ ಹಿಟ್ಲರ್ನ ಎ.ಎಚ್. ಎಂಬ ಇನಿಶಿಯಲ್ಗಳನ್ನು ಕೆತ್ತಲಾಗಿದೆ. ಮೇರಿಲ್ಯಾಂಡ್ನ ಅಲೆಕ್ಸಾಂಡರ್ ಐತಿಹಾಸಿಕ ವಸ್ತುಗಳ ಹರಾಜು ಕೇಂದ್ರದಲ್ಲಿ ನಡೆದ ಏಲಂನಲ್ಲಿ ಅನಾಮಿಕರೊಬ್ಬರು ಈ ಮೊತ್ತವನ್ನು ಖರೀದಿಸಿದ್ದಾರೆಂದು ಬಿಬಿಸಿ ಸುದ್ದಿಸಂಸ್ಥೆ ವರದಿಮಾಡಿದೆ.
ಮೇರಿಲ್ಯಾಂಡ್ನ ಅಲೆಕ್ಸಾಂಡರ್ ಹರಾಜು ಮಳಿಗೆಯು, ಐತಿಹಾಸಿಕ ವ್ಯಕ್ತಿಗಳ ಅಟೋಗ್ರಾಫ್ಗಳು, ದಾಖಲೆಪತ್ರಗಳು , ಛಾಯಾಚಿತ್ರಗಲು, ಸೇನಾ ಸಂಘರ್ಷದ ದಾಖಲೆಗಳು ಹಾಗೂ ಮಹತ್ವದ ಪ್ರಾಕ್ತನ ಅವಶೇಷಗಳು ಇತಾದಿಗಳನ್ನು ಹರಾಜಿಗಿಡುತ್ತದೆ.
ಈ ವಾಚನ್ನು ಅಡಾಲ್ಫ್ ಹಿಟ್ಲರ್ಗೆ ಆತನ 44ನೇ ಜನ್ಮದಿನವಾದ 1933ರ ಎಪ್ರಿಲ್ 20ರಂದು, ಆತ ಜರ್ಮನಿಯ ಚಾನ್ಸಲರ್ (ಅಧ್ಯಕ್ಷ )ಆದಾಗ ನೀಡಿರುವ ಸಾಧ್ಯತೆ ಅಧಿಕವಾಗಿದೆಯೆಂದು, ಹರಾಜು ವಸ್ತುವಿನ ಪರಿಚಯ ಪತ್ರ ( ಕ್ಯಾಟಲಾಗ್)ನಲ್ಲಿ ಮಾಹಿತಿ ನೀಡಲಾಗಿದೆ.
1945ರ ಮೇ 4ರಂದು ಹಿಟ್ಲರ್ನ ಪರ್ವತ ವಿಶ್ರಾಂತಿಧಾಮವಾದ ಬರ್ಗಾಫ್ಗೆ 30 ಫ್ರೆಂಚ್ ಸೈನಿಕರ ತಂಡವೊಂದು ದಾಳಿ ನಡೆಸಿದ ಈ ವಾಚನ್ನು ಯುದ್ಧ ಸ್ಮರಣಿಕೆಯಾಗಿ ಕೊಂಡೊಯ್ದರೆಂದು ಕ್ಯಾಟಲಾಗ್ನಲ್ಲಿ ವಿವರಿಸಲಾಗಿದೆ.