ನಾವೇ ಮೊದಲಿಗರು

Update: 2022-08-14 04:37 GMT

ನಾವೇ ಮೊದಲು, ನಮ್ಮಲ್ಲೇ ಮೊದಲು ಅಂತ ಸುದ್ದಿಗಳನ್ನು ಬಿತ್ತರಿಸುವಾಗ ಆ ಈ ಚಾನೆಲ್‌ಗಳು ಹೇಳುತ್ತಿರುತ್ತವೆ. ಅದು ಕೊಲೆಯೋ, ಸುಲಿಗೆಯೋ, ಹತ್ಯಾಕಾಂಡವೋ, ಅತ್ಯಾಚಾರವೋ; ಈ ಸುದ್ದಿಯು ನಮ್ಮಲ್ಲೇ ಮೊದಲು ಎಂದು ಸಂಭ್ರಮಿಸುವುದನ್ನು ಕಾಣುತ್ತೇವೆ. ಆ ಸುದ್ದಿ ಅದೆಷ್ಟು ಘೋರ, ಬೀಭತ್ಸ ಮತ್ತು ದಯನೀಯ ಪ್ರಸಂಗವಾಗಿದ್ದರೂ ಅದನ್ನು ನಾವೇ ಮೊದಲು ಎಂದು ಬಿತ್ತರಿಸುವವರಲ್ಲಿ ಅದೊಂದು ಸಂಭ್ರಮ, ಸಡಗರ ಮತ್ತು ಆನಂದ ಕಾಣುತ್ತಿರುತ್ತದೆ.

ಇಡೀ ಪ್ರಪಂಚದಲ್ಲಿ ನಾವೇ ಮೊದಲು ಇದನ್ನು ಕಂಡು ಹಿಡಿದಿದ್ದು, ನಾವೇ ಮೊದಲು ಇದನ್ನು ಬಳಸಿದ್ದು, ಪ್ರಪಂಚ ಏನನ್ನು ಇಂದು ಆಧುನಿಕ ವಿಜ್ಞಾನದಲ್ಲಿ ಬಳಸುತ್ತಿದೆಯೋ ಅದನ್ನು ನಮ್ಮ ದೇಶ ಸಾವಿರಾರು ವರ್ಷಗಳ ಹಿಂದೆಯೇ ಬೇರೊಂದು ರೂಪದಲ್ಲಿ ಬಳಸುತ್ತಿತ್ತು. ಹಾಗಾಗಿ ನಾವೇ ಮೊದಲು ಎಂದು ಸಂಭ್ರಮಪಡುವ, ಆ ಸಂತೋಷವನ್ನು ಹಂಚಿಕೊಳ್ಳುವ ದೊಡ್ಡ ದೊಡ್ಡ ಗುಂಪುಗಳೇ ಇವೆ.

ವ್ಯಾಪಾರ ವ್ಯವಹಾರಗಳಲ್ಲಿ, ಓದಿನಲ್ಲಿ, ತರಗತಿಯಲ್ಲಿ, ಪರೀಕ್ಷೆಯ ಫಲಿತಾಂಶದಲ್ಲಿ; ಅಷ್ಟೆಲ್ಲಾ ಏಕೆ ರಸ್ತೆಯಲ್ಲಿ ಗಾಡಿ ಓಡಿಸುವಾಗಲೂ ‘ನಾನೇ ಮೊದಲು’ ಎಂಬ ಧೋರಣೆ ಮತ್ತು ಅದು ತೋರುವ ವರ್ತನೆಯನ್ನು ಧಾರಾಳವಾಗಿ ಕಾಣುತ್ತಿರುತ್ತೇವೆ.

ನಮಗೆ ಅದು ಸಹಜ ಎನ್ನಿಸಿದೆ. ಶಾಲೆಗಳಲ್ಲಿ ಸ್ಪರ್ಧೆಗಳನ್ನು ಮಾಡುತ್ತಾರೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾಡುತ್ತಾರೆ; ಯಾರು ಮೊದಲು ಬರುತ್ತಾರೋ ಅವರನ್ನು ಸಾಧಕರೆಂದು ಗುರುತಿಸುತ್ತಾರೆ. ಅಭಿನಂದಿಸುತ್ತಾರೆ. ಅವರನ್ನು ಹೊಗಳುತ್ತಾರೆ.

 ಮೊದಲು ಬರದೇ ಇರುವವರಿಗೆ ನೀನೂ ಮುಂದಿನ ಸಲ ಮೊದಲು ಬರಬೇಕು ಎಂದು ಕಣ್ಣೀರೊರೆಸುತ್ತಾರೆ. ಸಮಾಜದಲ್ಲಿ ಸೂಕ್ಷ್ಮ ಸಂವೇದನೆಯಿಂದ ಸ್ಪಂದಿಸುವ ಸಾಹಿತಿಗಳೂ ಕೂಡಾ ‘‘ನನಗೆ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿತು’’, ಎಂದು ಆಯ್ಕೆ ಮಾಡಿದ ತೀರ್ಪುಗಾರರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾರೆ. ಈ ಮೊದಲು ಬರುವ ಆಸೆ ಮತ್ತು ರೂಢಿ ವ್ಯಕ್ತಿಗೂ ಹೊಸತಲ್ಲ, ಸಮಾಜಕ್ಕೂ ಹೊಸತಲ್ಲ. ‘‘ಯಾರು ಫಸ್ಟ್ ಊಟ ಮಾಡ್ತಾರೆ ನೋಡೋಣ, ಜಾಣ ಮರಿ, ಆ ಅನ್ನು’’ ಅಮ್ಮ, ಅಜ್ಜಿ ಪುಟ್ಟ ಮಗುವಿಗೆ ಬಾಯಿಗೆ ತುತ್ತಿಡುವಾಗಲೇ ಪ್ರಾರಂಭಿಸಿರುತ್ತಾರೆ. ದೈಹಿಕವಾಗಿ ಹೆಚ್ಚು ಶ್ರಮವಾದರೆ ಆಯಾಸವಾದಂತೆ, ಈ ಸ್ಪರ್ಧಾತ್ಮಕ ಆಲೋಚನೆಗಳು ಮನಸ್ಸಿಗೆ ಅಗಾಧವಾದ ಶ್ರಮ ನೀಡಿ ಸುಸ್ತಾಗಿಸುವುದು ಮಾತ್ರವಲ್ಲದೆ ಅನೇಕ ಬಗೆಯ ಸಮಸ್ಯೆಗಳಿಗೂ ಜಾಗ ಮಾಡಿಕೊಡುತ್ತವೆ. ಮೊದಲು ಬರುವೆನೋ ಇಲ್ಲವೋ ಎಂಬ ಆತಂಕ, ಬರದೇ ಹೋದರೆ ಖಿನ್ನತೆ, ಇತರರ ಬಗ್ಗೆ ಸಹಾನುಭೂತಿ ಹೊಂದದೇ ಇರುವಂತಹ ಅಸೂಕ್ಷ್ಮತೆ, ತಾನು ಇತರರನ್ನು ಮೀರಿಸಿದೆ ಎಂಬ ಮೇಲರಿಮೆ, ತಾನು ಗಳಿಸಿರುವ ಸ್ಥಾನದಿಂದಾಗಿ ತಾನು ಮೇಲು ಎಂಬ ಅಹಂಕಾರ, ಇತರರಿಗೆ ಏನಾದರೂ ಆಗಲಿ ತನಗೆ ಆ ಸ್ಥಾನ ಬೇಕೆಂಬ ದುಗುಡ ಮತ್ತು ಕಾತುರದಿಂದ ಒರಟಾಗುವ ಮನಸ್ಥಿತಿ, ತಾನು ಎಲ್ಲರ, ಎಲ್ಲದರ ಆಕರ್ಷಣೆಯ ಕೇಂದ್ರಬಿಂದುವಾಗಬೇಕು ಎಂಬ ಹೆಬ್ಬಯಕೆ; ಹೀಗೆ ಪಟ್ಟಿಯ ಉದ್ದ ಬಲು ದೊಡ್ಡದು.

 ಇನ್ನೊಂದು ಮಾತು; ಸ್ಪರ್ಧೆಯ ಗೀಳು ಹೆಚ್ಚುತ್ತಿದ್ದಂತೆ ಅವರು ಇತರರ ದೃಷ್ಟಿಯಲ್ಲಿ ತಾವು ಎಷ್ಟು ಮೌಲ್ಯವನ್ನು ಗಳಿಸುತ್ತೇವೆ ಎಂಬ ಉನ್ಮತ್ತತೆಯಲ್ಲಿ ತಮಗೆ ನಿಜವಾಗಿಯೇ ಇರುವ ಮೌಲ್ಯವನ್ನು ಗುರುತಿಸಿಕೊಳ್ಳುವುದೇ ಇಲ್ಲ, ತಮ್ಮ ಸಾಮರ್ಥ್ಯ ಮತ್ತು ಗುಣವನ್ನು ಗುರುತಿಸಿಕೊಳ್ಳದೇ ಸಮೂಹ ಗುರುತಿಸುವ ಗುಣಗಳನ್ನು, ಸಾಮರ್ಥ್ಯಗಳನ್ನು ತಮಗೆ ಆರೋಪಿಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ.

 ಇದು ಗಂಭೀರವಾದ ಹಿಸ್ಟ್ರಿಯೋನಿಕ್ ಪರ್ಸನಾಲಿಟಿ ಡಿಸಾರ್ಡರಿಗೆ ತೆರೆದುಕೊಳ್ಳುತ್ತದೆ. ಈ ರೋಗದ ಪ್ರಮುಖ ಲಕ್ಷಣವೆಂದರೆ ಇತರರು ಮಾಡುವ ಮಾನ್ಯತೆಯ ಆಧಾರದಲ್ಲಿಯೇ ತಮ್ಮನ್ನು ತಾವು ಗುರುತಿಸಿಕೊಳ್ಳಲು ಯತ್ನಿಸುವುದು. ಸಾಲದಕ್ಕೆ ತಮ್ಮ ನಿಜವಾದ ಭಾವನೆ ಮತ್ತು ಆಲೋಚನೆಗಳಿಂದಲೂ ಆನಂದಿಸದೆ ಇತರರು ಗುರುತಿಸುವುದಕ್ಕೆಯೇ, ಪ್ರಶಂಸಿಸುವುದಕ್ಕೆಯೇ ಹಾತೊರೆಯುತ್ತಿರುತ್ತಾರೆ.

ಇದೊಂದು ಅತ್ಯಂತ ದೋಷಪೂರ್ಣ ಸ್ವಭಾವ. ಇದು ನಾನಾ ಬಗೆಯ ಮಾನಸಿಕ ಸಮಸ್ಯೆಗಳನ್ನು ಉಂಟು ಮಾಡುವುದಲ್ಲದೇ ವ್ಯಕ್ತಿಗತವಾಗಿಯೂ, ಸಾಮಾಜಿಕವಾಗಿಯೂ ಪಿಡುಗಾಗಿ ಪರಿಣಮಿಸುವುದು. ನಿಮಗೆ ಈ ಮಾಹಿತಿಯೂ ತಿಳಿದಿರಲಿ, ಇಡೀ ವಿಶ್ವದಲ್ಲಿ ಮಾನಸಿಕ ಸಮಸ್ಯೆಗಳನ್ನು ಅತ್ಯಧಿಕವಾಗಿ ಹೊಂದಿರುವ ದೇಶವೆಂದರೆ ಅದು ಭಾರತ. ಮಾನಸಿಕ ರೋಗಿಗಳಲ್ಲಿ ನಾವೇ ಮೊದಲು!

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News

ನಾಸ್ತಿಕ ಮದ