‘ಮಕ್ಕಳ ಊಟ’ದಲ್ಲಿ ರಾಜಕೀಯ ಬೇಡ
ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ‘ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್’(ಮಧ್ಯಾಹ್ನ ಉಪಾಹಾರ ಯೋಜನೆ) ಅಡಿ ಪೌಷ್ಟಿಕ ಆಹಾರವಾಗಿ ಬೇಯಿಸಿದ ಕೋಳಿ ಮೊಟ್ಟೆ, ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ ನೀಡುವ ಕ್ರಮ ಸ್ವಾಗತಾರ್ಹ. ಈ ಯೋಜನೆಗೆ ಪರ, ವಿರೋಧ ಏನಿದ್ದರೂ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪೌಷ್ಟಿಕಾಂಶ ಆಹಾರ ಪೂರೈಕೆ ಸಕಾಲಿಕ ಕ್ರಮವಾಗಿದೆ. ಯಾಕೆಂದರೆ ರಾಜ್ಯದಲ್ಲಿ ಗಂಭೀರ ಸಮಸ್ಯೆಯಾಗಿ ಗುರುತಿಸಲ್ಪಟ್ಟಿರುವ ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಈ ಯೋಜನೆ ಸಹಕಾರಿಯಾಗಲಿದೆ. ಶಾಲೆಗಳಿಗೆ ಬರುವ ಎಲ್ಲಾ ಮಕ್ಕಳಿಗೆ ಮನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಆಹಾರ ದೊರಕದೆ ಇರಬಹುದು. ಹೀಗಾಗಿ ಕೆಲ ಮಕ್ಕಳು ಹಸಿವಿನ ಸಮಸ್ಯೆಯಿಂದ ಬಳಲುತ್ತಿರುವ ವಿಚಾರ ಬಯಲಿಗೆ ಬಂದಿದೆ.
ಬಡತನ, ಆರ್ಥಿಕ ಸಮಸ್ಯೆಯಿಂದ ಊಟ, ತಿಂಡಿ ತಿನ್ನದ ಮಕ್ಕಳು ಎಷ್ಟೋ ಇದ್ದಾರೆ. ಇವೆಲ್ಲಾ ವಿದ್ಯಾರ್ಥಿಗಳ ಕಲಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಎಲ್ಲಾ ಮಕ್ಕಳಿಗೆ ಸಮಾನ ಶಿಕ್ಷಣ, ಸಮಾನ ಊಟ ಎಂಬ ಪರಿಕಲ್ಪನೆಯಡಿಯಲ್ಲಿ ಬಿಸಿಯೂಟ ಯೋಜನೆಯಲ್ಲಿ ಕೋಳಿ ಮೊಟ್ಟೆ, ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ ನೀಡುವ ಕ್ರಮ ಸಕಾಲಿಕವಾಗಿದ್ದು ಮಾಂಸಹಾರಿ, ಸಸ್ಯಾಹಾರಿ ವಿದ್ಯಾರ್ಥಿಗಳೆಲ್ಲರಿಗೂ ಇದು ಪ್ರಯೋಜನವಾಗಲಿದೆ. ಇದರಲ್ಲೂ ರಾಜಕೀಯ ಸಲ್ಲದು. ನಮಗೆ ಮಕ್ಕಳು ಮುಖ್ಯ. ಅವರ ಭವಿಷ್ಯವೂ ಮುಖ್ಯ. ಹೀಗಾಗಿ ಅವರ ಕಲಿಕಾ ಹಂತದಲ್ಲಿ ಯಾವೆಲ್ಲಾ ಪೂರಕ ಕ್ರಮಗಳನ್ನು ಅಳವಡಿಸಬೇಕೋ ಅದನ್ನು ಶಿಕ್ಷಣ ತಜ್ಞರ ಸಲಹೆ ಪಡೆದು ಸರಕಾರ ಈ ಕ್ರಮ ಜಾರಿಗೆ ತಂದಿದೆ. ಈ ಯೋಜನೆ ಜಾರಿಯಾದ ನಂತರ ಮಕ್ಕಳು ಅದಕ್ಕೆ ಕೊಟ್ಟಿರುವ ಸ್ಪಂದನೆ ಈ ಯೋಜನೆಗೆ ಸಿಕ್ಕಿರುವ ಯಶಸ್ಸು ಎಂದು ಹೇಳಬಹುದು. ಹೀಗಾಗಿ ಈ ಯೋಜನೆಯ ಮೇಲೆ ರಾಜಕೀಯದ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕಾಗಿದೆ.
ಈ ಯೋಜನೆಯ ಹಿಂದಿರುವ ಉದ್ದೇಶ ಶಾಲಾ ಮಕ್ಕಳಲ್ಲಿರುವ ಅಪೌಷ್ಟಿಕತೆ ನಿವಾರಣೆ. ಇನ್ನು ಈ ಯೋಜನೆಯಲ್ಲಿ ಯಾವುದೇ ವಿದ್ಯಾರ್ಥಿ ಬಲವಂತವಾಗಿ ಮೊಟ್ಟೆ ಸೇವಿಸುವಂತೆ ಒತ್ತಾಯಿಸುವ ಪ್ರಮೇಯವೂ ಇಲ್ಲ. ಯಾಕೆಂದರೆ ಮೊಟ್ಟೆ ತಿನ್ನದ ಸಸ್ಯಾಹಾರಿಗಳು ಚಿಕ್ಕಿ ಮತ್ತು ಬಾಳೆಹಣ್ಣು ಆಯ್ಕೆ ಮಾಡಿಕೊಳ್ಳಬಹುದು. ಹೀಗಾಗಿ ಈ ಯೋಜನೆಯ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕಾಗಿದೆ.