ಅಬುಧಾಬಿ: ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯದ ಸ್ಥಳಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್
ಅಬುಧಾಬಿ: ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯದ ಸ್ಥಳಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ (S. Jaishankar Visits Site Of Abu Dhabi's First Hindu Temple)ಬುಧವಾರ ಭೇಟಿ ನೀಡಿದರು.
ಮೊದಲ ಬಾರಿ ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ದೇಗುಲವು "ಶಾಂತಿ, ಸಹಿಷ್ಣುತೆ ಮತ್ತು ಸಾಮರಸ್ಯದ ಸಂಕೇತ" ಎಂದು ಜೈಶಂಕರ್ ಬಣ್ಣಿಸಿದ್ದಾರೆ.
ಗಲ್ಫ್ ರಾಷ್ಟ್ರಕ್ಕೆ ಮೂರು ದಿನಗಳ ಭೇಟಿಗಾಗಿ ಬುಧವಾರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಆಗಮಿಸಿದ ಎಸ್. ಜೈಶಂಕರ್ ಅವರು ದೇವಾಲಯದ ನಿರ್ಮಾಣದಲ್ಲಿ ಭಾರತೀಯರ ಶ್ರಮವನ್ನು ಶ್ಲಾಘಿಸಿದರು.
"ಗಣೇಶ ಚತುರ್ಥಿಯಂದು ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹಿಂದೂ ದೇವಾಲಯಕ್ಕೆ ಭೇಟಿ ನೀಡುವ ಭಾಗ್ಯ ಲಭಿಸಿದೆ. ತ್ವರಿತ ಪ್ರಗತಿಯನ್ನು ನೋಡಲು ಸಂತೋಷವಾಗುತ್ತಿದೆ. ಇದರಲ್ಲಿ ಒಳಗೊಂಡಿರುವ ಎಲ್ಲರ ಭಕ್ತಿಯನ್ನು ಆಳವಾಗಿ ಶ್ಲಾಘಿಸಿದೆ. ದೇಗುಲದ ಜಾಗದಲ್ಲಿ BAPS ತಂಡ, ಸಮುದಾಯ ಬೆಂಬಲಿಗರು ಭಕ್ತರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿದೆ" ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
55,000 ಚದರ ಮೀಟರ್ ಜಾಗದಲ್ಲಿ ದೇವಾಲಯ ನಿರ್ಮಾಣವಾಗಲಿದೆ. ದೇಗುಲದ ವಿನ್ಯಾಸವನ್ನು ಭಾರತೀಯ ದೇವಾಲಯದ ಕುಶಲಕರ್ಮಿಗಳು ಕೈಯಿಂದ ಕೆತ್ತಲಾಗುತ್ತದೆ ಮತ್ತು ಯುಎಇಯಲ್ಲಿ ಜೋಡಿಸಲಾಗುತ್ತದೆ. ಇದು ಮಧ್ಯಪ್ರಾಚ್ಯದಲ್ಲಿ ನಿರ್ಮಾಣವಾಗಲಿರುವ ಮೊದಲ ಸಾಂಪ್ರದಾಯಿಕ ಹಿಂದೂ ಕಲ್ಲಿನ ದೇವಾಲಯವಾಗಲಿದೆ.