ಯುಎಇ: ನಿರ್ಮಾಣ ಕಾರ್ಮಿಕನಿಗೆ 12 ಲಕ್ಷ ದಿರ್ಹಮ್ ಪರಿಹಾರ
ಅಬುಧಾಬಿ, ಆ.21: ಯುಎಇಯಲ್ಲಿ ನಿರ್ಮಾಣ ಕಾಮಗಾರಿಯ ಸಂದರ್ಭ ಗಾಯಗೊಂಡ ಕಾರ್ಮಿಕನಿಗೆ 1.2 ಮಿಲಿಯನ್ (12 ಲಕ್ಷ) ದಿರ್ಹಮ್ ಮೊತ್ತದಷ್ಟು ಪರಿಹಾರವನ್ನು ನೀಡಲಾಗಿದೆ ಎಂದು ವರದಿಯಾಗಿದೆ.
ಗೋದಾಮಿನ ಮೇಲ್ಛಾವಣಿಯಿಂದ ಬಿದ್ದು ಗಾಯಗೊಂಡ ಏಶ್ಯಾದ ಕಾರ್ಮಿಕನೊಬ್ಬ, ತನಗಾದ ದೈಹಿಕ, ಮಾನಸಿಕ ಮತ್ತು ವಸ್ತು ಹಾನಿಗೆ 5 ಮಿಲಿಯನ್ ದಿರ್ಹಮ್ ಅನ್ನು ಸಂಸ್ಥೆ ನೀಡಬೇಕು ಎಂದು ಕೋರಿ ದಾವೆ ಸಲ್ಲಿಸಿದ್ದ. ಮೇಲ್ಛಾವಣಿಯಿಂದ ಬಿದ್ದಿದ್ದರಿಂದ ತನ್ನ ತಲೆ ಮತ್ತು ದೇಹಕ್ಕೆ ತೀವ್ರ ಗಾಯವಾಗಿದ್ದು ಹಲವು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ ಎಂದು ದಾವೆಯಲ್ಲಿ ಉಲ್ಲೇಖಿಸಿದ್ದ.
ಕಾರ್ಮಿಕನ ತಲೆಬುರುಡೆ ಮತ್ತು ಮೆದುಳಿಗೆ 40% ಶಾಶ್ವತ ಅಂಗವೈಕಲ್ಯ, ಪಾರ್ಶ್ವವಾಯು, ಎಡಗಣ್ಣನ್ನು ಮುಚ್ಚಲು ಸಾಧ್ಯವಾಗದ ಮುಖದ ವಿರೂಪತೆ, 50%ರಷ್ಟು ಎಡಗಣ್ಣಿನ ದೃಷ್ಟಿ ನಷ್ಟ, ಎಡಕಿವಿಯಲ್ಲಿ ಶ್ರವಣ ನಷ್ಟ, ಮೂಗಿನಲ್ಲಿ 50%ದಷ್ಟು ಮುರಿತ, ವಾಸನೆ ಮತ್ತು ರುಚಿ ಗ್ರಹಿಕೆಯಲ್ಲಿ 100% ನಷ್ಟವಾಗಿದೆ , ಅಲ್ಲದೆ ಎಡಗೈಯಲ್ಲಿ 50%ದಷ್ಟು ಸಂಕೋಚನದ ಪಾರ್ಶ್ವವಾಯು ಹೊಂದಿದ್ದಾನೆ ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಪ್ರಥಮ ಸಿವಿಲ್ ಕೋರ್ಟ್, ಕಾರ್ಮಿಕನಿಗೆ 1.2 ದಿರ್ಹಮ್ ಪರಿಹಾರ ನೀಡುವಂತೆ ನಿರ್ಮಾಣ ಸಂಸ್ಥೆಗೆ ಸೂಚಿಸಿತು. ಈ ಆದೇಶವನ್ನು ಪ್ರಶ್ನಿಸಿ ಕಾರ್ಮಿಕ ಹಾಗೂ ನಿರ್ಮಾಣ ಸಂಸ್ಥೆ ಇಬ್ಬರೂ ಅಪೀಲು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಆದರೆ ಪರಿಹಾರ ಹಣವನ್ನು ಹೆಚ್ಚಿಸಬೇಕೆಂಬ ಕಾರ್ಮಿಕನ ವಾದ ಮತ್ತು ಕೆಳ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಬೇಕೆಂಬ ನಿರ್ಮಾಣ ಸಂಸ್ಥೆಯ ವಾದವನ್ನು ತಳ್ಳಿಹಾಕಿದ ಅಪೀಲು ನ್ಯಾಯಾಲಯ, ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ ಎಂದು ವರದಿಯಾಗಿದೆ.