ಬಿ.ಶ್ರೀರಾಮುಲು, ಬಿ.ಶಿವಪ್ಪ ಸೇರಿ ಹಲವು ಅಧಿಕಾರಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆ
ಪ್ರಕರಣದ ಕುರಿತು ಜಿ.ಕೃಷ್ಣಮೂರ್ತಿ ಎಂಬವರು 2013ರ ಎಪ್ರಿಲ್ 29ರಂದು ಖಾಸಗಿ ದೂರು ಸಲ್ಲಿಸಿದ್ದರು. (ಪಿಸಿಆರ್ ನಂ 01/2013) ಇದನ್ನಾಧರಿಸಿ ವಿಚಾರಣೆ ನಡೆಸಿದ್ದ ಲೋಕಾಯುಕ್ತ ತನಿಖಾಧಿಕಾರಿ 2016ರ ಜೂನ್ 29ರಂದು ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದರು. ಈ ವರದಿ ಆಧರಿಸಿ ಪ್ರಕರಣದಲ್ಲಿ 6ನೇ ಆರೋಪಿಯಾಗಿರುವ ಶ್ರೀರಾಮುಲು ಅವರನ್ನು ವಿಚಾರಣೆ ನಡೆಸಲು ಅನುಮತಿ ಕೋರಿ 2016ರ ಆಗಸ್ಟ್ನಲ್ಲಿ ಲೋಕಾಯುಕ್ತ ಎಡಿಜಿಪಿ ಲೋಕಸಭೆ ಸ್ಪೀಕರ್ಗೆ ಪತ್ರ ಬರೆದಿದ್ದರು.
ಬೆಂಗಳೂರು, ಆ.22: ಅಧಿಕಾರವನ್ನು ದುರುಪ ಯೋಗಪಡಿಸಿಕೊಂಡು ಕಚೇರಿಯಲ್ಲಿ ಸೃಷ್ಟಿಸಿದ್ದ ಸುಳ್ಳು ದಾಖಲಾತಿಗಳನ್ನೇ ನೈಜವೆಂದು ನಂಬಿಸಿ ಸರಕಾರಿ ಜಮೀನನ್ನು ಸೇರಿಸಿ 11.38 ಎಕರೆಗೂ ಅಧಿಕ ವಿಸ್ತೀರ್ಣದ ಜಮೀನನ್ನು ಹಾಲಿ ಸಚಿವ ಬಿ.ಶ್ರೀರಾಮುಲು ಅವರ ಹೆಸರಿಗೆ ನೋಂದಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಶ್ರೀರಾಮುಲು, ಬಳ್ಳಾರಿಯ ಹಿಂದಿನ ಜಿಲ್ಲಾಧಿಕಾರಿ ಬಿ .ಶಿವಪ್ಪ (ಆಪಾದಿತ-1) ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು 6 ವರ್ಷದ ಬಳಿಕ ಕಡೆಗೂ ದೋಷಾರೋಪಣೆ ಪಟ್ಟಿ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.
ಲೋಕಾಯುಕ್ತ ನ್ಯಾಯಾಲಯದ ನಿರ್ದೇಶನದ ಮೇರೆಗೆ ಲೋಕಾಯುಕ್ತ ಪೊಲೀಸರು (09/2013) ಕಲಂ 406, 409, 420, 447, 465, 468, 471 120(ಬಿ) ರೆ/ವಿ 34 ಐಪಿಸಿ ಹಾಗೂ 13(1)(ಡಿ) ರೆ/ವಿ 13(2) ಪಿಸಿ ಕಾಯ್ದೆ ಹಾಗೂ ಕರ್ನಾಟಕ ಲ್ಯಾಂಡ್ ರೆವಿನ್ಯೂ ಕಾಯ್ದೆ 73, 192(ಎ) ರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಈ ಪ್ರಕರಣದಲ್ಲಿ ಹಾಲಿ ಸಚಿವ ಬಿ.ಶ್ರೀರಾಮುಲು ಅವರನ್ನು ಪ್ರಕರಣದಲ್ಲಿ ಆರನೇ ಆಪಾದಿತರನ್ನಾಗಿಸಲಾಗಿದೆ ಎಂದು ತಿಳಿದು ಬಂದಿದೆ.
2016ರಲ್ಲೇ ಅಂತಿಮ ತನಿಖಾ ವರದಿ ಸಲ್ಲಿಸಿದ್ದರೂ ಲೋಕಾಯುಕ್ತ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿರಲಿಲ್ಲ. ಈ ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಐದಾರು ವರ್ಷಗಳಿಂದಲೂ ಕುಂಟನೆಪವೊಡ್ಡಿದ್ದರು. ಕಳ್ಳಾಟ ನಡೆಸುತ್ತಲೇ ವಿಳಂಬ ತಂತ್ರ ಅನುಸರಿಸಿದ್ದ ಲೋಕಾಯುಕ್ತ ಪೊಲೀಸರು 2022ರ ಎಪ್ರಿಲ್ 18ರಂದೇ 82ನೇ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ಅಂತಿಮ ತನಿಖಾ ವರದಿ ’’the-file.in’’ ಆರ್ಡಿಐ ಅಡಿಯಲ್ಲಿ ಪಡೆದುಕೊಂಡಿದೆ.
ಪ್ರಕರಣದ ವಿವರ: ಬಳ್ಳಾರಿಯ ಕೌಲ್ ಬಝಾರ್ ಬಳಿಯ ಟಿ.ಬಿ.ಸ್ಯಾನಿಟೋರಿಯಂ ಆಸ್ಪತ್ರೆ ಪಕ್ಕದಲ್ಲಿರುವ ಬಳ್ಳಾರಿ ಗ್ರಾಮದ ಸರ್ವೇ ನಂಬರ್ 597/ಬಿ2ಎ1ರ ಪೈಕಿ 3.50 ಎಕರೆ ಜಮೀನು ಹಂಪಮ್ಮ ಎಂಬವರು ಹಿಡುವಳಿ ಮಾಲಕರಾಗಿದ್ದರು. ಅದೇ ರೀತಿ ಸರ್ವೇ ನಂಬರ್ 597/ಬಿ2ಎ3 ರ ಪೈಕಿ 4.00 ಎಕರೆ ವಿಸ್ತೀರ್ಣ ಜಮೀನಿಗೆ ದ್ರಾಕ್ಷಾಯಣಮ್ಮ ಅವರು ಮಾಲಕರಾಗಿದ್ದರೆ, ಸರ್ವೇ ನಂಬರ್ 597/ಬಿ2ಎ1ಎ1ರ ಪೈಕಿ 0-50 ಸೆಂಟ್ಸ್ ಜಮೀನಿಗೆ ಖಂಡೋಜಿರಾವ್ ಎಂಬವರು ಮಾಲಕರಾಗಿದ್ದರು. ಹಾಗೆಯೇ ಸರ್ವೇ ನಂಬರ್ 597/ಬಿ2ಎ1ಎ1ರ ಪೈಕಿ 2.88 ಎಕರೆ ಜಮೀನು ಬಾಪಟ್ಲ ಬಾಪುರಾವ್ ಅವರ ಹೆಸರಿನಲ್ಲಿತ್ತು. ಸರ್ವೇ ನಂಬರ್ 597/ಬಿ2ಎ1ಎ2ರ ಪೈಕಿ 0.50 ಸೆಂಟ್ಸ್ ಜಮೀನು ಡಿ ಲಕ್ಷ್ಮೀದೇವಿ, ಎಂ.ರುಕ್ಮೀಣಮ್ಮ, ಎ.ಪಿ.ಮೋಹನ ವೇಲು ಮೊದಲಿಯಾರ್ ಎಂಬವರ ಹೆಸರಿನಲ್ಲಿತ್ತು.
ಈ ಜಮೀನುಗಳನ್ನು ಎ.ಲಕ್ಷ್ಮಮ್ಮ ಮತ್ತು ಅವರ ಮಕ್ಕಳಾದ ಕೃಷ್ಣಮೂರ್ತಿ, ಪುರಂದರ, ಭಾಗ್ಯಲಕ್ಷ್ಮೀ, ಪರಿಮಳದೇವಿ, ದಿವಂಗತ ಎ.ದಿವಾಕರ್ ಅವರ ಪತ್ನಿ ಎ.ಆಶಾಲತಾ, ಇವರ ಮಕ್ಕ ಳಾದ ಎ.ವಿ.ಎಸ್. ಪ್ರಸಾದ್, ಎ.ಬಿ.ಎಸ್.ಚಕ್ರವರ್ತಿ, ಎ.ಹಿಮಬಿಂದು, ಎ.ಕುಮುದಿನಿ ಅವರ ಹೆಸರಿಗೆ ಅಂದಿನ ಸಹಾಯಕ ಆಯುಕ್ತ ಆರ್.ವೆಂಕಟೇಶಲು (ಆಪಾದಿತ 2) ಎಂಬವರು ಕಾನೂನು ರೀತಿ ಸಕಾರಾತ್ಮಕವಲ್ಲದ ಮ್ಯುಟೇಷನ್ ಮಾಡಿ ಪಹಣಿಗಳನ್ನು ಹೊರಡಿಸಿದ್ದರು ಎಂಬುದು ಲೋಕಾಯುಕ್ತ ಪೊಲೀಸರ ಅಂತಿಮ ತನಿಖಾ ವರದಿಯಿಂದ ತಿಳಿದು ಬಂದಿದೆ.
ಸಚಿವ ಬಿ.ಶ್ರೀರಾಮಲು ಅವರು ಸರ್ವೇ ಲೆಕ್ಕ ದಾಖಲೆಗಳಲ್ಲಿ ಮತ್ತು ಆರ್ಟಿಸಿಗಳಿಗೆ ತಕ್ಕಂತೆ ವಿಸ್ತೀರ್ಣ ಸರಿ ಇಲ್ಲ. ಜಮೀನುಗಳ ಸ್ಥಳ ಪರಿಶೀಲನೆ ನಡೆಸಿ ಉಳಿದ ವಿಸ್ತೀರ್ಣವನ್ನು ತನ್ನ ಹೆಸರಿನಲ್ಲಿ ಪಟ್ಟಾ ಬದಲಾವಣೆ ಮಾಡಿ ನಕಾಶೆ ತಯಾರಿಸಿಕೊಡಿ ಎಂದು ಅರ್ಜಿ ಸಲ್ಲಿಸಿದ್ದರು. ಇದನ್ನಾಧರಿಸಿ ಆಗಿನ ತಹಶೀಲ್ದಾರ್ ಶಶಿಧರ ಬಗಲಿ ಅವರು ‘ಶ್ರೀರಾಮುಲು ಅವರಿಗೆ ಸಹಕರಿಸುವ ದುರುದ್ದೇಶದಿಂದಲೇ ತಮ್ಮ ಕಚೇರಿಯಲ್ಲೇ ಸುಳ್ಳು ಪಹಣಿ ಸೃಷ್ಟಿಸಿ ಅವನ್ನೇ ನೈಜವೆಂದು ಬಿಂಬಿಸಲಾಗಿತ್ತು’ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.
ಇದನ್ನಾಧರಿಸಿಯೇ ಅಂದಿನ ತಹಶೀಲ್ದಾರ್ ಆಗಿದ್ದ ಶಶಿಧರ ಬಗಲಿ ಅವರು (ಆಪಾದಿತ -3) ಕಂದಾಯ ನಿರೀಕ್ಷಕ ವೀರೇಶ್ ಬಾಬು (ಆಪಾದಿತ -4) ಅವರ ಜತೆ ಸೇರಿಕೊಂಡು ಮತ್ತು ತಮ್ಮ ಹುದ್ದೆಯ ಅಧಿಕಾರ ದುರುಪಯೋಗಪಡಿಸಿಕೊಂಡು ಅಂದಿನ ಶಾಸಕರೂ ಆಗಿದ್ದ ಬಿ.ಶ್ರೀರಾಮುಲು ಅವರಿಗೆ ಸಹಕರಿಸುವ ಉದ್ದೇಶದಿಂದಲೇ ಎ.ಲಕ್ಷ್ಮ್ಮಮ್ಮ ಮತ್ತು ಅವರ ಮಕ್ಕಳ ಹೆಸರಿನಲ್ಲಿ ಹಕ್ಕು ಬದಲಾವಣೆ ಮಾಡಿ ಪಹಣಿಗಳನ್ನು ಮಾಡಿದ್ದರು ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.
ಶ್ರೀರಾಮುಲು ಅವರಿಗೆ ಸಹಕರಿಸಿದ್ದಾರೆ ಎಂದು ಆರೋಪಕ್ಕೀಡಾಗಿದ್ದ ಆಗಿನ ತಹಶೀಲ್ದಾರ್ ಶಶಿಧರ್ ಬಗಲಿ(ಆರೋಪಿ 3) ಅವರ ವಿರುದ್ಧ ವಿಚಾರಣೆಗೆ ಸರಕಾರ, 2017ರ ಮೇ 29 ರಂದು ಅನುಮತಿ ನೀಡಿತ್ತು. ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು 8 ಮಂದಿಯನ್ನು ಆರೋಪಿಗಳನ್ನಾಗಿಸಿದ್ದಾರೆ. ಡಿ.ಶಿವಪ್ಪ, ಬಳ್ಳಾರಿಯ ಹಿಂದಿನ ಅಸಿಸ್ಟಂಟ್ ಕಮಿಷನರ್ ವೆಂಕಟೇಶಲು, ಹಿಂದಿನ ತಹಶೀಲ್ದಾರ್ ಶಶಿಧರ್ ಬಗಲಿ, ಕಂದಾಯ ಅಧಿಕಾರಿ ವೀರೇಶ್ ಬಾಬು, ಭೂ ದಾಖಲೆಗಳ ಉಪ ನಿರ್ದೇಶಕ ನಾರಾಯಣಸ್ವಾಮಿ ಆರೋಪಿ ಪಟ್ಟಿಯ ಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಾ ಪೊಲೀಸರ ಕಾಲಹರಣ: ತನಿಖೆ ಪೂರ್ಣಗೊಳಿಸಿದ್ದ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿರಲಿಲ್ಲ. ದೋಷಾರೋಪಣೆ ಪಟ್ಟಿ ಸಲ್ಲಿಸಲು ವಿಧಾನಸಭೆ ಅಧ್ಯಕ್ಷರ ಅನುಮತಿ ಬೇಕಾಗಿದೆ ಎಂಬ ನೆಪ ಹೂಡಿ ವಿಚಾರಣೆ ಪ್ರಕ್ರಿಯೆಯನ್ನೇ ಮುಂದೂಡುತ್ತಿದ್ದರು.
ಶ್ರೀರಾಮುಲು ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮತ್ತು ವಿಚಾರಣೆ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡುವುದಕ್ಕೆ 13 ಮತ್ತು 15ನೇ ವಿಧಾನಸಭೆಯ ಸಭಾಧ್ಯಕ್ಷರು ಸಕ್ಷಮ ಪ್ರಾಧಿಕಾರವಲ್ಲ. ಹೀಗಾಗಿ ಲೋಕಾಯುಕ್ತ ಪೊಲೀಸರು ಸಭಾಧ್ಯಕ್ಷರ ಅನುಮತಿ ಆದೇಶಕ್ಕೆ ಕಾಯದೆ ನೇರವಾಗಿ ಮುಂದಿನ ಕ್ರಮವನ್ನು ಕೈಗೊಳ್ಳಬಹುದು,’ ಎಂದು ಹಿಂದಿನ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಅವರು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗೆ 2019ರ ಜೂನ್ 20ರಂದೇ ಲಿಖಿತ ಅಭಿಪ್ರಾಯ ಕೊಟ್ಟಿದ್ದಾರೆ. ಇದೇ ಪ್ರಕರಣದಲ್ಲಿ ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಅವರು 2018ರ ಸೆ.26ರಂದೂ ಇದೇ ಅಭಿಪ್ರಾಯವನ್ನೇ ನೀಡಿದ್ದರು.
ಜಮೀನು ಕಬಳಿಕೆ ಆರೋಪಕ್ಕೆ ಗುರಿಯಾಗಿದ್ದ ಅವಧಿಯಲ್ಲಿ ಶ್ರೀರಾಮುಲು ಬಳ್ಳಾರಿ ಶಾಸಕರಾಗಿದ್ದರು. ಪ್ರಕರಣವನ್ನು ಲೋಕಾಯುಕ್ತ ಪೊಲೀಸರು ತನಿಖೆ ಪೂರ್ಣಗೊಳ್ಳುವ ಹೊತ್ತಿನಲ್ಲಿ ಶ್ರೀರಾಮುಲು ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಜಮೀನು ಕಬಳಿಕೆ ಪ್ರಕರಣದಲ್ಲಿ ಅವರ ಪಾತ್ರ ಇರುವುದನ್ನು ಲೋಕಾಯುಕ್ತ ಪೊಲೀಸರು ತನಿಖೆಯಲ್ಲಿ ಸಾಬೀತುಪಡಿಸಿದ್ದರಲ್ಲದೆ ಪ್ರಕರಣದಲ್ಲಿ 6ನೇ ಆರೋಪಿಯನ್ನಾಗಿಸಿದ್ದರು. ಆದರೆ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿ ವಿಚಾರಣೆ ಪ್ರಕ್ರಿಯೆ ಮುಂದುವರೆಸಲು ಮುಂದಾಗಿದ್ದ ಅವಧಿಯಲ್ಲಿ ಶ್ರೀರಾಮುಲು ಮೊಳಕಾಲ್ಮೂರಿನ ಶಾಸಕರಾಗಿ ಆಯ್ಕೆಯಾಗಿದ್ದರು.
ಹೀಗಾಗಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ಯಾರು ನೀಡಬೇಕು ಎಂಬ ಬಗ್ಗೆ ಲೋಕಾಯುಕ್ತ ಪೊಲೀಸರಲ್ಲಿ ಗೊಂದಲವಿತ್ತು. ಲೋಕಸಭೆ ಸಚಿವಾಲಯ ಮತ್ತು ವಿಧಾನಸಭೆ ಸಚಿವಾಲಯ ಶ್ರೀರಾಮುಲು ಅವರ ವಿಚಾರಣೆಗೆ ಅನುಮತಿ ನೀಡುವುದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಎರಡೂ ಸಚಿವಾಲಯಗಳು ನುಣುಚಿಕೊಂಡಿದ್ದವು. ಇದೇ ಗೊಂದಲವನ್ನು ಮುಂದಿಟ್ಟುಕೊಂಡಿದ್ದ ಲೋಕಾಯುಕ್ತ ಪೊಲೀಸರೂ ಕಾಲಹರಣ ತಂತ್ರ ಅನುಸರಿಸಿದ್ದರು.
ಈ ಮಧ್ಯೆ ಸ್ಪಷ್ಟತೆ ಪಡೆಯುವ ಸಂಬಂಧ ಲೋಕಾಯುಕ್ತ ಪೊಲೀಸ್ ವಿಭಾಗ ಕಾನೂನು ವಿಭಾಗಕ್ಕೆ ಪತ್ರ ಬರೆದು ಅಭಿಪ್ರಾಯ ಕೋರಿತ್ತು. ಈ ವಿಭಾಗವೂ ಸ್ಪಷ್ಟ ಅಭಿಪ್ರಾಯ ನೀಡದ ಕಾರಣ ಲೋಕಾಯುಕ್ತ ಪೊಲೀಸರು ಹಿಂದಿನ ಸ್ಪೀಕರ್ ರಮೇಶ್ಕುಮಾರ್ ಅವರಿಗೆ ಪತ್ರ ಬರೆದು ಅನುಮತಿ ಕೋರಿದ್ದರು. ರಮೇಶ್ಕುಮಾರ್ ಕೂಡ ಅನುಮತಿ ನೀಡುವ ಮುನ್ನ ಅಡ್ವೋಕೇಟ್ ಜನರಲ್ ಕಚೇರಿ ಕದ ತಟ್ಟಿದ್ದರು.
ಇದೇ ಪ್ರಕರಣದಲ್ಲಿ ಶ್ರೀರಾಮುಲು ಅವರು ಸೇರಿದಂತೆ ಉಳಿದ ಆರೋಪಿಗಳು ಬಳ್ಳಾರಿಯ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಮತ್ತು ಮುಚ್ಚಳಿಕೆ ಪಡೆದಿದ್ದಾರೆ. ಆದರೆ ವಿಚಾರಣೆಗೂ ನಿರೀಕ್ಷಣಾ ಜಾಮೀನಿಗೂ ಯಾವುದೇ ಸಂಬಂಧವಿರಲಿಲ್ಲ. ಆದರೂ ಸಭಾಧ್ಯಕ್ಷರಿಂದ ಅನುಮತಿ ದೊರೆತರಷ್ಟೇ ವಿಚಾರಣೆ ಪ್ರಕ್ರಿಯೆಗಳನ್ನು ನಡೆಸಬೇಕು ಎಂದು ಲೋಕಾಯುಕ್ತ ಪೊಲೀಸರು ಹಠಕ್ಕೆ ಬಿದ್ದಂತಿದ್ದರು. ಆದರೀಗ ವಿಚಾರಣೆಗೆ ಸಭಾಧ್ಯಕ್ಷರ ಅನುಮತಿ ಕಾಯುವ ಅಗತ್ಯವೇ ಇಲ್ಲ ಎಂದು ಅಡ್ವೋಕೇಟ್ ಜನರಲ್ ಅವರು ಸ್ಪಷ್ಟ ಅಭಿಪ್ರಾಯ ನೀಡಿರುವ ಕಾರಣ ತ್ವರಿತಗತಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವುದಷ್ಟೇ ಅಲ್ಲ, ವಿಚಾರಣೆ ಪ್ರಕ್ರಿಯೆ ನಡೆಸಲು ಮುಂದಾಗದೇ ಬೇರೆ ದಾರಿಯೇ ಇಲ್ಲ.
‘ಶ್ರೀರಾಮುಲು ಅವರು ಶಾಸಕರಾಗಿದ್ದಾಗ ನಡೆದ ಪ್ರಕರಣವಾಗಿರುವ ಕಾರಣ ವಿಧಾನಸಭೆ ಸ್ಪೀಕರ್ರಿಂದ ಅನುಮತಿ ಪಡೆಯಿರಿ ಎಂದು ಲೋಕಸಭೆ ಜಂಟಿ ಕಾರ್ಯದರ್ಶಿ ಒಂದು ವರ್ಷದ ನಂತರ(2017 ಜುಲೈ) ಉತ್ತರಿಸಿದ್ದರು. ಇದಾದ ನಂತರ ಲೋಕಾಯುಕ್ತ ಸಂಸ್ಥೆ ವಿಧಾನಸಭೆ ಸಚಿವಾಲಯಕ್ಕೆ 2017ರ ಅಕ್ಟೋಬರ್ನಲ್ಲಿ ಅನುಮತಿ ಕೋರಿ ಪತ್ರ ಬರೆದಿತ್ತು. ‘ಶ್ರೀರಾಮುಲು ಅವರು ಈಗ ಸಂಸತ್ ಸದಸ್ಯರಾಗಿರುವ ಕಾರಣ ಲೋಕಸಭೆ ಸ್ಪೀಕರ್ ಅವರಿಂದಲೇ ಅನುಮತಿ ಪಡೆಯಬೇಕು’ ಎಂದು ವಿಧಾನಸಭೆ ಸಚಿವಾಲಯ 2018ರ ಜನವರಿ 24ರಂದು ಉತ್ತರಿಸಿತ್ತು.
ಶಾಸಕರು ಮತ್ತು ಸಂಸದರ ವಿರುದ್ಧದ ವಿಚಾರಣೆ ನಡೆಸುವ ಪ್ರಕರಣಗಳಲ್ಲಿ ಸಭಾಧ್ಯಕ್ಷರು ಅನುಮತಿ ಪಡೆದುಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಂಡ್ಯದ ಮೂಡಾ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಸದ ಸಿ.ಎಸ್.ಪುಟ್ಟರಾಜು ಅವರನ್ನು ವಿಚಾರಣೆಗೊಳಪಡಿಸಲು ಸಿಬಿಐ ಅನುಮತಿ ಕೋರುವ ಪ್ರಕರಣದಲ್ಲಿ ವಿಧಾನಸಭೆ ಹಿಂದಿನ ಸ್ಪೀಕರ್ ಅವರು ಸಿಬಿಐಗೆ ಸ್ಪಷ್ಟಪಡಿಸಿದ್ದರು. ಆದರೂ ಲೋಕಾಯುಕ್ತ ಪೊಲೀಸ್ ವಿಭಾಗ ಅನುಮತಿ ಕೋರಿ ಪತ್ರಗಳನ್ನು ಬರೆದಿದ್ದನ್ನು ಸ್ಮರಿಸಬಹುದು.