ರಾಜಾರಾಮ್ ಎಂಬ ಸಾಂಸ್ಕೃತಿಕ ದಾಖಲೆ

Update: 2022-07-31 04:33 GMT

ಈ ಕೃತಿ ಇಂದು ಬೆಂಗಳೂರಿನ ಸಿ. ಅಶ್ವತ್ಥ್ ಕಲಾಭವನದಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ರಂಗಭೂಮಿ, ಸಿನೆಮಾ ಮತ್ತು ಕಿರುತೆರೆಯ ಅತ್ಯಂತ ಮಹತ್ತರವಾದ ಕಾಲಘಟ್ಟದಲ್ಲಿ ಅದರ ಸಾಧನೆಯನ್ನು, ಸಾರಥ್ಯವನ್ನು ಹಾಗೂ ಸಾಧ್ಯತೆಗಳನ್ನು ಅನುಭವಿಸಿ, ಅದರ ಸಾರ್ಥಕತೆಗೆ ಕೊಡುಗೆ ನೀಡಿ ಅದನ್ನೂ ಬೆಳೆಸಿ ತಾವೂ ಬೆಳೆದವರ ಸಾಲಿಗೆ ಸೇರುತ್ತಾರೆ ಆರ್.ಎಸ್.ರಾಜಾರಾಮ್. ‘ಅವತರಣಿಕೆ’ ಎಂಬ ಈ ಪುಸ್ತಕವು ರಾಜಾರಾಮ್ ಅವರ ಕೊಡುಗೆಯನ್ನು ನೆನೆಯುತ್ತಾ, ಅವರ ಸಂಪರ್ಕದಲ್ಲಿ ಬಂದ ಹಾಗೂ ಅವರು ಹಾಸುಹೊಕ್ಕ ಕನ್ನಡ ಸಾಂಸ್ಕೃತಿಕ ಸಂದರ್ಭಗಳನ್ನು ಅವರ ಮೂಲಕ ದಾಖಲು ಮಾಡುವ ಪ್ರಯತ್ನವಾಗಿದೆ.

ಬದರಿ ನಾರಾಯಣ್, ವೀರಪ್ಪಮೊಯ್ಲಿ, ಮತ್ತೋರ್ವ ಮಂತ್ರಿಗಳ ಆಪ್ತ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ್ದ ರಾಜಾರಾಮ್ ಅವರ ಅಭಿರುಚಿ ನಾಟಕ ಮತ್ತು ನಟನೆ. ರಾಜಾರಾಮ್ ಸೃಜನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡ ಕಾಲವೂ ಕೂಡ ಕನ್ನಡ ದೃಶ್ಯ ಮಾಧ್ಯಮಗಳಾದ ಸಿನೆಮಾ, ನಾಟಕ ಹಾಗೂ ಕಿರುತೆರೆಗಳು ಪ್ರಾಯೋಗಿಕವಾಗಿ ಹೊಸ ಸ್ವರೂಪಗಳನ್ನು ನಿರೂಪಿಸಿಕೊಳ್ಳುತ್ತಾ ಮನರಂಜನೆಗೆ ಹೊಸ ಆಯಾಮಗಳನ್ನು ನೀಡುತ್ತಿದ್ದ ಕಾಲವಾಗಿತ್ತು. ದಿಲ್ಲಿಯ ರಾಷ್ಟ್ರೀಯ ರಂಗ ಶಾಲೆಯ ಪರಿಚಯವಾಗುವ ಮೊದಲೇ ಕನ್ನಡದ ರಂಗಭೂಮಿಯನ್ನು ಸಜ್ಜುಗೊಳಿಸಿದ್ದ ಗುಬ್ಬಿ ಕಂಪೆನಿ, ಸುಬ್ಬಯ್ಯ ನಾಯ್ಡು ಅವರ ತಂಡ ಮತ್ತಿತರ ಚಿಕ್ಕ ಪುಟ್ಟ ಹವ್ಯಾಸಿ ತಂಡಗಳು ನಾಟಕದಾಟವನ್ನು ಮನರಂಜನೆಯ ಕೇಂದ್ರವಾಗಿಸಿತ್ತು.

ರಾಜಾರಾಮ್ ಅವರಿಗೆ ಸುಬ್ಬಯ್ಯ ನಾಯ್ಡು ಅವರ ನಾಟಕಗಳಲ್ಲಿ ಅಭಿನಯಿಸುವ ಅವಕಾಶವೂ ದೊರಕಿತ್ತು. ನಾಯ್ಡು ಅವರ ಮಗ, ಹೆಸರಾಂತ ನಟ ಲೋಕೇಶ್ ಇವರ ಆಪ್ತ ಗೆಳೆಯ. ಲೋಕೇಶ್ ಮತ್ತು ರಾಜಾರಾಮ್ ಸಾಕಷ್ಟು ಸಿನೆಮಾ ಮತ್ತು ನಾಟಕಗಳಲ್ಲಿ ಒಟ್ಟಿಗೆ ಭಾಗವಹಿಸಿದ್ದಾರೆ.

ಇಬ್ಬರ ಸ್ನೇಹ ಕ್ರಮೇಣ ಎರಡೂ ಕುಟುಂಬಗಳ ನಡುವಿನ ಸ್ನೇಹವಾಗಿ ಮಾರ್ಪಾಟಾಯಿತು. ಸಿ.ಆರ್. ಸಿಂಹ ಅವರ ಜೊತೆಗೂಡಿ ಅವರು ಆರಂಭಿಸಿದ ನಾಟಕ ತಂಡ ‘ನಟರಂಗ’ದ ಸದಸ್ಯರಾಗಿ, ಸಿಂಹ ನಿರ್ದೇಶಿಸಿದ ‘ತುಘಲಕ್’, ‘ಕಾಕನಕೋಟೆ’, ‘ಮೃಚ್ಛಕಟಿಕ’ ಮುಂತಾದ ನಾಟಕಗಳಲ್ಲಿ ಪಾತ್ರವಹಿಸಿದರು. ಮಾಸ್ತಿಯವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನವಾದಾಗ ಕಪ್ಪಣ್ಣ ನಿರ್ದೇಶಿಸಿ, ವಿಶೇಷವಾಗಿ ಪ್ರದರ್ಶನಗೊಂಡ ‘ಚಿಕವೀರ ರಾಜೇಂದ್ರ’ದಲ್ಲಿ ರಾಜಾರಾಮ್ ಪಾತ್ರವಹಿಸಿದ್ದರು.

ಬಿ.ವಿ.ಕಾರಂತರ ನಿರ್ದೇಶನದಲ್ಲಿ ‘ಹಿಟ್ಟಿನ ಹುಂಜ’, ‘ಋಷ್ಯಶೃಂಗ’, ಜಯತೀರ್ಥ ಜೋಶಿಯವರ ನಿರ್ದೇಶನದಲ್ಲಿ ‘ಸಿರಿಸಂಪಿಗೆ’, ಬಿ.ಜಯಶ್ರೀಯವರ ‘ಸದಾರಮೆ’, ಹೀಗೆ ಹಲವಾರು ಹಿರಿಕಿರಿಯ ನಿರ್ದೇಶಕರ ನೇತೃತ್ವದಲ್ಲಿ ಸಾಕಷ್ಟು ನಾಟಕಗಳಲ್ಲಿ ರಾಜಾರಾಮ್ ನಟಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರ, ಎಡಿಎ ರಂಗಮಂದಿರ, ಮಲ್ಲೇಶ್ವರದ ಸೇವಾ ಸದನ, ರಂಗಶಂಕರ, ಎಚ್.ಎನ್. ಕಲಾಕ್ಷೇತ್ರ ಹೀಗೆ ಬೆಂಗಳೂರಿನ ಹೆಚ್ಚುಕಡಿಮೆ ಎಲ್ಲಾ ರಂಗ ಸಜ್ಜಿಕೆಗಳಲ್ಲೂ ಅಭಿನಯಿಸಿದ್ದಾರೆ ರಾಜಾರಾಮ್. ಕನ್ನಡ ನಾಟಕಗಳು, ನಾಟಕಕಾರರು, ಕಲಾಕ್ಷೇತ್ರದಂಥ ರಂಗ ತಾಣಗಳು, ವಿಜೃಂಭಿಸಿದ ಬಹುಮುಖ್ಯವಾದ ಸಾಂಸ್ಕೃತಿಕ ಸಂದರ್ಭ ಅದು. ರಾಜಾರಾಮ್ ಅವರು ನಟರಾಗಿ ತಮ್ಮನ್ನು ತೊಡಗಿಸಿಕೊಂಡು ನಿರಂತರವಾಗಿ ನಡೆದು ಬಂದ ಕಾಲುದಾರಿಯನ್ನು ಗಮನಿಸಿದರೆ, ಅದರ ಹಾದಿಯುದ್ದಕ್ಕೂ ಕನ್ನಡ ನಾಡಿನಲ್ಲಿ ವಿಶೇಷವಾಗಿ ಘಟಿಸಿದ, ಚಾರಿತ್ರಿಕವಾಗಿ ದಾಖಲಾದ ಹಾಗೂ ಸಾಂಸ್ಕೃತಿಕವಾಗಿ ಬಿತ್ತಲಾದ ಘಟನೆಗಳು ನೆನಪಿನಲ್ಲಿ ಉಳಿವ ಹೂಗಳಾಗಿ ಅರಳಿ ನಿಲ್ಲುತ್ತವೆ.

ರಾಜಾರಾಮ್ ನಟಿಸಿದ ಸಿನೆಮಾರಂಗ ಬಹು ವ್ಯಾಪಕವಾದದ್ದು. ಕಪ್ಪುಬಿಳುಪಿನ ಚಿತ್ರಗಳಿಂದ ಹಿಡಿದು ಡಿಜಿಟಲ್ ಸಿನೆಮಾದವರೆಗೂ ನಟನಾಗಿ ಸಿನೆಮಾರಂಗವನ್ನು ಅವರು ಕಂಡಿದ್ದಾರೆ. ‘ಪಾಪ ಪುಣ್ಯ’, ‘ಭಲೇ ಹುಚ್ಚ’ದಿಂದ ಹಿಡಿದು ‘ಕಾಕನಕೋಟೆ’, ‘ಮುಯ್ಯಿಗೆ ಮುಯ್ಯಿ’, ‘ಭುಜಂಗಯ್ಯನ ದಶಾವತಾರ’, ‘ವೀರಪ್ಪನ್’, ‘ಹಳ್ಳಿ ಮೇಷ್ಟ್ರು’, ‘ಸಾಂಗ್ಲಿಯಾನ’, ಗಾಳಿಪಟ, ಕಡೆಗೆ ‘ಶ್ರೀಮತಿ ಜಯಲಲಿತಾ’ದವರೆಗೂ ವೈವಿಧ್ಯಮಯ ಪಾತ್ರಗಳಲ್ಲಿ ಹಿರಿತೆರೆಯ ಮೇಲೆ ನೆನಪನ್ನುಳಿಸಿದ್ದಾರೆ ರಾಜಾರಾಮ್. ಬಿ. ಸರೋಜಾದೇವಿ, ರಾಜ್ ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್, ಕಮಲ್ ಹಾಸನ್, ರವಿಚಂದ್ರ, ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್, ಗಣೇಶ್ ಮುಂತಾದ ಖ್ಯಾತ ನಟರ ಚಿತ್ರಗಳಲ್ಲಿ ತಮ್ಮ ನಟನೆಯನ್ನಿವರು ಪ್ರಸ್ತುತ ಪಡಿಸಿದ್ದಾರೆ.

ಪ್ರಯೋಗಾತ್ಮಕ ಹೊಸ ಅಲೆ ಚಿತ್ರಗಳಿಂದ ಹಿಡಿದು ಜನಪ್ರಿಯ ಬಾಕ್ಸ್ ಆಫೀಸ್ ಹಿಟ್ ಆದ ಚಿತ್ರಗಳವರೆಗೆ ಇವರ ನಟನೆಯ ಅನುಭವ ವಿಸ್ತರಿಸಿಕೊಂಡಿದೆ. ಕನ್ನಡ ಚಿತ್ರರಂಗದ ಬೆಳವಣಿಗೆ, ಬದಲಾವಣೆ, ಹೊಸ ವಸಂತಗಳ ಆಗಮನ, ಹೊಸ ಅಲೆಗಳ ಉಬ್ಬರ, ಏರಿಳಿತಗಳನ್ನು ರಾಜಾರಾಮ್ ನಟಿಸಿದ ಚಿತ್ರಗಳು ದಾಖಲು ಮಾಡುತ್ತವೆ. ಇನ್ನು ಕನ್ನಡ ಕಿರುತೆರೆ, ಟಿವಿ ಧಾರಾವಾಹಿಗಳ ಸರಣಿಯೂ ತನ್ನದೇ ಆದ ಹೊಸ ಆಯಾಮಗಳನ್ನು, ಸ್ವರೂಪಗಳನ್ನು ಹಾಗೂ ನೋಡುಗರ ವಲಯವನ್ನು ಕಲಾವಿದರಿಗೆ ಕಟ್ಟಿ ಕೊಟ್ಟಿದೆ.

ಒಂದು ಹಂತದಲ್ಲಿ ಚಲನಚಿತ್ರ ನಟರಿಗಿಂತ ಮಿಗಿಲಾದ, ಭಿನ್ನವಾದ, ಪ್ರಭಾವಿತ ಅಭಿಮಾನಿ ಗುಂಪುಗಳು ಕಿರುತೆರೆಯ ನಟರಿಗೆ ದೊರಕಿದೆ. ಶಂಕರ್ ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಧಾರಾವಾಹಿ ಕಿರುತೆರೆಯ ಮುಖ್ಯ ಕಥಾನಕಗಳಲ್ಲೊಂದು. ಇದರ ಹಲವಾರು ಕಂತುಗಳಲ್ಲಿ ಮಿಠಾಯಿವಾಲಾ, ಗ್ರೀನ್ ಬ್ಲೇಝರ್ ಹಾಗೂ ಪರ್ಫಾರ್ಮಿಂಗ್ ಗರ್ಲ್ ಎಂಬ ಮೂರೂ ಕಂತುಗಳಲ್ಲಿ ರಾಜಾರಾಮ್ ವಿಶೇಷವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಕ್ಕಪಕ್ಕದವರು, ಹಾದಿ ಹೋಕರು ಇವರನ್ನು ಮಿಠಾಯಿವಾಲಾ! ಎಂದೇ ಸಂಬೋಧಿಸಿದ್ದುಂಟು.

ರಾಜಾರಾಮ್ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟ ಧಾರಾವಾಹಿಗಳಲ್ಲಿ ಕೆಲವು ‘ಕ್ರೇಝಿ ಕರ್ನಲ್’, ‘ಮಾಯಾಮೃಗ’, ‘ಜಾನಪದ ಕಥೆಗಳು’, ‘ಪಾಪಾ ಪಾಂಡು’, ‘ಸಿಲ್ಲಿ ಲಲ್ಲಿ’, ‘ಕುಬೇರಪ್ಪ ಆ್ಯಂಡ್ ಸನ್ಸ್’.. ಹೀಗೆ ಅರವತ್ತಕ್ಕೂ ಅಧಿಕ ಕಿರುತೆರೆ ಧಾರಾವಾಹಿಗಳಲ್ಲಿ ಅವರು ನಟಿಸಿದರು. ಮನರಂಜನಾತ್ಮಕವಾಗಿದ್ದರೂ ಗಂಭೀರವಾದದ್ದು ಕೆಲವಾದರೆ, ಜನಪ್ರಿಯವಾಗಿದ್ದು, ಹಾಸ್ಯ ಭರಿತವಾದದ್ದು, ಸಾಂಸಾರಿಕ ಬದುಕನ್ನು ಚಿತ್ರಿಸುವಂಥವು ಇನ್ನು ಕೆಲವು. ಕುಟುಂಬವನ್ನು ಕೇಂದ್ರವಾಗಿಸಿಕೊಂಡು ಅವಿಭಕ್ತ, ಆದರ್ಶ ಭಾರತೀಯ ಕುಟುಂಬಗಳ ಚಿತ್ರಣಗಳನ್ನು ಕಟ್ಟಿಕೊಡುವ ಹಿರಿತೆರೆಯ ಮಾದರಿಯನ್ನೇ ಅನುಸರಿಸಿ ಹುಟ್ಟಿಕೊಂಡ ಕಿರುತೆರೆಯ ಸಾಕಷ್ಟು ಧಾರಾವಾಹಿಗಳು ಪ್ರಚಲಿತವಾದವು.

ಭಾರತೀಯ ಸಂಪ್ರದಾಯಿಕತೆಯನ್ನು ಪುನರ್ನಿರ್ಮಿಸುವ ಈ ಸುದೀರ್ಘ ಕಾಲದಲ್ಲಿ ಕುಟುಂಬದ ಕಾಲ್ಪನಿಕ ಜಗತ್ತನ್ನು ಬೇರೆಯೇ ವಲಯಕ್ಕೆ ಕೊಂಡುಹೋಗುವ ಪ್ರಯತ್ನ ಕನ್ನಡದಲ್ಲೂ ನಡೆಯಿತು. ರಾಜಾರಾಮ್ ನಟಿಸಿರುವ ಸರಣಿಯನ್ನು ಹಿಂಬಾಲಿಸಿದರೆ, ಕನ್ನಡ ಸಾಂಸ್ಕೃತಿಕ ಜಗತ್ತಿನಲ್ಲಾಗುತ್ತಿದ್ದ ಬದಲಾವಣೆಗಳನ್ನು ಗಮನಿಸುವುದು ಸಾಧ್ಯ. ಕೆಲಸದಲ್ಲಿನ ತಮ್ಮ ದಕ್ಷತೆಯಿಂದ ಒಳ್ಳೆಯ ಹೆಸರನ್ನು ಗಳಿಸಿಕೊಂಡಿದ್ದ ರಾಜಾರಾಮ್ ಶಿಸ್ತಿನ ಮನುಷ್ಯ.

ಹೆಂಡತಿ, ಮಕ್ಕಳು, ಸೊಸೆಯರು, ಅಕ್ಕಂದಿರು, ತಮ್ಮಂದಿರು ಅವರ ಮಕ್ಕಳು, ಮೊಮ್ಮಕ್ಕಳು ಹೀಗೆ, ತಮ್ಮ ದೊಡ್ಡ ಕುಟುಂಬದ ಕಾಳಜಿಯನ್ನು ಸದಾ ಹೆಮ್ಮೆ ಮತ್ತು ಪ್ರೀತಿಯಿಂದ ನಿರ್ವಹಿಸುತ್ತಿದ್ದರು ರಾಜಾರಾಮ್. ತುಂಬು ಬದುಕಿನ ಅವರ ಎಂಬತ್ತನೆಯ ಹುಟ್ಟು ಹಬ್ಬವನ್ನು ಕುಟುಂಬವು ನಮ್ಮ ಮನೆಯಲ್ಲಿ ಆಚರಿಸಿತ್ತು. ನಟರಂಗದ ಹಿರಿಯ ಕಲಾವಿದರು ರಂಗಗೀತೆಗಳನ್ನು ಹಾಡುವುದರ ಮೂಲಕ ಅವರಿಗೆ ಹಾರೈಸಿದರು.

 ಈ ಕುಟುಂಬದ ಸೊಸೆಯಾಗಿ ಬಂದ ನಾನು ರಾಜಾರಾಮ್ ಅವರ ಜೊತೆ ನಾಟಕ, ಸಿನೆಮಾ, ರಾಜಕೀಯ, ಮನೆ, ಮಠ, ಎಂದು ಹರಟುತ್ತಾ ಸಾಕಷ್ಟು ಸಮಯ ಕಳೆದಿದ್ದೇನೆ. ನನಗೀಗ ರಾಜಾರಾಮ್ ಕುರಿತ ಈ ಪುಸ್ತಕವನ್ನು ಒಟ್ಟು ಹಾಕಿ ನಿಮ್ಮ ಮುಂದಿಡಲು ಹೆಮ್ಮೆಯಾಗುತ್ತಿದೆ. ಅವತರಣಿಕೆಯಲ್ಲಿ ಹಲವು ಕನ್ನಡ ಲೇಖನಗಳು ಹಾಗೂ ಕೆಲವು ಇಂಗ್ಲಿಷಿನಲ್ಲಿ ಬರೆದ ಲೇಖನಗಳಿದ್ದರೂ, ಮೂಲತಃ ಇದು ದೃಶ್ಯಾತ್ಮಕವಾದ ಹೊತ್ತಿಗೆ. ಕನ್ನಡ ಸಾಂಸ್ಕೃತಿಕ ಕಾಲಘಟ್ಟ, ಅದನ್ನು ಕಟ್ಟಿದ ವ್ಯಕ್ತಿತ್ವಗಳು, ಘಟನೆಗಳು, ಮುಂತಾದವನ್ನು ರಾಜಾರಾಮ್ ಅವರಿಗೆ ಸಂಬಂಧಿಸಿದ ವೈಯಕ್ತಿಕ ಹಾಗೂ ಸಾರ್ವತ್ರಿಕ ನಿರೂಪಣೆಗಳ ಮೂಲಕ ನೋಡಲು ಅನುವು ಮಾಡಿಕೊಡಬಲ್ಲ ವಿನ್ಯಾಸವನ್ನು ಈ ಪುಸ್ತಕ ಮೈಗೂಡಿಸಿಕೊಂಡಿದೆ. (ಮುನ್ನುಡಿಯಿಂದ)

Writer - ಡಾ. ಮಮತಾ ಜಿ. ಸಾಗರ

contributor

Editor - ಡಾ. ಮಮತಾ ಜಿ. ಸಾಗರ

contributor

Similar News