ತ್ರಿವರ್ಣ ಧ್ವಜದ ಆಶಯಕ್ಕೆ ಮತ್ತೆ ಜೀವ ತುಂಬಬೇಕಾಗಿದೆ
ಎಲ್ಲಾ ರಾಜಕೀಯ ನಡೆಗಳು ನಮ್ಮ ತ್ರಿವರ್ಣ ಧ್ವಜ ಪ್ರತಿನಿಧಿಸುವ ವೌಲ್ಯಗಳಿಗೆ ವಿರುದ್ಧವಾಗಿರುವಾಗ, ಈ ದೃಶ್ಯ ವೈಭವಗಳ ಉದ್ದೇಶವಾದರೂ ಏನು? ಈಗ ಬಿಜೆಪಿ-ಆರೆಸ್ಸೆಸ್ ತ್ರಿವರ್ಣ ಧ್ವಜವನ್ನು ವೈಭವೀಕರಿಸುತ್ತಿದೆಯಾದರೂ, ಅದು ಧ್ವಜ ಪ್ರತಿನಿಧಿಸುವ ವೌಲ್ಯಗಳಿಗೆ ಕಟ್ಟಾ ವಿರೋಧಿಯಾಗಿದೆ ಎನ್ನುವುದನ್ನು ನಾವು ತಿಳಿದಿರಬೇಕು. ಡಾ. ರಾಮ್ ಪುನಿಯಾನಿ
ಬ್ರಿಟಿಷ್ ಆಳ್ವಿಕೆಯಿಂದ ನಮಗೆ ಸ್ವಾತಂತ್ರ ಸಿಕ್ಕಿ ಈ ಆಗಸ್ಟ್ 15ಕ್ಕೆ 75 ವರ್ಷಗಳು ಪೂರ್ಣಗೊಳ್ಳುತ್ತವೆ. ಇದು ನಮಗೆ ಸ್ವಾತಂತ್ರ ತಂದುಕೊಟ್ಟ ಚಳವಳಿಯ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವ ಮತ್ತು ಅದಕ್ಕೆ ನಮ್ಮ ಬದ್ಧತೆಯನ್ನು ದೃಢೀಕರಿಸುವ ಸಮಯ. ಸ್ವಾತಂತ್ರ ಚಳವಳಿಯ ಮುಂಚೂಣಿಯಲ್ಲಿದ್ದ ದಾರ್ಶನಿಕರ ಕನಸಿನ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆಯೇ ಎನ್ನುವುದನ್ನು ಪರಾಮರ್ಶಿಸುವ ಸಮಯವೂ ಹೌದು. ಆಗಸ್ಟ್ 13 ಮತ್ತು 15ರ ನಡುವೆ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಜನರನ್ನು ಒತ್ತಾಯಿಸಿದೆ. ಈ ಸಂಭ್ರಮಕ್ಕೆ ‘ಆಝಾದಿ ಕಾ ಅಮೃತ ಮಹೋತ್ಸವ’ ಎಂಬ ಹೆಸರು ಇಡಲಾಗಿದೆ.
ಕೊರೋನ ವೈರಸ್ ಅವಧಿಯಲ್ಲಿ ದೇಶದಲ್ಲಿ ‘ಚಪ್ಪಾಳೆ ತಟ್ಟುವ’ ಮತ್ತು ‘ಪಾತ್ರೆಗಳಿಗೆ ಬಡಿಯುವ’ ಗಿಮಿಕ್‌ಗಳನ್ನು ಮಾಡಲಾಗಿತ್ತು. ಅಂಥದೇ ಇನ್ನೊಂದು ಗಿಮಿಕನ್ನು ಸರಕಾರ ತರುತ್ತಿದೆಯೋ ಎಂಬಂತೆ ಭಾಸವಾಗುತ್ತಿದೆ. ನಮ್ಮ ರಾಷ್ಟ್ರೀಯ ಹಬ್ಬದ ದಿನಗಳಂದು ಹಾಗೂ ನಮ್ಮ ಸಂಭ್ರಮದ ಸಂದರ್ಭಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ನಾವು ಹೆಮ್ಮೆ ಪಟ್ಟುಕೊಳ್ಳುತ್ತೇವೆ. ತ್ರಿವರ್ಣ ಧ್ವಜವು ನಮ್ಮ ಸ್ಫೂರ್ತಿಯ ಅಗಾಧ ಸೆಲೆಯಾಗಿದೆ. ಈ ಆಚರಣೆಯನ್ನು ಪ್ರತೀ ವರ್ಷ ಆಗಸ್ಟ್ 15 ಮತ್ತು ಜನವರಿ 26ರಂದು ನಡೆಸಿಕೊಂಡು ಬರಲಾಗುತ್ತಿದೆ. ತ್ರಿವರ್ಣ ಧ್ವಜದ ಆಶಯಗಳನ್ನು ನೆನಪಿಸಿಕೊಳ್ಳುವುದು ಮತ್ತು ಈ ಧ್ವಜವನ್ನು ಅಂಗೀಕರಿಸಿದ ಗಣರಾಜ್ಯದ ಗುರಿಗಳಿಗಾಗಿ ನಮ್ಮನ್ನು ನಾವು ಮರುಸಮರ್ಪಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಅದನ್ನೇ ಈಗ ಸ್ವಾತಂತ್ರದ 75ನೇ ವರ್ಷಾಚರಣೆಯ ಸಂದರ್ಭದಲ್ಲೂ ಮಾಡಲಾಗುತ್ತಿದೆ. ಇದು ಸ್ವಾಗತಾರ್ಹ ಕ್ರಮವೇ ಹೌದು. ಇನ್ನೊಂದು ವಿಷಯವನ್ನು ಗಮನದಲ್ಲಿಡಬೇಕು. ಇದು ಧಾರ್ಮಿಕ ಅಲ್ಪಸಂಖ್ಯಾತರು, ದಲಿತರು ಮತ್ತು ಮಹಿಳೆಯರ ಮೇಲೆ ದಾಳಿ ನಡೆಸುವ ಮೂಲಕ ಸಂವಿಧಾನದ ಆಶಯವನ್ನು ನಿರ್ದಯವಾಗಿ ಉಲ್ಲಂಘಿಸುತ್ತಿರುವ ಸಮಯ. ಇದು ನಮ್ಮ ಹಸಿವು ಸೂಚ್ಯಂಕವು ನೈಜೀರಿಯದೊಂದಿಗೆ ಸ್ಪರ್ಧಿಸುತ್ತಿರುವ ಸಮಯ. ನಿರುದ್ಯೋಗ ಎನ್ನುವುದು ಸಾಮಾನ್ಯ ಎಂಬಂತಾಗಿದೆ. ಪ್ರವಾಹದಂಥ ನಿಯಮಿತವಾಗಿ ಸಂಭವಿಸುತ್ತಿರುವ ಪ್ರಾಕೃತಿಕ ವಿಪತ್ತುಗಳನ್ನು ಎದುರಿಸಲು ನಮಗೆ ಅಸಾಧ್ಯವಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ಬಡವರು ಮತ್ತು ತುಳಿತಕ್ಕೊಳಗಾದವರ ಪರವಾಗಿ ಧ್ವನಿಯೆತ್ತುವ ಸಾಮಾಜಿಕ ಹೋರಾಟಗಾರರನ್ನು ಜೈಲಿಗೆ ಅಟ್ಟುತ್ತಿರುವ ಸಮಯ ಇದಾಗಿದೆ. ಭಾರತೀಯ ಸಂವಿಧಾನದ ವೌಲ್ಯಗಳನ್ನು ಎತ್ತಿಹಿಡಿಯಲು ಹೋರಾಟ ನಡೆಸಿರುವುದಕ್ಕಾಗಿ ಮತ್ತು ಹಿಂಸಾಚಾರದ ಬಲಿಪಶುಗಳ ನೆರವಿಗೆ ಧಾವಿಸಿರುವುದಕ್ಕಾಗಿ ಅವರನ್ನು ಜೈಲಿಗೆ ತಳ್ಳಲಾಗಿದೆ. ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತು ಗುಜರಾತ್‌ನ ಮಾಜಿ ಪೊಲೀಸ್ ಅಧಿಕಾರಿ ಆರ್.ಬಿ. ಶ್ರೀಕುಮಾರ್ ಬಂಧನ ಹಾಗೂ ಗುಜರಾತ್‌ನ ಇನ್ನೋರ್ವ ಮಾಜಿ ಪೊಲೀಸ್ ಅಧಿಕಾರಿ ಸಂಜೀವ ಭಟ್ ವಿರುದ್ಧ ಹೊಸದಾಗಿ ಆರೋಪಗಳನ್ನು ಹೊರಿಸಿರುವುದು- ಸಮಾಜದಲ್ಲಿ ನಡೆಯುತ್ತಿರುವ ರಾಜಕಾರಣದ ವೈಖರಿಯ ಒಂದು ಸಣ್ಣ ತುಣುಕು ಮಾತ್ರ.
ಎಲ್ಲಾ ರಾಜಕೀಯ ನಡೆಗಳು ನಮ್ಮ ತ್ರಿವರ್ಣ ಧ್ವಜ ಪ್ರತಿನಿಧಿಸುವ ವೌಲ್ಯಗಳಿಗೆ ವಿರುದ್ಧವಾಗಿರುವಾಗ, ಈ ದೃಶ್ಯ ವೈಭವಗಳ ಉದ್ದೇಶವಾದರೂ ಏನು? ಈಗ ಬಿಜೆಪಿ-ಆರೆಸ್ಸೆಸ್ ತ್ರಿವರ್ಣ ಧ್ವಜವನ್ನು ವೈಭವೀಕರಿಸುತ್ತಿದೆಯಾದರೂ, ಅದು ಧ್ವಜ ಪ್ರತಿನಿಧಿಸುವ ವೌಲ್ಯಗಳಿಗೆ ಕಟ್ಟಾ ವಿರೋಧಿಯಾಗಿದೆ ಎನ್ನುವುದನ್ನು ನಾವು ತಿಳಿದಿರಬೇಕು. ಸ್ವಲ್ಪ ಹಿಂದಕ್ಕೆ ಹೋಗುವುದಾದರೆ, ಸ್ವಾತಂತ್ರ ಚಳವಳಿ ಮತ್ತು ಬ್ರಿಟಿಷ್ ವಿರೋಧಿ ಚಳವಳಿಯ ಅವಧಿಯಲ್ಲಿ ತ್ರಿವರ್ಣ ಧ್ವಜವನ್ನು ಅಂಗೀಕರಿಸಿದ ಉದ್ದೇಶವು ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತವನ್ನು ಹೊಂದುವುದಾಗಿತ್ತು.
ಬಿಜೆಪಿಯ ಮಾತೃ ಸಂಸ್ಥೆ ಆರೆಸ್ಸೆಸ್ ಬ್ರಿಟಿಷ್ ವಿರೋಧಿ ಚಳವಳಿಯಿಂದ ದೂರವಿದ್ದದ್ದು ಮಾತ್ರವಲ್ಲ, ಅದು ತ್ರಿವರ್ಣ ಧ್ವಜವನ್ನೂ ಒಪ್ಪಿಕೊಂಡಿರಲಿಲ್ಲ. ಅದು ತನಗಾಗಿ ಕೇಸರಿ ಧ್ವಜವನ್ನು ಪಡೆದುಕೊಂಡಿತು. 1929ರಲ್ಲಿ ಜವಾಹರಲಾಲ್ ನೆಹರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ)ನ ಅಧ್ಯಕ್ಷರಾದಾಗ, 1930 ಜನವರಿ 26ನ್ನು ‘ಪೂರ್ಣ ಸ್ವರಾಜ್’ ದಿನವನ್ನಾಗಿ ಆಚರಿಸಲು ಹಾಗೂ ತ್ರಿವರ್ಣ ಧ್ವಜವನ್ನು ಹಾರಿಸಲು ಐಎನ್‌ಸಿ ಕರೆ ನೀಡಿತು. ಆದರೆ ಅಂದಿನ ಆರೆಸ್ಸೆಸ್ ಸರಸಂಘಚಾಲಕ ತ್ರಿವರ್ಣ ಧ್ವಜವನ್ನು ವಿರೋಧಿಸಿದರು ಮತ್ತು ಕೇಸರಿ ಧ್ವಜ (ಭಗವಾಧ್ವಜ)ವನ್ನು ಹಾರಿಸುವಂತೆ ಆರೆಸ್ಸೆಸ್ ಶಾಖೆಗಳಿಗೆ ಸೂಚನೆ ನೀಡಿದರು.
ಒಂದು ತಿದ್ದುಪಡಿಯೊಂದಿಗೆ ರಾಷ್ಟ್ರಧ್ವಜವನ್ನು ಅನುಮೋದಿಸಲಾಯಿತು. ಧ್ವಜದಲ್ಲಿ ಚರಕದ ಸ್ಥಾನವನ್ನು ಅಶೋಕ ಚಕ್ರ ಪಡೆದುಕೊಂಡಿತು. ಆಗ ಅಂದಿನ ಆರೆಸ್ಸೆಸ್ ಸರಸಂಘಚಾಲಕ ಎಮ್.ಎಸ್. ಗೋಳ್ವಾಲ್ಕರ್ ಹೀಗೆ ಹೇಳಿದರು: ‘‘ನಮ್ಮ ನಾಯಕರು ನಮ್ಮ ದೇಶಕ್ಕೆ ಹೊಸ ಧ್ವಜವೊಂದನ್ನು ಸೃಷ್ಟಿಸಿದ್ದಾರೆ. ಅವರು ಯಾಕೆ ಹಾಗೆ ಮಾಡಿದರು? ಇಲ್ಲಿ ಇನ್ನೊಬ್ಬರನ್ನು ನಕಲಿ ಮಾಡಲಾಗಿದೆ ಅಷ್ಟೆ. ನಮ್ಮದು ಭವ್ಯ ಇತಿಹಾಸವಿರುವ ಪ್ರಾಚೀನ ಹಾಗೂ ಶ್ರೇಷ್ಠ ದೇಶವಾಗಿದೆ. ಹಾಗಾದರೆ, ನಮ್ಮಲ್ಲಿ ನಮ್ಮದೇ ಆದ ಧ್ವಜ ಇರಲಿಲ್ಲವೇ? ಈ ಸಾವಿರಾರು ವರ್ಷಗಳ ಅವಧಿಯಲ್ಲಿ ನಾವು ರಾಷ್ಟ್ರೀಯ ಲಾಂಛನಗಳನ್ನು ಹೊಂದಿರಲಿಲ್ಲವೇ? ಸಂಶಯವೇ ಇಲ್ಲ, ನಾವು ಹೊಂದಿದ್ದೆವು. ಹಾಗಾದರೆ, ನಮ್ಮ ಮನಸ್ಸುಗಳಲ್ಲಿ ಯಾಕೆ ಈ ಸಂಪೂರ್ಣ ಶೂನ್ಯ ಮತ್ತು ನಿರ್ವಾತ?’’.
ಬಳಿಕ, 1946 ಜುಲೈ 14ರಂದು ನಾಗಪುರದಲ್ಲಿ ನಡೆದ ಗುರುಪೂರ್ಣಿಮೆ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಗೋಳ್ವಾಲ್ಕರ್, ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ಸಂಪೂರ್ಣವಾಗಿ ಪ್ರತಿನಿಧಿಸುವುದು ಕೇಸರಿ ಧ್ವಜ ಮಾತ್ರ ಎಂದು ಹೇಳಿದರು. ‘‘ಅದು (ಕೇಸರಿ ಧ್ವಜ) ದೇವರ ಸಾಕಾರ ರೂಪವಾಗಿದೆ. ಅಂತಿಮವಾಗಿ, ಇಡೀ ದೇಶವು ಇದೇ ಕೇಸರಿ ಧ್ವಜದ ಎದುರು ತಲೆಬಾಗುತ್ತದೆ ಎಂದು ನಾವು ದೃಢವಾಗಿ ನಂಬಿದ್ದೇವೆ’’ ಎಂದರು.
ಅಂತಿಮವಾಗಿ ಭಾರತಕ್ಕೆ ಸ್ವಾತಂತ್ರ ಸಿಕ್ಕಿತು. ಅದಕ್ಕೆ ಒಂದು ದಿನ ಮೊದಲು, ಆರೆಸ್ಸೆಸ್ ಮುಖವಾಣಿ ‘ಆರ್ಗನೈಝರ್’ ತ್ರಿವರ್ಣ ಧ್ವಜವನ್ನು ಕಟುವಾಗಿ ಟೀಕಿಸಿತು. ಪತ್ರಿಕೆಯ ಆಗಸ್ಟ್ 14ರ ಸಂಚಿಕೆಯಲ್ಲಿ ‘ಭಗವಾಧ್ವಜ (ಕೇಸರಿ ಧ್ವಜ)ದ ಹಿಂದಿನ ರಹಸ್ಯ’ ಎಂಬ ಹೆಸರಿನ ಲೇಖನವೊಂದು ಪ್ರಕಟವಾಯಿತು. ದಿಲ್ಲಿಯ ಕೆಂಪು ಕೋಟೆಯಲ್ಲಿ ಕೇಸರಿ ಧ್ವಜವನ್ನು ಹಾರಿಸಬೇಕು ಎಂದು ಅದು ಹೇಳಿದ್ದಷ್ಟೇ ಅಲ್ಲದೆ, ರಾಷ್ಟ್ರಧ್ವಜವಾಗಿ ತ್ರಿವರ್ಣ ಧ್ವಜದ ಆಯ್ಕೆಯನ್ನು ಅದು ಬಹಿರಂಗವಾಗಿಯೇ ನಿಂದಿಸಿತು. ‘‘ಅದೃಷ್ಟದ ಬಲದಿಂದ ಅಧಿಕಾರಕ್ಕೆ ಬಂದಿರುವ ಜನರು ನಮ್ಮ ಕೈಗೆ ತ್ರಿವರ್ಣ ಧ್ವಜವನ್ನು ಕೊಡಬಹುದು. ಆದರೆ ಅದನ್ನು ಹಿಂದೂಗಳು ಯಾವತ್ತೂ ಸ್ವೀಕರಿಸುವುದಿಲ್ಲ ಮತ್ತು ಗೌರವಿಸುವುದಿಲ್ಲ. ‘ಮೂರು’ ಎನ್ನುವ ಪದವೇ ಅಪಶಕುನವಾಗಿದೆ. ಹಾಗಾಗಿ, ಮೂರು ಬಣ್ಣಗಳನ್ನು ಹೊಂದಿರುವ ಧ್ವಜವೊಂದು ಖಂಡಿತವಾಗಿಯೂ ಅತ್ಯಂತ ಕೆಟ್ಟ ಮಾನಸಿಕ ಪರಿಣಾಮವನ್ನು ಉಂಟು ಮಾಡಲಿದೆ ಹಾಗೂ ಅದು ದೇಶವೊಂದಕ್ಕೆ ಹಾನಿಕಾರಕವಾಗಿದೆ’’ ಎಂಬುದಾಗಿ ಆ ಲೇಖನದಲ್ಲಿ ಬರೆಯಲಾಗಿದೆ.
ಬಿಜೆಪಿಯು ಚತುರ ಸಂಘಟನೆಯಾಗಿದೆ. ಅದು ನಿಧಾನವಾಗಿ ತ್ರಿವರ್ಣ ಧ್ವಜವನ್ನು ಬಳಸುವ ತಂತ್ರಗಾರಿಕೆಯನ್ನು ರೂಪಿಸಿತು. ಕರ್ನಾಟಕದ ಈದ್ಗಾ ಮೈದಾನ ಪ್ರಕರಣಕ್ಕೆ ಕೋಮು ಬಣ್ಣ ನೀಡಲು ಉಮಾ ಭಾರತಿ ತ್ರಿವರ್ಣ ಧ್ವಜವನ್ನು ಬಳಸಿಕೊಂಡರು. ಬಳಿಕ, ಮುರಳಿ ಮನೋಹರ್ ಜೋಶಿ ಬಿಜೆಪಿ ಅಧ್ಯಕ್ಷರಾದಾಗ ಅವರು ಕಾಶ್ಮೀರಕ್ಕೆ ‘ಏಕಾತ್ಮತಾ ಯಾತ್ರೆ’ಯನ್ನು ತೆಗೆದುಕೊಂಡು ಹೋಗಿ ಶ್ರೀನಗರದಲ್ಲಿ ಭಾರತೀಯ ಸೇನೆಯ ರಕ್ಷಣೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಮುಂದೆ ಹಂತ ಹಂತವಾಗಿ, ಇಂತಹ ರಾಜಕೀಯದ ತಥಾಕಥಿತ ಪುಂಡು ಶಕ್ತಿಗಳು ವಿವಿಧ ಸಂದರ್ಭಗಳಲ್ಲಿ ಮೆರವಣಿಗೆ ನಡೆಸುವುದನ್ನು ಆರಂಭಿಸಿದವು. ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಲ್ಲಿ ತ್ರಿವರ್ಣ ಧ್ವಜಗಳನ್ನು ಬೆದರಿಸುವ ರೀತಿಯಲ್ಲಿ ಬೀಸುತ್ತಾ ಹೋಗುವುದು ಅಂತಹ ಮೆರವಣಿಗೆಗಳ ಪ್ರಧಾನ ಉದ್ದೇಶವಾಗಿತ್ತು.
ತ್ರಿವರ್ಣ ಧ್ವಜವು ಭಾರತದ ಜನರಿಗೆ ಸ್ಫೂರ್ತಿಯ ಪ್ರಧಾನ ಸೆಲೆಯಾಗಿದೆ. ಹಲವು ಪ್ರತಿಭಟನಾಕಾರರು ವಿವಿಧ ಸಂದರ್ಭಗಳಲ್ಲಿ ಈ ಧ್ವಜವನ್ನು ಸಕಾರಾತ್ಮಕ ಉದ್ದೇಶಗಳಿಗಾಗಿ ಹಾರಿಸಿದ್ದಾರೆ. ಸಿಎಎಯನ್ನು ವಿರೋಧಿಸಿ ಶಹೀನ್‌ಬಾಗ್‌ನಲ್ಲಿ ನಡೆದ ಚಳವಳಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು. ರಾಷ್ಟ್ರೀಯತೆ ಮತ್ತು ನಾಗರಿಕರ ಹಕ್ಕುಗಳ ಸಂದೇಶವನ್ನು ನೀಡುವುದಕ್ಕಾಗಿ ಪ್ರತಿಭಟನಾಕಾರರು ಗಣರಾಜ್ಯೋತ್ಸವ ದಿನದಂದು ಗೌರವಯುತವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿದರು.
ಆಗಸ್ಟ್ 12ರಿಂದ 15ರವರೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ ನಿಯಮಗಳಿಗೆ ತಿದ್ದುಪಡಿಯೊಂದನ್ನು ತರಲಾಗಿದೆ. ಇನ್ನು ರಾಷ್ಟ್ರ ಧ್ವಜವನ್ನು ಖಾದಿ ಬಟ್ಟೆಯಿಂದ ಮಾತ್ರ ತಯಾರಿಸಬೇಕಾಗಿಲ್ಲ. ಹಾಗಾಗಿ, ತ್ರಿವರ್ಣ ಧ್ವಜದ ತಯಾರಿಕೆಗೆ ಪಾಲಿಸ್ಟರ್ ಮತ್ತು ಇತರ ಸಿಂತೆಟಿಕ್ ಸಾಮಗ್ರಿಗಳನ್ನು ಯಥೇಚ್ಛವಾಗಿ ಬಳಸಿಕೊಳ್ಳಲಾಗುವುದು. ಇದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವುದು ಖಚಿತವಾಗಿದೆ. ಇಂತಹ ಕ್ರಮಗಳಿಂದ ದೇಶಭಕ್ತಿಯನ್ನು ಉತ್ಪಾದಿಸಬಹುದೇ? ಸ್ಮತಿ ಇರಾನಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿದ್ದಾಗ ಕೇಂದ್ರ ಸರಕಾರಕ್ಕೆ ಒಳಪಟ್ಟ ವಿಶ್ವವಿದ್ಯಾನಿಲಯಗಳಲ್ಲಿ 207 ಅಡಿ ಎತ್ತರದ ಬೃಹತ್ ತ್ರಿವರ್ಣ ಧ್ವಜಗಳನ್ನು ಸ್ಥಾಪಿಸುವ ಪ್ರಸ್ತಾವವನ್ನು ಮುಂದಿಡಲಾಗಿತ್ತು. ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಈ ಪ್ರಸ್ತಾವ ಮುನ್ನೆಲೆಗೆ ಬಂದಿತ್ತು. ಈ ಬೃಹತ್ ರಾಷ್ಟ್ರಧ್ವಜಗಳು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯನ್ನು ಸೃಷ್ಟಿಸುತ್ತವೆ ಎನ್ನುವುದು ಆ ನಿರ್ಧಾರದ ಹಿಂದಿನ ಕಲ್ಪನೆಯಾಗಿತ್ತು.
ನಮ್ಮ ನೀತಿಗಳಿಗೆ ಮೂಲಾಧಾರವಾಗಬೇಕಾಗಿರುವ ಸಂವಿಧಾನದ ಮೂಲ ತತ್ವಗಳನ್ನು ಗಾಳಿಗೆ ತೂರುತ್ತಾ, ಇಂತಹ ಆಡಂಬರದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭ್ರಾತೃತ್ವ, ಸಮಾನತೆ ಮತ್ತು ಸ್ವಾತಂತ್ರದ ವೌಲ್ಯಗಳನ್ನು ಅನುಸರಿಸದಿದ್ದರೆ, ಬರಿಯ ಸಂಕೇತಗಳು ಮಾತ್ರ ಸುಧಾರಣೆಯನ್ನು ತರಲಾರದು. ಯಾವುದೇ ನೈಜ ಕಾರ್ಯಕ್ರಮವನ್ನು ಆರಂಭಿಸುವಾಗ ಇದನ್ನು ಯಾವತ್ತೂ ಗಮನದಲ್ಲಿರಿಸಬೇಕು.
ಕೃಪೆ: countercurrents.org