ಆಧುನಿಕ ಭಾರತ ಮತ್ತು ನೆಹರೂ

Update: 2022-08-20 10:48 GMT

ಚರಿತ್ರೆಯ ಪ್ರಮಾದಗಳನ್ನು ಗುರುತಿಸುವಾಗ ಚಾರಿತ್ರಿಕ ವ್ಯಕ್ತಿಗಳನ್ನು ಗೌರವಿಸುವುದು ಭವಿಷ್ಯ ಭಾರತದ ದೃಷ್ಟಿಯಿಂದ ಕ್ಷೇಮ ಮತ್ತು ಅಪೇಕ್ಷಣೀಯವೂ ಹೌದು. ‘ಜಾಹೀರಾತು’ ಎನ್ನುವುದು ಮಾರುಕಟ್ಟೆಗೆ ಸ್ಪಂದಿಸುವ ಒಂದು ಸಾಧನವಾಗಬಲ್ಲದೇ ಹೊರತು, ಬೌದ್ಧಿಕ ಪರಿಜ್ಞಾನವನ್ನು ಕದಡುವ ಉಪಕರಣವಾಗಲು ಸಾಧ್ಯವಿಲ್ಲ. ಸ್ವಾತಂತ್ರ್ಯಪೂರ್ವದ ಭಾರತ, ಸ್ವಾತಂತ್ರ್ಯಾನಂತರದ ಭಾರತ, ಆಧುನಿಕ ಭಾರತ ಮತ್ತು ಡಿಜಿಟಲ್ ಯುಗದ ಭಾರತ ಈ ಯಾವುದೇ ಸ್ತರಗಳಲ್ಲಾದರೂ ನೆಹರೂ ಅವರ ಆರ್ಥಿಕ ಮುನ್ನೋಟದ ಸ್ಥಾವರಗಳು, ಭೌತಿಕವಾಗಿ ಅಲ್ಲವಾದರೂ, ಬೌದ್ಧಿಕವಾಗಿ ಚಿರಸ್ಥಾಯಿಯಾಗಿ ಉಳಿಯುತ್ತವೆ. ಹಾಗೆಯೇ ಭಾರತದ ದಾಖಲಿತ ಇತಿಹಾಸದಲ್ಲಿ ನೆಹರೂ ಅಜರಾಮರರಾಗಿ ಉಳಿಯುತ್ತಾರೆ.


ಅಮೃತ ಮಹೋತ್ಸವದ ಜಾಹೀರಾತು ಹೊರಡಿಸಿರುವ ರಾಜ್ಯ ಸರಕಾರ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಈ ದೇಶದ ಪ್ರಥಮ ಪ್ರಧಾನಿ ಮತ್ತು ಆಧುನಿಕ ಭಾರತದ ಶಿಲ್ಪಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರವನ್ನು ತೆಗೆದುಹಾಕಿರುವುದು ಅಕ್ಷಮ್ಯವಷ್ಟೇ ಅಲ್ಲ, ಬೌದ್ಧಿಕ ಅಸಹಿಷ್ಣುತೆಯ ಪ್ರದರ್ಶನವೂ ಹೌದು. ತನ್ನ ಈ ಕ್ರಮದ ಮೂಲಕ ಕರ್ನಾಟಕ ಸರಕಾರ ಏನು ಸಾಧಿಸಿದೆ ಎನ್ನುವುದಕ್ಕಿಂತಲೂ ಪ್ರಜ್ಞಾವಂತ ಸಮಾಜದ ದೃಷ್ಟಿಯಲ್ಲಿ ನೈತಿಕ ಘನತೆಯನ್ನು ಕಳೆದುಕೊಂಡು ಕುಬ್ಜವಾಗಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಸ್ವಾತಂತ್ರ್ಯ ಸಂಗ್ರಾಮಿಗಳನ್ನು, ಹುತಾತ್ಮರಾದವರನ್ನು ಜಾತಿಯ ಚೌಕಟ್ಟಿನಲ್ಲಿ ನೋಡುವ ಒಂದು ಹೊಸ ಪರಂಪರೆಯನ್ನೂ ನಾವು ಗುರುತಿಸಿಕೊಂಡು, ಸಾಮುದಾಯಿಕ ಅಸ್ಮಿತೆಯ ನೆಲೆಯಲ್ಲಿ ಸ್ವಪ್ರಶಂಸೆ ಮಾಡಿಕೊಳ್ಳಲಾರಂಭಿಸಿದ್ದೇವೆ. 75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ನಮ್ಮ ರಾಜಕೀಯ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಜಗತ್ತು ಈ ದೇಶದ ಸಂವಿಧಾನದ ಆಶಯಗಳನ್ನು ಸಮರ್ಪಕವಾಗಿ ಗ್ರಹಿಸಲು ಸಾಧ್ಯವಾಗದಿರುವುದು ದೊಡ್ಡ ದುರಂತವೇ ಸರಿ. ಶಿವಮೊಗ್ಗದಲ್ಲಿ, ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮದ ನಡುವೆಯೇ ನಡೆದಿರುವ ಅಹಿತಕರ ಘಟನೆಗಳು ನಮ್ಮ ನಡುವಿನ ಈ ಅಪ್ರಬುದ್ಧತೆಗೆ ಸಾಕ್ಷಿಯಾಗಿದೆ. ಚರಿತ್ರೆಯನ್ನು-ಚಾರಿತ್ರಿಕ ವ್ಯಕ್ತಿಗಳನ್ನು ಫ್ಲೆಕ್ಸ್ ಬೋರ್ಡುಗಳಲ್ಲಿ, ಪ್ರತಿಮೆಗಳಲ್ಲಿ, ಜಾಹೀರಾತುಗಳಲ್ಲಿ ಶೋಧಿಸುವ ವಿಕೃತ-ಸಂಕುಚಿತ ಮನೋಭಾವದಿಂದ ಇನ್ನಾದರೂ ನಮ್ಮ ಸಮಾಜ ಹೊರಬರಬೇಕಿದೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ತನುಮನವನ್ನು ಅರ್ಪಿಸಿ ಹೋರಾಡಿದ ಮಹನೀಯರನ್ನು ವ್ಯಕ್ತಿಗತ ನೆಲೆಯಲ್ಲಿ ತುಲನಾತ್ಮಕವಾಗಿ ನೋಡುವ ಒಂದು ವಿಕೃತ ಪ್ರವೃತ್ತಿಯನ್ನೂ 21ನೇ ಶತಮಾನದ ಭಾರತ ರೂಢಿಸಿಕೊಂಡಿದೆ. ಮೌಖಿಕ ಇತಿಹಾಸಕ್ಕೂ, ದಾಖಲಿತ ಚರಿತ್ರೆಗೂ ಇರುವ ಸೂಕ್ಷ್ಮವ್ಯತ್ಯಾಸವನ್ನು ಅರಿಯದೆ ಹೋದರೆ ಚರಿತ್ರೆಯನ್ನು ನೋಡುವ ವಿಧಾನವೇ ಭ್ರಷ್ಟವಾಗಿಬಿಡುವ ಸಾಧ್ಯತೆಗಳಿರುತ್ತವೆ. ವರ್ತಮಾನದ ಮಿಥ್ಯೆಗಳು ಅಥವಾ ಕಥನಗಳು ಗತಕಾಲದ ದಾಖಲಿತ ಇತಿಹಾಸಕ್ಕೆ ಹೊಸ ತಿರುವು ನೀಡಬಹುದೇ ಹೊರತು, ಚರಿತ್ರೆಯ ಘಟನೆಗಳನ್ನು ಬದಲಿಸಲಾಗುವುದಿಲ್ಲ. ಸಮಕಾಲೀನ ಸಾಮಾಜಿಕ ಸ್ಥಿತ್ಯಂತರಗಳಿಗೆ ಅನುಗುಣವಾಗಿ ಹೊಸೆಯಲಾಗುವ ಮಿಥ್ಯೆಗಳು ಸಾರ್ವಜನಿಕ ಚರ್ಚೆಯ ಸ್ತರದಲ್ಲಿ ಸ್ವೀಕೃತವಾಗಬಹುದೇ ಹೊರತು, ಸಾರ್ವತ್ರಿಕ ಮನ್ನಣೆಯನ್ನು ಪಡೆಯಲಾಗುವುದಿಲ್ಲ. ಇದು ಎಲ್ಲ ದೇಶಗಳ ಇತಿಹಾಸದಲ್ಲಿ ಕಾಣಬಹುದಾದ ಒಂದು ವಿದ್ಯಮಾನ. ಪುರಾಣ ಕಥನಗಳಂತೆ ಚರಿತ್ರೆಯ ಹಾದಿಯಲ್ಲಿ ಸೃಷ್ಟಿಯಾಗುವ ಕಥನಗಳೂ ಜನಮಾನಸದಲ್ಲಿ ಒಂದು ಪ್ರಭಾವಶಾಲಿ ವಲಯವನ್ನು ಸೃಷ್ಟಿಸುತ್ತವೆ. ಆದರೆ ಅದನ್ನು ಚರಿತ್ರೆ ಎನ್ನಲಾಗುವುದಿಲ್ಲ ಅಥವಾ ಈ ಕಥನಗಳನ್ನಾಧರಿಸಿ ಚರಿತ್ರೆಯ ವಾಸ್ತವಗಳನ್ನು ಅಲ್ಲಗಳೆಯಲೂ ಆಗುವುದಿಲ್ಲ. ಆಧುನಿಕ ಭಾರತದ ಶಿಲ್ಪಿಎಂದೇ ಹೆಸರಾಗಿರುವ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಜನಾಕರ್ಷಣೆಯ ಸಾಧನವಾದ ಜಾಹೀರಾತಿನಿಂದ ಹೊರತುಪಡಿಸಿದ ಮಾತ್ರಕ್ಕೆ, ವರ್ತಮಾನದ ಭಾರತ ಒಂದು ಬಲಿಷ್ಠ ರಾಷ್ಟ್ರವಾಗಿ ನಿಂತಿರುವುದೇ ನೆಹರೂ ತಮ್ಮ ಆಡಳಿತಾವಧಿಯಲ್ಲಿ ರೂಪಿಸಿದ ಆರ್ಥಿಕ-ಸಾಂಸ್ಕೃತಿಕ ಹಾಗೂ ಸಾಮಾಜಿಕ ತಳಪಾಯದ ಮೇಲೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಭಾರತ ವಸಾಹತು ದಾಸ್ಯದ ಸಂಕೋಲೆಗಳನ್ನು ಕಳಚಿದ ಸುವರ್ಣ ಕ್ಷಣದಲ್ಲಿ, ಆಗಸ್ಟ್ 14ರ ನಡುರಾತ್ರಿ ನೆಹರೂ ತಮ್ಮ ಭಾಷಣದಲ್ಲಿ ವಿಧಿಯೊಡನೆ ಮುಖಾಮುಖಿಯಾಗುವ ನವ ಭಾರತದ ಕನಸುಗಳನ್ನು ಸ್ಪಷ್ಟವಾಗಿ ತೆರೆದಿಡುತ್ತಲೇ, ಇಡೀ ಜಗತ್ತು ನಿದ್ರಿಸುತ್ತಿರುವ ಈ ಹೊತ್ತಿನಲ್ಲಿ ಭಾರತ ಸ್ವಾತಂತ್ರ್ಯ ಮತ್ತು ಜೀವಂತಿಕೆಗಾಗಿ ಎಚ್ಚೆತ್ತುಕೊಳ್ಳುತ್ತಿದೆ ಎಂದು ಹೇಳುವ ಮೂಲಕ ಭವಿಷ್ಯ ಭಾರತದ ಮೊದಲ ಇಟ್ಟಿಗೆಯನ್ನು ಇಡುತ್ತಾರೆ. ಸ್ವಾತಂತ್ರ್ಯಾನಂತರದ 75 ವರ್ಷಗಳ ಪಯಣವನ್ನು ನೆನೆಯುವುದೇ ಆದರೆ, ಈ ಅಭಿವೃದ್ಧಿಯ ಭದ್ರಕೋಟೆಗೆ ನೆಹರೂ ಇಟ್ಟ ಮೊದಲ ಇಟ್ಟಿಗೆಯನ್ನು ಕಡೆಗಣಿಸಲಾಗುವುದಿಲ್ಲ.

ನೆಹರೂ ನಿರ್ಮಿಸಿದ ಭಾರತದ ಒಂದು ನಿದರ್ಶನವನ್ನು ಇತ್ತೀಚೆಗಷ್ಟೇ ಕಂಡಿದ್ದೇವೆ. ನೆಹರೂ ಯುಗದಲ್ಲಿ ನಿರ್ಮಿಸಿದ ಪ್ರತಿಷ್ಠಿತ ವಿಮಾ ಸಂಸ್ಥೆ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ತನ್ನ ಷೇರುಗಳನ್ನು ಸಾರ್ವಜನಿಕವಾಗಿ ವಿತರಿಸಿದಾಗ 2,100 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. ಈ ಮಾರುಕಟ್ಟೆ ಶಕ್ತಿಯ ಬುನಾದಿ ನೆಹರೂ ಆರ್ಥಿಕತೆಯಲ್ಲಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇಂದು ಭಾರತದ ಪ್ರತಿಷ್ಠಿತ ಕಾರ್ಪೊರೇಟ್ ಮುಂದಾಳುಗಳು ಮತ್ತು ಜಾಗತಿಕ ಮಟ್ಟದಲ್ಲಿ ಖ್ಯಾತನಾಮರಾಗಿರುವ ಅನೇಕ ಕಾರ್ಪೊರೇಟ್ ದಿಗ್ಗಜರು ಇದೇ ನೆಹರೂ ಆರ್ಥಿಕತೆಯ ಶಿಶುಗಳೇ ಆಗಿದ್ದು, ಭಾರತದ ಪ್ರತಿಷ್ಠಿತ ಐಐಎಮ್, ಐಐಟಿ ಉತ್ಪನ್ನಗಳೇ ಆಗಿದ್ದಾರೆ. ಈ ಜಗತ್ಪ್ರಸಿದ್ಧ ಬೌದ್ಧಿಕ ಸಂಸ್ಥೆಗಳು ನೆಹರೂ ಕನಸಿನ ಸುಭದ್ರ ಭಾರತದ ಕೂಸುಗಳು ಎನ್ನುವುದು ಅಲ್ಲಗಳೆಯಲಾಗದ ಸತ್ಯ ಅಲ್ಲವೇ? ಶತಮಾನಗಳ ದಾಸ್ಯಕ್ಕೊಳಗಾಗಿ ಆರ್ಥಿಕವಾಗಿ ದಿವಾಳಿಯಾಗಿದ್ದ, ಸಾಮಾಜಿಕವಾಗಿ ವಿಘಟಿತವಾಗಿದ್ದ, ಸಾಂಸ್ಕೃತಿಕವಾಗಿ ಪ್ರಕ್ಷುಬ್ಧವಾಗಿದ್ದ ಒಂದು ಬೃಹತ್ ಜನಕೋಟಿಗೆ ನಾಯಕತ್ವ ನೀಡಿದ್ದ ನೆಹರೂ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸೋದರತೆಯಲ್ಲಿ ವಿಶ್ವಾಸವುಳ್ಳವರಾಗಿ, ಸಮಸ್ತರನ್ನೂ ಒಳಗೊಳ್ಳುವಂತಹ ಒಂದು ಅರ್ಥವ್ಯವಸ್ಥೆಯನ್ನು ರೂಪಿಸುವುದರಲ್ಲಿ ಯಶಸ್ವಿಯಾಗಿದ್ದರು. ವಿಭಜನೆಯ ಕ್ಷೋಭೆಯಿಂದ ಹೊರಬರಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಸ್ವತಂತ್ರ ಭಾರತಕ್ಕೆ ಇದು ಅನಿವಾರ್ಯವೂ ಆಗಿತ್ತು. ಮಿಶ್ರ ಆರ್ಥಿಕ ನೀತಿಗಳಿಗನುಸಾರವಾಗಿ ಸ್ಥಾಪಿಸಲಾದ ಆಧುನಿಕ ಕೈಗಾರಿಕೆಗಳು, ಸಾಂವಿಧಾನಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳು, ಯೋಜನೆಗಳು ಭವಿಷ್ಯ ಭಾರತದ ಬುನಾದಿಯಾದವು. ಭಾಕ್ರಾ ನಂಗಲ್ ಅಣೆಕಟ್ಟು, ಬಿಎಚ್‌ಇಎಲ್, ಎಐಐಎಮ್‌ಎಸ್, ಎಲ್‌ಐಸಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಒಎನ್‌ಜಿಸಿ ಇನ್ನೂ ಮುಂತಾದ 75 ಸಾರ್ವಜನಿಕ ಸಂಸ್ಥೆಗಳು ಭಾರತವನ್ನು ಒಂದು ಸ್ವಾವಲಂಬಿ ರಾಷ್ಟ್ರವಾಗಿ ರೂಪಿಸಿದ್ದೇ ಅಲ್ಲದೆ, ಭವಿಷ್ಯದ ಭರವಸೆಗಳಾಗಿ ರೂಪುಗೊಂಡು, ವಿಶ್ವದ ಇತರ ರಾಷ್ಟ್ರಗಳಿಗೆ ಮಾದರಿಯಾಗಿದ್ದವು.

ಕಬ್ಬಿಣ ಮತ್ತು ಉಕ್ಕು ತಯಾರಿಕೆಯ ಬೃಹತ್ ಆರ್ಥಿಕ ಘಟಕಗಳನ್ನು ಸ್ಥಾಪಿಸುವುದರೊಂದಿಗೆ, ಗ್ರಾಮೀಣ ಭಾರತದ ಆರ್ಥಿಕತೆಯನ್ನು ಕಾಪಾಡುವ ಸಲುವಾಗಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವನ್ನು ರಚಿಸುವ ಮೂಲಕ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಔದ್ಯೋಗಿಕ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನೂ ಸೃಷ್ಟಿಸಿದ್ದರು. ಐಐಟಿ, ಐಐಎಂ, ಏಮ್ಸ್ ಮುಂತಾದ ಉನ್ನತ ವ್ಯಾಸಂಗದ ಸಂಸ್ಥೆಗಳೊಂದಿಗೇ ಸಾಮಾನ್ಯ ಜನರನ್ನು ತಲುಪುವಂತಹ ಕೇಂದ್ರೀಯ ವಿದ್ಯಾಲಯಗಳಿಗೂ ಅಡಿಪಾಯ ಹಾಕಿದ್ದರಿಂದಲೇ, ಭಾರತದ ಶೈಕ್ಷಣಿಕ ವಲಯ ಇಂದು ಮಹಾನ್ ವಿಜ್ಞಾನಿಗಳನ್ನು, ತಂತ್ರಜ್ಞರನ್ನು, ವೈದ್ಯರನ್ನು ಮತ್ತು ವಿದ್ವಾಂಸರನ್ನು ಸೃಷ್ಟಿಸಲು ಸಾಧ್ಯವಾಗಿದೆ. ಭಿಲಾಯ್, ದುರ್ಗಾಪುರ, ರೂರ್ಕೆಲಾಗಳನ್ನು ಕೈಗಾರಿಕಾ ನಗರಗಳಾಗಿ ನಿರ್ಮಿಸುತ್ತಿರುವ ಸಂದರ್ಭದಲ್ಲೇ ಅತ್ಯಾಧುನಿಕ ನಗರವಾಗಿ ಚಂಡಿಗಡ ನಿರ್ಮಾಣವಾದದ್ದು ನೆಹರೂ ಅವರ ವಿಶ್ವದೃಷ್ಟಿಕೋನಕ್ಕೆ ಸಾಕ್ಷಿ. ಸ್ವತಂತ್ರ ಭಾರತದ ಪ್ರಪ್ರಥಮ ಸ್ಮಾರ್ಟ್ ಸಿಟಿ ಚಂಡಿಗಡ ಎನ್ನುವುದು ಅಲ್ಲಗಳೆಯಲಾಗದ ಸತ್ಯ. ಭಾರತದ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ಮತ್ತು ಸಾಂವಿಧಾನಿಕ ತಳಹದಿಯನ್ನು ಶಾಶ್ವತವಾಗಿ ಸುಸ್ಥಿತಿಯಲ್ಲಿಡುವ ನಿಟ್ಟಿನಲ್ಲಿ ನೆಹರೂ ಆಳ್ವಿಕೆಯಲ್ಲಿ ಸ್ಥಾಪಿಸಲಾದ ಚುನಾವಣಾ ಆಯೋಗ ಮತ್ತು ಯೋಜನಾ ಆಯೋಗಗಳು, ಪ್ರಸ್ತುತ ಸಂದರ್ಭದಲ್ಲಿ ರೂಪಾಂತರಗೊಂಡಿದ್ದರೂ, ಈ ಎರಡೂ ಸಂಸ್ಥೆಗಳು ತಾತ್ವಿಕವಾಗಿ ಭಾರತದ ಪ್ರಜಾತಂತ್ರದ ಬುನಾದಿಯಾಗಿಯೇ ಮುಂದುವರಿದಿವೆ.

ಪ್ರಜಾಪ್ರಭುತ್ವವನ್ನು ಪೋಷಿಸುವುದರೊಂದಿಗೇ ದೇಶದ ಆರ್ಥಿಕ ಅಭಿವೃದ್ಧಿಯನ್ನೂ ಸಾಧಿಸುವ ದೂರಗಾಮಿ ಆಲೋಚನೆಗಳು ಈ ಸಂಸ್ಥೆಗಳಲ್ಲಿ ಇಂದಿಗೂ ಕಾಣಬಹುದಾಗಿದೆ. ಈ ಎರಡೂ ಸಂಸ್ಥೆಗಳನ್ನು ಬಾಲ್ಯಾವಸ್ಥೆಯಲ್ಲಿ ಪೋಷಿಸಿ, ನೀರೆರೆದು, ಸಲಹಿದಂತಹ ಮಹಾನೀಯರಲ್ಲಿ ಹೋಮಿ ಭಾಭಾ, ವಿಕ್ರಂ ಸಾರಾಭಾಯಿ, ಪಿ.ಸಿ. ಮಹಲನೋಬಿಸ್, ವರ್ಗೀಸ್ ಕುರಿಯನ್, ಎಸ್.ಎಸ್. ಭಟ್ನಾಗರ್ ಮುಂತಾದವರು ಪ್ರಧಾನವಾಗಿ ಕಾಣುತ್ತಾರೆ. ಈ ಮಹನೀಯರ ಶ್ರದ್ಧೆ, ಪರಿಶ್ರಮ, ಸಾಂವಿಧಾನಿಕ ಬದ್ಧತೆ ಮತ್ತು ಪ್ರಾಮಾಣಿಕ ಪ್ರಯತ್ನಗಳಿಂದಲೇ ಬೆಳೆದಿರುವ ಅನೇಕ ಸಂಸ್ಥೆಗಳು ನೆಹರೂ ಆರ್ಥಿಕತೆಯ ಸಂಕೇತಗಳಾಗಿ ಇಂದಿನ ಕಾರ್ಪೊರೇಟ್ ಮಾರುಕಟ್ಟೆ ಯುಗದಲ್ಲೂ ಭಾರತದ ಅರ್ಥವ್ಯವಸ್ಥೆಗೆ ಆಶ್ರಯ ನೀಡುತ್ತಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ 2014ರಲ್ಲಿ ಜಾಗತಿಕ ಮಟ್ಟದ ಫಾರ್ಚೂನ್ 100ರ ಪಟ್ಟಿಯಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದ್ದು ಮತ್ತು ಅಮುಲ್ ಇಂದಿಗೂ ವಿಶ್ವದ ಅತಿ ದೊಡ್ಡ ಹಾಲು ಉತ್ಪಾದನೆಯ ಸಂಸ್ಥೆಯಾಗಿರುವುದು, ನೆಹರೂ ಆರ್ಥಿಕತೆಯ ಹೆಮ್ಮೆ. ನೆಹರೂ ನಂತರದಲ್ಲಿ 1960ರ ಕ್ಷಾಮ, ಬರಗಾಲ ಮತ್ತು ಯುದ್ಧಪರಂಪರೆಗಳ ಹೊರತಾಗಿಯೂ ಭಾರತ ಹಸಿರು ಕ್ರಾಂತಿಯ ಮೂಲಕ, ಕೈಗಾರಿಕೆಗಳ ವಿಸ್ತರಣೆಯ ಮೂಲಕ, ಬ್ಯಾಂಕುಗಳ ರಾಷ್ಟ್ರೀಕರಣದ ಮೂಲಕ ಒಂದು ಸುಸ್ಥಿರ ಅರ್ಥವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರೆ, ಈ ವ್ಯವಸ್ಥೆಯ ಆಧಾರ ಶಿಲೆಯನ್ನು ನಾವು ನೆಹರೂ ಆರ್ಥಿಕತೆಯಲ್ಲೇ ಗುರುತಿಸಬೇಕಾಗುತ್ತದೆ.

ಒಂದು ಬರಗಾಲಪೀಡಿತ ದೇಶವನ್ನು ಸಮೃದ್ಧ ಕೃಷಿ ಉತ್ಪಾದನೆಯ ಕಣಜವನ್ನಾಗಿ ಪರಿವರ್ತಿಸಿ, ಆಹಾರ ಧಾನ್ಯಗಳನ್ನು ಹೊರದೇಶಗಳಿಗೆ ರಫ್ತು ಮಾಡುವ ದೇಶವನ್ನಾಗಿ ಪರಿವರ್ತಿಸಲು ಹಸಿರು ಕ್ರಾಂತಿ ಕಾರಣವಾದರೆ, ವಿಶಾಲ ದೇಶದ ಮೂಲೆ ಮೂಲೆಗಳಿಗೂ ಬ್ಯಾಂಕಿಂಗ್ ಸೇವೆಯನ್ನು ವಿಸ್ತರಿಸಿ, ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೌಲಭ್ಯವನ್ನು, ಹಣಕಾಸು ನೆರವನ್ನು ಲಭ್ಯವಾಗುವಂತೆ ಮಾಡಿ, ಜನಸಾಮಾನ್ಯರ ಹಾಗೂ ವ್ಯವಸಾಯವನ್ನೇ ನಂಬಿ ಬದುಕುವ ಕೋಟ್ಯಂತರ ರೈತಾಪಿಯ ಜೀವನೋಪಾಯಕ್ಕೆ ಸುಸ್ಥಿರ ಅಡಿಪಾಯ ನಿರ್ಮಾಣವಾಗಿದ್ದರೆ ಅದಕ್ಕೆ ಕಾರಣ ರಾಷ್ಟ್ರೀಕೃತ ಬ್ಯಾಂಕುಗಳೇ ಆಗಿವೆ. ಈ ಎರಡೂ ಯೋಜನೆಗಳ ತಾತ್ವಿಕ ಮೂಲವನ್ನು ನೆಹರೂ ಆರ್ಥಿಕತೆಯಲ್ಲೇ ಕಾಣಬಹುದಾಗಿದೆ. 1991ರಲ್ಲಿ ಭಾರತ ವಿಶ್ವ ಮಾರುಕಟ್ಟೆಗೆ ತೆರೆದುಕೊಂಡು, ನವ ಉದಾರವಾದಿ ಆರ್ಥಿಕ ನೀತಿಯನ್ನು ಅಪ್ಪಿಕೊಂಡಾಗ, ಹೊಸ ಆರ್ಥಿಕ ನೀತಿಯನ್ನು ಜಾರಿಗೊಳಿಸಲು ಮತ್ತು ಆವರೆಗೂ ನಡೆದುಬಂದಿದ್ದ ಮಾರ್ಗವನ್ನು ತೊರೆದು, ವಿದೇಶಿ ಬಂಡವಾಳದ ಹರಿವು ಮತ್ತು ಹೂಡಿಕೆಗೆ ಭಾರತವನ್ನು ಒಂದು ಪ್ರಶಸ್ತ ಭೂಮಿಕೆಯನ್ನಾಗಿ ನಿರ್ಮಿಸಲಾಗಿದೆ.

ನವ ಉದಾರವಾದದ 21ನೇ ಶತಮಾನದ ಮಾರುಕಟ್ಟೆ ಆರ್ಥಿಕತೆಯ ಭಾರತಕ್ಕೆ ಒಂದು ಹೊಸ ಆಯಾಮ ನೀಡಿದಂತಹ ಅಸಂಖ್ಯಾತ ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು, ತಂತ್ರಜ್ಞರು ನೆಹರೂ ಆರ್ಥಿಕತೆಯಲ್ಲಿ ತಮ್ಮ ಕೌಶಲವನ್ನು ವೃದ್ಧಿಸಿಕೊಂಡವರೇ ಆಗಿದ್ದರು ಎನ್ನುವುದು ಸಾರ್ವತ್ರಿಕ ಸತ್ಯ. ನವ ಉದಾರವಾದದ ವಾತಾವರಣದಲ್ಲೂ, ಜಾಗತೀಕರಣಕ್ಕೊಳಗಾದ ನವ ಭಾರತ ನಿರ್ಮಾಪಕರೆಂದೇ ಖ್ಯಾತರಾಗಿರುವ ಮನಮೋಹನ್ ಸಿಂಗ್, ಸ್ಯಾಮ್ ಪಿಟ್ರೋಡಾ, ಎಮ್.ಎಸ್. ಸ್ವಾಮಿನಾಥನ್, ನಂದನ್ ನಿಲೇಕಣಿ ಇವರೆಲ್ಲರೂ ನೆಹರೂ ಆರ್ಥಿಕತೆಯ ಫಲಾನುಭವಿಗಳೇ ಆಗಿದ್ದಾರೆ. ಇಂದು ಭಾರತ ಬದಲಾಗುತ್ತಿದೆ. 70 ವರ್ಷಗಳಲ್ಲಿ ‘‘ಏನೂ ಸಾಧಿಸಲಾಗಿಲ್ಲ’’ ಎಂದು ಹೇಳುತ್ತಲೇ ನವ ಭಾರತದಲ್ಲಿ, ಮೊದಲ ಆರು ದಶಕಗಳಲ್ಲಿ ಲಕ್ಷಾಂತರ ಶ್ರಮಜೀವಿಗಳ ಬೌದ್ಧಿಕ, ಭೌತಿಕ ಪರಿಶ್ರಮದೊಂದಿಗೆ ನಿರ್ಮಿಸಲಾದ ಸ್ಥಾವರಗಳನ್ನು ಹಂತಹಂತವಾಗಿ ಶಿಥಿಲಗೊಳಿಸುತ್ತಾ, ವಿಶ್ವ ಮಾರುಕಟ್ಟೆಯಲ್ಲಿ ಬಿಕರಿ ಮಾಡಲಾಗುತ್ತಿದೆ. ಈ ಸ್ಥಾವರಗಳು ಇಲ್ಲದಿದ್ದರೆ ಮಾರಾಟ ಮಾಡಲಾದರೂ ಏನು ಉಳಿಯುತ್ತಿತ್ತು? ಈ ಪ್ರಶ್ನೆ ಪ್ರಜ್ಞಾವಂತರನ್ನು ಕಾಡಲೇಬೇಕಲ್ಲವೇ ? ಇಂದು ಭಾರತ ಒಂದು ಬೃಹದಾರ್ಥಿಕ ಶಕ್ತಿಯಾಗಿ ವಿಶ್ವ ಮಾರುಕಟ್ಟೆಯಲ್ಲಿ ಅಗ್ರಮಾನ್ಯ ಶ್ರೇಣಿಯ ಶಕ್ತಿಯಾಗಿ ಮುನ್ನಡೆಯುತ್ತಿದ್ದರೆ, ಇದರ ಹಿಂದೆ ನೆಹರೂ ಯುಗದ ದಾರ್ಶನಿಕತೆ, ದೂರಗಾಮಿ ಆಲೋಚನೆ ಮತ್ತು ಸಮಗ್ರ ದೃಷ್ಟಿಕೋನದ ಆರ್ಥಿಕ ವ್ಯವಸ್ಥೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗೆಯೇ ‘‘ಏನೂ ಸಾಧಿಸಲಾಗಿಲ್ಲ’’ ಎಂಬ ಮೂದಲಿಕೆಗೆ ಒಳಗಾಗಿರುವ ಆರು ದಶಕಗಳಲ್ಲಿ ಭಾರತದ ಕೋಟ್ಯಂತರ ದುಡಿಮೆಯ ಕೈಗಳನ್ನೂ, ಶ್ರಮಜೀವಿಗಳನ್ನೂ ನಿರಾಕರಿಸಲಾಗುವುದಿಲ್ಲ.

ಜವಾಹರಲಾಲ್ ನೆಹರೂ ಪ್ರಶ್ನಾತೀತ ನಾಯಕರಲ್ಲ. ಹಾಗೆಯೇ ಯಾವುದೇ ತಪ್ಪುಮಾಡದ ರಾಜಕೀಯ ನಾಯಕರೂ ಅಲ್ಲ. ನೆಹರೂ ಅನುಸರಿಸಿದ ವಿದೇಶಾಂಗ ನೀತಿ, ಆರ್ಥಿಕ ನೀತಿ ಮತ್ತು ರಾಜಕೀಯ ಆಡಳಿತ ನೀತಿಗಳೂ ಪ್ರಶ್ನಾತೀತವಲ್ಲ. ಆದಾಗ್ಯೂ ಸ್ವತಂತ್ರ ಭಾರತದ ಅಭಿವೃದ್ಧಿ ಪಥದಲ್ಲಿ ಹಲವು ತಪ್ಪುಒಪ್ಪುಗಳ ನಡುವೆಯೇ ಒಂದು ಸುಸ್ಥಿರ ಮಾರ್ಗವನ್ನು ರೂಪಿಸಿದ ನಾಯಕರಾಗಿ ಅವರ ಸ್ಥಾನ ಅಬಾಧಿತವಾಗಿಯೇ ಉಳಿಯುತ್ತದೆ. ಹಾಗೆಯೇ ಸ್ವಾತಂತ್ರ್ಯ ಪೂರ್ವದಲ್ಲಿ ಆದಂತಹ ಪ್ರಮಾದಗಳಿಗೆ, ಕೈಗೊಂಡಂತಹ ತಪ್ಪುನಿರ್ಧಾರಗಳಿಗೆ ಮತ್ತು ವಿಭಜನೆಯನ್ನೂ ಸೇರಿದಂತೆ, ನಡೆದಂತಹ ಘಟನಾವಳಿಗಳಿಗೆ ಸಾಮೂಹಿಕ ಹೊಣೆಗಾರಿಕೆಯನ್ನು ಗುರುತಿಸಬೇಕೇ ಹೊರತು, ವ್ಯಕ್ತಿಗತ ನೆಲೆಯಲ್ಲಿ ಯಾರನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗುವುದಿಲ್ಲ. ಹಾಗೆಯೇ ಭಾರತ ವಸಾಹತು ದಾಸ್ಯದ ಸಂಕೋಲೆಗಳಿಂದ ವಿಮೋಚನೆ ಪಡೆಯಲು ನೆರವಾದ ಪ್ರತಿಯೊಬ್ಬರಿಗೂ ಗೌರವ ಸಲ್ಲಬೇಕಾಗಿದೆ. 75 ವರ್ಷಗಳ ನಂತರ ಈ ಹೋರಾಟಗಾರರ ಗೋರಿಗಳನ್ನು ಅಗೆದು, ವರ್ತಮಾನದ ಮತೀಯ, ಧಾರ್ಮಿಕ, ಜಾತೀಯ, ಭಾಷಿಕ ಅಸ್ಮಿತೆಗಳ ನೆಲೆಯಲ್ಲಿ ಹುತಾತ್ಮರನ್ನು, ಮಹಾತ್ಮರನ್ನು ಹೆಕ್ಕಿ ತೆಗೆಯುವುದು ನಾವು ಸೃಷ್ಟಿಸಿಕೊಂಡಿರುವ ಒಂದು ವಿಕೃತ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾಗಿದೆ.

 ಚರಿತ್ರೆಯ ಪ್ರಮಾದಗಳನ್ನು ಗುರುತಿಸುವಾಗ ಚಾರಿತ್ರಿಕ ವ್ಯಕ್ತಿಗಳನ್ನು ಗೌರವಿಸುವುದು ಭವಿಷ್ಯ ಭಾರತದ ದೃಷ್ಟಿಯಿಂದ ಕ್ಷೇಮ ಮತ್ತು ಅಪೇಕ್ಷಣೀಯವೂ ಹೌದು. ‘ಜಾಹೀರಾತು’ ಎನ್ನುವುದು ಮಾರುಕಟ್ಟೆಗೆ ಸ್ಪಂದಿಸುವ ಒಂದು ಸಾಧನವಾಗಬಲ್ಲದೇ ಹೊರತು, ಬೌದ್ಧಿಕ ಪರಿಜ್ಞಾನವನ್ನು ಕದಡುವ ಉಪಕರಣವಾಗಲು ಸಾಧ್ಯವಿಲ್ಲ. ಸ್ವಾತಂತ್ರ್ಯಪೂರ್ವದ ಭಾರತ, ಸ್ವಾತಂತ್ರ್ಯಾನಂತರದ ಭಾರತ, ಆಧುನಿಕ ಭಾರತ ಮತ್ತು ಡಿಜಿಟಲ್ ಯುಗದ ಭಾರತ ಈ ಯಾವುದೇ ಸ್ತರಗಳಲ್ಲಾದರೂ ನೆಹರೂ ಅವರ ಆರ್ಥಿಕ ಮುನ್ನೋಟದ ಸ್ಥಾವರಗಳು, ಭೌತಿಕವಾಗಿ ಅಲ್ಲವಾದರೂ, ಬೌದ್ಧಿಕವಾಗಿ ಚಿರಸ್ಥಾಯಿಯಾಗಿ ಉಳಿಯುತ್ತವೆ. ಹಾಗೆಯೇ ಭಾರತದ ದಾಖಲಿತ ಇತಿಹಾಸದಲ್ಲಿ ನೆಹರೂ ಅಜರಾಮರರಾಗಿ ಉಳಿಯುತ್ತಾರೆ. (ಈ ಲೇಖನಕ್ಕೆ ಸ್ಫೂರ್ತಿ The temples Jawaharlal Nehru built– Sharat Chandra ದ ಹಿಂದೂ 16 ಆಗಸ್ಟ್ 2022 ಕೆಲವು ಮಾಹಿತಿ-ಅಂಶಗಳನ್ನೂ ಈ ಲೇಖನದಿಂದ ಪಡೆಯಲಾಗಿದೆ.)

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News