ವಿದ್ಯುತ್ ಖಾಸಗೀಕರಣ ಕಾಯ್ದೆ ತರಲಿದೆ ‘‘ಆನಿ’’ಯಂತಹ ಶಾಕ್!

Update: 2022-08-09 06:33 GMT

ಎಲ್ಲ ರಾಜಕೀಯ ಪಕ್ಷಗಳೂ ಚುನಾವಣಾ ತಯಾರಿಯಲ್ಲಿ ನಿರತರಾಗಿರುವಾಗ, ಅವರ ದಿಕ್ಕು ತಪ್ಪಿಸಲು ಒಕ್ಕೂಟ ಸರಕಾರಕ್ಕೆ ಇದೊಂದು ಒಳ್ಳೆಯ ಅವಕಾಶ. ಸದೃಢ-ಸುಭದ್ರ ‘‘ಚುನಾವಣಾ ಯಂತ್ರ’’ ಹೊಂದಿರುವ ಒಕ್ಕೂಟ ಸರಕಾರ, ಈ ಮಸೂದೆ ಮಂಡಿಸಿ, ಸ್ಥಾಯಿ ಸಮಿತಿಗೆ ಒಪ್ಪಿಸುವ ಮೂಲಕ ಒಂದೇ ಕಲ್ಲಿನಲ್ಲಿ ಒಂದಕ್ಕಿಂತ ಹೆಚ್ಚು ಹಣ್ಣುಗಳನ್ನು ಉದುರಿಸುವ ನಿರೀಕ್ಷೆಯಲ್ಲಿದೆ. 

ಒಕ್ಕೂಟ ಸರಕಾರವು ವಿದ್ಯುತ್ ಕಾಯ್ದೆ(2003)ಗೆ ತಿದ್ದುಪಡಿಯನ್ನು ಸಂಸತ್ತಿನಲ್ಲಿ ಇಂದು ಮಂಡಿಸಿದೆ ಮತ್ತು ವಿಸ್ತೃತ ಚರ್ಚೆಗಾಗಿ ಸಂಬಂಧಿತ ಸಂಸದೀಯ ಸ್ಥಾಯೀ ಸಮಿತಿಗೆ ಹಸ್ತಾಂತರಿಸಿದೆ. ಈ ಉದ್ದೇಶಿತ ತಿದ್ದುಪಡಿಯನ್ನು ಜನಸಾಮಾನ್ಯರು ಹೇಗೆ ನೋಡಬೇಕು?

2020-2030ರ ನಡುವೆ ದೇಶದಲ್ಲಿ ಮೂಲಸೌಕರ್ಯ ರಂಗಗಳಲ್ಲಿ ಮಾಡಲುದ್ದೇಶಿಸಿರುವ ಕೆಲವು ಬದಲಾವಣೆಗಳನ್ನು ಒಟ್ಟಾಗಿ ನೋಡಿದರೆ, ಈಗ ಸಂಸತ್ತು ಮಾಡಹೊರಟಿರುವ ಈ ವಿದ್ಯುತ್ ಕಾಯ್ದೆ ತಿದ್ದುಪಡಿಯ ಅಗಾಧತೆ ಗಮನಕ್ಕೆ ಬಂದೀತು.

  • ವಿದ್ಯುತ್ ವಿತರಣೆ ಖಾಸಗೀಕರಣ
  • ಕೃಷಿ ಕಾರ್ಪೊರೇಟೀಕರಣ
  • ಇಲೆಕ್ಟ್ರಿಕ್ ವಾಹನಗಳು

ಈ ಮೂರು ಅಂಶಗಳಿಗೆ ದೇಶದ ದೊಡ್ಡ ಕಂಪೆನಿಗಳು (ಅದರಲ್ಲೂ ಆಳುವವರಿಗೆ ಹತ್ತಿರ ಇರುವ ‘‘ಆನಿ’’ ಕಂಪೆನಿಗಳು) ಮುಂದಿನ ಹತ್ತು ವರ್ಷಗಳಲ್ಲಿ ಎಷ್ಟು ಹೂಡಿಕೆ ಮಾಡಲು ಸನ್ನದ್ಧಗೊಂಡಿವೆ ಎಂಬುದನ್ನು ಗಮನಿಸಿದರೆ, ನಿಮಗೊಂದು ಕುತೂಹಲಕರವಾದ ಚುಕ್ಕಿ ಜೋಡಿಸುವ ಆಟ ಸಿಗುತ್ತದೆ. ಕಳೆದ 70ವರ್ಷಗಳಲ್ಲಿ, ಖಾಸಗಿ ಕಂಪೆನಿಗಳು ಪ್ರಪೋಸಲ್‌ಹಿಡಿದು ಸರಕಾರಗಳ ಎದುರು ಬಾಗಿಲು ಕಾಯುತ್ತಿದ್ದವು. ಈಗ ಸ್ವತಃ ಸರಕಾರವೇ ಖಾಸಗಿ ಕಂಪೆನಿಗಳ ಪ್ರಮೋಟರ್ ಆಗಿ ನಿಂತಿದೆ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ.

ವಿದ್ಯುತ್ ರಂಗದ ಖಾಸಗೀಕರಣ ಪ್ರಸ್ತಾಪ ಹೊಸ ಬೆಳವಣಿಗೆ ಅಲ್ಲ. 2014ರಲ್ಲೇ ಒಕ್ಕೂಟ ಸರಕಾರ ಈ ಬಗ್ಗೆ ಖಚಿತ ನಿಲುವು ತಳೆದಿತ್ತು. ಕೃಷಿ ಕಾಯ್ದೆಗಳ ರೀತಿಯಲ್ಲೇ ಈ ಕಾಯ್ದೆಗೂ ತಳಹದಿ ಹೇಗೆ ತಯಾರಾಗಬೇಕು ಎಂಬುದು ನಿರ್ಧಾರ ಆಗಿತ್ತು. ನೀತಿ ಆಯೋಗವು 2018ರಲ್ಲಿ ಪ್ರಕಟಿಸಿದ ‘ಸ್ಟ್ರಾಟಜಿ ಫಾರ್ ನ್ಯೂ ಇಂಡಿಯಾ @ 75’ ಪುಸ್ತಕದಲ್ಲಿ ಈ ಕುರಿತು ಸ್ಪಷ್ಟವಾಗಿ ವಿವರಿಸಲಾಗಿದೆ. ನೀತಿ ಆಯೋಗ ಸೂಚಿಸಿದ ಈ ಹಾದಿಯಲ್ಲಿಯೇ ಮುಂದುವರಿದು, ಈಗ ಮಸೂದೆ ಸಂಸತ್ತಿನಲ್ಲಿ ಮಂಡನೆ ಆಗಿದೆ.

ಆ ಪುಸ್ತಕದಲ್ಲಿ ಹೇಳಲಾದ ಅಂಶಗಳು ಸರಕಾರದ ಉದ್ದೇಶವನ್ನು ಹೀಗೆ ವಿವರಿಸುತ್ತವೆ:

ರಾಜ್ಯಗಳ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಿಸುವ ಅಥವಾ ಫ್ರಾಂಚೈಸಿ ಮಾಡೆಲ್ ತರುವ ಮೂಲಕ  AT&C ನಷ್ಟ (aggregate technical and commercial loss) ಕಡಿಮೆ ಮಾಡಿಕೊಳ್ಳುವುದು.

ಡಿಸ್ಕಾಂಗಳು ಗ್ರಾಮೀಣ ಪ್ರದೇಶದಲ್ಲಿ ರಿಟೇಲ್ ವಿದ್ಯುತ್ ವ್ಯಾಪಾರಕ್ಕೆ ಒಂದಿಷ್ಟು ಮಾನದಂಡಗಳನ್ನು ಸಿದ್ಧಪಡಿಸಿಕೊಂಡು, ಫ್ರಾಂಚೈಸಿ ಮಾಡೆಲ್ ಬಳಸಿಕೊಳ್ಳಬಹುದು, ವಿತರಣೆಗೆ ವಿಕೇಂದ್ರೀಕೃತ (ಸ್ಥಳೀಯ) ಉತ್ಪಾದನಾ ಮೂಲ, ದಾಸ್ತಾನು ವ್ಯವಸ್ಥೆಗಳನ್ನು ಬಳಸಿಕೊಳ್ಳಬಹುದು.

ನಿಯಂತ್ರಕ ಪ್ರಾಧಿಕಾರಗಳನ್ನು ಸ್ವತಂತ್ರ ಮತ್ತು ಪರಿಣಾಮಕಾರಿಗೊಳಿಸಬೇಕು.

ಕೃಷಿಗೆ ರಸಗೊಬ್ಬರ, ವಿದ್ಯುತ್, ಬೆಳೆ, ವಿಮೆ ಎಂಬಿತ್ಯಾದಿ ಬೇರೆ ಬೇರೆ ಸಬ್ಸಿಡಿ ಕೊಡುವ ಬದಲು ಎಕರೆಗೆ ಇಂತಿಷ್ಟು ಎಂದು DBT (ಖಾತೆಗೆ ನೇರ ಪಾವತಿ) ರೂಪದಲ್ಲಿ ಸಬ್ಸಿಡಿ ಪಾವತಿ ಮಾಡುವುದು.

ಕೃಷಿಗೆ ಸೋಲಾರ್ ಪಂಪ್‌ಸೆಟ್‌ಗಳನ್ನು ಪ್ರೋತ್ಸಾಹಿಸುವುದು ಮತ್ತು ಹೆಚ್ಚುವರಿ ವಿದ್ಯುತ್ತನ್ನು ಡಿಸ್ಕಾಂಗಳು ಖರೀದಿಸಲು ವ್ಯವಸ್ಥೆ ಮಾಡುವುದು.

ಲೋಡ್ ಶೆಡ್ಡಿಂಗ್ ಮಾಡುವ ಡಿಸ್ಕಾಂಗಳಿಗೆ ದಂಡ ವಿಧಿಸುವುದು.

ವಿದ್ಯುತ್ ರಫ್ತಿಗೆ ಪ್ರೋತ್ಸಾಹ.

ಟೈಮ್-ಆಫ್-ದಿ-ಡೇ ತಾರಿಫ್ ಅಳವಡಿಕೆಯ ಮೂಲಕ (ಅಂದರೆ ದಿನದ ಬೇರೆ ಬೇರೆ ಹೊತ್ತಿನ ವಿದ್ಯುತ್ ಬಳಕೆಗೆ ಬೇರೆ ಬೇರೆ ದರ ನಿಗದಿ) ರಿನಿವೆಬಲ್ ಇಂಧನಗಳಿಗೆ ಪ್ರೋತ್ಸಾಹ.

  •  ಮಂಡನೆ ಈಗ ಏಕೆ?

ವಿದ್ಯುತ್ ವಿತರಣೆ ಖಾಸಗೀಕರಣ ಆಗುವ ವೇಳೆ ಟೆಂಡರ್ ಹಾಕಲು ಬಿಡ್ಡುದಾರರಿಗೆ ಬಿಡ್ಡಿನ ಶರತ್ತುಗಳು ಹೇಗಿರುತ್ತವೆ ಎಂದುಸೂಚಿಸಲು ಕೇಂದ್ರವಿದ್ಯುತ್‌ಇಲಾಖೆ2020ಅಕ್ಟೋಬರಿನಲ್ಲಿಯೇ ಸ್ಟಾಂಡರ್ಡ್ ಬಿಡ್ಡಿಂಗ್ ಡಾಕ್ಯುಮೆಂಟಿನ ಕರಡುಪ್ರತಿ ಬಿಡುಗಡೆ ಮಾಡಿತ್ತು. ಆದರೆ, ಮಸೂದೆ ಒಂದೂವರೆ ವರ್ಷಗಳ ಬಳಿಕ, ಈಗ ಮಂಡನೆ ಆಗುತ್ತಿದೆ. ಇದು ಯಾಕೆ ಎಂದು ಗಮನಿಸಿದರೆ, ಕೆಲವು ಕುತೂಹಲಕರ ಅಂಶಗಳು ಕಾಣಸಿಗುತ್ತವೆ.

ರಾಜ್ಯಗಳಲ್ಲಿ ಮೊದಲೇ ನಷ್ಟದಲ್ಲಿದ್ದ ಡಿಸ್ಕಾಂಗಳು ಕೋವಿಡ್ ಕಾಲದಲ್ಲಿ ಲಾಕ್‌ಡೌನ್ ಮತ್ತು ತಗ್ಗಿದ ವಿದ್ಯುತ್ ಬೇಡಿಕೆಗಳ ಕಾರಣದಿಂದಾಗಿ ಯಾವ ಪರಿ ನಷ್ಟದಲ್ಲಿದ್ದವೆಂದರೆ, 2021-22ನೇ ಸಾಲಿಗೆ ಡಿಸ್ಕಾಂಗಳ ನಷ್ಟ 1.1 ಲಕ್ಷ ಕೋಟಿ ರೂ.ಗಳಿಗೆ ಏರಿತ್ತು. ಕೋವಿಡ್ ಕಾಲದಲ್ಲಿ ಒಕ್ಕೂಟ ಸರಕಾರ 90,000 ಕೋಟಿ ರೂಪಾಯಿಯನ್ನು ತನ್ನ ‘‘ಕೋವಿಡ್ ಪರಿಹಾರ’’ದ ಭಾಗವಾಗಿ ರಾಜ್ಯ ಸರಕಾರಗಳಿಗೆ ನೀಡಿ, ವಿದ್ಯುತ್ ವಿತರಣಾ ಸಂಸ್ಥೆಗಳಿಗೆ ರಾಜ್ಯ ಸರಕಾರಗಳಿಂದ ಬಾಕಿ ಉಳಿದಿರುವ ವಿದ್ಯುತ್ ಬಿಲ್ ಪಾವತಿಗಳನ್ನು ಮಾಡಲು ಹೇಳಿತ್ತು. ಅದಾದ ಬಳಿಕವೂ ಈ ಗಾತ್ರದ ಹೊಂಡ ಡಿಸ್ಕಾಂಗಳಲ್ಲಿ ಉಳಿದಿದೆ.

ಈ ಗಾತ್ರದ ಗುಂಡಿಗಳಿರುವ ಡಿಸ್ಕಾಂಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲು ಹೊರಟರೆ, ಅದನ್ನು ತೆಗೆದುಕೊಳ್ಳಲು ಯಾರೂ ಮುಂದೆ ಬರುವುದಿಲ್ಲ ಎಂಬ ಸರಳ ವಾಸ್ತವ ಸರಕಾರಕ್ಕೆ ಗೊತ್ತಿಲ್ಲದ್ದೇನಲ್ಲ. ಹಾಗಾಗಿ ಅವರು ತಮ್ಮ ಸ್ಟಾಂಡರ್ಡ್ ಬಿಡ್ಡಿಂಗ್ ಡಾಕ್ಯುಮೆಂಟಿನಲ್ಲಿಯೇ, ಡಿಸ್ಕಾಂಗಳನ್ನು ಖಾಸಗಿ ನಿರ್ವಹಣೆಗೆ ಪಡೆಯುವ ಕಂಪೆನಿಗೆ ‘‘ಯಾವುದೇ ನಷ್ಟ/ನಿರ್ವಹಿಸಲಸಾಧ್ಯವಾದ ಬಾಧ್ಯತೆಗಳಿಲ್ಲದಂತೆ, ಕ್ಲೀನ್‌ಬ್ಯಾಲೆನ್ಸ್‌ಶೀಟ್ ಸಹಿತವಾಗಿ’’ ಹಸ್ತಾಂತರಮಾಡಲಾಗುವುದು ಎಂದು ಸ್ಪಷ್ಟವಾಗಿ ಹೇಳಿದೆ. ಅರ್ಥಾತ್, ಸರಕಾರ ತನ್ನ ತೆರಿಗೆ/ಆದಾಯ ಸಂಗ್ರಹದಿಂದಲೇ ಈ ನಷ್ಟದ ಗುಂಡಿಯನ್ನು ಮುಚ್ಚಿ, ನಷ್ಟಕ್ಕೆ ಕಾರಣ ಆಗಬಲ್ಲ ಅಂಶಗಳಿದ್ದರೆ (ಸಿಬ್ಬಂದಿ, ಕಳಪೆ ಯಂತ್ರಗಳು ಇತ್ಯಾದಿ) ಅವನ್ನೆಲ್ಲ ಸರಿಪಡಿಸಿ, ಆರೋಗ್ಯವಂತ ಡಿಸ್ಕಾಂಗಳನ್ನೇ ಖಾಸಗಿಯವರಿಗೆ ಹಸ್ತಾಂತರಿಸಲಿದೆ. ಅಂದರೆ, ಈ ಹೊರೆಯನ್ನು ಕೂಡ ದೇಶದ ತೆರಿಗೆದಾರರೇ ಹೊರಬೇಕು.

ಈ ರೀತಿ, ಮಾರುವ ಕುರಿಯನ್ನು ಕೊಬ್ಬಿಸುವುದಕ್ಕೆ ಸರಕಾರಕ್ಕೆ ಸಮಯ ಬೇಕಾಗಿತ್ತು. ಜೊತೆಗೆ ಕೃಷಿ ಕಾನೂನುಗಳ ವಿರುದ್ಧ ದೇಶದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾಗ ವಿದ್ಯುತ್ ಕ್ಷೇತ್ರದ ಈ ಬೆಳವಣಿಗೆಗಳು ರೈತರ ಗಮನಕ್ಕೂ ಬಂದಿದ್ದವು ಮತ್ತು ಅವರೂ ಇದರ ವಿರುದ್ಧ ಧ್ವನಿ ಎತ್ತತೊಡಗಿದ್ದರು. ಹಾಗಾಗಿ ಒಕ್ಕೂಟ ಸರಕಾರ, ಈ ಮಸೂದೆಯನ್ನು ಜಾರಿಗೆ ತರಲು ಸಮಯ ಕಾಯುತ್ತಿತ್ತು. ಈಗ ರೈತ ಹೋರಾಟಗಳ ಕಾವು ಸ್ವಲ್ಪತಣ್ಣಗಾಗಿದೆ ಹಾಗೂ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಈಶಾನ್ಯದ ರಾಜ್ಯಗಳು ಸೇರಿದಂತೆ ಸುಮಾರು 11 ಪ್ರಮುಖ ರಾಜ್ಯಗಳು ಶೀಘ್ರವೇ ಚುನಾವಣೆ ಎದುರಿಸಲಿವೆ ಮತ್ತು ಸಾರ್ವತ್ರಿಕ ಚುನಾವಣೆಗೂ ಒಂದೂ ಚಿಲ್ಲರೆ ವರ್ಷ ಮಾತ್ರ ಬಾಕಿ ಇರುವುದು. ಎಲ್ಲ ರಾಜಕೀಯ ಪಕ್ಷಗಳೂ ಚುನಾವಣಾ ತಯಾರಿಯಲ್ಲಿ ನಿರತರಾಗಿರುವಾಗ, ಅವರ ದಿಕ್ಕು ತಪ್ಪಿಸಲು ಒಕ್ಕೂಟ ಸರಕಾರಕ್ಕೆ ಇದೊಂದು ಒಳ್ಳೆಯ ಅವಕಾಶ. ಸದೃಢ-ಸುಭದ್ರ ‘‘ಚುನಾವಣಾ ಯಂತ್ರ’’ ಹೊಂದಿರುವ ಒಕ್ಕೂಟ ಸರಕಾರ, ಈ ಮಸೂದೆ ಮಂಡಿಸಿ, ಸ್ಥಾಯಿ ಸಮಿತಿಗೆ ಒಪ್ಪಿಸುವ ಮೂಲಕ ಒಂದೇ ಕಲ್ಲಿನಲ್ಲಿ ಒಂದಕ್ಕಿಂತ ಹೆಚ್ಚು ಹಣ್ಣುಗಳನ್ನು ಉದುರಿಸುವ ನಿರೀಕ್ಷೆಯಲ್ಲಿದೆ. ಸರಕಾರಕ್ಕೆ ಒಂದೆಡೆ ವಿದ್ಯುತ್ ಖಾಸಗೀಕರಣದ ಚರ್ಚೆ- ದರ ವಿರುದ್ಧ ಹೋರಾಟಗಳನ್ನು ಬಡಿದೆಬ್ಬಿಸುವ ಮೂಲಕ ವಿರೋಧ ಪಕ್ಷಗಳ ಚುನಾವಣೆ ತಯಾರಿಯ ದಿಕ್ಕು ತಪ್ಪಿಸಿದ ಲಾಭದ ಜೊತೆಗೆ ಇನ್ನೊಂದೆಡೆ ನಷ್ಟದಲ್ಲಿರುವ ಡಿಸ್ಕಾಂಗಳನ್ನು ಕೊಬ್ಬಿಸುವುದಕ್ಕೂ ಸಮಯಾವಕಾಶ ಸಿಗಲಿದೆ. ಜೊತೆಗೇ ಖಾಸಗಿ ಉದ್ಯಮಪತಿಗಳಿಗೂ ಸ್ಪಷ್ಟ ಸೂಚನೆ ಹೊರಟಂತಾಗಿದೆ.

  •  ಕಾಯ್ದೆ ಬಂದಾಗ ಏನಾಗಲಿದೆ?

ಒಕ್ಕೂಟ ಸರಕಾರ ಮತ್ತದರ ಸಮರ್ಥಕರು ಈ ಕಾಯ್ದೆ ಬಂದಾಗ ವಿದ್ಯುತ್ ಕಳ್ಳತನ ತಪ್ಪಲಿದೆ, ವಿದ್ಯುತ್ ಹೆಸರಿನಲ್ಲಿ ಅನಗತ್ಯ ಸಬ್ಸಿಡಿ ಪೋಲು ತಪ್ಪಲಿದೆ ಎಂಬೆಲ್ಲ ಸಮರ್ಥನೆಗಳನ್ನು ನೀಡುತ್ತಿದ್ದಾರೆ. ಸ್ವತಃ ಸರಕಾರದ ಮುಖ್ಯಸ್ಥರೇ ತಮ್ಮ ಸರಕಾರಕ್ಕೆ ‘‘ವ್ಯವಹಾರ ನಡೆಸುವ ಯಾವುದೇ ಉದ್ದೇಶ ಇಲ್ಲ’’ (Govt has no business to be in business) ಎಂದು ಘಂಟಾಘೋಷವಾಗಿ ಹೇಳಿಕೊಂಡಿದ್ದಾರೆ.

ರೈತರನ್ನು ಅಥವಾ ವಾಸ್ತವ್ಯದ ಮನೆಗಳನ್ನು ತೋರಿಸಿ, ವಿದ್ಯುತ್ ಕಳ್ಳತನಗಳ ಮಾತನಾಡುವವರು ಒಂದು ವಿಚಾರ ಮರೆಯುತ್ತಾರೆ. ಅದೇನೆಂದರೆ ದೇಶದಲ್ಲಿ ಉತ್ಪಾದನೆ ಆಗುವ ಒಟ್ಟು ವಿದ್ಯುತ್‌ನಲ್ಲಿ ಕೃಷಿ ಬಳಕೆಯ ಪಾಲು ಕೇವಲ ಶೇ. 18 ಮತ್ತು ಮನೆಬಳಕೆಯ ಪಾಲು ಕೇವಲ ಶೇ. 20. ಉಳಿದದ್ದೆಲ್ಲ ವಾಣಿಜ್ಯ, ಕೈಗಾರಿಕೆಗಳ ಬಳಕೆಯದು. ಈ ಹಿನ್ನೆಲೆಯಲ್ಲಿ ಒಟ್ಟು ಬೆಳವಣಿಗೆಗಳನ್ನು ಗಮನಿಸಿದಾಗ ಮಾತ್ರ ಈ ಕಾಯ್ದೆ ಬಂದಾಗ ಯಾರಿಗೆ ಲಾಭ-ಯಾರಿಗೆ ನಷ್ಟ ಎಂಬುದು ಅರ್ಥವಾದೀತು. ಅದಕ್ಕೆ ಪೂರಕವಾಗುವ ಕೆಲವು ಮಾಹಿತಿಗಳನ್ನು ಇಲ್ಲಿ ಕೆಳಗೆ ಕೊಡಲಾಗಿದೆ. ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ‘‘ವಿದ್ಯುತ್ ಚಾಲಿತ ವಾಹನ’’ಯುಗದಿಂದ ಪ್ರತ್ಯೇಕಿಸಿ ನೋಡಬಾರದು. 2030ರ ಹೊತ್ತಿಗೆ ದೇಶದಲ್ಲಿ ನೂರು ಶೇಕಡಾ ವಿದ್ಯುತ್ ವಾಹನಗಳು ಇರಬೇಕು ಮತ್ತು 2025ರ ಬಳಿಕ ಕೇವಲ ವಿದ್ಯುತ್ ಚಾಲಿತ ವಾಹನಗಳನ್ನು ಮಾತ್ರ ಮಾರಬೇಕೆನ್ನುವ ನೀತಿ ಒಕ್ಕೂಟ ಸರಕಾರದ್ದು. ಅದಕ್ಕೆ ಅಗತ್ಯವಿರುವ ಇಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟುಗಳು, ಬ್ಯಾಟರಿ ಉತ್ಪಾದನೆ, ಬ್ಯಾಟರಿ ಸ್ವಾಪಿಂಗ್ ನೀತಿ ಇತ್ಯಾದಿಗಳ ಬಗ್ಗೆ ಚರ್ಚೆ ಜೋರಿನಿಂದ ನಡೆದಿದೆ. ಇವತ್ತು ದೇಶದ ಅತಿಹೆಚ್ಚಿನ ಆದಾಯ ತರುತ್ತಿರುವ ತೈಲ ಕಂಪೆನಿಗಳ ಜಾಗದಲ್ಲಿ 2030ರ ಹೊತ್ತಿಗೆ ವಿದ್ಯುತ್ ಕಂಪೆನಿಗಳಿರುತ್ತವೆ. ಹಾಗಾಗಿ ದೇಶದ ದೊಡ್ಡ ‘‘ಆನಿ’’ ಕಂಪೆನಿಗಳು ಭರದಿಂದ ಅದಕ್ಕೆ ತಯಾರಿಯಲ್ಲಿ ನಿರತರಾಗಿವೆ. ನಾಳೆ ವಿದ್ಯುತ್ ರಂಗ ಖಾಸಗೀಕರಣಗೊಂಡಾಗ, ಅದರ ಅತಿದೊಡ್ಡ ಫಲಾನುಭವಿಗಳು ಇವರೇ.

ಕೃಷಿ ಕಾಯ್ದೆಗಳಿಗೆ ತೋರಿಕೆಗೆ ಈಗ ಹಿನ್ನೆಡೆಯಾಗಿದ್ದರೂ ಸರಕಾರದ ಕೃಷಿ ಸಂಬಂಧಿ ನೀತಿಗಳಲ್ಲಿ ಯಾವುದೇ ಮಹತ್ವದ ಬದಲಾವಣೆ ಆಗಿಲ್ಲ. ಹಾಗಾಗಿ ನಾಳೆ ಕೃಷಿ ರಂಗ ಕಾರ್ಪೊರೇಟೀಕರಣಗೊಂಡಾಗ, ಸರಕಾರದ ಎಕರೆವಾರು ಸಬ್ಸಿಡಿ (ವಿದ್ಯುತ್ ಸಬ್ಸಿಡಿ ಸೇರಿದಂತೆ) ನೀತಿಗೆ ದೊಡ್ಡ ಫಲಾನುಭವಿಗಳು ಕೂಡ ಕಾರ್ಪೊರೇಟ್ ‘‘ಆನಿಗಳೇ’’.

ರೈತರು ಈಗ ಪಡೆಯುತ್ತಿರುವ 10ಎಚ್‌ಪಿ ತನಕದ ಕೃಷಿ ವಿದ್ಯುತ್ ಪಂಪ್‌ಗಳ ಉಚಿತ ವಿದ್ಯುತ್ ಕಡ್ಡಾಯ ಸ್ಮಾರ್ಟ್ ಮೀಟರ್ ಬರುತ್ತಲೇ ಇಲ್ಲದಾಗಲಿದೆ. 2025 ಮಾರ್ಚ್ ಒಳಗೆ ಎಲ್ಲ ವಿದ್ಯುತ್ ಸಂಪರ್ಕಗಳಿಗೂ ಕಡ್ಡಾಯವಾಗಿ ಸ್ಮಾರ್ಟ್ ಮೀಟರ್ ಅಳವಡಿಸಬೇಕೆಂದು ಸರಕಾರದ ನೀತಿ ಈಗಾಗಲೇ ಸೂಚಿಸಿದೆ. ಸ್ಮಾರ್ಟ್ ಮೀಟರ್ ಬಂದ ಬೆನ್ನಿಗೇ ವಿದ್ಯುತ್ ಪ್ರಿ-ಪೇಯ್ಡಿ (ಮೊದಲೇ ಪಾವತಿ ಮಾಡಿ ಆ ಬಳಿಕ ಬಳಕೆ) ಆಗಲಿದೆ. ರೈತರಿಗೆ ಸೋಲಾರ್ ವಿದ್ಯುತ್ ಬಳಸಿ, ಹೆಚ್ಚಾದದ್ದನ್ನು ಖಾಸಗಿಗೆ ಮಾರುವ ಮೂಲಕ ‘‘ಕನ್ಸ್ಯೂಮರ್ ಆಗಿದ್ದವರು ಪ್ರೊಸ್ಯೂಮರ್’’ ಆಗಿ ಎಂದು ಸರಕಾರ ರೈತರ ಮುಂಗೈಗೆ ಬೆಲ್ಲ ಹೆಚ್ಚಿದೆ.

ವಿದ್ಯುಚ್ಛಕ್ತಿ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ (ಅಂದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜಂಟಿ ಪಟ್ಟಿ). ಈಗ ಈ ಮಸೂದೆಯ ಮೂಲಕ ಒಕ್ಕೂಟ ಸರಕಾರ ಏಕಪಕ್ಷೀಯ ತೀರ್ಮಾನ ತಳೆದಂತಾಗಿದೆ ಮತ್ತು ಇದು ರಾಜ್ಯ ಸರಕಾರಗಳ ಅಧಿಕಾರದ ವ್ಯಾಪ್ತಿ-ಹಕ್ಕುಗಳನ್ನು, ಆದಾಯ ಮೂಲವನ್ನು ಮೊಟಕುಗೊಳಿಸಲಿದೆ. ಇನ್ನು ರಾಜ್ಯ ಸರಕಾರ ಇಲ್ಲಿ ತನ್ನ ಆದಾಯದ ಪಾಲಿಗಾಗಿ ಜಿಎಸ್‌ಟಿ ಮೊರೆಹೋಗುವುದು ಅನಿವಾರ್ಯವಾದಾಗ, ಆ ಹೊರೆ ಕೂಡ ದೇಶದ ಬಡಪಾಯಿಗಳದಾಗಲಿದೆ. ಆಧುನಿಕ ಬದುಕಿನಲ್ಲಿ, ಜನರ ಮೂಲಭೂತ ‘ಬದುಕುವ ಹಕ್ಕಿನ’ ಭಾಗವೇ ಆಗಿರುವ ‘ವಿದ್ಯುತ್’ ಸಂಪೂರ್ಣವಾಗಿ ಖಾಸಗಿಯವರ ಕೈಗೆ ಸೇರುವುದು ಎಂದರೆ ಅದರ ಅರ್ಥ ಏನು?

 ವಿದ್ಯುತ್ ವಿತರಣೆ ಖಾಸಗಿ ಕೈಗೆ ಹೋದಾಗ, ವಿದ್ಯುತ್ ದರದ ಮೇಲೆ ಸರಕಾರಕ್ಕೆ ನಿಯಂತ್ರಣ ಇರುವುದಿಲ್ಲ. ದಿನದ ಹೊತ್ತನ್ನು ಆಧರಿಸಿ ಬಿಲ್ಲಿಂಗ್, ಮೊದಲು ದುಡ್ಡು ತೆತ್ತು ಆ ಬಳಿಕ ವಿದ್ಯುತ್ ಬಳಕೆಯಂತಹ (ಪ್ರಿ-ಪೇಯ್ಡಿ) ಕಾಸು ಗೋರುವ ತಂತ್ರಗಳು ಖಾಸಗಿಯವರ ಬೊಕ್ಕಸ ತುಂಬಲಿವೆ. ಈಗಾಗಲೇ ದೇಶದ ಕೆಲವು ಮಹಾನಗರಗಳಲ್ಲಿ ಖಾಸಗಿಯವರು ವಿದ್ಯುತ್ ವಿತರಣೆ ಆರಂಭಿಸಿದ್ದಾರೆ. ಅಲ್ಲಿ ವಿದ್ಯುತ್ ಬಿಲ್/ಸೇವೆ ಬಗ್ಗೆ ಕೇಳಿ ನೋಡಿ.

ಇವೆಲ್ಲದಕ್ಕಿಂತ ದೊಡ್ಡ ಸಂಗತಿ ಎಂದರೆ, 4,03,760 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುವ ದೇಶದಲ್ಲಿ, ಅರ್ಧಕ್ಕರ್ಧ (1,99,785MW) ಖಾಸಗಿಯವರ ಕೈಯಲ್ಲಿದೆ. ಅದರಲ್ಲಿ ಬಹುಪಾಲು ಅದಾನಿ ಮತ್ತು ಅಂಬಾನಿ ಬಳಗಗಳ ಕೈಯಲ್ಲಿವೆ. ಈಗ ಮುಂದಿನ ಹತ್ತು ವರ್ಷಗಳಲ್ಲಿ ಅದಾನಿ, ಅಂಬಾನಿ, ಟಾಟಾ ಮತ್ತು ಜಿಂದಾಲ್ ಬಳಗಗಳು ಒಟ್ಟಾಗಿ ವಿದ್ಯುತ್ ರಂಗಕ್ಕೆ ನಾಲ್ಕು ಲಕ್ಷ ಕೋಟಿ ರೂ.ಗಳ ಹೂಡಿಕೆ ಮಾಡಲು ಸನ್ನದ್ಧವಾಗಿವೆ. ಹಾಗಾಗಿ ದೇಶದಲ್ಲಿ ದೈನಂದಿನ ಬದುಕಿಗೆ ಸರಕಾರಗಳೇ ಅಪ್ರಸ್ತುತ ಅನ್ನಿಸುವ ಸ್ಥಿತಿ ಎದುರಾದರೂ ಅಚ್ಚರಿ ಇಲ್ಲ.

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News