ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಿಂದ ದೂರ ಉಳಿದಿತ್ತು: ಜಯಕುಮಾರ್

Update: 2022-08-05 11:29 GMT

ಉಡುಪಿ, ಆ.5: ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಪು ಉತ್ತರ ಹಾಗೂ ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಮಟ್ಟುವಿನಿಂದ ಶಿರ್ವದವರೆಗೆ ಪಾದಯಾತ್ರೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಪಾದಯಾತ್ರೆಗೆ ಮಟ್ಟುವಿನಲ್ಲಿ ಚಾಲನೆ ನೀಡಿದ ಎಐಸಿಸಿ ಕಾರ್ಯದರ್ಶಿ ಜಯಕುಮಾರ್ ಮಯೂರು ಮಾತನಾಡಿ, ಕಾಂಗ್ರೆಸ್ ಪಕ್ಷದ ನಾಯಕರು ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಸಾಕಷ್ಟು ಹೋರಾಟ, ತ್ಯಾಗ ಬಲಿ ದಾನಗಳನ್ನು ಮಾಡಿದ್ದಾರೆ. ಆದರೆ ಬಿಜೆಪಿ, ಆರೆಸೆಸ್ಸ್ ಸ್ವಾತಂತ್ರ್ಯ ಹೋರಾಟ ದಲ್ಲಿ ಭಾಗಿಗಳಾಗದೆ ದೂರ ಉಳಿದಿತ್ತು. ಇವರು ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧ ವಾಗಿದ್ದರು ಮತ್ತು ಬ್ರಿಟೀಷರ ಸೇವೆ ಮಾಡುತ್ತಿದ್ದರು ಎಂದು ಟೀಕಿಸಿದರು.

75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನಾವು ಸ್ವಾತಂತ್ರ್ಯ ಹೋರಾಟಗಾರ ತ್ಯಾಗ ಬಲಿದಾನವನ್ನು ಸ್ಮರಿಸುವುದು ಅತೀ ಅಗತ್ಯವಾಗಿದೆ. ಆ ಮೂಲಕ ಪಕ್ಷದ ಈ ದೇಶದ ಐಕ್ಯತೆ, ಸಮಗ್ರತೆ, ಜಾತ್ಯತೀತತೆ ಹಾಗೂ ಸಂವಿಧಾನವನ್ನು ರಕ್ಷಿಸುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡಬೇಕಾಗಿದೆ ಎಂದ ಅವರು, ಬಿಜೆಪಿ ಸರಕಾರ ಇಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ನಮ್ಮ ನಾಯಕರುಗಳ ವಿರುದ್ಧ ಧ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಮಾತನಾಡಿ, 1885ರಲ್ಲಿ ಉದಯವಾದ ಕಾಂಗ್ರೆಸ್ ಪಕ್ಷವು 62 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೆ. ಅಲ್ಲದೆ ಇಂದಿನ ಈ ಬಲಿಷ್ಠ ಭಾರತ ಆಗಲು ಸ್ವಾತಂತ್ರ್ಯ ದೊರೆತ 75 ವರ್ಷಗಳಲ್ಲಿ 68 ವರ್ಷ ಕಾಲ ಆಡಳಿತ  ನಡೆಸಿದ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಜನರಿಗೆ ಈ ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಈ ಪಾದಯಾತ್ರೆ ಮೂಲಕ ಕೋಮುವಾದಿ ಶಕ್ತಿಗಳಿಗೆ ತಡೆಯೊಡ್ಡಿ, ಜಾತ್ಯತೀತಯ ಶಕ್ತಿಗೆ ಗೆಲುವು ಮೂಡಿಸುವ ಕೆಲಸವನ್ನು ಎಲ್ಲರೂ ಒಗ್ಗೂಡಿ ಮಾಡಬೇಕು. ಅಲ್ಲದೆ ಪಕ್ಷದ ಕೊಡುಗೆಯನ್ನು ಜನರಿಗೆ ತಿಳಿಸುವ ಕಾರ್ಯವನ್ನು ನಾವೆಲ್ಲ ಒಗ್ಗೂಡಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಅಭಯಚಂದ್ರ ಜೈನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರು, ಕೆಪಿಸಿಸಿ ಪ್ಯಾನಲಿಸ್ಟ್ ವರೋನಿಕಾ ಕರ್ನೆಲಿಯೋ, ಮುಖಂಡರಾದ ನವೀನ್‌ಚಂದ್ರ ಶೆಟ್ಟಿ, ನವೀನ್ ಚಂದ್ರ ಸುವರ್ಣ, ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಕೀರ್ತಿ ಶೆಟ್ಟಿ, ಶಬ್ಬೀರ್ ಉಡುಪಿ, ಸರಸು ಡಿ.ಬಂಗೇರ, ಶ್ರೀನಿವಾಸ್, ಯತೀಶ್ ಕರ್ಕೇರ, ಉದ್ಯಾವರ ನಾಗೇಶ್ ಕುಮಾರ್, ರಿಯಾಝ್ ಪಳ್ಳಿ, ಅಬ್ದುಲ್ ಅಝೀಝ್ ಹೆಜಮಾಡಿ ಮೊದಲಾದವರು ಉಪಸ್ಥಿತರಿದ್ದರು.  

ಪಾದಯಾತ್ರೆಯು ಕಟಪಾಡಿ, ಕುರ್ಕಾಲು, ಶಂಕರಪುರ, ಬಂಟಕಲ್ಲು ಮಾರ್ಗ ವಾಗಿ ಶಿರ್ವದವರೆಗೆ ಒಟ್ಟು ೧೫ ಕಿ.ಮೀ. ದೂರ ಕ್ರಮಿಸಿ ಸಮಾಪ್ತಿಗೊಂಡಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News