ದುಬೈ: ಅಕ್ರಮ ಮಸಾಜ್ ಕೇಂದ್ರಗಳ ಬಗ್ಗೆ ಪ್ರಚಾರ; 870 ಮಂದಿ ಬಂಧನ
ದುಬೈ, ಆ.21: ದುಬೈಯಲ್ಲಿ ಅಕ್ರಮ ಮಸಾಜ್ ಕೇಂದ್ರಗಳ ಬಗ್ಗೆ ಪ್ರಚಾರ ಮಾಡುತ್ತಿದ್ದ 5.9 ಮಿಲಿಯನ್ ಬಿಸಿನೆಸ್ ಕಾರ್ಡ್ ಗಳನ್ನು ಕಳೆದ 15 ತಿಂಗಳಲ್ಲಿ ವಶಕ್ಕೆ ಪಡೆದಿದ್ದು 870 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
2021ರ ವರ್ಷ ಮತ್ತು 2022ರ ಆರಂಭದ 3 ತಿಂಗಳಲ್ಲಿ ಒಟ್ಟು 870 ಮಂದಿಯನ್ನು ಬಂಧಿಸಲಾಗಿದ್ದು ಇವರಲ್ಲಿ 588 ಆರೋಪಿಗಳ ವಿರುದ್ಧ ಸಾರ್ವಜನಿಕ ನೈತಿಕತೆಯ ಉಲ್ಲಂಘನೆ ಮತ್ತು 309 ಆರೋಪಿಗಳ ವಿರುದ್ಧ ಕಾರ್ಡ್ ಮುದ್ರಿಸಿ ಹಂಚಿರುವ ಆರೋಪ ದಾಖಲಿಸಲಾಗಿದೆ ಮತ್ತು ಈ ಕಾರ್ಡ್‌ಗಳಲ್ಲಿ ನಮೂದಿಸಿದ್ದ 919 ಫೋನ್ ನಂಬರ್ಗಳ ಸಂಪರ್ಕ ಕಡಿತಗೊಳಿಸಲಾಗಿದೆ. ಈ ಕೇಂದ್ರಗಳಿಂದ ಸೇವೆ ಬಯಸುವುದರ ವಿರುದ್ಧ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಈ ಅಕ್ರಮ ಮಸಾಜ್ ಕೇಂದ್ರಗಳಿಗೆ ಭೇಟಿ ನೀಡಿದರೆ ಸುಲಿಗೆ ಕೃತ್ಯದಂತಹ ಗಂಭೀರ ಪರಿಣಾಮಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ಇಂತಹ ಅಕ್ರಮ, ಲೈಸೆನ್ಸ್ ಪಡೆಯದ ಮಸಾಜ್ ಕೇಂದ್ರಗಳು ಸಾಮಾಜಿಕ ಮಾಧ್ಯಮದ ನಕಲಿ ಖಾತೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಬಲಿಪಶುಗಳು ಈ ಕೇಂದ್ರಕ್ಕೆ ಕಾಲಿರಿಸಿದೊಡನೆ ಅವರನ್ನು ಮುತ್ತಿಕೊಳ್ಳುವ ತಂಡವೊಂದು ಅಪಾರ್ಟ್‌ಮೆಂಟ್‌ಗೆ ಎಳೆದೊಯ್ಯುತ್ತದೆ. ಬಳಿಕ ಅವರ ಅಸಭ್ಯ ಫೋಟೋ, ವೀಡಿಯೊ ದಾಖಲಿಸಿಕೊಂಡು ಅವರನ್ನು ಮುಂದಿನ ದಿನಗಳಲ್ಲಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತದೆ ಎಂದು ಪೊಲೀಸ್ ಸ್ಟೇಷನ್‌ಗಳ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಗೇಡಿಯರ್ ಅಬ್ದುಲ್ಲಾ ಖದೆಮ್ ಸುರೂರ್ ಅಲ್ ಮಾಸೆಮ್ ಎಚ್ಚರಿಸಿದ್ದಾರೆ.
ಈ ವರ್ಷದ ಆರಂಭದಿಂದ ಅಕ್ರಮ ಮಸಾಜ್ ಕೇಂದ್ರಗಳ ಜಾಹೀರಾತು ಕಾರ್ಡ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಈ ಕಾರ್ಡ್‌ಗಳು ಅಕ್ರಮ ವ್ಯವಹಾರಕ್ಕೆ ಉತ್ತೇಜನ ನೀಡುವುದಷ್ಟೇ ಅಲ್ಲ, ಆ ಕಾರ್ಡ್‌ಗಳಲ್ಲಿ ಮುದ್ರಿಸಿರುವ ಚಿತ್ರಗಳು ಸಾರ್ವಜನಿಕ ನೈತಿಕತೆಯನ್ನು ಉಲ್ಲಂಘಿಸಿದೆ . ಕಳೆದ 3 ವರ್ಷದಲ್ಲಿ ಇಂತಹ ಕೃತ್ಯಗಳಿಗೆ ಬಳಕೆಯಾಗುತ್ತಿದ್ದ 218 ಫ್ಲ್ಯಾಟ್‌ಗಳ ಮೇಲೆ ದಾಳಿ ನಡೆಸಿದ್ದು 2,025 ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಅಕ್ರಮ ದಂಧೆಯ ವಿರುದ್ಧ ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.