ಆಝಾದಿ ಸ್ಯಾಟ್: ಬಾಲಕಿಯರೇ ನಿರ್ಮಿಸಿದ ಉಪಗ್ರಹ

Update: 2022-08-14 04:24 GMT

ನಮ್ಮ ಸೌರವ್ಯೆಹದಲ್ಲಿ ಡಜನ್‌ಗಟ್ಟಲೆ ನೈಸರ್ಗಿಕ ಉಪಗ್ರಹಗಳಿವೆ. ಅಂತೆಯೇ ಭೂಮಿಯ ಸುತ್ತ ಕಕ್ಷೆಯಲ್ಲಿ ಸಾವಿರಾರು ಸಂಖ್ಯೆಯ ಕೃತಕ ಉಪಗ್ರಹಗಳಿವೆ. 20ನೇ ಶತಮಾನದ ಮಧ್ಯಭಾಗದವರೆಗೂ ಕೇವಲ ಉಪಗ್ರಹ ಎಂಬ ಪದ ಮಾತ್ರ ಬಳಕೆಯಲ್ಲಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯದಿಂದ ಭೂಮಿಯಿಂದ ಕೃತಕ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳಿಸುವ ಪ್ರಯತ್ನಗಳು ನಡೆದ ಮೇಲೆ ಉಪಗ್ರಹ ಪದಕ್ಕೆ ಸ್ವಾಭಾವಿಕ ಮತ್ತು ಕೃತಕ ಎಂಬ ಎರಡು ಪೂರ್ವಪದಗಳು ಸೇರಿಕೊಂಡವು.

ಮೊದಲ ಕೃತಕ ಉಪಗ್ರಹ ಸ್ಪುಟ್ನಿಕ್ ಬಾಹ್ಯಾಕಾಶಕ್ಕೆ ಹಾರಿದಾಗ ಅನೇಕ ದೇಶಗಳ ಕನಸುಗಳು ಚಿಗುರೊಡೆದವು. ತಾವೂ ಕೃತಕ ಉಪಗ್ರಹ ತಯಾರಿಸಿ ಹಾರಿಸಬೇಕೆಂಬ ಚಿಂತನೆಯಲ್ಲಿ ಅನೇಕ ದೇಶಗಳು ಕಾರ್ಯಯೋಜನೆ ಹಾಕಿಕೊಂಡವು. ಅಂದಿನಿಂದ ಬಹುತೇಕ ದೇಶಗಳು ಕೃತಕ ಉಪಗ್ರಹ ಹಾರಿಸುವಲ್ಲಿ ಸ್ಪರ್ಧೆಗೆ ಇಳಿದವು. ಈಗ ಬಾಹ್ಯಾಕಾಶದಲ್ಲಿ ಸಾವಿರಾರು ಸಂಖ್ಯೆಯ ಉಪಗ್ರಹಗಳು ಸುತ್ತಾಡುತ್ತಲೇ ಇವೆ.

ಕೃತಕ ಉಪಗ್ರಹಗಳು ಭೂ ಕಕ್ಷೆಗೆ ಸೇರಿಸಲಾದ ಮಾನವ ನಿರ್ಮಿತ ವಸ್ತುಗಳು. ನಮಗೆ ಅರಿವಿಲ್ಲದೆಯೇ ನಮ್ಮ ಜೀವನದ ಮೇಲೆ ಅವು ಪರಿಣಾಮ ಬೀರುತ್ತವೆ. ಅವು ನಮ್ಮನ್ನು ಸುರಕ್ಷಿತವಾಗಿರಿಸಿವೆ. ಅಂತರಿಕ್ಷದ ಬಗೆಗಿನ ನಮ್ಮ ಅರಿವನ್ನು ವಿಸ್ತರಿಸಿವೆ. ಅನ್ಯಗ್ರಹಗಳ ಮಾಹಿತಿಯನ್ನು ಸಚಿತ್ರ ಸಮೇತ ತಿಳಿಸುತ್ತಿವೆ. ಬ್ರಹ್ಮಾಂಡದಲ್ಲಿನ ವಿವಿಧ ನಕ್ಷತ್ರಪುಂಜಗಳ ಮಾಹಿತಿಯನ್ನು ವಿವಿಧ ಕೃತಕ ಉಪಗ್ರಹಗಳು ನೀಡುತ್ತಲೇ ಇವೆ. ಆ ಮೂಲಕ ನಮ್ಮ ಜ್ಞಾನವನ್ನು ವಿಸ್ತ್ತರಿಸಿವೆ ಮತ್ತು ಹೊಸ ಶೋಧದತ್ತ ಮುಂದುವರಿಯಲು ಪ್ರೇರೇಪಿಸಿವೆ. ನಮ್ಮ ಜೀವನವನ್ನು ಸರಳಗೊಳಿಸಿವೆ ಹಾಗೂ ಆಧುನಿಕ ಅನುಕೂಲಗಳನ್ನು ಒದಗಿಸುತ್ತವೆ. ಜೊತೆಗೆ ಮನರಂಜನೆಯನ್ನು ಪ್ರಸಾರ ಮಾಡುತ್ತವೆ. ಉಪಗ್ರಹಗಳು ದೂರದರ್ಶನ ಸಂಕೇತಗಳನ್ನು ನೇರವಾಗಿ ಮನೆಗಳಿಗೆ ಕಳುಹಿಸುತ್ತವೆ.

 ದೂರವಾಣಿಯ ಮೂಲಕ ಇಡೀ ಜಗತ್ತನ್ನು ನಿಸ್ತಂತು ಸೇವೆಯಲ್ಲಿ ಬಂಧಿಸಿವೆ. ವ್ಯಾಪಾರ ಮತ್ತು ಹಣಕಾಸು ವಹಿವಾಟನ್ನು ಸುಗಮಗೊಳಿಸಿವೆ. ನಿಖರವಾದ ಸ್ಥಳ ತಲುಪಲು ದಾರಿ ತೋರಿಸುತ್ತವೆ. ಪ್ರತಿಕ್ಷಣದ ಹವಾಮಾನ ಮಾಹಿತಿಯನ್ನು ನೀಡುತ್ತವೆ. ಆ ಮೂಲಕ ಆಗಬಹುದಾದ ಅಪಾಯಗಳ ಮುನ್ಸೂಚನೆ ನೀಡುತ್ತವೆ. ಹೀಗೆ ಪ್ರತಿದಿನವೂ ಪ್ರತೀ ಕ್ಷಣವೂ ಕೃತಕ ಉಪಗ್ರಹಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿವೆ. ನಾವು ವಿದ್ಯಾರ್ಥಿಗಳಾಗಿದ್ದಾಗ ಕೃತಕ ಉಪಗ್ರಹಗಳ ಕುರಿತ ಮಾಹಿತಿಯನ್ನು ಕೇವಲ ಪಠ್ಯಪುಸ್ತಕಗಳಲ್ಲಿ ಮಾತ್ರ ತಿಳಿದುಕೊಳ್ಳುತ್ತಿದ್ದೆವು. ಈಗಿನಂತೆ ವಿದ್ಯುನ್ಮಾನ ಸೌಲಭ್ಯಗಳು ಲಭ್ಯವಿರಲಿಲ್ಲ.

 ಪಠ್ಯಪುಸ್ತಕಗಳಲ್ಲಿದ್ದ ರೇಖಾಚಿತ್ರಗಳ ಮೂಲಕವೇ ಅವುಗಳ ಬಾಹ್ಯ ಸ್ವರೂಪವನ್ನು ನೋಡಿ ಆಶ್ಚರ್ಯಪಡುತ್ತಿದ್ದೆವು. ಆದರೆ ಈಗ ದೃಶ್ಯೀಕರಣದ ಮೂಲಕ ಕೃತಕ ಉಪಗ್ರಹಗಳ ಮಾಹಿತಿಯನ್ನು ತಿಳಿದುಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಆಗ ಕೇವಲ ಖಗೋಳ ವಿಜ್ಞಾನಿಗಳು ಮಾತ್ರ ಕೃತಕ ಉಪಗ್ರಹ ತಯಾರಿಸುವ ಕೆಲಸದಲ್ಲಿ ಭಾಗಿಯಾಗುತ್ತಿದ್ದರು. ಈಗ ಶಾಲಾ ಕಾಲೇಜು ವಿದ್ಯಾರ್ಥಿಗಳೂ ಕೃತಕ ಉಪಗ್ರಹ ತಯಾರಿಕೆಯಲ್ಲಿ ತೊಡಗಿಕೊಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಭಾರತವು ಆಗಸ್ಟ್ 15 ರಂದು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸಲು ಸಿದ್ಧವಾಗಿದೆ. ಈ ಐತಿಹಾಸಿಕ ದಿನದ ನೆನಪಿಗಾಗಿ ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾರತದಾದ್ಯಂತ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ 750 ವಿದ್ಯಾರ್ಥಿನಿಯರು ‘ಆಝಾದಿ ಸ್ಯಾಟ್’ ಉಪಗ್ರಹವನ್ನು ನಿರ್ಮಿಸಿದ್ದಾರೆ. 75 ಪೇಲೋಡ್‌ಗಳನ್ನು ಒಳಗೊಂಡಿರುವ ಆಝಾದಿ ಸ್ಯಾಟ್ ಉಪಗ್ರಹವು 2022ರ ಆಗಸ್ಟ್ 7ರಂದು ಸಣ್ಣ ಉಪಗ್ರಹ ಉಡಾವಣಾ ವಾಹನ(ಎಸ್‌ಎಸ್‌ಎಲ್‌ವಿ)ದಲ್ಲಿ ತನ್ನ ಚೊಚ್ಚಲ ಹಾರಾಟವನ್ನು ಪ್ರಾರಂಭಿಸಿತ್ತು.

ಈ ಉಪಗ್ರಹ ಮಿಷನ್ ಒಂದು ಗುರಿಯನ್ನು ಹೊಂದಿದೆ. ಸರಕಾರಿ ಶಾಲಾ ಮಕ್ಕಳಿಗೆ ಅದರಲ್ಲೂ ಆರ್ಥಿಕವಾಗಿ ದುರ್ಬಲ ವರ್ಗದ ಪ್ರತಿಭಾವಂತ ಮಕ್ಕಳಿಗೆ ಬಾಹ್ಯಾಕಾಶದ ಮೂಲಭೂತ ತಿಳುವಳಿಕೆ ಮತ್ತು ಜ್ಞಾನವನ್ನು ಪ್ರೋತ್ಸಾಹಿಸುವುದು ಮತ್ತು ಸಣ್ಣ ಪ್ರಯೋಗವನ್ನು ನಿರ್ಮಿಸಲು ಅವಕಾಶ ನೀಡುವ ಹಿನ್ನೆಲೆಯಲ್ಲಿ ಈ ಉಪಗ್ರಹ ನಿರ್ಮಿಸಲಾಗಿದೆ. ಭಾರತದಾದ್ಯಂತ ಬಾಲಕಿಯರಿಗಾಗಿ 75 ಸರಕಾರಿ ಶಾಲೆಗಳಿಂದ 750 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗಿತ್ತು. ಆಯ್ಕೆಯಾದ ವಿದ್ಯಾರ್ಥಿಗಳು ಮುಖ್ಯವಾಗಿ 8ರಿಂದ 12ನೇ ತರಗತಿಯವರಾಗಿದ್ದರು. ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (STEM)ಗಳನ್ನು ಅಧ್ಯಯನ ಮಾಡಲು ಬಾಲಕಿಯರನ್ನು ಪ್ರೇರೇಪಿಸುವ ಪರಿಣಾಮವಾಗಿ ಇಸ್ರೋ ಈ ಯೋಜನೆಗೆ ಕೈಹಾಕಿದೆ.

ಎಂಟು ಕಿಲೋಗ್ರಾಂ ಕ್ಯೂಬ್‌ಸ್ಯಾಟ್ 75 ವಿಭಿನ್ನ ಪೇಲೋಡ್‌ಗಳನ್ನು ಒಯ್ಯುತ್ತದೆ. ಪ್ರತಿಯೊಂದು ಪೇಲೋಡ್ ಸುಮಾರು 50ಗ್ರಾಂ ತೂಕವಿರುತ್ತದೆ. ವಿದ್ಯಾರ್ಥಿಗಳಿಂದಲೇ ರೂಪುಗೊಂಡ ‘ಆಝಾದಿ ಸ್ಯಾಟ್’ ಕೃತಕ ಉಪಗ್ರಹ ಇದೇ ಆಗಸ್ಟ್ 7ರಂದು ಬಾಹ್ಯಾಕಾಶಕ್ಕೆ ಜಿಗಿದಿತ್ತು. ಆದರೆ ತಾಂತ್ರಿಕ ಕಾರಣಗಳಿಗಾಗಿ ಅದು ನಿರ್ದಿಷ್ಟ ಕಕ್ಷೆ ಸೇರದೇ ವಿಫಲವಾಗಿದೆ. ಆಝಾದಿ ಸ್ಯಾಟ್ ಜೊತೆಗೆ ಇಒಎಸ್-02  ನ್ನು ಎಸ್‌ಎಸ್‌ಎಲ್‌ವಿ ಉಡಾವಣಾ ವಾಹಕದ ಮೂಲಕ ಹಾರಿಸಲಾಗಿತ್ತು. ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಎಸ್‌ಎಸ್‌ಎಲ್‌ವಿ) ಇಸ್ರೋ ಅಭಿವೃದ್ಧಿಪಡಿಸಿದ ಚಿಕ್ಕ ಉಡಾವಣಾ ವಾಹನವಾಗಿದ್ದು, 500 ಕೆ.ಜಿ. (1,100 ಪೌಂಡ್) ಕಡಿಮೆ ಭೂಮಿಯ ಕಕ್ಷೆಗೆ (500 ಕಿ.ಮೀ. ಅಥವಾ 310 ಮೈಲಿ) ಪೇಲೋಡ್ ಸಾಮರ್ಥ್ಯ ಹೊಂದಿತ್ತು.

ಇಒಎಸ್-02 ಮತ್ತು ಆಝಾದಿ ಸ್ಯಾಟ್ ಎಂಬ ಎರಡು ಉಪಗ್ರಹಗಳನ್ನು ನಿರ್ದಿಷ್ಟ ಕಕ್ಷೆಗೆ ಇರಿಸುವಲ್ಲಿ ಎಸ್‌ಎಸ್‌ಎಲ್‌ವಿ ವಿಫಲವಾಗಿದೆ. ಅವುಗಳನ್ನು ವೃತ್ತಾಕಾರದ ಕಕ್ಷೆಗೆ ಬದಲಾಗಿ ದೀರ್ಘವೃತ್ತದ ಕಕ್ಷೆಯಲ್ಲಿ ಇರಿಸಿದಾಗ ಎಸ್‌ಎಸ್‌ಎಲ್‌ವಿಯ ಮೊದಲ ಲಿಫ್ಟ್ ಆಫ್ ವಿಫಲವಾಯಿತು. ಇಸ್ರೋ ಅಭಿವೃದ್ಧಿ ಪಡಿಸಿದ ಈ ಉಪಗ್ರಹಗಳು ಸಂವೇದಕ ಸಮಸ್ಯೆಯಿಂದ ವಿಫಲವಾಗಿವೆ. ಇದೇ ಆಗಸ್ಟ್ 7ರ ರವಿವಾರ ಬೆಳಗ್ಗೆ 9:18ಕ್ಕೆ ಇಸ್ರೋದ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್‌ಎಸ್‌ಎಲ್‌ವಿ) ಶ್ರೀಹರಿಕೋಟಾದಿಂದ ಉಡಾವಣೆಗೊಂಡಿತು. ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಕಾರ್ಯಾಚರಣೆಯು ಸಣ್ಣ ಉಡಾವಣಾ ವಾಹನಗಳ ಮಾರುಕಟ್ಟೆಯಲ್ಲಿ ದೊಡ್ಡ ಹೆಸರು ಗಳಿಸುವ ಗುರಿಯನ್ನು ಹೊಂದಿತ್ತು. ಏಕೆಂದರೆ ಎಸ್‌ಎಸ್‌ಎಲ್‌ವಿಯು ಉಪಗ್ರಹಗಳನ್ನು ಕಡಿಮೆ ಭೂಮಿಯ ಕಕ್ಷೆಯಲ್ಲಿ ಇರಿಸುತ್ತದೆ ಎಂಬುದು ನಿರ್ಮಾಪಕರ ವಾದವಾಗಿತ್ತು. ರಾಕೆಟ್‌ನಲ್ಲಿ ಎರಡು ಉಪಗ್ರಹಗಳಿದ್ದವು. ಒಂದು ಪ್ರಾಥಮಿಕ ಇಒಎಸ್-02 ಭೂ ವೀಕ್ಷಣೆ ಉಪಗ್ರಹ ಮತ್ತು ದ್ವಿತೀಯ ಆಝಾದಿ ಸ್ಯಾಟ್ ವಿದ್ಯಾರ್ಥಿ ಉಪಗ್ರಹ. ಎಸ್‌ಎಸ್‌ಎಲ್‌ವಿ ವಾಹಕದ ವೇಗ ಟ್ರಿಮ್ಮಿಂಗ್ ಮಾಡ್ಯೂಲ್ (ವಿಟಿಎಂ) ಎಂದು ಕರೆಯಲ್ಪಡುವ ಟರ್ಮಿನಲ್ ಹಂತದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ವಿಟಿಎಂ ಸುಟ್ಟ ನಂತರ ಎರಡೂ ಉಪಗ್ರಹಗಳು ವಾಹನದಿಂದ ಬೇರ್ಪಟ್ಟವು.

ಇದರರ್ಥ ಅವುಗಳು ತಮ್ಮ ಉದ್ದೇಶಿತ ಕಕ್ಷೆಯ ಪಥಗಳನ್ನು ಸೇರದೆ ಬದಲಿ ದೀರ್ಘವೃತ್ತದ ಕಕ್ಷೆಯನ್ನು ಪ್ರವೇಶಿಸಿವೆ. ಉಡಾವಣಾ ಪ್ರೊಫೈಲ್ ಪ್ರಕಾರ, ವಿಟಿಎಂ ಉಡಾವಣೆ ನಂತರ 653 ಸೆಕೆಂಡುಗಳಲ್ಲಿ 20 ಸೆಕೆಂಡುಗಳ ಕಾಲ ಸುಟ್ಟುಹೋಗಬೇಕಿತ್ತು. ಆದಾಗ್ಯೂ ಇದು ಕೇವಲ 0.1 ಸೆಕೆಂಡುಗಳ ಕಾಲ ಉರಿದು ಅಗತ್ಯವಿರುವ ಎತ್ತರದ ವರ್ಧಕದ ರಾಕೆಟ್ ಅನ್ನು ನಿರಾಕರಿಸಿದೆ.

ಇಸ್ರೋ ತನ್ನ ಮಿಷನ್ ಉಡಾವಣೆಯಲ್ಲಿ ಹಿನ್ನಡೆಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಪೋಲಾರ್ ಸ್ಯಾಟಲೈಟ್ ವೆಹಿಕಲ್ ಲಾಂಚ್ (ಪಿಎಸ್‌ಎಲ್‌ವಿ), ಯು ಇಸ್ರೋದ ವಿಶ್ವಾಸಾರ್ಹ ಉಡಾವಣಾ ವಾಹಕ ಎಂದು ಪರಿಗಣಿಸಲಾಗಿತ್ತು. ಆದರೆ 1993ರ ಸೆಪ್ಟಂಬರ್ 20ರಂದು ಅದರ ಮೊದಲ ಹಾರಾಟದಲ್ಲಿ ಯಶಸ್ವಿಯಾಗಿರಲಿಲ್ಲ. ಇಸ್ರೋ 1979ರ ಆಗಸ್ಟ್ 10ರಂದು ಮೊದಲ ಬಾರಿಗೆ ಸೋಲನ್ನು ಅನುಭವಿಸಿತ್ತು.

 ರೋಹಿಣಿ ತಂತ್ರಜ್ಞಾನದ ಪೇಲೋಡ್ ಅನ್ನು ಹೊತ್ತ ದೇಶದ ಮೊದಲ ಪ್ರಾಯೋಗಿಕ ಹಾರಾಟದ ಎಸ್‌ಎಲ್‌ವಿ-3 ಉಪಗ್ರಹವನ್ನು ಅದರ ಉದ್ದೇಶಿತ ಕಕ್ಷೆಯಲ್ಲಿ ಇರಿಸಲು ಸಾಧ್ಯವಾಗಿರಲಿಲ್ಲ. ಅದರಂತೆ 7 ಸೆಪ್ಟ್ಟಂಬರ್ 2019ರಂದು ಚಂದ್ರಯಾನ-2 ಆರ್ಬಿಟರ್ ನಿಧಾನವಾಗಿ ಇಳಿಯುವ ಬದಲು ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸಿ ರೋವರ್‌ನೊಂದಿಗೆ ನಾಶವಾದಾಗ ಇಸ್ರೋ ತನ್ನ ದೊಡ್ಡ ಹಿನ್ನಡೆಗೆ ಸಾಕ್ಷಿಯಾಗಿತ್ತು.

ನಂತರ ಆಗಸ್ಟ್ 2021ರಲ್ಲಿ, ಜಿಎಸ್‌ಎಲ್‌ವಿ ಎಂಕೆ-2 ರಾಕೆಟ್‌ನಲ್ಲಿರುವ ಭೂ ವೀಕ್ಷಣಾ ಉಪಗ್ರಹವಾದ -1ರ ಉಡಾವಣೆಯು ಭಾರತದ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಯಾದ ಕೇವಲ 350 ಸೆಕೆಂಡುಗಳ ನಂತರ ವಿಫಲವಾಗಿತ್ತು. ಕ್ರಯೋಜೆನಿಕ್ ಹಂತದಲ್ಲಿ ತಾಂತ್ರಿಕ ಅಸಂಗತತೆಯಿಂದ ಇದು ವಿಫಲವಾಗಿದೆ ಎಂದು ಉಡಾವಣಾ ದಿನದಂದು ಇಸ್ರೋದ ಆರಂಭಿಕ ವಿಶ್ಲೇಷಣೆ ತಿಳಿಸಿತ್ತು. ಎಸ್‌ಎಸ್‌ಎಲ್‌ವಿ ನಿರ್ಮಾಣದ ಕನಸು ಇಂದು ನಿನ್ನೆಯದ್ದಲ್ಲ. 2016ರಲ್ಲಿ, ರಾಜಾರಾಂ ನಾಗಪ್ಪಅವರ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ವರದಿಯು ಕಾರ್ಯತಂತ್ರದ ಪೇಲೋಡ್‌ಗಳನ್ನು ಪ್ರಾರಂಭಿಸಲು ‘ಸಣ್ಣ ಉಪಗ್ರಹ ಉಡಾವಣಾ ವಾಹನ-1’ ಅಭಿವೃದ್ಧಿ ಮಾರ್ಗವನ್ನು ಪ್ರಸ್ತಾಪಿಸಿತ್ತು.

2016 ರಲ್ಲಿ ನಡೆದ ರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ವಿಚಾರ ಸಂಕಿರಣದಲ್ಲಿ ‘ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್’ನ ಅಂದಿನ ನಿರ್ದೇಶಕ ಎಸ್. ಸೋಮನಾಥ್ ಅವರು ಗೆ 500 ಕೆಜಿ ಪೇಲೋಡ್ ಸಾಮರ್ಥ್ಯದೊಂದಿಗೆ ಕಡಿಮೆ ವೆಚ್ಚದ ಹಾಗೂ ಪರಿಣಾಮಕಾರಿ ಉಡಾವಣಾ ವಾಹನ ಸಂರಚನೆಯನ್ನು ಗುರುತಿಸುವ ಅಗತ್ಯವನ್ನು ಒಪ್ಪಿಕೊಂಡಿದ್ದರು. ನವೆಂಬರ್ 2017ರ ಹೊತ್ತಿಗೆ ಉಡಾವಣಾ ವಾಹಕದ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿದ್ದವು.

 ಡಿಸೆಂಬರ್ 2018ರ ಹೊತ್ತಿಗೆ, ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು (ವಿಎಸ್‌ಎಸ್‌ಸಿ) ವಾಹನದ ವಿನ್ಯಾಸವನ್ನು ಪೂರ್ಣಗೊಳಿಸಿತ್ತು. ಡಿಸೆಂಬರ್ 2020ರಲ್ಲಿ, ಎಸ್‌ಎಸ್‌ಎಲ್‌ವಿ ಮೊದಲ ಹಂತದ (ಎಸ್‌ಎಸ್1) ಸ್ಥಿರ ಪರೀಕ್ಷೆ (ಎಸ್‌ಟಿ01) ಗಾಗಿ ಎಲ್ಲಾ ಬೂಸ್ಟರ್ ವಿಭಾಗಗಳನ್ನು ಸ್ವೀಕರಿಸಲಾಗಿತ್ತು ಮತ್ತು ಎರಡನೇ ವಾಹನ ಅಸೆಂಬ್ಲಿ ಕೊಠಡಿಯಲ್ಲಿ (ಎಸ್‌ವಿಎಬಿ) ಜೋಡಣೆ ಮಾಡಲಾಗಿತ್ತು. 18 ಮಾರ್ಚ್ 2021ರಂದು ನಡೆಸಿದ ಎಸ್‌ಎಸ್1 ಮೊದಲ ಹಂತದ ಬೂಸ್ಟರ್‌ನ ಮೊದಲ ಸ್ಥಿರ ಅಗ್ನಿ ಪರೀಕ್ಷೆಯು (ಎಸ್‌ಟಿ01) ವಿಫಲವಾಗಿತ್ತು. ಹಾರಾಟಕ್ಕೆ ಅರ್ಹತೆ ಪಡೆಯಲು, ಎಸ್‌ಎಸ್‌ಎಲ್‌ವಿಯ ಮೊದಲ ಹಂತದ ಎಸ್‌ಎಸ್1 ಸತತ ಎರಡು ಸ್ಥಿರ ಅಗ್ನಿ ಪರೀಕ್ಷೆಗಳನ್ನು ನಿರ್ವಹಿಸಿತ್ತು.

 ಎಸ್‌ಎಸ್‌ಎಲ್‌ವಿ ಪೇಲೋಡ್ ಫೇರಿಂಗ್ (ಎಸ್‌ಪಿಎಲ್‌ಎಫ್) ಕ್ರಿಯಾತ್ಮಕ ಅರ್ಹತಾ ಪರೀಕ್ಷೆಯು ಆಗಸ್ಟ್ 2021ರಲ್ಲಿ ಪೂರ್ಣಗೊಂಡಿತ್ತು. ಎಸ್‌ಎಸ್‌ಎಲ್‌ವಿ ಮೊದಲ ಹಂತದ ಎಸ್‌ಎಸ್1ನ ಎರಡನೇ ಸ್ಥಿರ ಅಗ್ನಿ ಪರೀಕ್ಷೆಯನ್ನು 14 ಮಾರ್ಚ್ 2022ರಂದು ನಡೆಸಲಾಗಿತ್ತು ಮತ್ತು ಅಗತ್ಯ ಪರೀಕ್ಷಾ ಉದ್ದೇಶಗಳನ್ನು ಪೂರೈಸಲಾಗಿತ್ತು. ಎಸ್‌ಎಸ್‌ಎಲ್‌ವಿಯ ಮೊದಲ ಅಭಿವೃದ್ಧಿಯ ಹಾರಾಟವು 7 ಆಗಸ್ಟ್ 2022ರಂದು ಸಂಭವಿಸಿತು.

 ಫ್ಲೈಟ್ ಮಿಷನ್‌ನ್ನು ಎಸ್‌ಎಸ್‌ಎಲ್‌ವಿ-ಡಿ1 ಎಂದು ಹೆಸರಿಸಲಾಗಿತ್ತು. ಆದರೆ ಎಸ್‌ಎಸ್‌ಎಲ್‌ವಿ-ಡಿ1 ಫ್ಲೈಟ್ ಮಿಷನ್ ತನ್ನ ಉದ್ದೇಶಗಳನ್ನು ಸಾಧಿಸುವಲ್ಲಿ ವಿಫಲವಾಗಿದೆ. ರಾಕೆಟ್ ನಾಲ್ಕನೇ ವೇಗ ಟ್ರಿಮ್ಮಿಂಗ್ ಮಾಡ್ಯೂಲ್ (ವಿಟಿಎಂ) ನೊಂದಿಗೆ ಮೂರು ಹಂತದ ಸಂರಚನೆಯನ್ನು ಹೊಂದಿತ್ತು. ಅದರ ಡಿ1 ಸಂರಚನೆಯಲ್ಲಿ, ರಾಕೆಟ್ 34m ಎತ್ತರವಾಗಿದ್ದು 2m ವ್ಯಾಸವನ್ನು ಹೊಂದಿತ್ತು ಮತ್ತು 120t ನಷ್ಟು ಎತ್ತುವ ದ್ರವ್ಯರಾಶಿಯನ್ನು ಹೊಂದಿತ್ತು.

ಭಾರತೀಯ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಈ ರಾಕೆಟ್ 135 ಕೆಜಿ ತೂಕದ ಭೂ ವೀಕ್ಷಣಾ ಉಪಗ್ರಹವಾದ ಇಒಎಸ್-02 ಮತ್ತು 8ಕೆಜಿ ತೂಕದ ಆಝಾದಿ ಸ್ಯಾಟ್ ಕ್ಯೂಬ್‌ಸ್ಯಾಟ್ ಪೇಲೋಡ್ ಅನ್ನು ಹೊತ್ತೊಯ್ದಿತ್ತು. ಎಸ್‌ಎಸ್‌ಎಲ್‌ವಿ-ಡಿ1 ಎರಡು ಉಪಗ್ರಹ ಪೇಲೋಡ್‌ಗಳನ್ನು 37.20 ಓರೆಯೊಂದಿಗೆ 356.2 ಕಿ.ಮೀ. ಎತ್ತರದ ವೃತ್ತಾಕಾರದ ಕಕ್ಷೆಯಲ್ಲಿ ಇರಿಸಬೇಕಿತ್ತು. ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ ಈ ಎರಡೂ ಕೃತಕ ಉಪಗ್ರಹಗಳಿಂದ ಸಾಕಷ್ಟು ಮೂಲಭೂತ ಸೌಲಭ್ಯಗಳು ದೊರೆಯುತ್ತಿದ್ದವು. ಆದರೆ ವಿಫಲತೆಯು ನಿರೀಕ್ಷೆಗಳನ್ನು ಹುಸಿಗೊಳಿಸಿದೆ.

ಇನ್ನಷ್ಟು ಅಗತ್ಯ ಪೂರ್ವಯೋಜಿತ ಉದ್ದೇಶ ಹಾಗೂ ಕಾರ್ಯತಂತ್ರಗಳಿಂದ ಮತ್ತೊಂದು ಹೊಸ ರೂಪದ ಉಪಗ್ರಹ ತಯಾರಿಸುವ ಮೂಲಕ ಇಸ್ರೋ ಮತ್ತೊಂದು ಹೆಜ್ಜೆ ಮುಂದಿರಿಸಲಿದೆ. ಅದನ್ನು ನಾವೆಲ್ಲ ಕುತೂಹಲದಿಂದ ಕಾಯೋಣವೇ?

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News

ನಾಸ್ತಿಕ ಮದ