ಯುಎಇ ಆವರಿಸಿದ ಮರಳಿನ ಬಿರುಗಾಳಿ: ಎಚ್ಚರಿಕೆ ವಹಿಸುವಂತೆ ಸೂಚನೆ
ಅಬುಧಾಬಿ, ಆ.14: ಯುಎಇಯಲ್ಲಿ ಮರಳಿನ ಬಿರುಗಾಳಿಯ ಬಳಿಕ ದಟ್ಟವಾದ ಧೂಳಿನ ಮೋಡಗಳು ದೇಶದ ಹೆಚ್ಚಿನ ಭಾಗವನ್ನು ಆವರಿಸಿದ್ದು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಮುಂದಿನ ದಿನದಲ್ಲಿ ಹವಾಮಾನ ವೈಪರೀತ್ಯದಿಂದ ಭಾರೀ ಗಾಳಿ, ಮಳೆಯಾಗುವ ಮುನ್ಸೂಚನೆ ದೊರಕಿರುವುದರಿಂದ ಪರಿಸ್ಥಿತಿಯನ್ನು ಎದುರಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರವಿವಾರ ಅಬುಧಾಬಿ ಮತ್ತು ದುಬೈಯಲ್ಲಿ ಗೋಚರತೆ ಒಂದು ಕಿ.ಮೀಟರ್ಗಿಂತಲೂ ಕಡಿಮೆಯಾಗಿರುವುದರಿಂದ ರಸ್ತೆಯಲ್ಲಿ ಎಚ್ಚರಿಕೆ ವಹಿಸುವಂತೆ ಆಂತರಿಕ ಸಚಿವಾಲಯ ಜನರಿಗೆ ಸೂಚಿಸಿದೆ.ದೇಶದ ವಿವಿಧೆಡೆ ರೆಡ್ ಅಲರ್ಟ್ ಘೋಷಿಸಲಾಗಿದ್ದು ತೀರಾ ಅಗತ್ಯವಿದ್ದರೆ ಮಾತ್ರ ರಸ್ತೆಗೆ ಇಳಿಯುವಂತೆ ದ್ವಿಚಕ್ರ ವಾಹನ ಸವಾರರಿಗೆ ಅಬುಧಾಬಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.ಹವಾಮಾನ ವೈಪರೀತ್ಯದ ಕಾರಣ ಸಂಭವಿಸಬಹುದಾದ ಯಾವುದೇ ಅಪಾಯದ ಪರಿಸ್ಥಿತಿಯನ್ನು ನಿರ್ವಹಿಸಲು ಎಲ್ಲಾ ಸ್ಥಳೀಯ ಮತ್ತು ರಾಷ್ಟ್ರೀಯ ತಂಡಗಳನ್ನು ಸಜ್ಜುಗೊಳಿಸಲಾಗಿದ ಎಂದು ‘ನ್ಯಾಷನಲ್ ಎಮರ್ಜೆನ್ಸಿ ಕ್ರೈಸಿಸ್ ಆ್ಯಂಡ್ ಡಿಸಾಸ್ಟರ್ಸ್ ಮ್ಯಾನೇಜ್ಮೆಂಟ್ ಅಥಾರಿಟಿ(ಎನ್‌ಸಿಇಎಂಎ) ಹೇಳಿಕೆ ನೀಡಿದೆ. ಕಳೆದ ತಿಂಗಳು ಯುಎಇಯ ಪೂರ್ವ ಮತ್ತು ಉತ್ತರ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಸಂಭವಿಸಿದ ಪ್ರವಾಹದಲ್ಲಿ 7 ಮಂದಿ ಮೃತಪಟ್ಟಿದ್ದರು.