ತನಿಖೆಗೆ ಮುನ್ನವೇ ದಾರಿ ತಪ್ಪಿಸುವವರು...

Update: 2022-08-01 06:30 GMT

ರಾಜಕೀಯ ಕಾರಣಗಳಿಗಾಗಿ ನಡೆಯುವ ಕೊಲೆಗಳು ಮತಗಳನ್ನು ಉದುರಿಸುವ ಕಲ್ಪವೃಕ್ಷಗಳು ಎನ್ನುವುದೇನೋ ಸರಿ. ಆದರೆ, ಒಟ್ಟು ನ್ಯಾಯದಾನ ಪ್ರಕ್ರಿಯೆಯಲ್ಲಿ ಈ ಹೇಳಿಕೆಗಳು ಪ್ರಭಾವ ಬೀರುತ್ತವೆ ಎನ್ನುವುದನ್ನು ಅರ್ಥ ಮಾಡಿಸಬಲ್ಲ ಒಬ್ಬರೂ ಗೃಹ ಇಲಾಖೆಯಲ್ಲಿ ಇಲ್ಲವೇ?

2021 ಆಗಸ್ಟ್ 7

ಯಾವ ಖಾತೆ ಕೊಟ್ರೂ ನಿಭಾಯಿಸ್ತೇನೆ ಎಂದು ಹೇಳಿದ್ದೆ. ಆದರೆ ಇಷ್ಟು ದೊಡ್ಡ ಖಾತೆ ಸಿಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ: ಇದು ಆರಗ ಜ್ಞಾನೇಂದ್ರ ಅವರು ಗೃಹ ಸಚಿವ ರಾದ ಕ್ಷಣದಲ್ಲಿ ತಮ್ಮ ನಿವಾಸ ತೀರ್ಥಹಳ್ಳಿಯ ಗುಡ್ಡೆಕೊಪ್ಪದಲ್ಲಿ ನೀಡಿದ ಹೇಳಿಕೆ.

ಮೊದಲ ಬಾರಿ ಸಚಿವರಾದ ಜ್ಞಾನೇಂದ್ರ ಅವರ ಖುಷಿ ಹತ್ತೇ ದಿನಗಳಲ್ಲಿ ಇಳಿದುಹೋಗಿತ್ತು. 2021 ಆಗಸ್ಟ್ 17 ರಂದು ಶಿವಮೊಗ್ಗದ ಅಡಿಕೆ ಬೆಳೆಗಾರರ ಮಹಾ ಮಂಡಳದವರು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ, ಸುಖದ ನಿದ್ದೆಯಲ್ಲಿದ್ದ ನನಗೆ ಈಗ ಪೊಲೀಸರು ನಿದ್ದೆ ಮಾಡಲು ಬಿಡುತ್ತಿಲ್ಲ. ಮಧ್ಯರಾತ್ರಿಯಲ್ಲಿ ಎಬ್ಬಿಸ್ತಾರೆ ಎಂದಿದ್ದರು.

ಹಾಗೆಯೇ...

2021 ಆಗಸ್ಟ್ 26

ಕಾಂಗ್ರೆಸಿನವರು ನನ್ನನ್ನೇ ರೇಪ್ ಮಾಡಲು ಯತ್ನಿಸುತ್ತಿದ್ದಾರೆ. (ಮೈಸೂರು ಚಾಮುಂಡಿ ಬೆಟ್ಟದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತಂತೆ ನೀಡಿದ ಹೇಳಿಕೆ)

2021 ಡಿಸೆಂಬರ್ 3

ಪೊಲೀಸರು ಎಂಜಲು ತಗೊಂಡು ನಾಯಿ ಹಾಗೆ ಬಿದ್ದಿರ್ತಾರೆ. (ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ಎಸ್‌ಪಿ ಅವರಿಗೆ ಸಾರ್ವಜನಿಕರೆದುರು ಮೊಬೈಲ್‌ನಲ್ಲಿ ಮಾತನಾಡಿದ್ದು)

2022 ಜನವರಿ 1

ಪೊಲೀಸರು ಮನುಷ್ಯತ್ವ ಕಳೆದುಕೊಂಡು ಹಲ್ಲೆ ನಡೆಸಿದ್ದಾರೆ. (ಡಿಸೆಂಬರ್ 27 ರಂದು ಕೋಟದ ಕೋಟತಟ್ಟು ಗ್ರಾಮದ ಕೊರಗ ಕಾಲನಿಯಲ್ಲಿ ಕೊರಗ ಸಮುದಾಯದವರ ಮೇಲೆ ನಡೆದ ಪೊಲೀಸರ ಹಲ್ಲೆ ಕುರಿತಾಗಿ ನೀಡಿದ ಹೇಳಿಕೆ)

2022 ಏಪ್ರಿಲ್ 6

ಉರ್ದು ಮಾತನಾಡು ಎಂದು ಚಂದ್ರುಗೆ ಹೇಳಿದ್ದಾರೆ. ಆದರೆ ಅವನು ಉರ್ದು ಮಾತನಾಡಲಿಲ್ಲ. ಕನ್ನಡದಲ್ಲಿ ಮಾತನಾಡಿದ್ದಾನೆ. ಬಳಿಕ ಅಮಾನುಷವಾಗಿ ಕೊಲೆ ಮಾಡಿದ್ದಾರೆ.

ಇವು ಗೃಹ ಸಚಿವರಾಗಿ ಒಂದು ವರ್ಷದೊಳಗೇ ನೀಡಿದ ಹೇಳಿಕೆ ಗಳ ಸ್ಯಾಂಪಲ್‌ಗಳು ಮಾತ್ರ. ಇದೇ ರೀತಿ ತವರು ಜಿಲ್ಲೆ ಶಿವಮೊಗ್ಗ ದಲ್ಲಿ ನಡೆದ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೀಡಿದ ಹೇಳಿಕೆ, ಇತ್ತೀಚೆಗೆ ಹರ್ಷನ ಸಹೋದರಿಗೆ ಗದರಿ ನೀಡಿದ ಹೇಳಿಕೆ, ನರಗುಂದ ಸಮೀರ್ ಸುಭಾನ್ ಕೊಲೆಗೆ ಸಂಬಂಧಪಟ್ಟಂತೆ, ಬೆಳ್ತಂಗಡಿ ದಲಿತ ಯುವಕ ದಿನೇಶ್ ಕೊಲೆ ಪ್ರಕರಣ ಸಂದರ್ಭ ದಲ್ಲಿ ನೀಡಿದ ಬಿಡಿ ಬಿಡಿ ಹೇಳಿಕೆಗಳು ಆರಗ ಜ್ಞಾನೇಂದ್ರ ಅವರ ಇಡೀ ವ್ಯಕ್ತಿತ್ವ ಮತ್ತು ಅವರ ಸಾಮರ್ಥ್ಯವನ್ನು ಹೇಳುತ್ತಿವೆ ಎಂದು ಬೇರೆ ಯಾರೂ ಹೇಳಬೇಕಿಲ್ಲ. ಏಕೆಂದರೆ ಅವರ ಮೌಲ್ಯ ಮಾಪನವನ್ನು ಅವರೇ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಪುರಾವೆ ಯಾಗಿ ಎಪ್ರಿಲ್ 22 ರಂದು ಕಾರ್ಯಕರ್ತರ ಸಭೆಯಲ್ಲಿ ಅವರೇ ಆಡಿದ ಮಾತು ಏನೆಂದರೆ, ನಮ್ಮ ಕಾರ್ಯಕರ್ತರೇ ನನ್ನನ್ನು ದುರ್ಬಲ ಗೃಹ ಮಂತ್ರಿ ಎನ್ನುತ್ತಿದ್ದಾರೆ.

ತನಿಖೆಗೆ ಮೊದಲೇ ತೀರ್ಪು ನೀಡುವ-ವಿಚಾರಣೆಗೆ ಮೊದಲೇ ಶಿಕ್ಷೆ ಘೋಷಿಸುವ ಆರಗ ಜ್ಞಾನೇಂದ್ರರು ಮಲೆನಾಡಿನ ಹೆಬ್ಬಾಗಿಲು ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ತವರು ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಜತೆಗೆ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ವಿರುದ್ಧ ಗೆದ್ದವರಾದ್ದರಿಂದ ಮಲೆನಾಡಿಗೂ, ರಾಜ್ಯಕ್ಕೂ ಇವರಿಂದ ಒಂದಷ್ಟು ನಿರೀಕ್ಷೆಗಳಿದ್ದವು. ಆದರೆ, ಸ್ವಂತ ವಿವೇಚನೆಗೆ ನಿಷೇಧಾಜ್ಞೆ ಹೇರಿಕೊಂಡವರಂತೆ, ಇರುವುದನ್ನು ಇರುವ ಹಾಗೆ ಕಾಣಲಾರದೆ ಸ್ವತಂತ್ರ ಗ್ರಹಿಕೆಗೆ ಕರ್ಫ್ಯೂ ವಿಧಿಸಿಕೊಂಡವರಂತೆ ನೀಡುತ್ತಿರುವ ಹೇಳಿಕೆಗಳು ಆಯಾ ಪ್ರಕರಣದ ಆರೋಪಿಗಳು ನ್ಯಾಯಾಲಯದಲ್ಲಿ ನಿರ್ದೋಷಿ ಗಳಾಗಲು ನೆರವಾಗುತ್ತಿದೆ.

ಉರ್ದು ಮಾತನಾಡದ ಕಾರಣಕ್ಕೆ ಜೆ.ಜೆ.ನಗರದ ಚಂದ್ರು ಕೊಲೆ ನಡೆದಿದೆ ಎಂದು ಎಪ್ರಿಲ್ 6 ರಂದು ಹೇಳಿಕೆ ನೀಡಿದರು. ಇದಾಗಿ ಕೆಲವೇ ನಿಮಿಷಗಳಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್‌ಪಂಥ್ ಅವರು ಮಾಧ್ಯಮಗಳ ಎದುರು ಸಚಿವರ ಹೇಳಿಕೆಯನ್ನು ಅಲ್ಲಗಳೆದರು. ರಾಜ್ಯದ ಪೊಲೀಸ್ ಇತಿಹಾಸದಲ್ಲಿ ನಡೆದ ಅಪರೂಪದ ಅಷ್ಟೇ ಗಂಭೀರವಾದ ಘಟನೆ ಇದು. ಕಮಲ್‌ಪಂಥ್ ಅವರ ಸ್ಪಷ್ಟನೆ ಬಳಿಕ ಸಚಿವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿ ಭಾಷೆ ಕಾರಣಕ್ಕೆ ಕೊಲೆ ನಡೆದಿದೆ ಎನ್ನುವ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದರು. ಇದು ಇಷ್ಟಕ್ಕೆ ನಿಲ್ಲುತ್ತದಾ ?

ಚಂದ್ರು ಕೊಲೆ ಪ್ರಕರಣದ ತನಿಖೆ ಮುಗಿಸಿದ ಪೊಲೀಸರು ಚಂದ್ರು ಕೊಲೆಗೆ ಭಾಷೆ ಕಾರಣ ಎನ್ನುವ ಸಂಗತಿಯನ್ನೇ ಆರೋಪ ಪಟ್ಟಿಯಲ್ಲಿ ಸೇರಿಸಿದ್ದಾರೆ ಎಂದು ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳು ವರದಿ ಮಾಡಿವೆ. ಹಾಗೇನಾದರೂ ಆಗಿದ್ದರೆ ಈ ಪ್ರಕರಣದ ಆರೋಪಿಗಳು ಖುಲಾಸೆಗೊಳ್ಳಲು ಸಚಿವರ ಹೇಳಿಕೆಗಿಂತ ಬೇರೆ ಪುರಾವೆ ಬೇಕಾಗುವುದಿಲ್ಲ. ಕೊಲೆಯ ತನಿಖೆ ಇನ್ನೂ ಆರಂಭವಾಗುವ ಮುನ್ನವೇ ಸಚಿವರು ಭಾಷೆ ಕಾರಣಕ್ಕೆ ಕೊಲೆ ನಡೆದಿದೆ ಎಂದು ಬಹಿರಂಗವಾಗಿ ಹೇಳಿದ್ದರು. ಇವರೇ ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವುದರಿಂದ ಇವರ ಹೇಳಿಕೆಯ ಒತ್ತಡಕ್ಕೆ ಮಣಿದು ತನಿಖಾಧಿಕಾರಿಗಳು ಇವರ ಹೇಳಿಕೆಯ ಮೂಗಿನ ನೇರಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಆರೋಪಿ ಪರ ವಕೀಲರು ನ್ಯಾಯಾಲಯದಲ್ಲಿ ಇದನ್ನೇ ಗಟ್ಟಿಯಾಗಿ ಹಿಡಿದುಕೊಂಡರೆ ನ್ಯಾಯಾಲಯ ಕೂಡ ನ್ಯಾಯಸೂತ್ರದ ಈ ಸೂಕ್ಷ್ಮವನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಅಂತಿಮವಾಗಿ ಪೊಲೀಸರ ಕಾರ್ಯಕ್ಷಮತೆ ಮತ್ತು ತನಿಖೆಯ ಮೇಲೆ ಗಟ್ಟಿಯಾದ ಅನುಮಾನ ದಾಖಲಾಗುವುದಂತೂ ಖಚಿತ. ಹೀಗಾಗಿ ಸಚಿವರ ಹೇಳಿಕೆ ಕಟಕಟೆಯಲ್ಲಿ ಆರೋಪಿಗಳಿಗೆ ವರದಾನವಾಗುತ್ತದೆ.

ಮಂಗಳೂರಿನ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳು ಇನ್ನೂ ಯಾರು ಎಂದು ಖಚಿತವಾಗಿಲ್ಲ. ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರರ ತನಿಖೆಗೂ ಮೊದಲೇ ತೀರ್ಪು ನೀಡುವ ಚಟದಿಂದಾಗಿ ಈಗಾಗಲೇ ಈ ಪ್ರಕರಣದ ಆರೋಪಿಗಳು ನ್ಯಾಯಾಲಯದಲ್ಲಿ ಖುಲಾಸೆಗೊಳ್ಳಲು ಬೇಕಾದ ಸಾಕ್ಷ್ಯ-ಪುರಾವೆಗಳನ್ನು ಒದಗಿಸಿದ್ದಾಗಿದೆ.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಪ್ರಸ್ತಾಪಿಸಿ ಗೃಹ ಸಚಿವರು, ಕೇರಳಕ್ಕೆ ಹೊಂದಿಕೊಂಡಿರುವ ಕರಾವಳಿ ತೀರದ ಈ ಪ್ರದೇಶದಲ್ಲಿ ಈ ಹಿಂದೆಯೂ ಇಂತಹ ದುಷ್ಕೃತ್ಯಗಳು ನಡೆದಿವೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಕೇರಳ ರಾಜ್ಯದಿಂದ ಹಂತಕರು ಬಂದು ಕೃತ್ಯ ನಡೆಸಿ ವಾಪಸ್ ಕೇರಳಕ್ಕೆ ಪರಾರಿಯಾಗಿರುವ ಸಾಧ್ಯತೆಗಳಿವೆ ಎಂದು ತಮ್ಮ ಅಧಿಕೃತ ಖಾತೆ ಮೂಲಕ ಟ್ವೀಟ್ ಮಾಡಿದ್ದಾರೆ. ಜತೆಗೆ ಇದನ್ನೇ ಮಾಧ್ಯಮಗಳು ವರದಿ ಮಾಡಿವೆ. ಈಗ ಪ್ರಕರಣದ ತನಿಖಾಧಿಕಾರಿಗಳು ಏನು ಮಾಡಬೇಕು?

ತನಿಖಾಧಿಕಾರಿಗಳು ಕೇರಳಕ್ಕೆ ಹೋಗಿ ಆರೋಪಿಗಳನ್ನು ಕರೆತರಬೇಕಾ? ಹಾಗೇನಾದರೂ ತನಿಖಾಧಿಕಾರಿಗಳು ಕೇರಳದಿಂದಲೇ ಆರೋಪಿಗಳನ್ನು ಬಂಧಿಸಿ ಕರೆತಂದರೆ ಆ ಆರೋಪಿಗಳ ಪರ ವಕೀಲರು ಗೃಹ ಸಚಿವರ ಹೇಳಿಕೆಯನ್ನು ಮತ್ತು ತನಿಖಾಧಿಕಾರಿಗಳ ವರದಿಯನ್ನು ನ್ಯಾಯಾಲಯದ ಮುಂದಿಟ್ಟರೆ ಸಾಕು, ತನಿಖೆಗೆ ಮೊದಲೇ ಗೃಹ ಸಚಿವರು ನೀಡಿದ ಹೇಳಿಕೆಯಂತೆ ತನಿಖಾಧಿಕಾರಿಗಳು ತನಿಖೆ ನಡೆಸಿದ್ದಾರೆಯೇ ಹೊರತು ಸಾಕ್ಷ್ಯ-ಪುರಾವೆಗಳ ಆಧಾರದಲ್ಲಿ ತನಿಖೆಯೇ ನಡೆದಿಲ್ಲ. ತಮ್ಮ ಸೈದ್ಧಾಂತಿಕ ವಿರೋಧದ ರಾಜಕಾರಣಕ್ಕಾಗಿ ಆರೋಪಿಗಳನ್ನು ಈ ಪ್ರಕರಣದಲ್ಲಿ ಬೇಕೆಂದೇ ಸಿಲುಕಿಸಲಾಗಿದೆ ಎಂದು ಆರೋಪಿ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸುವುದಿಲ್ಲವೇ? ಇದರಿಂದ ಆರೋಪಿಗಳ ಖುಲಾಸೆಗೆ ಗೃಹ ಸಚಿವರೇ ಪುರಾವೆಗಳನ್ನು ಒದಗಿಸಿದಂತಾಗುವುದಿಲ್ಲವೇ?

ಗೃಹ ಸಚಿವರು ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಲು ನಿಂತಾಗಲೆಲ್ಲಾ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸಚಿವರ ಇಂತಹ ಯಡವಟ್ಟುಗಳನ್ನೇ ಪಟ್ಟಿ ಮಾಡಿ ಸದನದ ಮುಂದಿಡುತ್ತಾರೆ. ಸಚಿವರಿಗೆ ಉತ್ತರ ಹೇಳಲು ಸಾಧ್ಯವಾಗದೆ ಆ ದಿನದ ಹಾಸ್ಯದ ವ್ಯಕ್ತಿ ಆಗಿ ಬಿಡುತ್ತಾರೆ. ಪ್ರವೀಣ್ ನೆಟ್ಟಾರು ಅವರ ಕೊಲೆಗೆ ಸಂಬಂಧಪಟ್ಟಂತೆ ಸಚಿವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ವಿಧಾನಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಅವರು, ಮಾನ್ಯ ಗೃಹ ಸಚಿವರೇ, ನಿಮಗೆ ಈ ಸಂಗತಿಯನ್ನು ಹೇಳಿದವರು ಯಾರು? ಬೈಠಕ್‌ನಲ್ಲಿ ಕಲಿತಿದ್ದನ್ನು ಇಲ್ಲಿ ಗಿಳಿಪಾಠ ಒಪ್ಪಿಸುತ್ತಿದ್ದೀರಾ? ಶಿವಮೊಗ್ಗ ಹರ್ಷ, ಬೆಂಗಳೂರು ಚಂದ್ರು ಕೊಲೆ ಪ್ರಕರಣದಲ್ಲಿ ನೀವು ನೀಡಿದ ಹೇಳಿಕೆಗಳಿಗೆ ಇಲಾಖೆಯ ಪಿಸಿಗಳೂ ನಿಮ್ಮನ್ನು ಗೇಲಿ ಮಾಡಿ ನಕ್ಕಿದ್ದರು. ಅಧಿಕಾರಿಗಳು ಬಹಿರಂಗವಾಗಿ ನಿಮ್ಮ ಹೇಳಿಕೆ ಸುಳ್ಳು ಎಂದಿದ್ದರು ಎಂದು ಟ್ವೀಟ್ ಮಾಡಿದ್ದರು. ಕ್ರಿಯೆಗೆ-ಪ್ರತಿಕ್ರಿಯೆಗಳು ಹೀಗೂ ಇರುತ್ತವೆ.

ರಾಜಕೀಯ ಕಾರಣಗಳಿಗಾಗಿ ನಡೆಯುವ ಕೊಲೆಗಳು ಮತಗಳನ್ನು ಉದುರಿಸುವ ಕಲ್ಪವೃಕ್ಷಗಳು ಎನ್ನುವುದೇನೋ ಸರಿ. ಆದರೆ, ಒಟ್ಟು ನ್ಯಾಯದಾನ ಪ್ರಕ್ರಿಯೆಯಲ್ಲಿ ಈ ಹೇಳಿಕೆಗಳು ಪ್ರಭಾವ ಬೀರುತ್ತವೆ ಎನ್ನುವುದನ್ನು ಅರ್ಥ ಮಾಡಿಸಬಲ್ಲ ಒಬ್ಬರೂ ಗೃಹ ಇಲಾಖೆಯಲ್ಲಿ ಇಲ್ಲವೇ?

ಇನ್ನು ಸಚಿವರು ತಮ್ಮ ಮೌಲ್ಯ ಮಾಪನವನ್ನು ತಾವೇ ಮಾಡಿಕೊಂಡು ರಾಜ್ಯದ ಜನತೆಗೆ ಮತ್ತು ತೀರ್ಥಹಳ್ಳಿಯ ಮತದಾರರಿಗೆ ಒದಗಿಸಿಬಿಟ್ಟಿದ್ದಾರೆ. ಬೇಲಿ ಜಗಳ ಸೃಷ್ಟಿಸಿ ಇಬ್ಬರಲ್ಲಿ ಒಬ್ಬರನ್ನು ತಮ್ಮ ಪರವಾಗಿ ಒಲಿಸಿಕೊಳ್ಳುವ ನ್ಯಾಯದಂತೆ ನ್ಯಾಯಾಲಯಗಳು ನಡೆದುಕೊಳ್ಳುವುದಿಲ್ಲ. ಬೇಲಿ ಜಗಳದ ರಾಜಕೀಯ ಸೂತ್ರವೇ ಬೇರೆ, ನ್ಯಾಯಸೂತ್ರಗಳೇ ಬೇರೆ ಎನ್ನುವುದನ್ನು ಗೃಹ ಸಚಿವರು ಅರ್ಥ ಮಾಡಿಕೊಳ್ಳಬೇಕು.

Writer - ಗಿರೀಶ್ ಕೋಟೆ

contributor

Editor - ಗಿರೀಶ್ ಕೋಟೆ

contributor

Similar News