ದೇಶದ ಮಾನ ಮರ್ಯಾದೆ ಹರಾಜು ಹಾಕಿದ್ದು ಯಾರು?
''ಭಾರತದ ಮಾನ ಮರ್ಯಾದೆ ಹರಾಜಾಗಿ ಹೋಯಿತು...ವಿಶ್ವದ ಮುಂದೆ ಭಾರತ ತಲೆತಗ್ಗಿಸುವಂತಾಯಿತು...'' ಭಕ್ತ ಬಸ್ಯ ಬೀದಿಯಲ್ಲಿ ನಿಂತು ಗೊಳೋ ಎಂದು ಅಳುತ್ತಿದ್ದ. ಅದನ್ನು ನೋಡಿದ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡ. ಕೊನೆಗೂ ಭಾರತದ ಸ್ಥಿತಿ ಗತಿ ಭಕ್ತ ಬಸ್ಯನಿಗೆ ಅರ್ಥವಾಯಿತಲ್ಲ ಎಂದು ಅವನನ್ನು ಸಮಾಧಾನಿಸಲು ಹತ್ತಿರ ಹೋದ.
''ಭಾರತದ ರೂಪಾಯಿ ಬೆಲೆ ಡಾಲರ್ ಮುಂದೆ ನೆಲಕಚ್ಚಿರುವುದರಿಂದ ಭಾರತದ ಮಾನ ಮರ್ಯಾದೆ ಹರಾಜಾಗಿ ಹೋಯಿತು ಎಂದು ಅಳುತ್ತಿದ್ದೀರಾ?'' ಕಾಸಿ ಕೇಳಿದ.
ಕಾಸಿಯ ಪ್ರಶ್ನೆ ಕೇಳಿದ್ದ ಭಕ್ತ ಬಸ್ಯ ಅಳು ನಿಲ್ಲಿಸಿ ಕಾಸಿಯನ್ನೇ ದುರುಗುಟ್ಟಿ ನೋಡ ತೊಡಗಿದ ''ರೂಪಾಯಿ ಬೆಲೆಯೇನೂ ಕಡಿಮೆಯಾಗಿಲ್ಲ. ಡಾಲರ್‌ನ ಬೆಲೆ ಜಾಸ್ತಿಯಾಗಿದೆ ಅಷ್ಟೇ. ಪಾಕಿಸ್ತಾನದ ರೂಪಾಯಿಯ ಮುಂದೆ ಭಾರತದ ರೂಪಾಯಿಯ ಬೆಲೆ ಇನ್ನೂ ಹಾಗೆಯೇ ಇದೆ....'' ಎಂದವನೇ ಮತ್ತೆ ತಲೆ ಚಚ್ಚಿಕೊಳ್ಳುತ್ತಾ ''ಭಾರತ ವಿಶ್ವದ ಮುಂದೆ ನಗ್ನವಾಗಬೇಕಾಯಿಲ್ಲ....'' ಎಂದು ಅಳತೊಡಗಿದ.
''ಭಾರತದಲ್ಲಿ ಹೆಚ್ಚುತ್ತಿರುವ ಬಡತನದಿಂದಾಗಿ ಭಾರತದ ಮಾನ ಹರಾಜಾಯಿತು ಎಂದು ನಿಮ್ಮ ಅಭಿಪ್ರಾಯವೇ?'' ಕಾಸಿ ಮತ್ತೊಮ್ಮೆ ಕೇಳಿದ.
ಬಸ್ಯ ಅಳು ನಿಲ್ಲಿಸಿ ಮತ್ತೆ ಕಣ್ಣು ಕೆಂಪಗೆ ಮಾಡಿ ಕಾಸಿಯನ್ನು ನೋಡಿದ ''ಅದಾನಿಯವರು ವಿಶ್ವದಲ್ಲೇ ದೊಡ್ಡ ಶ್ರೀಮಂತರಾಗಿ ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದ್ದಾರೆ. ಭಾರತದಲ್ಲಿ ಬಡತನ ಹೆಚ್ಚುತ್ತಿರುವುದು ಜನಸಂಖ್ಯಾ ಸ್ಫೋಟದಿಂದ. ಜನಸಂಖ್ಯಾ ನೀತಿ ಜಾರಿಗೆ ಬಂದರೆ ಭಾರತ ಶ್ರೀಮಂತವಾಗುತ್ತದೆ. ಈಗ ನೋಡಿ ಅಂಬಾನಿ ಶ್ರೀಮಂತರಾಗಿದ್ದಾರೆ. ಅಂಬಾನಿಯವರಿಗೆ ಎಷ್ಟು ಮಕ್ಕಳು? ಅವರು ಕುಟುಂಬ ಯೋಜನೆ ಪಾಲಿಸಿದ್ದರಿಂದ ಶ್ರೀಮಂತರಾಗಲು ಸಾಧ್ಯವಾಯಿತು....'' ಎಂದವನೇ ''ವಿಶ್ವ ಗುರುವಾಗಿದ್ದ ಭಾರತದ ಮಾನ ಹರಾಜಾಯಿತಲ್ಲ....'' ಎನ್ನುತ್ತಾ ಮತ್ತೆ ಗೋಳಾಡ ತೊಡಗಿದ.
ಕಾಸಿಗೆ ತಲೆ ಬಿಸಿಯಾಯಿತು. ''ಓಹೋ....ಈಗ ಗೊತ್ತಾಯಿತು....ದಲಿತ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರದಿಂದಾಗಿ ಭಾರತದ ಮಾನ ಹರಾಜಾಗಿದೆ....ನಿಮ್ಮ ಕಳಕಳಿ ಅರ್ಥವಾಯಿತು....''
ಬಸ್ಯ ಈಗ ಸಿಟ್ಟಿನಿಂದ ಒಮ್ಮೆಲೆ ಹಾರಿದ ''ಅತ್ಯಾಚಾರಕ್ಕೆ ಮಹಿಳೆಯರು ಧರಿಸುವ ಬಟ್ಟೆಯೇ ಕಾರಣ....ಮಹಿಳೆಯರು ರಾತ್ರಿಯಾದ ಬಳಿಕ ಹೊರಗೆ ಓಡಾಡಲೇ ಬಾರದು. ಅತ್ಯಾಚಾರ ಮಾಡುವಾಗ 'ಅಣ್ಣಾ' ಎಂದು ಕರೆದು ಅವರ ಮನವೊಲಿಸಬೇಕು....'' ''ಸರಿ ಮತ್ತೇಕೆ ಅಳುತ್ತಿದ್ದೀಯಾ? ಓಹೋ...ಮಂಗಳೂರಿನಲ್ಲಿ ಕೋಮುಗಲಭೆಗಳಿಂದ ಯುವಕರು ಬೀದಿಯಲ್ಲಿ ಹೆಣವಾಗುತ್ತಿರುವುದು ನಿಜಕ್ಕೂ ದುರ್ದೈವ. ಭಾರತದ ಮಾನ ಮರ್ಯಾದೆಯ ಪ್ರಶ್ನೆ ಇದು...'' ಕಾಸಿ ಮತ್ತೆ ಭಕ್ತ ಬಸ್ಯನನ್ನು ಸಮಾಧಾನಿಸಲು ಯತ್ನಿಸಿದ.
''ಅಫ್ಘಾನಿಸ್ತಾನ, ಪಾಕಿಸ್ತಾನದ ಬಗ್ಗೆ ಮೊದಲು ಮಾತನಾಡಿ. ಅಲ್ಲಿ ನಡೆಯುತ್ತಿರುವ ಸಾವು ನೋವುಗಳಿಗಿಂತ ಭಾರತದಲ್ಲಿ ನಡೆಯುತ್ತಿರುವುದು ಎಷ್ಟೋ ವಾಸಿ....ಉಕ್ರೇನ್‌ನಲ್ಲಿ ಅದೆಷ್ಟು ಜನರು ಸಾಯುತ್ತಿದ್ದಾರೆ....ಸಿರಿಯಾದಲ್ಲಿ....''
''ಹಾಗಾದರೆ ಭಾರತದ ಮಾನ ಯಾವ ಕಾರಣಕ್ಕೆ ಹೋಗಿರಬಹುದು? ಮಹಾತ್ಮ್ಮಾಗಾಂಧೀಜಿಯನ್ನು ಗುಂಡಿಟ್ಟು ಕೊಂದಿರುವುದು ಅವನಿಗೆ ಈಗ ಗೊತ್ತಾಗಿರಬೇಕೋ ಏನೋ?'' ಎಂದು ಕಾಸಿ ಅನುಮಾನಿಸಿದ ''ಓಹೋ...ಗಾಂಧೀಜಿಯನ್ನು ಗೋಡ್ಸೆ ಗುಂಡಿಟ್ಟು ಕೊಂದ ವಿಷಯ ನಿಮಗೆ ಈಗ ಗೊತ್ತಾಗಿರಬೇಕು....'' ಎನ್ನುತ್ತಿದ್ದಂತೆ ಭಕ್ತ ಬಸ್ಯ ಎಗರಿ ಬಿದ್ದ.
''ಗಾಂಧಿಯ ವಿಷಯ ಈಗ ಯಾಕೆ? ಗಾಂಧೀಜಿಯಿಂದ ಭಾರತ ವಿಭಜನೆಯಾಯಿತು ಗೊತ್ತುಂಟಾ?....'' ಎನ್ನುತ್ತಾ ಮತ್ತೆ ''ಭಾರತದ ಮಾನ ಹರಾಜು ಮಾಡಿ ಬಿಟ್ಟೆಯಲ್ಲೋ...'' ಎಂದು ರಸ್ತೆಯಲ್ಲಿ ಹೊರಳಾಡ ತೊಡಗಿದ.
''ಅರೇ...ಈತ ಪ್ರಧಾನಿ ಮೋದಿಯವರ ಬಗ್ಗೆಯೇ ಮಾತನಾಡುತ್ತಿದ್ದಾನೆ. ಒಬ್ಬ ವ್ಯಕ್ತಿ ಭಾರತದ ಮಾನ ಮರ್ಯಾದೆಯನ್ನು ಹರಾಜು ಮಾಡಿದ್ದಾನೆ ಎಂದರೆ ಬೇರಿನ್ನಾರು...'' ಎನ್ನುತ್ತಾ ಬಸ್ಯನ ಬಳಿ ಬಾಗಿ ''ಅದೇನೇ ಆಗಲಿ....ಅವರು ವಿಶ್ವ ಗುರು ಅಲ್ಲವೆ? ಅವರಿಂದ ದೇಶದ ಮಾನ ಮರ್ಯಾದೆ ಹರಾಜಾಗಿದೆ ಎಂದರೆ ಚೆನ್ನಾಗಿರೋದಿಲ್ಲ....'' ಎಂದ.
ಬಸ್ಸ ಈಗ ನಿಜಕ್ಕೂ ಉಗ್ರವಾಗಿದ್ದ ''ಈ ದೇಶವನ್ನು ವಿಶ್ವಗುರು ಮಾಡಲು ಹಗಲಿರುಳು ಶ್ರಮಿಸುತ್ತಿರುವ ಮಹಾತ್ಮರು ಅವರು. ಅವರಿಂದ ದೇಶದ ಮಾನ ಹರಾಜಾಗಿದೆ ಎಂದು ಹೇಳಲು ನಿನಗೆ ನಾಚಿಕೆಯಾಗುವುದಿಲ್ಲವೆ? ನಿನ್ನನ್ನು ಜೈಲಿಗೆ ಕಳುಹಿಸಿ ಜಾಮೀನಿಲ್ಲದ ಹಾಗೆ ಮಾಡುತ್ತೇನೆ'' ಎಂದ. ಇನ್ನೇನು ಹಲ್ಲೆ ನಡೆಸುವುದಕ್ಕೆ ಬಾಕಿ....
''ಸರಿ, ಹಾಗಾದರೆ ದೇಶದ ಮಾನ ಮರ್ಯಾದೆ ಹರಾಜಾಗಿದ್ದು ಹೇಗೆ? ಯಾರು ಅದನ್ನು ಮಾಡಿದವರು ನೀನೇ ವಿವರಿಸು....'' ಕಾಸಿ ಹತಾಶೆಯಿಂದ ಹೇಳಿದ.
''ಅದೇ, ಆ ನಟ ರಣವೀರ್ ಸಿಂಗ್ ಪೇಪರ್‌ನಲ್ಲಿ ನಗ್ನವಾಗಿ ಫೋಟೋ ಹಾಕಿಸಿಕೊಂಡು ದೇಶದ ಮಾನ ಮರ್ಯಾದೆ ಹರಾಜು ಹಾಕಿದ. ದೇಶವನ್ನು ವಿಶ್ವಗುರು ಮಾಡುವ ಮೋದಿಯವರ ಕನಸನ್ನು ವಿಫಲಗೊಳಿಸುವುದಕ್ಕಾಗಿಯೇ ಹಾಗೆ ಬೆತ್ತಲೆಯಾಗಿ ಪೇಪರ್‌ನಲ್ಲಿ ಕಾಣಿಸಿಕೊಂಡಿದ್ದಾನೆ....ಅವನಿಂದಾಗಿ ದೇಶ ತಲೆ ಎತ್ತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೋದಿಯವರ ಎಲ್ಲ ಪ್ರಯತ್ನ ನೀರ ಮೇಲೆ ಹೋಮ ಮಾಡಿದಂತಾಯಿತು....'' ಎನ್ನುತ್ತಾ ಒಂದೇ ಸಮನೆ ಅಳ ತೊಡಗಿದ.
ಕಾಸಿಗೆ ಈಗ ವಿಷಯ ಅರ್ಥವಾಯಿತು. ಎಲ್ಲಿ ಈತನೂ ಬಟ್ಟೆ ಹರಿದುಕೊಂಡು ಬೆತ್ತಲಾಗಿ ಬಿಡುತ್ತಾನೆಯೋ ಎಂಬ ಭಯದಿಂದ ಕಾಸಿ ಅಲ್ಲಿಂದ ಮೆಲ್ಲಗೆ ಕಾಲುಕಿತ್ತ.
chelayya@gmail.com